ಬೆಳಗಾವಿ ಬಿಜೆಪಿ ಬಿರುಕಿಗೆ ತೇಪೆ ಹಚ್ಚುವ ಯತ್ನಮಾಡಿದ ಧರ್ಮೇಂದ್ರ ಪ್ರಧಾನ್!: 3 ಜಿಲ್ಲೆ ಮುಖಂಡರ ಜೊತೆ ಚರ್ಚೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಬಿಜೆಪಿಯಲ್ಲಿ ಉಂಟಾಗಿರುವ ದೊಡ್ಡ ಮಟ್ಟದ ಬಿರುಕಿಗೆ ತೇಪೆ ಹಚ್ಚುವ ಯತ್ನವನ್ನು ಕರ್ನಾಟಕ ಬಿಜೆಪಿ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಭಾನುವಾರ ಮಾಡಿದ್ದಾರೆ.
ಇಲ್ಲಿನ ಯುಕೆ 27 ಹೊಟೆಲ್ ನಲ್ಲಿ ಬೆಳಗಾವಿ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳ ಶಾಸಕರು ಹಾಗೂ ಸಂಸದರ ಜೊತೆ ಪ್ರತ್ಯೇಕವಾಗಿ ಧರ್ಮೇಂದ್ರ ಪ್ರಧಾನ ಚರ್ಚೆ ನಡೆಸಿದರು. ಒಬ್ಬೊಬ್ಬರನ್ನಾಗಿ ಕರೆದು ಪ್ರಸ್ತುತ ಪರಿಸ್ಥಿತಿ, ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಸಲಹೆ ಪಡೆದರು.
ಧರ್ಮೇಂದ್ರ ಪ್ರಧಾನ ಕರ್ನಾಟಕ ಚುನಾವಣೆ ಉಸ್ತುವಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಶನಿವಾರ ರಾತ್ರಿ ಬೆಳಗಾವಿಗೆ ಆಗಮಿಸಿದ್ದಾರೆ. ಭಾನುವಾರ ಮೂರು ಜಿಲ್ಲೆಗಳ ಪ್ರಮುಖರನ್ನು ಆಹ್ವಾನಿಸಿದ್ದರು. ಕೇವಲ, ಸಂಸದರು ಮತ್ತು ಶಾಸಕರು ಮಾತ್ರ ಆಹ್ವಾನಿತರಾಗಿದ್ದರು.
ಬೆಳಗಾವಿ ಜಿಲ್ಲೆಯ ಬಹುತೇಕ ಎಲ್ಲ ಶಾಸಕರು ಹಾಗೂ ಸಂಸದರು ಆಗಮಿಸದ್ದರು. ಜಿಲ್ಲೆಯಲ್ಲಿ ಶಾಸಕ ರಮೇಶ ಜಾರಕಿಹೊಳಿ ಮತ್ತು ಇತರ ನಾಯಕರ ಮಧ್ಯೆ ಉಂಟಾಗಿರುವ ಭಿನ್ನಮತ ಕುರಿತು ಎಲ್ಲ ಶಾಸಕರು, ಸಂಸದರೊಂದಿಗೆ ಚರ್ಚಿಸಿದರು. ಚುನಾವಣೆ ಹತ್ತಿರ ಬಂದಿರುವ ಹೊತ್ತಿನಲ್ಲಿ ರಮೇಶ ಜಾರಕಿಹೊಳಿ ಎಲ್ಲ ಕ್ಷೇತ್ರಗಳಲ್ಲಿ ಹಸ್ತಕ್ಷೇಪ ಮಾಡುತ್ತಿದ್ದಾರೆ. ಪಕ್ಷದ ಯಾರನ್ನೂ ವಿಶ್ವಾಸಕ್ಕೆ ಪಡೆಯದೆ ಏಕಪಕ್ಷೀಯ ನಿರ್ಣಯ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಪಕ್ಷ ಸಂಘಟನೆಗೆ ತೊಡಕುಂಟಾಗುತ್ತಿದೆ. ಅನಗತ್ಯ ಗೊಂದಲ ಉಂಟಾಗುತ್ತಿದೆ. ಅವರಿಗೆ ಸೂಕ್ತ ಎಚ್ಚರಿಕೆ ನೀಡಬೇಕು ಎಂದು ಬಹುತೇಕ ಶಾಸಕರು, ಸಂಸದರು ಆಗ್ರಹಿಸಿದರು.
ರಮೇಶ ಜಾರಕಿಹೊಳಿ ಅವರನ್ನು ಪಕ್ಷದಿಂದ ಹೊರಗೆ ಹಾಕಬೇಕು. ಅವರು ಇರುವುದಕ್ಕಿಂತ ಹೊರಗೆ ಹೋದರೇ ಪಕ್ಷಕ್ಕೆ ಲಾಭ ಎಂದು ಇಬ್ಬರು ನೇರವಾಗಿ ಧರ್ಮೇಂದ್ರ ಪ್ರಧಾನ ಅವರಿಗೆ ಹೇಳಿದರು. ರಮೇಶ ಜಾರಕಿಹೊಳಿ ಸಹ ಧರ್ಮೇಂದ್ರ ಪ್ರಧಾನ ಅವರನ್ನು ಭೇಟಿಯಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಿದರು.
ಧರ್ಮೇಂದ್ರ ಪ್ರಧಾನ ಎಲ್ಲರಿಂದಲೂ ಅಭಿಪ್ರಾಯ ಆಲಿಸಿದರಾದರೂ ಯಾವುದೇ ಅಭಿಪ್ರಾಯ ತಿಳಿಸದೆ ಮತ್ತೊಮ್ಮೆ ಬಂದು ಸಭೆ ನಡೆಸುವುದಾಗಿ ತಿಳಿಸಿದರು.
ಒಟ್ಟಾರೆ, ಚುನಾವಣೆಯ ಹೊತ್ತಿನಲ್ಲಿ ಕಾಣಿಸಿಕೊಂಡಿರುವ ದೊಡ್ಡಮಟ್ಟದ ಭಿನ್ನಾಭಿಪ್ರಾಯ ಪಕ್ಷಕ್ಕೆ ತಲೆನೋವಾಗಿ ಪರಿಣಮಿಸಿದ್ದು, ಯಾವ ರೀತಿಯಲ್ಲಿ ಪರಿಹರಿಸಲಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ