ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ ಜೀವ ಬೆದರಿಕೆ, ಪೋಲಿಸ್ ರಿಗೆ ಪತ್ರ ಬರೆದ ಸಂಜಯ್ ರಾವುತ್

 ಮಹಾರಾಷ್ಟ್ರದಲ್ಲಿ ಜನಪ್ರತಿ ನಿಧಿಗಳಿಗೇ ಜೀವ ಬೆದರಿಕೆ ! ಆರೋಪವೋ? ಸತ್ಯವೋ?

ಪ್ರಗತಿವಾಹಿನಿ ಸುದ್ದಿ, ಮುಂಬೈ:  ಉದ್ಧವ್ ಬಾಳಾಸಾಹೇಬ್ ಠಾಕ್ರೆ ಶಿವಸೇನೆ ಬಣದ ರಾಜ್ಯಸಭಾ ಸಂಸದ ಸಂಜಯ್ ರಾವುತ್ ಅವರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರನಿಂದ “ಜೀವ ಬೆದರಿಕೆ” ಇರುವುದಾಗಿ ಆರೋಪಿಸಿ, ಮುಂಬೈ ಪೊಲೀಸರಿಗೆ ಪತ್ರ ಬರೆದಿದ್ದು, ರಾಜಕೀಯ ವಲಯದಲ್ಲಿ ಮತ್ತೊಂದು ತಲ್ಲಣ ಉಂಟಾಗಿದೆ.
 ” ರಾಜ್ಯದಲ್ಲಿ ಅಧಿಕಾರ ಬದಲಾದ ಬಳಿಕ ನನ್ನ ಸಂಪೂರ್ಣ ಭದ್ರತೆಯನ್ನು ಹಿಂಪಡೆಯಲಾಗಿದೆ.
ಅದರ ಬಗ್ಗೆ ನನಗೆ ಯಾವುದೇ ದೂರುಗಳಿಲ್ಲ.  ಇಂತಹ ರಾಜಕೀಯ ನಿರ್ಧಾರಗಳು ನಡೆಯುತ್ತಲೇ ಇರುತ್ತವೆ.  ಜನಪ್ರತಿನಿಧಿಗಳ ಭದ್ರತೆ ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ್ದು ಮತ್ತು ಅದನ್ನು ನಿಭಾಯಿಸಲು ಗೃಹ ಇಲಾಖೆ ಸಮರ್ಥವಾಗಿದೆ ” ಎಂದು ರಾವತ್ ಪತ್ರದಲ್ಲಿ ತಿಳಿಸಿದ್ದಾರೆ.
ಏಕನಾಥ್ ಶಿಂಧೆ ಅವರ ಮಗನಾದ  ಲೋಕಸಭಾ ಸದಸ್ಯ ” ಶ್ರೀಕಾಂತ್ ಶಿಂಧೆ  ಥಾಣೆ ಮೂಲದ ಕ್ರಿಮಿನಲ್ ರಾಜಾ ಠಾಕೂರ್‌ಗೆ ನನ್ನನ್ನು ಕೊಲ್ಲಲು ಸುಪಾರಿ (ಗುತ್ತಿಗೆ) ನೀಡಿದ್ದಾರೆ.  ನಾನು ಅದರ ಬಗ್ಗೆ ದೃಢೀಕರಿಸಿದ ಮಾಹಿತಿಯನ್ನು ನೀಡಿದ್ದೇನೆ.  ಜವಾಬ್ದಾರಿಯುತ ನಾಗರಿಕನಾಗಿ ನಾನು ನಿಮಗೆ ತಿಳಿಸುತ್ತಿದ್ದೇನೆ” ಎಂದು ರಾವತ್ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.
 ಉದ್ಧವ್ ಠಾಕ್ರೆ ಬಣದ ನಾಯಕ ಸಂಜಯ್ ರಾವುತ್ ಅವರು ಮಹಾರಾಷ್ಟ್ರದ ಡಿಸಿಎಂ, ಮುಂಬೈ ಸಿಪಿ ಮತ್ತು ಥಾಣೆ ಸಿಪಿ ಅವರಿಗೆ ಪತ್ರ ಬರೆಯುವ ಮೂಲಕ, “ಥಾಣೆಯ ಕುಖ್ಯಾತ ಗೂಂಡಾ ರಾಜಾ ಠಾಕೂರ್‌ಗೆ,ನನ್ನನ್ನು ಕೊಲ್ಲಲು ಶ್ರೀಕಾಂತ್ ಶಿಂಧೆ ಗುತ್ತಿಗೆ ನೀಡಿದ್ದಾರೆ ಎಂಬ ಮಾಹಿತಿ ನನಗೆ ಬಂದಿದೆ” ಎಂದು ಹೇಳಿದ್ದಾರೆ.
 ಮುಂಬೈ ಪೊಲೀಸ್ ಕಮಿಷನರ್‌ಗೆ ಬರೆದ ಪತ್ರದಲ್ಲಿ ರಾವತ್ ಆರೋಪಗಳನ್ನು ಮಾಡಿರುವ ಪ್ರತಿಗಳನ್ನು ಗೃಹ ಖಾತೆಯನ್ನು ಹೊಂದಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮತ್ತು ಥಾಣೆ ನಗರದ ಪೊಲೀಸರಿಗೂ ಕಳುಹಿಸಲಾಗಿದೆ.
 ರಾವುತ್ ಅವರ ಪತ್ರಕ್ಕೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಮತ್ತು ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, “ದೂರನ್ನು ಗಂಭೀರವಾಗಿ ಪರಿಗಣಿಸಬೇಕು.  ದುರದೃಷ್ಟವಶಾತ್, ಈ ದೇಶದ್ರೋಹಿ ಶಾಸಕರನ್ನು  ನಿಯಂತ್ರಿಸಲಾಗುತ್ತಿಲ್ಲ.  ಮುಂಬೈನ ಮಾಹಿಮ್ ಪ್ರದೇಶದಲ್ಲಿ ಶಾಸಕರೊಬ್ಬರು ಗುಂಡು ಹಾರಿಸಿದ್ದರು, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ.
 ಆದರೆ, ಶಿಂಧೆ ಗುಂಪಿನ ಶಾಸಕ  ಶಿರ್ಸಾತ್, “ರಾವುತ್ ಅನುಕಂಪ ಗಿಟ್ಟಿಸಿಕೊಳ್ಳಲು ಅಗ್ಗದ ಸ್ಟಂಟ್ ಮಾಡುತ್ತಿದ್ದಾರೆ.  ಈ ಬಗ್ಗೆ ಕೂಲಂಕಷ ತನಿಖೆಯಾಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ.  ಆದಾಗ್ಯೂ, ರಾವುತ್ ಬಹಳಷ್ಟು ಸಾಹಸಗಳನ್ನು ಮಾಡುತ್ತಾರೆ, ಅದರಲ್ಲಿ ಯಾವುದೇ ಸತ್ವವಿಲ್ಲ ಎಂಬುದನ್ನು ಮರೆಯಬೇಡಿ” ಎಂದರಲ್ಲದೇ “ಡಾ ಶ್ರೀಕಾಂತ್ ಶಿಂಧೆ ಅವರು ಎಂದಿಗೂ ಅಂತಹ ಕೆಲಸವನ್ನು ಮಾಡುವವರಲ್ಲ ಎಂದು ನಾನು ನಂಬುತ್ತೇನೆ, ಇನ್ನೂ ತನಿಖೆಯನ್ನು ಪ್ರಾರಂಭಿಸಬಹುದು” ಎಂದು ಅವರು ಹೇಳಿದ್ದಾರೆ.
ರಾವುತ್‌ಗೂ ಮುನ್ನ, ಹಿರಿಯ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ನಾಯಕ ಡಾ. ಜಿತೇಂದ್ರ ಅವ್ಹಾದ್ ಅವರು, ಕಳೆದ ವಾರ ತಮ್ಮನ್ನು ಮತ್ತು ಕುಟುಂಬದ ಸದಸ್ಯರನ್ನು ಹೊಡೆದು ಹಾಕುವುದಾಗಿ ಬೆದರಿಕೆ ಹಾಕಿದ್ದರು, ಆದರೆ ಈ ವಾರ ಮಾಜಿ ಸಿಎಂ ಮತ್ತು ಹಿರಿಯ ಕಾಂಗ್ರೆಸ್ ನಾಯಕ ಅಶೋಕ್ ಚವಾಣ್  ಅವರನ್ನು ಮುಗಿಸಲು ಪಿತೂರಿ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹೀಗೆ ಮಹಾರಾಷ್ಟ್ರದಲ್ಲಿ ಆರೋಪ, ಪ್ರತ್ಯಾರೋಪಗಳಲ್ಲಿ ಶಿವಸೇನಾದ ಎರಡು ಬಣದವರು ತೊಡಗಿಕೊಂಡಿದ್ದಾರೆ. ಜನತೆಯ ಸಂಕಷ್ಟಕ್ಕೆ ಸ್ಪಂದಿಸುವುದನ್ನು ಮರೆತು, ಅಧಿಕಾರ ಗದ್ದುಗೆಗಾಗಿ ಕಿತ್ತಾಟ ನಡೆದಿರುವುದು  ಸೂಚನೀಯ ಸಂಗತಿಯೇ ಸರಿ. ಹೊಡಿ ಬಡಿ ಕಡಿ ಸಂಸ್ಕೃತಿಯು ಇತ್ತೀಚೆಗೆ ಮಿತಿಮೀರುತ್ತಿದ್ದು ಜನಪ್ರತಿನಿಧಿಗಳಿಂದ ಅವ್ಯಾಹತವಾಗಿ ಈ ರೀತಿಯ ಹೇಳಿಕೆಗಳು ಹೊರ ಬೀಳುತ್ತಿರುವುದು ಕೂಡ ದೇಶದ ಭದ್ರತೆಗೆ ಕೆಡುಕನ್ನು ಉಂಟುಮಾಡುತ್ತದೆ ಎನ್ನಬಹುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button