Latest

ಈ ಬಾರಿ ಅವಧಿಗೆ ಮುನ್ನವೇ ಮುನ್ನುಗ್ಗಲಿದೆ ಮುಂಗಾರು; ಏರುಪೇರು ಸೃಷ್ಟಿಸಲಿದೆ ತಾಪ- ತಂಪಿನ ತಾಕಲಾಟ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ದೇಶಾದ್ಯಂತ ತಾಪಮಾನ ವಿಪರೀತ ಹೆಚ್ಚಳವಾಗಿರುವುದರಿಂದ ಈ ಬಾರಿ ಅವಧಿಗೆ ಪೂರ್ವವೇ ಮುಂಗಾರು ಬರುವುದಾಗಿ ಹವಾಮಾನ ತಜ್ಞರು ಮುನ್ಸೂಚನೆ ನೀಡಿದ್ದಾರೆ.

ದೇಶದ ನಾನಾ ಭಾಗಗಳಲ್ಲಿ ಅವಧಿಗೆ ಮುನ್ನ ಮುಂಗಾರು ಮುನ್ನುಗ್ಗುವ ಸಾಧ್ಯತೆಗಳು ಹೆಚ್ಚಿದ್ದು ಇದರಲ್ಲಿ ಉತ್ತರ ಕರ್ನಾಟಕ ಭಾಗವೂ ಸೇರಿದೆ ಎಂದು ತಜ್ಞರು ತಿಳಿಸಿದ್ದಾರೆ.

ವಾರದ ಹಿಂದಷ್ಟೇ ಮಹಾರಾಷ್ಟ್ರ, ಮಧ್ಯಪ್ರದೇಶ ಹಾಗೂ ರಾಜಸ್ಥಾನದ ವಿವಿಧೆಡೆ ಆಲಿಕಲ್ಲು ಸಹಿತ ಮಳೆ ಸುರಿದು ಅಪಾರ ಬೆಳೆ ಹಾನಿ ಸಂಭವಿಸಿದೆ. ಅದೇ ರೀತಿ ಮಾ.15ರ ವೇಳೆಗೆ ದೇಶದ ಉತ್ತರ ಹಾಗೂ ಮಧ್ಯಭಾಗದಲ್ಲಿ ಹಗುರ ಮಳೆಯಾಗಲಿದೆ. ಮಾ.16ರ ನಂತರ 22ರವರೆಗಿನ ಅವಧಿಯಲ್ಲಿ ದಕ್ಷಿಣ ಭಾರತದಲ್ಲಿ ಬಿರುಗಾಳಿ ಸಹಿತ ಮಳೆಯಾಗಲಿರುವುದಾಗಿ ಹವಾಮಾನ ತಜ್ಞರು ತಿಳಿಸಿದ್ದಾರೆ.

ಸಮುದ್ರದ ಮೇಲ್ಮೈ ಮೇಲೆ ಸುಳಿಗಾಳಿ ಕಾಣಿಸಿಕೊಂಡಿರುವುದರಿಂದ ಇಂದಿನಿಂದ ಮಾ.18ರವರೆಗೆ ಕರಾವಳಿಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಬೀದರ್, ಕಲಬುರಗಿ, ವಿಜಯಪುರ, ಬಳ್ಳಾರಿ, ಬಾಗಲಕೋಟ, ಕೊಪ್ಪಳ ಜಿಲ್ಲೆಗಳಲ್ಲೂ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ದಕ್ಷಿಣ ಒಳನಾಡಿನ ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ದಾವಣಗೆರೆ, ಮಂಡ್ಯ, ಮೈಸೂರು ಭಾಗಗಳಲ್ಲಿ ಮಾ.17, 18ರಂದು ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ.

ಕರಾವಳಿಯ ಕಾರವಾರದಲ್ಲಿ ಸೋಮವಾರ ಗರಿಷ್ಠ 37ಡಿಗ್ರಿ ಸೆಲ್ಸಿಯಸ್ ಹಾಗೂ ಬಾಗಲಕೋಟೆಯಲ್ಲಿ ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದೆ.

ಮುಂಗಾರುಪೂರ್ವ ಮಾರುತಗಳು ಮಾರ್ಚ್ ಮೊದಲ ವಾರದ ನಂತರ ತಯಾರಾಗುತ್ತವೆ. ಆದರೆ ಈ ವರ್ಷದ ಉಷ್ಣಾಂಶ ನಿರೀಕ್ಷೆ ಮೀರಿ ಹೋಗಿದೆ. ಫೆಬ್ರವರಿಯಲ್ಲೇ ಗರಿಷ್ಠ ಉಷ್ಣಾಂಶ ದಾಖಲಾಗಿದ್ದು 1901ರ ನಂತರಇದೇ ಮೊದಲ ಬಾರಿ ಈ ಪ್ರಮಾಣದ ಉಷ್ಣಾಂಶ ವಾತಾವರಣದಲ್ಲಿ ಆವರಿಸಿದೆ. ಹೀಗಾಗಿ ವಾಡಿಕೆಗಿಂತ ಮೊದಲೇ ತಯಾರಾಗುವ ಸಾಧ್ಯತೆಗಳು ಹೆಚ್ಚಿರುವುದಾಗಿ ಹವಾಮಾನ ತಜ್ಞರು ಹೇಳಿದ್ದಾರೆ.

ಪೂರ್ವ ಮುಂಗಾರು ಮಳೆ ಅವಧಿಗೆ ಮುನ್ನ ಸುರಿದು ವಾತಾವರಣ ತಂಪಾದರೆ ಮುಂಗಾರಿನ ಆಗಮನ ವಿಳಂಬವಾಗಲೂಬಹುದು ಎಂದು ಸಹ ಹವಾಮಾನ ತಜ್ಞರು ಸಂದೇಹ ವ್ಯಕ್ತಪಡಿಸಿದ್ದಾರೆ.

https://pragati.taskdun.com/election-boycott-threat/
https://pragati.taskdun.com/a-one-year-old-child-died-after-getting-hit-by-his-uncles-tractor/
https://pragati.taskdun.com/3-crore-rs-cost-road-development-work-started-in-navage-village/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button