ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭೆಯ ಕಲಾಪದ ವೇಳೆ ವಿಪಕ್ಷ ಕಾಂಗ್ರೆಸ್ ನಾಯಕರ ವಿರುದ್ಧ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಕೆಂಡಾಮಂಡಲಾರದ ಘಟನೆ ನಡೆದಿದೆ.
ಟಿಪ್ಪುವನ್ನು ಹೊಡೆದಂತೆ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂಬ ಸಚಿವ ಅಶ್ವತ್ಥನಾರಾಯಣ ಹೇಳಿಕೆ ವಿಧಾನಸಭೆಯಲ್ಲಿ ಪ್ರತಿಧ್ವನಿಸಿದ್ದು, ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ವೇಳೆ ಸಚಿವ ಅಶ್ವತ್ಥನಾರಾಯಣ ತಮ್ಮ ಹೇಳಿಕೆಗೆ ವಿಧಾನಸಭೆಯಲ್ಲಿ ಕ್ಷಮೆಯಾಚಿಸಿದರು. ವಿಷಾದ ವ್ಯಕ್ತಪಡಿಸಿದರೂ ಸುಮ್ಮನಾಗದ ಕಾಂಗ್ರೆಸ್ ಸದಸ್ಯರು ಸಚಿವರನ್ನು ವಜಾಗೊಳಿಸುವಂತೆ ಆಗ್ರಹಿಸಿದರು.
ಈ ವೇಳೆ ಶಾಸಕ ಈಶ್ವರ ಖಂಡ್ರೆ, ತಕ್ಷಣ ಸಚಿವ ಅಶ್ವತ್ಥನಾರಾಯಣ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ, ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಲು ಮುಂದಾದರು. ಇದಕ್ಕೆ ಕಾಂಗ್ರೆಸ್ ನ ಇತರ ಸದಸ್ಯರು ಧ್ವನಿಗೂಡಿಸಿದರು. ಈ ವೇಳೆ ತಾಳ್ಮೆ ಕಳೆದುಕೊಂಡ ಸ್ಪೀಕರ್ ಕಾಗೇರಿ, ಈಶ್ವರ ಖಂಡ್ರೆ ಅವರಿಗೆ ಕುಳಿತುಕೊಳ್ಳುವಂತೆ ಸೂಚಿಸಿದರು. ಆದರೂ ಕೇಳದ ಈಶ್ವರ ಖಂಡ್ರೆ ನಮಗೆ ಮಾತನಾಡಲು ಬಿಡುತ್ತಿಲ್ಲ ಎಂದು ಪ್ರತಿಭಟನೆಗೆ ಮುಂದಾದರು. ಇದರಿಂದ ಕೋಪಗೊಂಡ ಸ್ಪೀಕರ್ ಕಾಗೇರಿ, ಸದನ ಅಂದ್ರೆ ತಮಾಷೆ ಎಂದುಕೊಂಡಿದ್ದೀರಾ? ಕುಳಿತುಕೊಳ್ಳಿ ಎಂದು ಸೂಚಿಸಿದರೂ ಸ್ಪೀಕರ್ ಮಾತನ್ನು ಕೇಳುತ್ತಿಲ್ಲ. ನನ್ನ ಅಧಿಕಾರವನ್ನು ಪೂರ್ಣವಾಗಿ ಚಲಾಯಿಸಲು ಅವಕಾಶಕೊಡಬೇಡಿ. ಈ ರೀತಿ ನಡೆದುಕೊಳ್ಳುವುದು ನಿಮ್ಮ ಕಾಂಗ್ರೆಸ್ ಪಕ್ಷಕ್ಕೂ ಶೋಭೆಯಲ್ಲ,ನಿಮ್ಮನ್ನು ಆಯ್ಕೆ ಮಾಡಿ ಕಳುಹಿಸಿದ ಜನರಿಗೆ ಹೇಳಬೇಕಾಗುತ್ತದೆ. ನಿಮ್ಮಂತವರು ಆಯ್ಕೆಯಾಗಿ ಬರುವುದು ಸದನಕ್ಕೆ ಅಗೌರವ. ಸ್ಪೀಕರ್ ನ್ನು ಎದ್ದು ನಿಂತು ಮಾತನಾಡುವಂತೆ ಮಾಡಬೇಡಿ. ಕುಳಿತುಕೊಳ್ಳದಿದ್ದರೆ ನಿಮ್ಮನ್ನು ಸದನದಿಂದ ಹೊರಗೆ ಕಳುಹಿಸಬೇಕಾಗುತ್ತೆ ಎಂದು ಗುಡುಗಿದ್ದಾರೆ. ಸ್ಪೀಕರ್ ಕಾಗೇರಿ ಕೋಪಕ್ಕೆ ಕೆಲ ಕಾಲ ಇಡೀ ಸದನವೇ ದಂಗಾದ ಪ್ರಸಂಗ ನಡೆಯಿತು.
*ಸಚಿವ ಅಶ್ವತ್ಥನಾರಾಯಣ ವಿರುದ್ಧ ಡಿ.ಕೆ.ಶಿವಕುಮಾರ್ ಕೆಂಡಾಮಂಡಲ*
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ