Kannada NewsKarnataka News

*ಕಾರ್ಮಿಕ ಮಹಿಳೆಯರ ಕಷ್ಟ- ಸುಖ ಆಲಿಸಿ, ಅವರ ಜೊತೆ ಊಟ ಮಾಡಿ ಮಹಿಳಾ ದಿನ ಆಚರಿಸಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕಾರ್ಮಿಕ ಮಹಿಳೆಯರ ಕಷ್ಟ, ಸುಖ ಆಲಿಸಿ ಅವರ ಜೊತೆಯೇ ಹೊಲದಲ್ಲಿ ಊಟ ಮಾಡುವ ಮೂಲಕ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ವಿಶಿಷ್ಟವಾಗಿ ಮಹಿಳಾ ದಿನವನ್ನು ಆಚರಿಸಿದರು.

ಬುಧವಾರ ಮಧ್ಯಾಹ್ನ ಬೆಳಗಾವಿ ಗ್ರಾಮೀಣ ಕ್ಷೇತ್ರದ ನಿಲಜಿಯ ಹೊರವಲಯದಲ್ಲಿರುವ ಹೊಲಕ್ಕೆ ತೆರಳಿದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಅಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಬಿಸಿಲಿನಲ್ಲಿ ಕೆಲಸ ಮಾಡುತ್ತಿದ್ದ 170 ಮಹಿಳೆಯರೊಂದಿಗೆ ಕಷ್ಟ ಸುಖ ಹಂಚಿಕೊಂಡರು. ಅವರ ದೈನಂದಿನ ಬದುಕಿನ ಕುರಿತು ಚರ್ಚಿಸಿದರು. ಮಕ್ಕಳ ಶಿಕ್ಷಣ, ಆರೋಗ್ಯಗಳ ಕುರಿತು ಚರ್ಚಿಸಿದರು. ತಾವೂ ಶೀಘ್ರದಲ್ಲೇ ಆಸ್ಪತ್ರೆಯನ್ನು ಆರಂಭಿಸಿ, ಬಡ ಕಾರ್ಮಿಕ ಮಹಿಳೆಯರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯ ವ್ಯವಸ್ಥೆ ಕಲ್ಪಿಸುವ ಯೋಚನೆ ಹೊಂದಿದ್ದಾಗಿ ತಿಳಿಸಿದರು.

ಧೈರ್ಯಕ್ಕೆ ಮತ್ತೊಂದು ಹೆಸರೇ ಮಹಿಳೆ. ನೀವೆಲ್ಲ ಹಗಲಿಡೀ ಬಿಸಿಲು, ಮಳೆಯೆನ್ನದೆ ಕೆಲಸ ಮಾಡಿ, ಸಂಸಾರವನ್ನೂ ನೋಡಿಕೊಳ್ಳುತ್ತಿದ್ದೀರಿ ಎಂದು ಪ್ರಶಂಸಿಸಿದ ಲಕ್ಷ್ಮೀ ಹೆಬ್ಬಾಳಕರ್, ಕಾಂಗ್ರೆಸ್ ಸರಕಾರ ಬಂದಾಗಲೆಲ್ಲ ಬಡವರ ಪರವಾಗಿ ಕೆಲಸ ಮಾಡಿದೆ. ಉದ್ಯೋಗ ಖಾತ್ರಿ ಯೋಜನೆ ಜಾರಿಗೆ ತಂದಿದ್ದೇ ಕಾಂಗ್ರೆಸ್. ಅನ್ನ ಭಾಗ್ಯ, ಬಿಸಿಯೂಟ ಮೊದಲಾದ ಯೋಜನೆಯ ಮೂಲಕ ಬಡವರ ನೆರವಿಗೆ ನಿಂತಿದೆ. ಆದರೆ ಈಗಿನ ಸರಕಾರ ಎಲ್ಲದರ ಬೆಲೆ ಏರಿಸಿ ಬಡವರು ಬದುಕು ಸಾಗಿಸುವುದೇ ಕಷ್ಟವಾಗಿದೆ. ಮುಂದೆ ಮತ್ತೆ ಒಳ್ಳೆಯ ದಿನಗಳು ಬರಲಿವೆ ಎಂದು ಹೇಳಿದರು.

ಇನ್ನು 50 ದಿನದಲ್ಲಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರಲಿದೆ. ಆಗ ಉಚಿತವಾಗಿ ವಿದ್ಯುತ್ ನೀಡಲಾಗುವುದು. ಮನೆಯ ಯಜಮಾನಿಗೆ ತಿಂಗಳಿಗೆ 2 ಸಾವಿರ ರೂ. ನೀಡಲಾಗುವುದು. ಪ್ರತಿ ವ್ಯಕ್ತಿಗೆ ತಿಂಗಳಿಗೆ 20 ಕಿಲೋ ಅಕ್ಕಿ ನೀಡಲಾಗುವುದು. ನಿಮ್ಮ ಜೊತೆ ನಮ್ಮ ಸರಕಾರವಿರಲಿದೆ ಎಂದು ಭರವಸೆ ನೀಡಿದರು.

ನಂತರ ಹೊಲದಲ್ಲೇ ಮಹಿಳೆಯರಿಗೆ ಸಿಹಿಯೂಟ ಬಡಿಸಿದ ಲಕ್ಷ್ಮೀ ಹೆಬ್ಬಾಳಕರ್, ಅವರೊಂದಿಗೆ ಕುಳಿತು ಊಟ ಮಾಡಿದರು. ನಿಮ್ಮ ಯಾವುದೇ ಸಮಸ್ಯೆಗಳ ಕುರಿತು ಸದಾ ನಿಮ್ಮ ಜೊತೆ ಇರುತ್ತೇನೆ ಎಂದು ಭರವಸೆ ನೀಡಿದರು. ಸ್ಥಳೀಯ ಮುಖಂಡರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button