Latest

ವೃಕ್ಷಗಳೇ ಜೀವನದ ಊರುಗೋಲು; ಪ್ರಾಣ ವಾಯು ಸರಬರಾಜು ಮಾಡುವ ದಿವ್ಯ ಕ್ಷೇತ್ರ

ಲೇಖನ – ರವಿ ಕರಣಂ

ಜೀವರಾಶಿ ಮತ್ತು ಪರಿಸರದ ಸಂಬಂಧ ಅವರ್ಣನೀಯ. ಭೂಮಿಯ ಮೇಲೆ ಇರಬಹುದಾದ ಇಡೀ ಜೀವ ಸಂಕುಲಕೆ ಮಣ್ಣು ಎಷ್ಟು ಮುಖ್ಯವಾಗಿದೆಯೋ ಹಾಗೆಯೇ ಮಣ್ಣಲ್ಲಿ ಹುಟ್ಟಿದ ವೃಕ್ಷ ಸಂಕುಲ ಅಷ್ಟೇ ಮುಖ್ಯವಾದುದು. ಸೃಷ್ಟಿಯ ವೈಶಿಷ್ಟ್ಯತೆಗಳಲ್ಲಿ ವೃಕ್ಷ ರಾಶಿಯಂತೂ ಕೋಟಿ ಕೋಟಿ ಜೀವಿಗಳಿಗೆ ಪ್ರಾಣ ವಾಯು ಸರಬರಾಜು ಮಾಡುವ ದಿವ್ಯ ಕ್ಷೇತ್ರ ಎಂದೇ ಹೇಳಬೇಕು.

ಜೀವ ರಾಶಿಗಳಲ್ಲಿ 84 ಲಕ್ಷ ಜೀವರಾಶಿಗಳಿವೆ ಎಂಬುದು ಒಂದು ಉಲ್ಲೇಖವಿದೆ. ದಾಸ ಶ್ರೇಷ್ಠರು ಅದನ್ನು ತಮ್ಮ ಕೀರ್ತನೆಯಲ್ಲಿ ಭಾವ ಪರವಶರಾಗಿ ಹಾಡಿದ್ದಿದೆ. ಹಾಗೆಯೇ ವೃಕ್ಷ ರಾಶಿಯಲ್ಲಿ ಅದೆಷ್ಟು ಕುಲ ಕೋಟಿಗಳಿವೆಯೋ ಬಲ್ಲವರಿಲ್ಲ. ಎಣಿಸಿ ಬಿಡುವುದರೊಳಗಾಗಿ ಮತ್ತೊಂದು ಸಂಕುಲ ಉದ್ಭವವಾಗಿರುತ್ತದೆ. ಅಂತ್ಯವಿರದ, ಅಂಕೆಗೊಳಪಡೆದ ಸೃಷ್ಟಿಯ ವಿಲಕ್ಷಣ ರೂಪವಾಗಿದೆ ಎಂದರೆ ತಪ್ಪಾಗದು. ಈಗ ನಾನು ಹೇಳ ಹೊರಟ ವಿಷಯ ವೃಕ್ಷಗಳು ನಮಗೊಂದೇ ಅಲ್ಲದೇ ಹಲವು ಜೀವಿಗಳಿಗೆಷ್ಟು ಮುಖ್ಯವಲ್ಲವೇ?

ಹಲವು ಜೀವ ಕೋಟಿಗಳಿಗೆ ಆಶ್ರಯ ನೀಡುವುದಲ್ಲದೇ ಬಹೂಪಕಾರಿಗಳಾಗಿವೆ. ಮಾನವನಿಗಲ್ಲದೇ ಭೂಮಿಯ ಮೇಲಿರಬಲ್ಲ ಜೀವ ಸಂಕುಲಗಳಿಗೆ ಪ್ರಾಣವಾಯುವನ್ನು ಧಾರೆಯೆರೆಯುತ್ತವೆ. ಆಹಾರದ ಕಾರ್ಖಾನೆಗಳಾಗಿವೆ. ಬಗೆ ಬಗೆಯ ಬಣ್ಣ ,ಆಕಾರಗಳ ಪುಷ್ಪಗಳಿಂದ ಭೂಮಿಯ ಮೇಲೆ ಕಳೆ ತರುತ್ತವೆ. ತಂಪು ನೆರಳನ್ನಿಟ್ಟು ಬಳಲಿದ ಜೀವಗಳ ಬಳಲಿಕೆಯನ್ನು ತೊಡಗಿಸುತ್ತವೆ. ಲೆಕ್ಕವಿಲ್ಲದಷ್ಟು ಕ್ರಿಮಿ-ಕೀಟ, ಪಶು-ಪಕ್ಷಿ , ಜೀವ ಜಂತುಗಳ ಆವಾಸ ಸ್ಥಾನವಾಗಿದೆ. ಸದಾ ಹಸಿರಿನಿಂದ ಕಂಗೊಳಿಸುವ ವೃಕ್ಷ ಸಂಪತ್ತು, ಕಾಲ ಕಾಲಕ್ಕೆ ಮಳೆ -ಬೆಳೆ ತರುವ ಶಕ್ತಿ ಕೇಂದ್ರಗಳಲ್ಲೊಂದು.

ಮಳೆ ನೀರಿನಿಂದ, ಭೂ ಭಾಗದ ಮೇಲ್ಪದರವನ್ನು ಕಾಪಾಡಲು ಬೇರುಗಳನ್ನೇ ಕೈಗಳನ್ನಾಗಿ ಬಳಸಿಕೊಳ್ಳುತ್ತವೆ. ಅದರ ಬಿಗಿ ಹಿಡಿತದಿಂದಾಗಿ ಮಣ್ಣು ಹರಿದು ಹೋಗುವುದನ್ನು ತಪ್ಪಿಸುತ್ತವೆ. ವಾತಾವರಣದಲ್ಲಿ ತಾಪಮಾನದ ನಿಯಂತ್ರಣಕ್ಕೆ ಸಹಕಾರಿಯಾಗಿವೆ. ಇವೆಲ್ಲವೂ ಕೇವಲ ಉದಾಹರಣೆಗಳಷ್ಟೇ. ಅವುಗಳ ಮಹತ್ವ ಮತ್ತು ಶಕ್ತಿಯನ್ನು ಪದಗಳಿಂದ ಹಿಡಿದಿಡಲಾಗದು.

ಖಗ-ಮೃಗಗಳಂತೂ ವೃಕ್ಷಗಳ ಅಡಿಯಿಂದ ಮುಡಿವರೆಗಿನ ಒಂದಂಗುಲ ಬಿಡದಂತೆ ಬಳಸಿಕೊಳ್ಳುತ್ತವೆ. ಹುಲಿ,ಸಿಂಹಗಳಲ್ಲದೇ ವಿವಿಧ ಬಗೆಯ ಜೀವಿಗಳಿಗೆ ಗಿಡ-ಗಂಟೆಗಳ ಪೊದೆಗಳು ರಕ್ಷಣಾ ಗೋಡೆಗಳಂತೆ ಕಾರ್ಯ ನಿರ್ವಹಿಸುತ್ತವೆ. ನಿಶ್ಚಿಂತವಾಗಿ ಜೀವನ ಕಳೆಯುತ್ತವೆ. ಅವೆಲ್ಲ ಅಕ್ಷರಶಃ ಸುರಕ್ಷತೆಯ ತಾಣಗಳು !

ಕಳೆದ ಮತ್ತು ಇಂದಿನ ದಶಕದಲ್ಲಿ ಜಗತ್ತು ಬಳಲುತ್ತಿರುವುದು ಭೂಮಿ ಮೇಲಿನ ಅಧಿಕ ತಾಪಮಾನದಿಂದ. ಋತುಮಾನಗಳು ನಿಗದಿತ ಕಾಲವನ್ನು ಅನಿಶ್ಚಿತಗೊಳಿಸಿವೆ. ಕಾರಣವಿಷ್ಟೇ. ಸಸ್ಯ ಸಂಪತ್ತು ಕ್ಷೀಣಿಸಿದ್ದರ ಫಲ! ಇದು ಸ್ಥಳೀಯ ಸಂಘ ಸಂಸ್ಥೆಗಳಿಂದ ಹಿಡಿದು ವಿಶ್ವ ಸಂಸ್ಥೆಯವರೆಗಿನ ಅಹವಾಲು. ವೃಕ್ಷ ಸಂಪತ್ತನ್ನು ನಾಶ ಮಾಡಬಾರದು. ಅತಿ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಬೆಳೆಸುವುದು ನಮ್ಮ ಆದ್ಯ ಕರ್ತವ್ಯವಾಗಬೇಕೆಂದು. ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲವೆಂದರೆ ಅವು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೇ ಹಲವು ಬಗೆಯ ಜೀವಿಗಳು ಮೃತ್ಯು ಕೂಪಕ್ಕೆ ತಳ್ಳುತ್ತವೆ. ಮಾಡಿದ್ದು ಯಾರೋ ಅನುಭವಿಸಿದ್ದು ಇನ್ಯಾರೋ ! ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿಯುತ್ತದೆ ಅಷ್ಟೇ.

ದಿನಂಪ್ರತಿ ಭೂಮಿಯ ಮೇಲೆ ನಾನಾ ಕಾರಣಗಳಿಂದಾಗಿ ಸರ್ಕಾರವೇ ವೃಕ್ಷ ವಧೆಗೆ ಅನುಕೂಲ ಮಾಡಿಕೊಡುತ್ತವೆ. ತತ್ಫಲವಾಗಿ ಸಿಗುವುದು ದುರಂತದ ಬದುಕು ಎಂದು ತಿಳಿದಿಲ್ಲವೇನು? ಕಡಿದ ಮರಕ್ಕೆ ಬದಲಾಗಿ ಸಸಿಗಳನ್ನು ನೆಡಿಸಿ ಹೋದರಾಯಿತೇ? ಬೆಳೆದು ನಿಲ್ಲುವ ತನಕ ನೀರುಣಿಸಲು ಆಗದ ಅದಕ್ಷ ವ್ಯವಸ್ಥೆ ಇದು. ಹಾಗೆನಿಸದೇ ನಿಮಗೆ? ಕಾಡು ಸಾಕಷ್ಟು ಇದೆ ಎಂದು ಭಾವಿಸಬಾರದು. ಅದು ಯಾವ ತೆರೆನಾದ ರೀತಿಯಲ್ಲೂ ಸಾಕಾಗದು. ಭೂ ಭಾಗದಲ್ಲಿ ಶೇ 6 ರಷ್ಟು ಅರಣ್ಯವಿರಬೇಕು. ನಂತರ ಹಳ್ಳಿ, ಪಟ್ಟಣ, ನಗರ, ಮಹಾ ನಗರಗಳಲ್ಲಿ ಜನಸಂಖ್ಯೆಗೆ ಅಗತ್ಯವೆನಿಸುವಷ್ಟು ವೃಕ್ಷ ಸಂಪತ್ತು ಇರಲೇಬೇಕು. ಎಲ್ಲಿವೆ?

ಚಿಂತರಪಳ್ಳಿ (ಚಿಂತಲ ಪಲ್ಲಿ) ಯೊಂದಿದೆ. ಒಂದು ಕಾಲದಲ್ಲಿ ಒಂದುನೂರಾ ಒಂದು ಬೃಹತ್‌ ಹುಣಸೇ ಮರಗಳಿದ್ದ ಹಳ್ಳಿ. ಅಲ್ಲಿ ಕೃಷ್ಣ ದೇವರಾಯನ ಕಾಲದ ಕೆರೆಯೂ ಉಂಟು. ಈಗಲ್ಲಿ ಉಳಿದಿರುವುದು ಕೇವಲ ಮೂರು ಗಿಡಗಳು! ಈ ಮಟ್ಟದಲ್ಲಿ ಕ್ರೌರ್ಯ ಗಿಡ-ಮರಗಳ ಮೇಲೆ ಏಕೆ? ಜನತೆಯ ಅಜ್ಞಾನದ ಫಲವದು. ಮಹತ್ವವನ್ನು ಅರಿತುಕೊಂಡಿಲ್ಲ. ಮೂಡಿಸುವವರಿಲ್ಲ. ಕೇವಲ ದೃಶ್ಯ ಮಾಧ್ಯಮಗಳಲ್ಲಿ ಪರಿಸರ ಗೀತೆಗಳನ್ನು ಇಪ್ಪತ್ತನೆ ಶತಮಾನದ ಒಂಭತ್ತರ ದಶಕದಲ್ಲಿ ಪ್ರಸಾರ ಮಾಡಿದ್ದು ನಿಮಗೆ ನೆನಪಿರಬಹುದು. ಆ ಹಾಡುಗಳನ್ನು ಕೇಳಿಸಿಕೊಳ್ಳುತ್ತಲೇ ಮರ ಕಡಿದುದರ ಬಗ್ಗೆ ಏನು ಹೇಳುವುದು? ಸಾಲು ಮರದ ತಿಮ್ಮಕ್ಕನಂತಹ ಸಸ್ಯ ತಪಯೋಗಿಗಳು, ಸುಂದರಲಾಲ್ ಬಹುಗುಣ ಚಿಪ್ಕೋ ನೇತಾರ, ಬೆಂಗಾಡನ್ನು ಆನಂದವನ ಮಾಡಿದ ಬಾಬಾ ಆಮ್ಟೆ ಅಂಥಹವರ ಅವಶ್ಯಕತೆ ಸದ್ಯಕ್ಕೆ ಬೇಕಾಗಿದೆ.

ಒಂದೊಮ್ಮೆ ವಿಷಯವೊಂದನ್ನು ಓದಿದ್ದು ಜ್ಞಾಪಕದಲ್ಲಿದೆ. ಭಾರತದಲ್ಲಿ ದಿನವೊಂದಕ್ಕೆ ಆರು ಗಿಡಗಳನ್ನು ಕಡಿಯಲಾಗುತ್ತದೆ. ಅದರಂತೆ ಒಂದು ತಿಂಗಳು, ವರ್ಷ, ದಶಕದಲ್ಲಿನ ಸಂಖ್ಯೆ ತಿಳಿದರೆ ಎದೆ ಝಲ್ಲೆನ್ನುತ್ತದೆ. ಒಂದು ದೇಶದ ಕಥೆ ಹೀಗೆ! ಜಗತ್ತು ಇನ್ನು ಹೇಗೋ ? ಅಷ್ಟೇ ಅಲ್ಲ. ಅರಣ್ಯ ಪ್ರದೇಶಗಳಲ್ಲಿ ವ್ಯವಸ್ಥಿತವಾಗಿ ಗಿಡ-ಮರಗಳು ನಾಪತ್ತೆಯಾಗುತ್ತವೆ. ಗೊತ್ತಿರಲಿ.

ಜೀವ ನಾಡಿಗಳಾದ ವೃಕ್ಷ, ನದಿ,ಗಾಳಿ,ಮಣ್ಣು ಇತ್ಯಾದಿಯಾಗಿ ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿ. ವನ ಮಹೋತ್ಸವವು ವರ್ಷ ಪೂರ್ತಿ ನಡೆಯಬೇಕು.ಎಲ್ಲೆಡೆ ಜಾಗೃತಿಯ ಅಭಿಯಾನ ನಡೆಯಬೇಕು.ಇದು ಮಕ್ಕಳಿಂದ ಹಿಡಿದು ವೃದ್ಧರ ಕಾರ್ಯವಾಗಬೇಕು. ಅಂದಾಗ ಮುಂದಿನ ಪೀಳಿಗೆಗೆ ನಾವು ಕೊಡುವ ದೊಡ್ಡ ಉಡುಗೊರೆಯಾದೀತು.

https://pragati.taskdun.com/construction-of-study-center-in-dr-b-r-ambedkar-park-mla-anila-benake/

https://pragati.taskdun.com/forfeiture-as-per-existing-rules-election-commission-directive/
https://pragati.taskdun.com/kls-git-is-celebrating-aura-2023/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button