ವಿಶ್ವದ ಸಿಂಹಾಸನದ ಮೇಲೆ ಭಾರತಾಂಬೆ ಆಸೀನವಾಗುವ ಕ್ಷಣಗಳು ಸನಿಹ: ಶಶಿಕಲಾ ಜೊಲ್ಲೆ
ಪ್ರಗತಿವಾಹಿನಿ ಸುದ್ದಿ, ನಿಪ್ಪಾಣಿ: “ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳ ನಂತರ ದೈವಿಪುರುಷ ಪ್ರಧಾನಿ ನರೇಂದ್ರ ಮೋದಿಯವರು ಸಿಕ್ಕಿದ್ದಾರೆ. ಈಗ ವಿಶ್ವದ ಸಿಂಹಾಸನದ ಮೇಲೆ ಭಾರತಾಂಬೆಯು ಆಸೀನವಾಗುವ ಕ್ಷಣಗಳು ಸಮೀಪಿಸುತ್ತಿವೆ. ನಾವೆಲ್ಲರೂ ಸೇರಿ ಅವರ ಬಲ ಮತ್ತಷ್ಟು ಹೆಚ್ಚಿಸಬೇಕಿದೆ” ಎಂದು ಮುಜರಾಯಿ, ಹಜ್ ಮತ್ತು ವಕ್ಫ್ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.
ಸ್ಥಳೀಯ ಜೊಲ್ಲೆ ಶಿಕ್ಷಣ ಸಂಕೀರ್ಣದಲ್ಲಿ ಮಾ.1ರಿಂದ 6ರವರೆಗೆ ಆರು ದಿನಗಳವರೆಗೆ ನಡೆಯಲಿರುವ ‘ಶಿವಪುತ್ರ ಸಂಭಾಜಿ’ ಮರಾಠಿ ಮಹಾನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.
“ಛತ್ರಪತಿ ಶಿವಾಜಿ ಮಹಾರಾಜರು ನಮಗೆ ಹೇಗೆ ಬದುಕಬೇಕೆಂದು ಕಲಿಸಿದರು. ಸಂಭಾಜಿ ಮಹಾರಾಜರು ಸಾಯುವ ನಾವು ಹೇಗೆ ಸಾಯಬೇಕೆಂದು ಕಲಿಸಿದರು. ರಾಷ್ಟ್ರ ಮತ್ತು ಧರ್ಮಕ್ಕಾಗಿ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟ ಸಂಭಾಜಿ ಮಹಾರಾಜರು ಅಸಾಮಾನ್ಯ ವ್ಯಕ್ತಿಮತ್ವವನ್ನು ಹೊಂದಿದ್ದರು. ಅಪಾರ ಧೈರ್ಯ, ಪರಾಕ್ರಮ, ಅಸಾಮಾನ್ಯ ಶೌರ್ಯ, ಅವಿರತ ಪ್ರಯತ್ನ, ಅನೇಕ ಭಾಷೆಗಳ ಮೇಲೆ ಪ್ರಭುತ್ವ, ಸಂಸ್ಕೃತ ಪಂಡಿತ ಧರ್ಮಾಭಿಮಾನಿ, ಆದರ್ಶ ಮಹಾವೀರ, ಸಮಾಜಕಾರಣ, ರಾಜಕಾರಣ, ಅರ್ಥಕಾರಣ ಹೀಗೆ ಅನೇಕ ಕ್ಷೇತ್ರಗಳಲ್ಲಿ ಪಾರಂಗತರಾಗಿದ್ದ ಸಂಭಾಜಿ ಮಹಾರಾಜರಂತಹ ಮತ್ತೊಬ್ಬ ರಾಜ ಈ ವಿಶ್ವದಲ್ಲಿ ಆಗಲಿಲ್ಲ. ಅವರ ಬಲಿದಾನ ಎಲ್ಲರಿಗೂ ಪ್ರೇರಣೆಯಾಗಿದೆ. ಅವರ ಚರಿತ್ರೆ ಎಲ್ಲರಿಗೂ ತಿಳಿಯಲಿ ಎಂಬ ಉದ್ದೇಶದಿಂದ ಜೊಲ್ಲೆ ಗ್ರುಪ್ ವತಿಯಿಂದ ಈ ಮಹಾನಾಟಕ ಪ್ರದರ್ಶನ ಏರ್ಪಡಿಸಲಾಗುತ್ತಿದೆ’ ಎಂದರು.
‘ರಾಜಕಾರಣದಿಂದ ನಮ್ಮ ಸೇವೆ ನಿರಂತರವಾಗಿ ಸಾಗಿದ್ದು ಜೊಲ್ಲೆ ಗ್ರುಪ್‌ನಿಂದಲೂ ಸಮಾಜ ಸೇವೆ ಮಾಡಲಾಗುತ್ತಿದೆ. ಜೊಲ್ಲೆ ಗ್ರುಪ್‌ಅಡಿಯಲ್ಲಿ ‘ಜಾಣತಾರಾಜಾ’, ‘ಶಿವಗರ್ಜನಾ’ ಈ ಮರಾಠಿ ಮಹಾನಾಟಕಗಳು ಮತ್ತು ‘ಕಿತ್ತೂರ ರಾಣಿ ಚೆನ್ನಮ್ಮ’ ಕನ್ನಡ ಮಹಾನಾಟಕ ಸಾದರಪಡಿಸಲಾಯಿತು. ಮೊಸರು ಗಡಿಗೆ ಒಡೆಯುವ ಕಾರ್ಯಕ್ರಮ, ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ, ರಾಷ್ಟ್ರ ಮಟ್ಟದ ಪ್ರೋ ಕಬಡ್ಡಿ ಪಂದ್ಯಾವಳಿ, ದೇಹದಾರ್ಢ್ಯತೆ, ‘ನಿಪ್ಪಾಣಿ ಹ್ಯಾಜ್ ಟ್ಯಾಲೆಂಟ್’, ಅಂತರರಾಷ್ಟ್ರೀಯ ಗಾಳಿಪಟ ಉತ್ಸವ, ಮೊದಲಾದ ಹಲವಾರು ಸಾಂಸ್ಕೃತಿಕ, ಕ್ರೀಡೆ, ಧಾರ್ಮಿಕ ಆಚರಣೆಯ, ಮನೋರಂಜನೆಯ ಕಾರ್ಯಕ್ರಮಗಳನ್ನು ಕ್ಷೇತ್ರಕ್ಕೆ ಉಣಬಡಿಸಲಾಗಿದೆ” ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿದರು. ಆರಂಭದಲ್ಲಿ ಮಹೇಂದ್ರ ಮಹಾಡಿಕ ಅವರು ಬರೆದ ಮತ್ತು ಸಂಸದ ಡಾ. ಅಮೋಲ್ ಕೊಲ್ಹೆ ಅವರು ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ ಈ ಮಹಾನಾಟಕವನ್ನು ಶಸ್ತ್ರಗಳ ಹಾಗೂ ಅಶ್ವದ ಪೂಜೆಯೊಂದಿಗೆ ಜೊಲ್ಲೆ ದಂಪತಿ ಚಾಲನೆ ನೀಡಿದರು. ನಂತರ ತುಳಜಾಭವಾನಿಯ ಆರತಿ ನಡೆಯಿತು. ಸ್ಥಳೀಯ ವಿರೂಪಾಕ್ಷಲಿಂಗ ಸಮಾಧಿಮಠದ ಪ್ರಾಣಲಿಂಗ ಸ್ವಾಮೀಜಿ, ಮುರುಘಾಮಠದ ಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸಿದ್ದರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ ಚಂದ್ರಕಾಂತ ಕೋಠಿವಾಲೆ, ಜ್ಯೋತಿಪ್ರಸಾದ ಜೊಲ್ಲೆ, ಪ್ರಿಯಾ ಜೊಲ್ಲೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ, ರಾಜೇಂದ್ರ ಗುಂದೇಶಾ, ವಿಭಾವರಿ ಖಾಂಡಕೆ, ಕಲುತಿ, ವೃಷಭ ಜೈನ, ಪ್ರಣವ ಮಾನವಿ, ಮೊದಲಾದವರು ಉಪಸ್ಥಿತರಿದ್ದರು.
ಜೊಲ್ಲೆ ಗ್ರುಪ್ ಉಪಾಧ್ಯಕ್ಷ ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ರಮೇಶ ಪಾಟೀಲ ಮತ್ತು ವಿಜಯ ರಾವುತ್ ನಿರೂಪಿಸಿದರು.
ನೈಜತೆ ಬಿಂಬಿಸುವ ರಣಾಂಗಣ: ಈ ಮಹಾನಾಟಕ ಪ್ರದರ್ಶನದಲ್ಲಿ ನಿಜವಾದ ಆನೆಗಳು, ಕುದುರೆಗಳು, ನಿಜವಾದ ಚಕ್ಕಡಿಗಾಡಿಗಳು, ಪಲ್ಲಕ್ಕಿ, ರಾಜ್ಯಾಭಿಷೇಕ ಉತ್ಸವ, ತಮ್ಮ ಅಭಿನಯದೊಂದಿಗೆ ಸಂಭಾಜಿರಾಜೆಯಾಗಿದ್ದ ಸಂಸದ ಡಾ. ಅಮೋಲ್ ಕೊಲ್ಹೆ ನಾಟಕದ ಮಧ್ಯೆ ಪ್ರೇಕ್ಷಕರಲ್ಲಿ ಕುದುರೆ ಸವಾರಿಯಲ್ಲೆ ಓಡುವುದು ದೃಶ್ಯಗಳು ರಾರಾಜಿಸುತ್ತಿದ್ದವು. ಮೂರು ಅಂತಸ್ತಿನ ವೇದಿಕೆಯಲ್ಲಿ ಸಿಡಿಮದ್ದುಗಳ ಸಪ್ಪಳ ತೋಪಿನಂತೆ ಕಿವಿಗೆ ಬಡಿಯುತ್ತಿದ್ದರಿಂದ ಪ್ರೇಕ್ಷಕರ ಸಿಳ್ಳೆಗಳು ಮುಗಿಲುಮುಟ್ಟಿದ್ದವು. ಯುದ್ಧದ ದೃಶ್ಯವನ್ನು ವೇದಿಕೆಯ ಮುಂಭಾಗದಲ್ಲಿ ಅಂದರೆ ಪ್ರೇಕ್ಷಕರ ಎದುರು ನಡೆಯುತ್ತಿದ್ದುದು ಮೈದಾನವು ಒಂದು ನೈಜ ರಣಾಂಗಣದಂತೆ ಬಿಂಬಿತವಾಗುತ್ತಿದೆ. ಇದರ ವೀಕ್ಷೆಣೆಗೆ ವಿಶೇಷ ರೀತಿಯಲ್ಲಿ ಪ್ರೇಕ್ಷಕರ ಗ್ಯಾಲರಿ ಕೂಡ ವಿನ್ಯಾಸಗೊಳಿಸಲಾಗಿದೆ.
ಅಜಯ್ ದೇವಗನ್, ಸೂರ್ಯ ಅತ್ಯುತ್ತಮ ನಟರು; ಅಪರ್ಣಾ ಬಾಲಮುರಳಿ ಅತ್ಯುತ್ತಮ ನಟಿ
*ಏಯ್ ಮಂತ್ರಿಗಳೇ ನಿಂತ್ಕೊಳ್ರೀ… ನಾನು ಕ್ಷೇತ್ರದ ಸಂಸದ ನಮಗೆ ಪ್ರೋಟೋಕಾಲ್ ಇಲ್ವಾ; ಸಚಿವ ಅಶ್ವತ್ಥ ನಾರಾಯಣ ವಿರುದ್ಧ ಡಿ.ಕೆ.ಸುರೇಶ್ ಆಕ್ರೋಶ*ಗೃಹಸಚಿವರ ಎಸ್ಕಾರ್ಟ್ ವಾಹನ ಡಿಕ್ಕಿ; ಬೈಕ್ ಸವಾರ ಸಾವು
ಶಿವಮೊಗ್ಗದಲ್ಲಿ ಯುವಕನಿಗೆ ಚಾಕು ಇರಿತ ಕೇಸ್; ಆರೋಪಿಗೆ ಭಯೋತ್ಪಾದಕರ ಲಿಂಕ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ