Latest

ಪೂರ್ವಾಭ್ಯಾಸದಿಂದಲೇ ಪರಿಣತಿ ಸಾಧ್ಯ

ಜಯಶ್ರೀ.ಜೆ. ಅಬ್ಬಿಗೇರಿ

ಜಗತ್ತಿನಲ್ಲಿ ಯಾರೂ ಪರಿಪೂರ್ಣರಿಲ್ಲ. ಯಾವುದೂ ಪರಿಪೂರ್ಣವಿಲ್ಲ. ಪರಿಪೂರ್ಣತೆಯೆನ್ನು ಸಾಧಿಸುವುದು ಒಂದು ಸಾಹಸದ ಕಾರ್ಯ ಎಂಬುದು ಸೂರ್ಯನಷ್ಟೇ ಸ್ಪಷ್ಟ. ಹಾಗಂತ ಪರಿಪೂರ್ಣತೆಯತ್ತ ಪರಿಣತಿಯತ್ತ ಸಾಗಬಾರದು ಎಂದೇನಿಲ್ಲ. ಜೀವನದಲ್ಲಿ ಅನಿವಾರ್ಯತೆ ಅನ್ನೋದು ಅಸಮತೋಲನತೆಯನ್ನು ತಂದೊಡ್ಡುತ್ತದೆ. ಆ ಅನಿವಾರ್ಯತೆಯಿಂದಲೇ ಹೊಸ ಬದುಕಿನ ಆರಂಭವಾಗುತ್ತದೆ. ‘ಅಭ್ಯಾಸದಿಂದ ಪರಿಪೂರ್ಣತೆ ಸಿದ್ಧಿಸುತ್ತದೆ.’ ಎನ್ನುವ ಮಾತನ್ನು ಮೇಲಿಂದ ಮೇಲೆ ಕೇಳುತ್ತಲೇ ಇರುತ್ತೇವೆ. ಆದರೆ ನಾವೆಲ್ಲ ಪೂರ್ವಾಭ್ಯಾಸವನ್ನು ರೂಢಿಗೊಳಿಸುವ ವಿಧಾನದ ಬಗ್ಗೆ ತಲೆ ಕೆಡಿಸಿಕೊಳ್ಳುವುದು ಕಮ್ಮಿ.

ಪೂರ್ವಾಭ್ಯಾಸವೆಂದರೇನು?
ಪೂರ್ವಾಭ್ಯಾಸವೆಂದರೇನು? ಎಂಬ ಪ್ರಶ್ನೆಗೆ ಉತ್ತರ ಹುಡುಕಿಹೊರಟರೆ ಸಿಗುವ ಉತ್ತರಗಳು ಹಲವು. ಅದರಲ್ಲಿ ಇಲ್ಲಿ ಕೆಲವನ್ನು ಹೇಳಬೇಕೆಂದರೆ, ಯಾವುದೇ ಒಂದು ವರ್ತನೆಯನ್ನು ಮತ್ತೆ ಮತ್ತೆ ಮಾಡುವುದು, ಪೂರ್ವ ತಯಾರಿ ಮಾಡುವ ಕ್ರಿಯೆ, ಸುಧಾರಿಸುವ ಸಲುವಾಗಿ ಪ್ರಯತ್ನಿಸುವುದು ಅಥವಾ ನೈಪುಣ್ಯತೆಯನ್ನು ಸಾಧಿಸಲು ಚಟುವಟಿಕೆಗಳಲ್ಲಿ ಮತ್ತೆ ಮತ್ತೆ ತೊಡಗಿಸಿಕೊಳ್ಳುವುದು. ಉದಾಹರಣೆಗೆ ಉಲ್ಲೇಖಿಸಬೇಕೆಂದರೆ ಕ್ರೀಡಾ ಪಟುಗಳು ಆಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಮುನ್ನ ನಡೆಸುವ ಮೈದಾನದ ಪೂರ್ವ ಅಭ್ಯಾಸ. ಓಲಿಂಪಿಕ್ಸ್ನಲ್ಲಿ ಜಯಗಳಿಸಬೇಕೆನ್ನುವ ಉತ್ಕಟ ಇಚ್ಛೆಯುಳ್ಳವನು 15 ಸೆಕೆಂಡಿನ ಓಟಕ್ಕೆ 15 ವರ್ಷಗಳಿಂದ ಪ್ರತಿನಿತ್ಯ ತಪ್ಪದೇ ಅಭ್ಯಾಸ ಮಾಡುತ್ತಾನೆ. ಕುಸ್ತಿ ಪಟು ದಿನವೂ ತಪ್ಪದೇ ಗರಡಿ ಶಾಲೆಯಲ್ಲಿ ಅಭ್ಯಾಸ ಮಾಡುತ್ತಾನೆ. ಒತ್ತಡ ಮುಕ್ತ ಆರೋಗ್ಯಕರ ಮತ್ತು ಸಂತೋಷದಾಯಕ ಜೀವನವನ್ನು ನಡೆಸಲು ಯೋಗಾಭ್ಯಾಸವನ್ನು ಯೋಗಪಟುಗಳು ನಡೆಸುತ್ತಲೇ ಇರುತ್ತಾರೆ.

ಪೂಜೆಗಿಂತ ಮಿಗಿಲು
ಪೂರ್ವಾಭ್ಯಾಸವೆನ್ನುವುದು ಒಂದು ಪ್ರಬಲವಾದ ಪ್ರಕ್ರಿಯೆ. ಸಾಧನೆಯಂಬ ದೀಕ್ಷೆ ಪಡೆಯಲು ಇರುವ ಶಕ್ತಿಯುತವಾದ ಸಾಧನ. ದಿನ ನಿತ್ಯದ ಅಭ್ಯಾಸಕ್ಕಾಗಿ ಹಿರಿಯರು ಗುರುಗಳ ಮೇಲಿರುವ ಭಕ್ತಿ ಶ್ರದ್ಧೆಯೇ ನಮ್ಮನ್ನು ಹೆಚ್ಚಾಗಿ ಬೆಳೆಸುತ್ತದೆ ಎನ್ನುವ ಪರಿಕಲ್ಪನೆಯು ನಮ್ಮಲ್ಲಿ ಆಳವಾಗಿ ಬೇರೂರಿದೆ. . ಹಿರಿಯರನ್ನು ಕೇಳದೇ ಮಾಡಿದ, ಗುರುಗಳ ಮಾರ್ಗದರ್ಶನವಿಲ್ಲದೇ ಮಾಡಿದ ಪೂರ್ವಾಭ್ಯಾಸ ಸಮಯ ಬಂದಾಗ ಕೈ ಕೊಡುತ್ತದೆ. ಸಾಮರ್ಥ್ಯ ಇರುವಾಗ ಪೂರ್ವಾಭ್ಯಾಸ ಮಾಡುವ ಅಗತ್ಯತೆಯೇ ಇಲ್ಲ ಎನ್ನುವ ಯುವ ಸಮೂಹವೂ ಇದೆ. ಹಿರಿಯರ ಮಾತುಗಳಿಗೆ ಕಿವಿಗೊಡದೆ ತಾವೇ ಯಾವ ಕಾರ್ಯವನ್ನಾದರೂ ಮಾಡಬಲ್ಲೆವು ಎನ್ನುವ ತರುಣ ಪೀಳಿಗೆಗೆ ತಿಳಿಸಿ ಹೇಳುವುದು ಕಷ್ಟ. ನಿರಂತರವಾಗಿ ಅಭ್ಯಾಸ ಮಾಡುವುದು ದೇವರ ಪೂಜೆ ಮಾಡುವುದಕ್ಕಿಂತಲೂ ಮಿಗಿಲಾದುದು.

ನನ್ನಿಂದಾಗದು ಎಂದು ಕೆಟ್ಟದ್ದನ್ನು ಯೋಚಿಸುವ ಬದಲು ಯಶಸ್ಸಿಗಾಗಿ ನಾನು ಹೇಗೆ ಪೂರ್ವಾಭ್ಯಾಸ ಮಾಡುವುದು ಎಂಬ ಪ್ರಶ್ನೆಯನ್ನು ಹಾಕಿಕೊಂಡು ಅದರತ್ತ ಹೆಜ್ಜೆ ಹಾಕುವುದು ಒಳ್ಳೆಯದು. ಪರಿಣತಿಗಾಗಿ ಪೂರ್ವಾಭ್ಯಾಸ ಮಾಡುವ ಕೆಲವು ವಿಧಾನಗಳನ್ನು ತಿಳಿದುಕೊಳ್ಳೋಣ.

ಮಗ್ನರಾಗಬೇಕು
ಜೀವ ಚಿಕ್ಕದು ಜೀವನ ದೊಡ್ಡದು. ಸಾಯುವವನಿಗೆ ಒಂದೇ ದಾರಿ. ಸಾಧಿಸುವವನಿಗೆ ಸಾವಿರ ದಾರಿ ಎಂಬ ಮಾತುಗಳು ನಮ್ಮಲ್ಲಿ ಇನ್ನಷ್ಟು ಮತ್ತಷ್ಟು ಸ್ಪೂರ್ತಿ ತುಂಬುತ್ತವೆ. ಮಲಗಿದವರನ್ನು ಹೊಡೆದೆಬ್ಬಿಸುತ್ತವೆ. ಸಾಧ್ಯವೇ ಇಲ್ಲ ಎಂದುಕೊAಡರೆ ಏನನ್ನೂ ಸಾಧಿಸಲಾಗದು. ಪೂರ್ವಾಭ್ಯಾಸ ಮಾಡುವುದರಿಂದ ಪರಿಣತಿ ಸನಿಹವಾಗುವುದು. ಒಂದು ವೇಳೆ ಸೋತರೂ ಕಳೆದುಕೊಳ್ಳುವುದೇನಿದೆ? ಸೋತರೆ ಅದೊಂದು ಪಾಠ ಕಲಿಯುವ ಅನುಭವ. ಗೆಲುವಿನತ್ತ ಹೆಜ್ಜೆ ಹಾಕಬೇಕೆಂದಿದ್ದರೆ ಮೊದಲು ಪೂರ್ವಾಭ್ಯಾಸದಲ್ಲಿ ಮಗ್ನರಾಗಬೇಕು. ಗೆಲುವಿನ ತಯಾರಿಯಲ್ಲಿರುವಾಗ ದಿನಕ್ಕೆ ಒಮ್ಮೆ ನಿಮ್ಮೊಂದಿಗೆ ನೀವು ಮಾತನಾಡಿ ಇಲ್ಲದಿದ್ದರೆ ಈ ಪೂರ್ವಾಭ್ಯಾಸದ ಕೊಂಡಿ ಕಳಚಿ ಬೀಳಬಹುದು. ಸತತವಾಗಿ ಪೂರ್ವಾಭ್ಯಾಸದಲ್ಲಿ ತೊಡಗಿಸಿಕೊಳ್ಳುವುದು ಅಷ್ಟು ಸುಲಭದ ಸಂಗತಿಯಲ್ಲ. ಹಾಗಂತ ಅಸಾಧ್ಯದ ಮಾತೇನೂ ಅಲ್ಲ.

ಛಲದಂಕ ಮಲ್ಲನಾಗಬೇಕು
ಏನನ್ನಾದರೂ ಉತ್ತಮಗೊಳಿಸಲು ಅಭ್ಯಾಸ ಮಾಡಬೇಕೆಂಬುದು ರಹಸ್ಯವಲ್ಲ. ಪೂರ್ವಾಭ್ಯಾಸದಲ್ಲಿ ತೊಡಗಿದಾಗ ನೀವು ಯಾವುದೇ ಸಮಸ್ಯೆಗಳನ್ನು ನೋವುಗಳನ್ನು ಎದುರಿಸದಿದ್ದರೆ ನೀವು ತಪ್ಪಾದ ಹಾದಿಯಲ್ಲಿ ಪ್ರಯತ್ನಿಸುತ್ತಿದ್ದೀರಿ ಎಂದು ಖಚಿತವಾಗಿ ಹೇಳಬಹುದು. ಮೇಲಕ್ಕೆ ಏರಲಾರದ ಮನಸ್ಸಿಲ್ಲದವರಿಗೆ ಎಲ್ಲಿಯತನಕ ಮೇಲೆತ್ತಲು ಸಾಧ್ಯ? ಪ್ರತಿಯೊಬ್ಬನಲ್ಲೂ ಅಪರಮಿತವಾದ ಸಾಮರ್ಥ್ಯವಿದೆ. ಅದನ್ನು ಗುರುತಿಸಿಕೊಳ್ಳಬೇಕು. ಕೆಲವರು ಎಷ್ಟೋ ಸಲ ಪೂರ್ವಾಭ್ಯಾಸದ ತಯಾರಿ ಚೆನ್ನಾಗಿಯೇ ನಡೆಸಿದರೂ ಸಾಲು ಸಾಲು ಸೋಲು ಬೆನ್ನು ಹತ್ತುತ್ತದೆ. ಬೆನ್ನು ಹತ್ತಿದಾಗಲೂ ಪ್ರಯತ್ನ ಬಿಡದೆ ಛಲದಂಕ ಮಲ್ಲನಂತೆ ಮತ್ತೆ ಅಭ್ಯಾಸದಲ್ಲಿ ತೊಡಗಿಕೊಳ್ಳುತ್ತಾರೆ.ತಮ್ಮನ್ನು ಸುಧಾರಿಸಿಕೊಳ್ಳುವುದಕ್ಕೆ ಪ್ರಥಮ ಆದ್ಯತೆಯನ್ನು ನೀಡುತ್ತಾರೆ. ‘ಸಾಧಿಸಿ ಸಾಯಬೇಕು ಸೋತು ಶರಣಾಗುವುದಲ್ಲ’ ಎನ್ನುವುದಕ್ಕೆ ಇವರು ಜ್ವಲಂತ ಉದಾಹರಣೆಗಳಾಗುತ್ತಾರೆ.

ಶ್ರಮ ಹಾಕಬೇಕು
ಪರಿಣತರಾಗಲು ಅತ್ಯುತ್ತಮ ಮಾರ್ಗವೆಂದರೆ ಅಭ್ಯಾಸ ಮಾಡುವುದು ಮತ್ತು ಅದನ್ನು ಬಹಳಷ್ಟು ಮಾಡುವುದು. ಓದಿದ್ದನ್ನು ನೋಡಿದ್ದನ್ನು ಕೇಳಿದ್ದನ್ನು ಪ್ರತಿದಿನ ಅಭ್ಯಾಸ ಮಾಡದಿದ್ದರೆ ನೀವು ಕಲಿಯಬೇಕೆಂದಿರುವುದನ್ನು ಎಂದಿಗೂ ಕಲಿಯಲು ಆಗುವುದಿಲ್ಲ. ಅದರಲ್ಲಿ ಸಾಕಷ್ಟು ಶ್ರಮವನ್ನು ಹಾಕಬೇಕು. ಪೂರ್ವಾಭ್ಯಾಸ ಯಶಸ್ಸಾಗಿ ಬದಲಾಗಬೇಕೆಂದರೆ ನಿರಾಸೆ ಮತ್ತು ನಿರ್ವಿಣ್ಣತೆಗಳು ಇರಬಾರದು. ನಿರಾಸೆ ನಿರ್ವಿಣ್ಣತೆಗಳು ನಮ್ಮನ್ನು ಇನ್ನಿಲ್ಲದಂತೆ ನಾಶಗೊಳಿಸುತ್ತವೆ. ಉತ್ಸಾಹ ಮತ್ತು ನಿರ್ಭಯತೆಯಿದ್ದರೆ ಬದುಕನ್ನು ನಮ್ಮ ಮನಸ್ಸಿಗೆ ಬಂದAತೆ ರೂಪಿಸಬಲ್ಲೆವು. ‘ಯಾವುದಕ್ಕೂ ಹೆದರದವರು ಅದ್ಭುತ ಕೆಲಸವನ್ನು ಮಾಡುತ್ತಾರೆ. ನಿರ್ಭಯತೆಯೇ ಒಂದು ಕ್ಷಣದಲ್ಲಿ ಸ್ವರ್ಗವನ್ನು ತರುತ್ತದೆ.’ ಎಂಬ, ಸ್ವಾಮಿ ವಿವೇಕಾನಂದರ ಮಾತನ್ನು ಇಲ್ಲಿ ಉಲ್ಲೇಖಿಸಲೇಬೇಕು. ಗೆಲ್ಲಬೇಕೆನ್ನುವ ಛಲಗಾರನಿಗೆ ಪೂರ್ವಾಭ್ಯಾಸ ಮತ್ತಷ್ಟು ಬಲ ಹೆಚ್ಚಿಸುವುದು.ಉದ್ದೇಶಪೂರ್ವಕವಾಗಿ ಅಭ್ಯಾಸ ಮಾಡುವ ಮೂಲಕ ಪರಿಣತಿಯನ್ನು ವೇಗಗೊಳಿಸಬಹುದು. ನಾವು ಬಯಸಿದ ಕ್ಷೇತ್ರದಲ್ಲಿ ಶ್ರೇಷ್ಠರಾಗುವುದನ್ನು ತಲುಪಿದ ನಂತರ ಒಂದು ರೀತಿಯ ಮ್ಯಾಜಿಕ್ ಅನಿಸುತ್ತದೆ.

ಗುಣಾತ್ಮಕವಾಗಿರಬೇಕು
ಅಭ್ಯಾಸ ಕೇವಲ ಪ್ರಮಾಣವಲ್ಲ ಅದು ಗುಣಾತ್ಮಕವಾಗಿರಬೇಕು. ಅದಕ್ಕಾಗಿಯೇ ಬೇಗ ಉತ್ತಮಗೊಳ್ಳಲು ಸಾಧ್ಯವಾದಷ್ಟು ಚಿಂತನಶೀಲರಾಗಿರಲು ಬಯಸಬೇಕು. ಅಗ್ರಗಣ್ಯವಾಗಿ ಹೇಗೆ ಮಾಡಬೇಕೆಂದು ತಿಳಿದ ಮೇಲೆ ಪದೇ ಪದೇ ಅದನ್ನೇ ಮಾಡಬಾರದು. ನಿಮ್ಮ ದೌರ್ಬಲ್ಯಗಳನ್ನು ತಿಳಿಯಿರಿ ಮತ್ತು ಅವುಗಳನ್ನು ಜಯಿಸಲು ನಿಮಗೆ ಸಹಾಯ ಮಾಡುವ ನಿರ್ಧಿಷ್ಟ ಗುರಿಯ ಮೇಲೆ ಕೇಂದ್ರೀಕರಿಸಿ ಗಂಟೆಗಟ್ಟಲೇ ಪ್ರಯತ್ನಿಸಬೇಕು. ನಿರಂತರ ಅದೇ ಕೆಲಸ ಮಾಡುವಾಗ ಸ್ವಲ್ಪ ಸಮಯದ ನಂತರ ಅಭ್ಯಾಸ ವಿಧಾನದ ಮಹತ್ವ ಅರ್ಥ ಮಾಡಿಕೊಳ್ಳಬಹುದು. ಹೆಚ್ಚು ಸಮಯ ಕಳೆದಂತೆ ಕೌಶಲ್ಯದಲ್ಲಿ ವಿಶ್ವಾಸ ಮೂಡುತ್ತದೆ. ಕೌಶಲಗಳ ಮೇಲೆ ಹೇಗೆ ಪ್ರಭಾವ ಬೀರಿದೆ ನೋಡಿ ಅದನ್ನು ನಿರ್ದಿಷ್ಟವಾಗಿ ಪರಿವರ್ತಿಸಿ. ಪರಿಣತಿಯ ತಂತ್ರಗಳನ್ನು ಸುಧಾರಿಸುವತ್ತ ಗಮನ ಹರಿಸಬೇಕಾಗುತ್ತದೆ. ಗುರಿಯನ್ನು ಹೊಂದಿಸಿ ನೀವು ಅದನ್ನು ತಲುಪಿದರೆ ನೀವು ಸುಧಾರಿಸಿದ್ದೀರಿ ಎಂದು ನಿಮಗೆ ತಿಳಿಯುತ್ತದೆ.

ತೊಂದರೆಗಳನ್ನು ಎದುರಿಸಬೇಕು
ಯಾವುದೇ ಕ್ಷೇತ್ರದಲ್ಲಾಗಲಿ ಪರಿಣತಿಯನ್ನು ಸಾಧಿಸಬೇಕೆಂದರೆ ತೊಂದರೆಗಳು ಎದುರು ನಿಂತು ತಡೆ ಹಾಕುತ್ತವೆ. ತೊಂದರೆಗಳು ಬಂದಾಗಲೇ ನಮ್ಮಲ್ಲಿರುವ ನೈಜ ಸಾಮರ್ಥ್ಯ ಏನೆನ್ನುವುದು ತಿಳಿಯುತ್ತದೆ. ವ್ಯಾಯಾಮವು ದೇಹವನ್ನು ಬಲಗೊಳಿಸುವಂತೆ ತೊಂದರೆಗಳು ಮನುಷ್ಯನ ಮನಸ್ಸನ್ನು ಬಲಗೊಳಿಸುತ್ತವೆ. ತೊಂದರೆ ಎಂದರೆ ಬೇರೇನೂ ಅಲ್ಲ, ನಮ್ಮ ಶಕ್ತಿಯನ್ನು ಅಳೆಯುವ ಮಾಪಕ. ಯಾವನು ಎದುರಾದ ತೊಂದರೆಗೆ ಹೆದರಿಕೊಳ್ಳದೆ ಶ್ರೇಷ್ಠ ರೀತಿಯಿಂದ ಎದುರಿಸುವನೋ ಅವನು ಪರಿಣತಿಯನ್ನು ಹೆಚ್ಚಿಸಿಕೊಳ್ಳುತ್ತಾನೆ. ನಾವು ಬೆಳೆಯುವುದು ನಮಗೆ ಸಿಕ್ಕ ನೆರವಿನಿಂದಲ್ಲ. ಬದಲಾಗಿ ನಮಗೆ ಎದುರಾದ ತೊಂದರೆಗಳಿಂದ ಮೂರ್ತಿಗಳಾಗುತ್ತೇವೆ.

ಕೊನೆ ಹನಿ
ಆಗಿರುವ ಎಲ್ಲ ಪ್ರಗತಿಯ ಹಿಂದೆ ಪರಿಣತಿ ಇದೆ. ಪರಿಣತಿ ಹೊಂದಿದವನಿಗೆ ಯಾವುದೂ ಅಸಾಧ್ಯವಲ್ಲ. ಹಿಡಿದ ಕೆಲಸದಲ್ಲಿ ಅವನು ಯಶಸ್ವಿಯಾಗಿಯೇ ತೀರುತ್ತಾನೆ. ಹುಡುಕುವ ಬಳ್ಳಿ ಕಾಲಿಗೆ ತೊಡರಿಕೊಂಡಿತು ಎಂದು ಹೇಳುತ್ತಾರಲ್ಲ ಹಾಗೆ ಪರಿಣತಿ ಹೊಂದಿದವನಿಗೆ ಅವನು ಹುಡುಕುವ ವಸ್ತು ಅವನ ಕಾಲಡಿಯಲ್ಲಿಯೇ ಸಿಗುತ್ತದೆ. ಪರಿಣತಿ ಹೊಂದಿದವನಿಗೆ ಜಗತ್ತು ಮೆಚ್ಚುತ್ತದೆ ಮಣೆ ಹಾಕುತ್ತದೆ. ಮನ್ನಣೆ ನೀಡುತ್ತದೆ. ಅವಿಸ್ಮರಣೀಯವೆನ್ನುವ ಕೆಲಸದ ಹಿಂದೆ ಪರಿಣತಿ ಇದ್ದೇ ಇದೆ. ನಿಂತ ನೀರಿನಂತೆ ಮಡುಗಟ್ಟಿ ನಿಂತಿರುವುದು ಜೀವನವೇ ಅಲ್ಲ ಪ್ರವಾಹದಂತೆ ಸದಾ ಹರಿಯುತ್ತಲೇ ಇರಬೇಕು. ಪರಿಣತಿ ಸಾಧಿಸಿದರೆ ಸಾಕು ಯಶಸ್ಸಿನ ವಿಪುಲತೆಯ ಬಗ್ಗೆ ನಾವೇ ಅಚ್ಚರಿ ಪಡುವಂತಾಗುತ್ತದೆ!!

ಸಮಾಜಘಾತುಕ ಚಟುವಟಿಕೆ; ಬೆಳಗಾವಿಯಿಂದ ಇಬ್ಬರು ಗಡಿಪಾರು

https://pragati.taskdun.com/antisocial-activity-two-exiles-from-belagavi/

ನಿಗಮ ಸ್ಥಾಪನೆಗಾಗಿ ಸರಕಾರಕ್ಕೆ ಅಭಿನಂದಿಸಿದ ಸಮುದಾಯಗಳು

https://pragati.taskdun.com/the-communities-congratulated-the-government-for-setting-up-the-corporation/

ವಿದ್ಯಾರ್ಥಿನಿ ಮೊಬೈಲ್ ಗೆ ಕಿಡಿಗೇಡಿ ಮೆಸೇಜ್; ಶಿಕ್ಷಕ ಅಮಾನತು

https://pragati.taskdun.com/mischievous-message-to-a-students-mobile-phone-teacher-suspended/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button