- ಪ್ರಗತಿವಾಹಿನಿ ಸುದ್ದಿ, ಬೆಳಗಾವಿ* : ಇಲ್ಲಿನ ರಾಣಿ ಚನ್ನಮ್ಮ ನಗರದಲ್ಲಿ ನೀರಿನ ಸಮಸ್ಯೆ ತೀವೃಗೊಂಡಿದ್ದು ಮಂಗಳವಾರ ನೂರಕ್ಕೂ ಹೆಚ್ಚು ಸ್ಥಳೀಯ ನಿವಾಸಿಗಳು ಎಲ್ ಎಂಡ್ ಟಿ ಸಂಸ್ಥೆಯ ಖಾನಾಪುರ ರಸ್ತೆಯ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಬಳಿಕ ಕಂಪನಿಯ ಅಧಿಕಾರಿ ರವಿಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ರಾಣಿ ಚನ್ನಮ್ಮ ನಗರದ 1ನೇ ಮತ್ತು 2ನೇ ಹಂತ, ರಾಘವೇಂದ್ರ ಕಾಲೋನಿ, ಅರ್ಜುನ ಕಾಲೋನಿ, ಪಾರ್ವತಿ ನಗರ, ವಸಂತವಿಹರ ಕಾಲೋನಿ, ಕೃಷ್ಣಾ ಕಾಲೋನಿ ಮೊದಲಾದ ಬಡಾವಣೆಗಳಲ್ಲಿ ಸಾವಿರಾರು ನಿವಾಸಿಗಳಿದ್ದಾರೆ. ಇಲ್ಲಿನ ಬಡಾವಣೆಗಳಿಗೆ ನೀರು ಪೂರೈಕೆಯಲ್ಲಿ ಪದೇ ಪದೆ ವ್ಯತ್ಯಯವಾಗುತ್ತಿದೆ. 10-12 ದಿನಗಳಿಗೊಮ್ಮೆ ನೀರು ಬಿಡಲಾಗುತ್ತಿದೆ. ಇಷ್ಟು ವಿಳಂಬವಾಗಿ ಬಿಡುವ ನೀರನ್ನು ಸಹ ಬಹಳ ಕಡಿಮೆ ಪ್ರಮಾಣದಲ್ಲಿ ಬಿಡಲಾಗುತ್ತಿದೆ. ಈ ಬಗ್ಗೆ ವಾಲ್‍ಮೆನ್‍ಗಳನ್ನು ವಿಚಾರಿಸಿದರೆ ಅವರಿಂದ ಯಾವುದೇ ರೀತಿಯಲ್ಲಿ ಸ್ಪಂದನೆ ಸಿಗುತ್ತಿಲ್ಲ.
ನಾವು ಮಹಾನಗರ ಪಾಲಿಕೆಗೆ ಸರಿಯಾದ ಸಮಯದಲ್ಲಿ ತೆರಿಗೆ ಪಾವತಿ ಮಾಡುತ್ತೇವೆ. ಆದರೆ ನೀರು ಪೂರೈಕೆಯಲ್ಲಿ ಮಾತ್ರ ನಮಗೆ ಅನ್ಯಾಯವಾಗುತ್ತಿದೆ. ಮಹಿಳೆಯರು ದಿನವೂ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ನಗರಕ್ಕೆ ಸಮರ್ಪಕವಾಗಿ ನೀರು ಪೂರೈಕೆಗೆ ಕ್ರಮ ವಹಿಸಬೇಕು. ಇಲ್ಲದಿದ್ದರೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ.
ಹಲವೆಡೆ ಪೈಪ್ ಲೈನ್ ಸೋರಿಕೆಯಾಗುತ್ತಿದೆ. ಇದನ್ನು ಸರಿಪಡಿಸಿ ಕೂಡಲೇ ಸಮರ್ಪಕವಾಗಿ ನೀರು ಪೂರೈಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಬಿ. ಆರ್. ಇಂಚಲ್, ವಿ. ಆರ್. ದೇಶಪಾಂಡೆ, ಎಸ್. ಎಸ್. ಕಾಕತಿ, ಎ.ಕೆ. ಪವಾರ್, ರಾಜೇಶ ಪಟ್ಟಣಶೆಟ್ಟಿ, ಮಂದಾರ ಎಂ. ವಾಳ್ಕೆ, ಸ್ಮಿತಾ ನೆರೂರಕರ್, ಎನ್. ಎಂ. ಶಾಂತಾರಾಮ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ