Kannada NewsKarnataka News

ಮಲಪ್ರಭಾ, ಘಟಪ್ರಭಾ ನದಿತೀರ ಅತಿಕ್ರಮಣ ತೆರವು: ಪ್ರಸ್ತಾವ ಸಲ್ಲಿಸಲು ಪ್ರಾದೇಶಿಕ ಆಯುಕ್ತ ಎಂ.ಜಿ.ಹಿರೇಮಠ ಸೂಚನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಮಲಪ್ರಭಾ ಮತ್ತು ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸಲು ಮೊದಲ ಹಂತವಾಗಿ ಹಳೆಯ ಉಪಯೋಗದಲ್ಲಿ ಇಲ್ಲದಿರುವ ಬ್ರಿಡ್ಜ್, ಬ್ಯಾರೇಜ್ ತೆರವುಗೊಳಿಸಲು ಹಾಗೂ ಅತಿಕ್ರಮಣಗೊಂಡಿರುವ ಜಮೀನುಗಳ ಗಡಿಗಳಿಗೆ ಕಲ್ಲುಗಳನ್ನು ಹಾಕಿಸಲು ಅಂದಾಜು ಪತ್ರಿಕೆಯನ್ನು ಆದ್ಯತೆ ಮೇರೆಗೆ 10 ದಿನದೊಳಗಾಗಿ ಸಲ್ಲಿಸಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ನೀರಾವರಿ ಇಲಾಖೆಯ ಅಭಿಯಂತರರಿಗೆ ಸೂಚನೆ ನೀಡಿದರು.
ಮಲಪ್ರಭಾ ಹಾಗೂ ಘಟಪ್ರಭಾ ನದಿ ತೀರಗಳಲ್ಲಿನ ಅತಿಕ್ರಮಣವನ್ನು ತೆರವುಗೊಳಿಸುವ ಗುರುವಾರ(ಫೆ.16) ನಡೆದ ವಿಭಾಗದ ಮಟ್ಟದ ವಿಡಿಯೋ ಸಂವಾದದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಲಪ್ರಭಾ ನದಿ ಕಲುಷಿತ; ಪರಿಶೀಲನೆಗೆ ಸೂಚನೆ:
ಬೆಳಗಾವಿ ಜಿಲ್ಲೆಯ ರಾಮದುರ್ಗ ಪಟ್ಟಣದಲ್ಲಿನ ಗಟಾರು ನೀರು ಮಲಪ್ರಭಾ ನದಿಗೆ ಸೇರಿ ಕಲುಷಿತವಾಗುತ್ತಿರುವ ಕುರಿತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಸ್ಥಳ ತನಿಖೆ ಮಾಡಿ ಅಗತ್ಯ ಕ್ರಮ ಕೈಕೊಳ್ಳಬೇಕು ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ನದಿತೀರದಲ್ಲಿ ಭವಿಷ್ಯದಲ್ಲಿ ಅತಿಕ್ರಮಣಗೊಳ್ಳದಂತೆ ಸರ್ಕಾರಿ ಜಮೀನನ್ನು ಸಂರಕ್ಷಿಸಲು ಅವಶ್ಯಕ ಸಲಹೆ/ಶಿಫಾರಸ್ಸುಗಳನ್ನು ನೀಡಲು ಬೆಳಗಾವಿ, ಬಾಗಲಕೋಟೆ ಹಾಗೂ ಗದಗ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ನೀರಾವರಿ ಇಲಾಖೆ, ಸಣ್ಣ ನೀರಾವರಿ ಇಲಾಖೆ, ಲೋಕೋಪಯೋಗಿ ಇಲಾಖೆ, ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಇಲಾಖೆಯ ಅಭಿಯಂತರರು ಈ ಕುರಿತು ಸಮನ್ವಯದೊಂದಿಗೆ ಕಂದಾಯ/ ಭೂಮಾಪನ ಇಲಾಖೆಯ ಸಹಕಾರದೊಂದಿಗೆ ನದಿ ಗಡಿಗಳನ್ನು ಸಂರಕ್ಷಿಸಲು ಮತ್ತು ಪ್ರವಾಹದಿಂದ ಆಗುವ ಹಾನಿಗಳನ್ನು ತಪ್ಪಿಸಲು ನಿಗದಿತ ಅವಧಿಯೊಳಗಾಗಿ ಅವಶ್ಯಕ ಕ್ರಮ ಕೈಗೊಳ್ಳಬೇಕು ಎಂದು ಪ್ರಾದೇಶಿಕ ಆಯುಕ್ತರಾದ ಎಂ.ಜಿ.ಹಿರೇಮಠ ಅವರು ಸೂಚಿಸಿದರು.
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಬಾಗಲಕೋಟೆ ಹಾಗೂ ಗದಗ ಮತ್ತು ನೀರಾವರಿ ಇಲಾಖೆಯ ಅಧೀಕ್ಷಕ ಇಂಜಿನಿಯರರು/ ಕಾರ್ಯನಿರ್ವಾಹಕ ಇಂಜಿನಿಯರರು, ಹೆಚ್ಚುವರಿ ಆಯುಕ್ತರು (ಭೂ ನಿರ್ವಹಣೆ, ಯೋಜನೆಗಳು ಮತ್ತು ಇತರೆ) ಪ್ರಾದೇಶಿಕ ಆಯುಕ್ತರ ಕಾರ್ಯಾಲಯ ಬೆಳಗಾವಿ, ವಿಶೇಷ ಜಿಲ್ಲಾಧಿಕಾರಿಗಳು(ಭೂಸ್ವಾಧೀನ, ಪುನರ್‌ವಸತಿ, ಮುನರ್‌ನಿರ್ಮಾಣ), ಬೃಹತ್ ನೀರಾವರಿ ಯೋಜನೆಗಳು ಬೆಳಗಾವಿ, ಪ್ರಾದೇಶಿಕ ಭೂ ದಾಖಲೆಗಳ ಜಂಟಿ ನಿರ್ದೇಶಕರು ಬೆಳಗಾವಿ ವಿಭಾಗ ಮತ್ತು ಇತರ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button