ಪ್ರಗತಿವಾಹಿನಿ ಸುದ್ದಿ; ರಾಮನಗರ: ‘ನಾವು ನಮ್ಮ ಮೂಲ ಮರೆತರೆ ಫಲ ಸಿಗುವುದಿಲ್ಲ’ ಎಂಬ ಮಾತನ್ನು ನಾನು ಆಗಾಗ್ಗೆ ಹೇಳುತ್ತಿರುತ್ತೇನೆ. ಅದೇ ರೀತಿ ಈ ಕಟ್ಟಡಕ್ಕೆ ಜಾಗ ದಾನ ಮಾಡಿದ್ದ ಸಾಹುಕಾರರ ಕುಟುಂಬವನ್ನು ಸ್ಮರಿಸುತ್ತೇನೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ಕನಕಪುರ ಹೆರಿಗೆ ಮತ್ತು ಮಕ್ಕಳ ಆರೋಗ್ಯ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಸುರೇಶ್ ಅವರು ಇನ್ಫೊಸಿಸ್ ಸಂಸ್ಥೆ ಜತೆ ಚರ್ಚೆ ಮಾಡಿ, ನಮ್ಮ ತಾಲೂಕಿನ ಜನರಿಗೆ ನೆರವು ನೀಡಲು ಆಸ್ಪತ್ರೆ ನಿರ್ಮಾಣ ಮಾಡಿಸಿದ್ದಾರೆ. ಮನುಷ್ಯನ ಹುಟ್ಟು ಆಕಸ್ಮಿಕ ಸಾವು ಅನಿವಾರ್ಯ, ಜನನ ಉಚಿತ ಮರಣ ಖಚಿತ. ಈ ಹುಟ್ಟು ಸಾವಿನ ನಡುವೆ ನಾವು ಏನು ಮಾಡುತ್ತೇವೆ ಎಂಬುದು ಮುಖ್ಯ. ಈ ಜಾಗ ದಾನ ಮಾಡಿದ ಸಾಹುಕಾರರು ಈಗ ಇಲ್ಲದಿದ್ದರೂ ನಾವು ಅವರನ್ನು ಸ್ಮರಿಸುತ್ತಿದ್ದೇವೆ. ಸುಬ್ಬರಾಯರು, ರಂಗೆಗೌಡರು, ಕರಿಯಪ್ಪನವರನ್ನು ಸ್ಮರಿಸುತ್ತೇವೆ.
ಈ ಕ್ಷೇತ್ರದಲ್ಲಿ ಒಂದು ಕಾರ್ಖಾನೆ, ಉತ್ತಮ ಗುಣಮಟ್ಟದ ಶಿಕ್ಷಣ, ಆರೋಗ್ಯ ವ್ಯವಸ್ಥೆ ಇರಲಿಲ್ಲ. ಹೀಗಾಗಿ ಈ ಭಾಗದ ಜನ ಬೆಂಗಳೂರಿಗೆ ವಲಸೆ ಹೋಗುತ್ತಿದ್ದರು. ಇದನ್ನು ನಿಯಂತ್ರಣ ಮಾಡಲು ನಾನು ನನ್ನದೇ ಆದ ರೀತಿಯಲ್ಲಿ ಪ್ರಯತ್ನ ಮಾಡಿದ್ದೇನೆ. ಇದರಲ್ಲಿ ನಾನು ಸಂಪೂರ್ಣ ಯಶಸ್ಸು ಸಾಧಿಸಿದ್ದೇನೆ ಎಂದು ಹೇಳುವುದಿಲ್ಲ ಎಂದರು.
ಇನ್ಫೋಸಿಸ್ ಸಂಸ್ಥೆಯವರು ಇಂದು ನಮ್ಮ ತಾಲೂಕಿನಲ್ಲಿ 50 ಕೋಟಿ ಮೌಲ್ಯದ ಆಸ್ಪತ್ರೆಯನ್ನು ಕಟ್ಟಿದ್ದಾರೆ. ಆ ಮೂಲಕ ನನ್ನ ತಾಯಂದಿರು ಹಾಗೂ ಸಹೋದರಿಗೆ ರಕ್ಷಣೆ ಸಿಕ್ಕಂತಾಗಿದೆ. ಈ ಆಸ್ಪತ್ರೆಗೆ ಹಣ ಬರಬೇಕಾದರೆ ಶ್ರೀಮತಿ ಸುಧಾಮೂರ್ತಿ ಅವರ ಹೃದಯ ಶ್ರೀಮಂತಿಕೆ ಹಾಗೂ ಸಂಸ್ಥೆಯ ಎಲ್ಲಾ ಅಧಿಕಾರಿಗಳ ಶ್ರಮ ಮುಖ್ಯವಾಗಿದೆ. ಈ ಸಂಸ್ಥೆ ದೇಶ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಶುದ್ಧ ಆಡಳಿತದ ಮೂಲಕ ಶ್ರೇಷ್ಠ ಕೆಲಸ ಮಾಡುತ್ತಿದೆ.
ಎಸ್.ಎಂ. ಕೃಷ್ಣ ಅವರ ಕಾಲದಲ್ಲಿ ನಾನು ನಗರಾಭಿವೃದ್ಧಿ ಸಚಿವನಾಗಿದ್ದೆ. ಅವರು ಎರಡನೇ ಹಂತದ ನಗರಗಳಿಗೆ ಆದ್ಯತೆ ನೀಡುವ ಉದ್ದೇಶ ಹೊಂದಿದ್ದರು. ಹೀಗಾಗಿ ಮಂಗಳೂರು, ಮೈಸೂರು, ಹುಬ್ಬಳ್ಳಿ ಧಾರವಾಡದಲ್ಲಿ ಆದ್ಯತೆ ಮೇರೆಗೆ ಇನ್ಫೋಸಿಸ್ ಸಂಸ್ಥೆಗೆ ಅವಕಾಶ ನೀಡಿದರು.
ಚಂದ್ರಬಾಬು ನಾಯ್ಡು ಅವರು ತಮ್ಮ ಸರ್ಕಾರದ ಕಟ್ಟಡ ನಿರ್ಮಾಣಕ್ಕೆ ಅಧಿಕಾರಿಗಳನ್ನು ನನ್ನ ಹತ್ತಿರ ಕಳುಹಿಸಿದಾಗ ನಾನು ಹೋಗಿ ಇನ್ಫೋಸಿಸ್ ಸಂಸ್ಥೆ ಕಟ್ಟಡಗಳನ್ನು ನೋಡುವಂತೆ ತಿಳಿಸಿದೆ. ಈ ಸಂಸ್ಥೆಯಿಂದ ಸರ್ಕಾರಕ್ಕೆ ಅಪಾರ ಪ್ರಮಾಣದ ತೆರಿಗೆ ಸಂಗ್ರಹವಾಗುತ್ತಿದೆ. ಉದ್ಯೋಗ ಸೃಷ್ಟಿ ಆಗುತ್ತಿದೆ. ಅಷ್ಟೊಂದು ಕೊಡುಗೆ ಕೊಟ್ಟಿರುವ ಸಂಸ್ಥೆ ಇನ್ಫೋಸಿಸ್.
ಈ ಸಂಸ್ಥೆ ಮುಖ್ಯಸ್ಥರು ಒಂದು ಸರ್ಕಾರ ಮಾಡಲಾಗದ ಸೇವೆ ಮಾಡುತ್ತಿದ್ದು, ನಮ್ಮ ತಾಲೂಕಿಗೆ ಮತ್ತೊಂದು ಬೇಡಿಕೆ ಇಡುತ್ತಿದ್ದೇನೆ. 10 ಪಬ್ಲಿಕ್ ಶಾಲೆಗಳನ್ನು ನಿರ್ಮಾಣ ಮಾಡಿಕೊಡುವಂತೆ ಕೋರುತ್ತೇನೆ. ಟೊಯೋಟಾ ಸಂಸ್ಥೆ ಇಲ್ಲಿ 280 ಶೌಚಾಲಯ ನಿರ್ಮಾಣ ಮಾಡಿದೆ ಎಂದು ಹೇಳಿದರು.
ನಾನು ವೈದ್ಯಕೀಯ ಶಿಕ್ಷಣ ಸಚಿವ ಆಗಿದ್ದಾಗ ಬಜೆಟ್ ನಲ್ಲಿ ಕನಕಪುರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಲು ಅನುಮತಿ ನೀಡಿ, ಜಾಗವೂ ನಿಗದಿಯಾಗಿತ್ತು. ಕೇವಲ ಭೂಮಿ ಪೂಜೆ ಮಾತ್ರ ಬಾಕಿ ಇತ್ತು. ಅಂತಹ ಸಂದರ್ಭದಲ್ಲಿ ಇದನ್ನು ರದ್ದು ಮಾಡಿದ್ದು, ನನ್ನ ಜೀವನದಲ್ಲಿ ಇದೊಂದು ದೊಡ್ಡ ಗಾಯವಾಗಿ ಮನಸ್ಸಿನಲ್ಲಿ ಉಳಿದುಕೊಂಡಿದೆ.
ಬೊಮ್ಮಾಯಿ, ಯಡಿಯೂರಪ್ಪ ಅವರು ನನಗೆ, ಸುರೇಶ್ ಅವರಿಗೆ ಈ ಕ್ಷೇತ್ರದಲ್ಲಿ ವೈದ್ಯಕೀಯ ಕಾಲೇಜು ನಿರ್ಮಾಣ ಮಾಡಿ ಕೊಡುವುದಾಗಿ ಮಾತು ನೀಡಿ, ಅದಕ್ಕೆ ತಪ್ಪಿದ್ದಾರೆ. ಅವರು ಇನ್ನೆಷ್ಟು ದಿನ ಅಧಿಕಾರದಲ್ಲಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದರು.
ನಾನು 30 ವರ್ಷಗಳ ಹಿಂದೆ ಮಂತ್ರಿಯಾಗಿದ್ದೆ. ನಾವು ಏನಾದರೂ ಮಾಡಬೇಕಾದರೆ ಇಂದೇ ಮಾಡಬೇಕು. ನಾನು ಸಹಕಾರ ಸಚಿವನಾಗಿದ್ದೆ. ಆಗ ಸಮಾವೇಶ ಮಾಡಿದ್ದೆ. ಆಗ ಒಂದು ಶ್ಲೋಕ ಕಲಿತೆ. ಅದರ ಅರ್ಥ ಮನಸ್ಸು, ಹಣ, ಯೌವನ, ಅಧಿಕಾರ ಯಾವುದೂ ಶಾಶ್ವತವಲ್ಲ. ಹೀಗಾಗಿ ನಾವು ಯಾರಿಗಾದರೂ ನೆರವಾಗಬೇಕಾದರೆ ಅದನ್ನು ಕೂಡಲೇ ಮಾಡಬೇಕು.
ನಾವು ಯಾರೂ ಅಧಿಕಾರದಲ್ಲಿ ಗೂಟ ಹೊಡೆದುಕೊಂಡು ಶಾಶ್ವತವಾಗಿ ಇರಲು ಸಾಧ್ಯವಿಲ್ಲ. ಆದರೆ ನಾವು ಅಧಿಕಾರದಲ್ಲಿ ಇದ್ದಾಗ ಏನು ಸಾಧನೆ ಮಾಡಿದ್ದೇವೆ ಎಂಬುದನ್ನು ಜನ ನೋಡುತ್ತಾರೆ.
ನಾನು ಕನಕಪುರದಲ್ಲಿ ಯಾವುದಾದರೂ ಮಂತ್ರಿ ಜತೆ ವೇದಿಕೆ ಹಂಚಿಕೊಂಡಿದ್ದರೆ ಅದು ಯಡಿಯೂರಪ್ಪ, ಸುಧಾಕರ್ ಅವರ ಜೊತೆ ಮಾತ್ರ. ಕುಮಾರಸ್ವಾಮಿ ಅವರ ಜತೆ ವೇದಿಕೆ ಹಂಚಿಕೊಳ್ಳುವಾಗ ಐತಿಹಾಸಿಕ ಸಮರ ನಡೆದಿತ್ತು. ನಾನು ನಿಮ್ಮ (ಸುಧಾಕರ್) ಜತೆ ವೇದಿಕೆ ಹಂಚಿಕೊಂಡಿದ್ದೇನೆ ಎಂದರೆ ನಿಮ್ಮ ಮೇಲೆ ಗೌರವ ಇದೇ ಎಂದರ್ಥ.
ಕನಕಪುರದಲ್ಲಿ ನಾನು ಇರುವಾಗ ವೈದ್ಯಕೀಯ ಕಾಲೇಜು ಆಗೇ ಆಗುತ್ತದೆ. ಈ ಸಮಯದಲ್ಲಿ ಸುಧಾಮೂರ್ತಿ ಅವರಿಗೆ ಪ್ರಣಾಮ ಸಲ್ಲಿಸುತ್ತೇನೆ. ನನ್ನ ಹಾಗೂ ನಾರಾಯಣಮೂರ್ತಿ ಅವರ ಸಂಬಂಧ ಬಹಳ ಹಳೆಯದು. ಅವರ ನೇತೃತ್ವದಲ್ಲಿ ಬೆಂಗಳೂರು ಅಭಿವೃದ್ಧಿಗೆ ಯೋಜನಾ ಸಮಿತಿ ಮಾಡಿದ್ದೆ. ಇವರು ಇಡೀ ದೇಶಕ್ಕೆ ಆಸ್ತಿ. ನೀವು ಯುವಕರಿಗೆ ಆದರ್ಶವಾಗಿದ್ದೀರಿ. ನಿಮಗೆ ಇನ್ನಷ್ಟು ಜನಸೇವೆ ಮಾಡುವ ಶಕ್ತಿ ಸಿಗಲಿ ಎಂದು ಆಶಿಸುತ್ತೇನೆ.
ಜನಪರ ಕೆಲಸ ಮಾಡಲು ನಮ್ಮ ಸಹಕಾರ ಇದ್ದೇ ಇದೆ. ಅವರ ಬದುಕು ನಮ್ಮ ಬದುಕಿನ ಭಾಗವೂ ಹೌದು. ಅವರ ಮನಸ್ಸು ಗೆಲ್ಲುವುದೇ ಒಂದು ಸಾಧನೆ ಎಂದು ಹೇಳಿದರು.
*ಹಾಲಿ JDS ಶಾಸಕನಿಗೆ ಸೆಡ್ಡು ಹೊಡೆದು ಹೊಸ ಅಭ್ಯರ್ಥಿಗೆ ಅರಸಿಕೆರೆ ಟಿಕೆಟ್ ಘೋಷಿಸಿದ HDK*
https://pragati.taskdun.com/h-d-kumaraswamyarasikere-jds-candidateannouncebanavara-ashok/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ