ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಒಂದು ಲಕ್ಷಕ್ಕಿಂತ ಅಧಿಕ ಜನರು ಭಾಗವಹಿಸಲಿದ್ದಾರೆ, ರೋಡ್ ಶೋ ನೋಡಲು 8 ಪಾಯಿಂಟ್ – ಪ್ರಹ್ಲಾದ ಜೋಶಿ
ಪ್ರಧಾನಮಂತ್ರಿ ಕಾರ್ಯಕ್ರಮ: ಸಕಲ ಸಿದ್ಧತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಪ್ರಧಾನಮಂತ್ರಿಗಳ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಸಕಲ ಸಿದ್ಧತೆ ಮಾಡಲಾಗಿದ್ದು, ಒಂದು ಲಕ್ಷಕ್ಕಿಂತ ಅಧಿಕ ಜನರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ಕೇಂದ್ರ ಗಣಿ, ಕಲ್ಲಿದ್ದಲು ಹಾಗೂ ಸಂಸದೀಯ ಸಚಿವರಾದ ಪ್ರಹ್ಲಾದ ಜೋಶಿ ಅವರು ತಿಳಿಸಿದರು.
ನಗರದ ಮಾಲಿನಿ ಸಿಟಿ ಮೈದಾನದಲ್ಲಿ ಫೆ.27 ರಂದು ನಡೆಯಲಿರುವ ಪ್ರಧಾನಮಂತ್ರಿಗಳ ಕಾರ್ಯಕ್ರಮದ ಪೂರ್ವಸಿದ್ಧತೆಯನ್ನು ಭಾನುವಾರ(ಫೆ.26) ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು.
ಕಿಸಾನ್ ಸಮ್ಮಾನ್ ಯೋಜನೆಯ 13ನೇ ಕಂತಿನ ಹಣವನ್ನು ಪ್ರಧಾನಮಂತ್ರಿಗಳು ನೇರವಾಗಿ ಫಲಾನುಭವಿಗಳ ಖಾತೆಗೆ ನೇರವಾಗಿ ಬಿಡುಗಡೆ/ವರ್ಗಾವಣೆ ಮಾಡಲಿದ್ದಾರೆ.
ದೇಶದ ಒಟ್ಟು 8 ಕೋಟಿ ರೈತರ ಖಾತೆಗೆ ತಲಾ 2 ಸಾವಿರದಂತೆ 16 ಸಾವಿರ ಕೋಟಿ ರೂಪಾಯಿ. ಇದರಲ್ಲಿ ಕರ್ನಾಟಕ ರಾಜ್ಯದ 49.55 ರೈತರಿಗೆ 991 ಕೋಟಿ ರೂಪಾಯಿ ಮತ್ತು ಬೆಳಗಾವಿ ಜಿಲ್ಲೆಯ 5.10 ಲಕ್ಷ ರೈತರ ಖಾತೆಗೆ 102 ಕೋಟಿ ರೂಪಾಯಿಗಳನ್ನು ಮಾನ್ಯ ಪ್ರಧಾನಮಂತ್ರಿಗಳು ವರ್ಗಾವಣೆ ಮಾಡಲಿದ್ದಾರೆ ಎಂದು ಹೇಳಿದರು.
ಜನಜೀವನ ಮಿಷನ್ ಯೋಜನೆಯಡಿ ಬೆಳಗಾವಿ ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟು 1120 ಕೋಟಿ ರೂಪಾಯಿ ವೆಚ್ಚದ ವಿವಿಧ ತಾಲ್ಲೂಕುಗಳ ಐದು ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಪ್ರಧಾನಿಗಳು ಬಟನ್ ಒತ್ತುವ ಮೂಲಕ 8 ಕೋಟಿ ರೈತರಿಗೆ ಕಿಸಾನ್ ಸಮ್ಮಾನ್ ನಿಧಿಯ ಯೋಜನೆಯ ಹಣ ವರ್ಗಾವಣೆ ಮಾಡಲಿದ್ದಾರೆ. ಲೋಂಡಾ– ಬೆಳಗಾವಿ– ಘಟಪ್ರಭಾ ಡಬ್ಲಿಂಗ್ ರೈಲು ಮಾರ್ಗವನ್ನು ಅವರು ದೇಶಕ್ಕೆ ಸಮರ್ಪಣೆ ಮಾಡುವರು. ನವೀಕರಣಗೊಂಡ ಬೆಳಗಾವಿ ರೈಲು ನಿಲ್ದಾಣ ಹಾಗೂ ಜಲಜೀನ್ ಮಿಷನ್ ಅಡಿ ನಡೆದ ಕಾಮಗಾರಿಗಳನ್ನು ಉದ್ಘಾಟಿಸುವರು.
ಬೃಹತ್ ರೋಡ್ ಶೋ:
ಬೆಳಗಾವಿ ನಗರದಲ್ಲಿ ಬೃಹತ್ ರೋಡ್ ಶೋ ನಡೆಸಿದ ಬಳಿಕ ಮಧ್ಯಾಹ್ನ ಮಾಲಿನಿ ಸಿಟಿ ಮೈದಾನದಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಪ್ರಧಾನ ಮಂತ್ರಿಗಳು ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದು, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಕೆಎಸ್‌ಆರ್‌ಪಿ ಮೈದಾನಕ್ಕೆ ತೆರಳುವರು. ಅಲ್ಲಿಂದ ರಾಣಿ ಚನ್ನಮ್ಮ ವೃತ್ತದವರೆಗೆ ಬಂದ ನಂತರ, ರೋಡ್ ಶೋ ಆರಂಭಿಸಲಿದ್ದಾರೆ’ ಎಂದು ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.
ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಕೃಷಿ ಸಚಿವರಾದ ಶೋಭಾ ಕರಂದ್ಲಾಜೆ, ನರೇಂದ್ರಸಿಂಗ್ ಥೋಮರ್ ಸೇರಿದಂತೆ ಬೆಳಗಾವಿ ಜಿಲ್ಲೆ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು ಕೂಡ ಇರಲಿದ್ದಾರೆ.
ವೇದಿಕೆ ಕಾರ್ಯಕ್ರಮದಲ್ಲಿ 1 ಲಕ್ಷ ಕುರ್ಚಿ ಹಾಕಿಸಲಾಗಿದೆ. ಇದಲ್ಲದೇ, ಚನ್ನಮ್ಮ ವೃತ್ತದಿಂದ ರೋಡ್ ಶೋ ನೋಡಲು 8 ಪಾಯಿಂಟ್‌ಗಳನ್ನು ಮಾಡಲಾಗಿದೆ. ಜನ ಅಲ್ಲಿ ನಿಂತು ಪ್ರಧಾನಿ ಅವನ್ನು ಸ್ವಾಗತಿಸುವರು. 10.45 ಕಿ.ಮೀ ಉದ್ದದ ರ್‍ಯಾಲಿ ಇದು. ಬೆಳಗಾವಿ ಮಟ್ಟಿಗೆ ಇದು ಹಿಂದೆಂದೂ ನಡೆದಿರದ ದೊಡ್ಡ ರ್‍ಯಾಲಿ. ಇದೊಂದು ದಾಖಲೆಯಾಗಲಿದೆ ಎಂದರು.
ಇದಾದ ಬಳಿಕ ಮುಖ್ಯ ವೇದಿಕೆ, ಆಸನ ವ್ಯವಸ್ಥೆ, ವೇದಿಕೆ ಮುಂಭಾಗದಲ್ಲಿ ಸಿರಿಧಾನ್ಯಗಳ ರಂಗೋಲಿ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಸಚಿವ ಪ್ರಹ್ಲಾದ ಜೋಶಿ ಪರಿಶೀಲಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಲಿರುವ ಫಲಾನುಭವಿಗಳು, ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ಪಾರ್ಕಿಂಗ್ ಹಾಗೂ ಭದ್ರತೆ ಕುರಿತು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿವರಿಸಿದರು.
ಶಾಸಕರು ಹಾಗೂ ಮಾಜಿ ಸಚಿವರಾದ ರಮೇಶ್ ಜಾರಕಿಹೊಳಿ, ಶಾಸಕರಾದ ಅಭಯ ಪಾಟೀಲ, ಅನಿಲ್ ಬೆನಕೆ, ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ, ವಿಧಾನಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ, ಬಿಜೆಪಿ ರಾಜ್ಯ ವಕ್ತಾರರಾದ ಎಂ.ಬಿ.ಜಿರ್ಲಿ ಸೇರಿದಂತೆ ಅನೇಕ ಮುಖಂಡರು ಹಾಗೂ ಹಿರಿಯ ಅಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಧಾನಿ ಮೋದಿ ಬೆಳಗಾವಿಯಲ್ಲಿ ಸೋಮವಾರ ಉದ್ಘಾಟನೆ, ಶಂಕುಸ್ಥಾಪನೆ ನಡೆಸಲಿರುವ ಯೋಜನೆಗಳು ಏನೇನು ಗೊತ್ತೇ?
https://pragati.taskdun.com/prime-minister-narendra-modi-will-inaugurate-and-lay-the-foundation-stone-of-the-projects-in-belgaum-on-monday/
https://pragati.taskdun.com/here-is-the-complete-details-of-prime-minister-narendra-modis-belgaum-program/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ