Latest

ಮುಜರಾಯಿ ಇಲಾಖೆಗೆ ದಾಖಲೆಯ ಅನುದಾನ: ಶಶಿಕಲಾ ಜೊಲ್ಲೆ ಹರ್ಷ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಮುಜರಾಯಿ ಇಲಾಖೆ ಮತ್ತು ಮಹಿಳಾ ಕಲ್ಯಾಣಕ್ಕೆ ದಾಖಲೆಯ ಅನುದಾನ ನೀಡುವ ಮೂಲಕ ಹಣಕಾಸು ಇಲಾಖೆಯ ಹೊಣೆಯನ್ನೂ ಹೊತ್ತಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ಐತಿಹಾಸಿಕ ಮತ್ತು ಕ್ರಾಂತಿಕಾರಕವಾಗಿದೆ ಎಂದು ಮುಜರಾಯಿ ಖಾತೆ ಸಚಿವೆ ಶಶಿಕಲಾ ಜೊಲ್ಲೆ ಅವರು ಬಣ್ಣಿಸಿದ್ದಾರೆ.
ಮುಜರಾಯಿ ಇಲಾಖೆಗೆ ಈ ಬಾರಿಯ ಬಜೆಟ್ ನಲ್ಲಿ 1,000 ಕೋಟಿ ರೂ. ಮೀಸಲಿಟ್ಟಿರುವುದರಿಂದ ರಾಜ್ಯದಲ್ಲಿ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಕ್ರಾಂತಿಗೆ ಸಹಕಾರಿಯಾಗಲಿದೆ. ಈ ದೊಡ್ಡ ಪ್ರಮಾಣದ ಅನುದಾನದಿಂದಾಗಿ ದೇವಸ್ಥಾನಗಳು ಮತ್ತು ಮಠಗಳ ಕಾಯಕಲ್ಪಕ್ಕೆ ವೇಗ ದೊರೆಯಲಿದೆ ಎಂದು ಅವರು ಹೇಳಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವಿಶ್ವದ ಮೊದಲ ಸಂಸತ್ತೆನಿಸಿದ ಅನುಭವ ಮಂಟಪದ ಬಗ್ಗೆ ಪ್ರಸ್ತಾಪ ಮಾಡಿದ್ದು, ಇದರ ಕಾಮಗಾರಿ ಭರದಿಂದ ಸಾಗಿದ್ದು, ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ಹಿಂದೂ ಧಾರ್ಮಿಕ ಭೂಮಿಗಳ ವರ್ಷಾಸನವನ್ನು 48,000 ರೂ.ನಿಂದ 60ಸಾವಿರ ರೂ.ವರೆಗೆ ಹೆಚ್ಚಳ ಮಾಡಿರುವುದರಿಂದ ರಾಜ್ಯದ 3721 ಸಂಸ್ಥೆಗಳಿಗೆ ಅನುಕೂಲವಾಗಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಮಹಿಳೆಯರ ಸಬಲೀಕರಣಕ್ಕೆ ಗೃಹಿಣಿ ಶಕ್ತಿ ಯೋಜನೆ, ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ಸೌಲಭ್ಯ, ಮಹಿಳಾ ಕಾರ್ಮಿಕರಿಗೆ 500 ರೂ. ಮಾಸಾಶನ, ರೈತರಿಗೆ ʼಭೂ ಸಿರಿ’ ಯೋಜನೆ ಸೇರಿದಂತೆ ಎಲ್ಲಾ ವರ್ಗಗಳ ಶ್ರೇಯೋಭಿವೃದ್ಧಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ಪ್ರಕಟಿಸುವ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜನಸ್ನೇಹಿ ಬಜೆಟ್ ನೀಡಿದ್ದಾರೆ ಎಂದು ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.

 

https://pragati.taskdun.com/hasanasakaleshapurawildfireforest-guard-death/
https://pragati.taskdun.com/cms-budget-is-welcome-dr-prabhakar-kore/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button