Latest

ಕಾಲಚಕ್ರದಡಿಯಲ್ಲಿ ಕೆಳಗಿದ್ದ ದೇಶಗಳು ಮೇಲೆ, ಮೇಲಿದ್ದ ದೇಶಗಳು ಅತಂತ್ರ!

ಲೇಖನ : ರವಿ ಕರಣಂ.

    ನಿಸರ್ಗದಲ್ಲಿ ಒಂದಂಶ ಯಾವತ್ತೂ ಪ್ರಚಲಿತದಲ್ಲಿದೆ. ಅದು ಪ್ರಾಣಿಗಳಲ್ಲಿ ಶಕ್ತಿಯುಳ್ಳ ಜೀವಿ, ದುರ್ಬಲ ಜೀವಿಗಳ ಮೇಲೆ ಸವಾರಿ ಮಾಡುವುದು ಸಹಜ. ಅದನ್ನು ನೀವೂ ಗಮನಿಸಿರುತ್ತೀರಿ. ಉದಾಹರಣೆಗೆ ಒಂದೊಂದು ಸಮೂಹಕ್ಕೆ ಒಂದು ಮುಖಂಡನಿರುತ್ತದೆ.ಅದು ಗಂಡೇ ಆಗಿರುತ್ತದೆ. ಅದು ಉಳಿದೆಲ್ಲವುಗಳ ಮೇಲೆ ಅಧಿಕಾರ ಚಲಾಯಿಸುತ್ತದೆ. ತನ್ನ ಅಧೀನದಲ್ಲಿರಬೇಕು. ತಾನು ಹೋದೆಡೆಯೆಲ್ಲ ಹಿಂಬಾಲಿಸಿ ಬರಬೇಕು. ಆಹಾರವೇನಾದರೂ ಸಿಕ್ಕಲ್ಲಿ ಬೆದರಿಸಿ, ಬೆನ್ನಟ್ಟಿ ಕಸಿದುಕೊಂಡು ತಿನ್ನುತ್ತದೆ. ಆಜ್ಞೆ ಮೀರಿದಾಗ ಹಲ್ಲೆ ಮಾಡಿ ಗಾಯಗೊಳಿಸುತ್ತದೆ. ಹೊಡೆದಾಟದಲ್ಲಿ ಸಾವು ಸಂಭವಿಸುತ್ತದೆ. ಇವೆಲ್ಲ ಆನೆ,ಹುಲಿ,ಸಿಂಹ, ಕರಡಿ,ಮಂಗ,ನಾಯಿ ಇನ್ನಿತರ ಪ್ರಾಣಿಗಳಲ್ಲಿ ಕಂಡು ಬರುತ್ತದೆ. ಮನುಷ್ಯ ಕೂಡಾ ಇದರಿಂದ ಹೊರತಾಗಿಲ್ಲ ಎಂಬುದನ್ನು ತಿಳಿಸಲೋಸುಗ ನಿಮ್ಮ ಮುಂದೆ ಈ ವಿಷಯ ಪ್ರಸ್ತಾಪ ಮಾಡಿದ್ದು. ಆರ್ಥಿಕವಾಗಿ ಬಲಿಷ್ಠ ದೇಶಗಳು ಎನಿಸಿಕೊಂಡವುಗಳು ಈಗ ದಿವಾಳಿಯತ್ತ ಮುಖ ಮಾಡುತ್ತಿರುವ ಹಂತಕ್ಕೇಕೆ ತಲುಪುತ್ತಿವೆ ಎಂಬುದು ಗಮನಿಸಬೇಕಾದ ಸಂಗತಿ.

    ಯಾಕೆ ಈ ವಿಚಾರವೆಂದರೆ ಅಮೆರಿಕಾ-ಬ್ರಿಟನ್ ಗಳ ಸ್ಥಿತಿ-ಗತಿ ಅಯೋಮಯವಾಗುತ್ತಿರುವ ಹಿನ್ನೆಲೆಯನ್ನು ನೀವು ಗಮನಿಸಬೇಕು. ಎರೆಡನೇ ಜಾಗತಿಕ ಯುದ್ದದಲ್ಲಿ ಆ ಕಾಲದ ಬಲಿಷ್ಠ ರಾಷ್ಟ್ರವಾಗಿದ್ದ ಬ್ರಿಟನ್ ಮತ್ತು ಜರ್ಮನಿಗಳು ಕೂಟ ರಚಿಸಿಕೊಂಡು ಎಷ್ಟೆಲ್ಲ ಅನಾಹುತಗಳನ್ನು ಮಾಡಿತೆಂದು ನಿಮಗೆ ಗೊತ್ತಿದೆ. ಮಾರುಕಟ್ಟೆಯಲ್ಲಿನ ಪೈಪೋಟಿ, ಶಸ್ತ್ರಾಸ್ತ್ರಗಳ ಸಂಗ್ರಹ,ಆರ್ಯ- ಅನಾರ್ಯ ಅಥವಾ ಜನಾಂಗೀಯ, ಶ್ರೇಷ್ಠ – ಕನಿಷ್ಟ ಭಾವನೆ, ದುರ್ಬಲ ರಾಷ್ಟ್ರಗಳ ಮೇಲಿನ ಭೂ ಕಬಳಿಕೆಗಳಂತಹ ಕೃತ್ಯ ಜರುಗಿದ್ದರ ಫಲವೇ ಅಂದು ಘೋರ ಯುದ್ಧಕ್ಕೆ ಕಾರಣವಾಯಿತು. ಅದರಲ್ಲಿ ಜಪಾನ್ ನ ತಪ್ಪು ಆಯ್ಕೆಯಿಂದ ಪರ್ಲ್ ಹಾರ್ಬರ್ ನ್ನು ಜಪಾನ್ ಧ್ವಂಸಗೊಳಿಸಿತು. ಅದು ಅಮೆರಿಕಾಕ್ಕೆ ಸೇರಿದ್ದಾಗಿತ್ತು. ಆಕಸ್ಮಿಕವಾಗಿ ಧುಮುಕಿದ ಅಮೆರಿಕಾ ಅಣು ಬಾಂಬ್ ಹಾಕಿದಾಗಿನ ಪರಿಣಾಮ, ಇಡೀ ಮನುಕುಲವನ್ನು ಮಮ್ಮಲ ಮರುಗುವಂತೆ ಮಾಡಿತು. ಕಡೆಗೆ ವಿಶ್ವ ಸಂಸ್ಥೆ ಉದಯವಾಯಿತು.

    ಅಮೆರಿಕಾ ಯಾವ ಮೂಲೆಯಲ್ಲಿತ್ತೋ ಅದರ ಶಕ್ತಿ ಸಾಮರ್ಥ್ಯ ಕಂಡ ಬ್ರಿಟನ್ ಅಕ್ಷರಶಃ ದಂಗಾಗಿ ಹೋಯಿತು. ಇಡೀ ಇತಿಹಾಸದ ಉದ್ದಕ್ಕೂ ಜಗತ್ತಿನಾದ್ಯಂತ ಸಾಮ್ರಾಜ್ಯ ನಿರ್ಮಿಸ ಹೊರಟಿದ್ದ ಬ್ರಿಟನ್, ಅಮೆರಿಕಾದ ಬಾಲ ಹಿಡಿದುಕೊಳ್ಳಲು ಮುಂದಾಯಿತು. ಇದೆಂಥಾ ದುರ್ವಿಧಿ ! ಕ್ರಿ ಶ 1773 ರಲ್ಲಿ ತನ್ನಿಂದ ಸ್ವಾತಂತ್ರ್ಯ ಪಡೆದುಕೊಳ್ಳಲೂ ಹೆಣಗಾಡಿದ್ದ ಅಮೆರಿಕಾದ ಮುಂದೆ ಗುಲಾಮಿತನ ಪ್ರದರ್ಶನ ಮಾಡಿತೆಂದರೆ ನಗದೇ ಇರಲು ಅಸಾಧ್ಯವೇ!

    ಅಣುಶಕ್ತಿಯ ಪ್ರಭಾವದಿಂದ ಮೇಲೆದ್ದು ಬಂದ ಅಮೆರಿಕಾವು ಬ್ರಿಟನ್,ಫ್ರಾನ್ಸ್,ರಷ್ಯಾ ಮತ್ತು ಚೀನಾದೊಂದಿಗೆ ಆರು ಭೂ ಖಂಡಗಳ ಮೇಲೆ ನಿಯಂತ್ರಣ ಸಾಧಿಸ ಹೊರಟು ಅದ್ಭುತ ವಿಜಯ ಸಾಧಿಸಿತೆಂದರೆ ತಪ್ಪಲ್ಲ. ಜಗತ್ತಿನ ಮೇಲೆ ಹಿಡಿತ ಸಾಧಿಸಿ, ಮುಖಂಡತ್ವಕ್ಕೆ ಯಾರೂ ತೊಡರುಗಾಲು ಹಾಕದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಾ ಬಂದಿತು.ಕೆಲವಾರು ನೆಪಗಳಿಂದ ಇರಾಕ್, ಲಿಬಿಯಾ, ಪಾಕಿಸ್ತಾನ, ಅಫ್ಘಾನಿಸ್ತಾನಗಳ ಮೇಲೆ ನೇರ ಕಾರ್ಯಾಚರಣೆ ಮಾಡಿ, ತನ್ನನ್ನು ಎದುರು ಹಾಕಿಕೊಂಡ ವ್ಯಕ್ತಿಗಳ ಕಥೆಯನ್ನು ಮುಗಿಸಿದ್ದು ನೆನಪಿರಬೇಕು. ಸದ್ದಾಂ ಹುಸೇನ್,ಮಹಮದ್ ಗಡಾಫಿ, ತಾಲಿಬಾನ್, ಬಿನ್ ಲಾಡೆನ್ ನಂತಹ ಕ್ರೂರ ವ್ಯಕ್ತಿತ್ವದವರನ್ನು ಮಟ್ಟ ಹಾಕಿದ್ದನ್ನಿಲ್ಲಿ ನೆನಪಿಸಬೇಕು. ಇಂತಹ ಯೋಜನೆಗಳಿಗೆ ಹಣವನ್ನು ನೀರಂತೆ ಸುರಿದದ್ದು ಅಷ್ಟೇ ಅಲ್ಲ. ತನ್ನ ಸಮಯವನ್ನು ವ್ಯರ್ಥ ಮಾಡಿತು.

    ಮೂರು ದಶಕಗಳಲ್ಲಿ ಸೀನಿಯರ್ ಜಾರ್ಜ್‌ ಬುಷ್, ಬಿಲ್ ಕ್ಲಿಂಟನ್,ಜಾರ್ಜ್‌ ವಾಕರ್ ಬುಷ್,ಬರಾಕ್ ಒಬಾಮಾ, ಟ್ರಂಪ್,ಜೋ ಬೈಡನ್ ರ ಆಡಳಿತದಲ್ಲಿ ವ್ಯಯಿಸಿದ ಹಣವನ್ನು ಲೆಕ್ಕಿಸಿದರೆ ಅದೆಷ್ಟು ಲಕ್ಷ ಕೋಟಿಗಳಾಗುತ್ತವೆ ಗೊತ್ತಾ ? ಅಬ್ಬಾ! ಇಥಿಯೋಪಿಯಾ ದಂತಹ ದಟ್ಟ ದಾರಿದ್ರ್ಯದ ದೇಶವನ್ನು ನಂದನವನವನ್ನಾಗಿಸಬಹುದಿತ್ತೆಂದರೆ ಉತ್ಪ್ರೇಕ್ಷೆಯಲ್ಲ. ಅದೆಲ್ಲ ಕೇವಲ ಸಾರ್ವಭೌಮತ್ವದ ಪ್ರಶ್ನೆ ಮಾಡಿದವರನ್ನು ಮುಗಿಸಿದ ಕಥೆ. ಹಿಂದೊಮ್ಮೆ ಮಹಾ ಆರ್ಥಿಕ ಬಿಕ್ಕಟ್ಟನ್ನು ಎದುರಿಸಿದ್ದು ಇದೆ. ಈಗ ಅಂಥದೇ ಹೊಡೆತಕ್ಕೆ ಸಿಲುಕುತ್ತಿದೆ ನೋಡಿ.

    ಕಾಲ ಬದಲಾಗುತ್ತಾ ಹೋಗುತ್ತದೆ. ಚಕ್ರ ತಿರುಗಿದಂತೆಲ್ಲ ಚಕ್ರವರ್ತಿಗಳು ಉದಯವಾಗುತ್ತಾ ಇರುತ್ತಾರೆ. ಅಂದು ಅಲೆಕ್ಸಾಂಡರ್, ನೆಪೋಲಿಯನ್, ಹಿಟ್ಲರ್, ಮುಸಲೋನಿ, ಸದ್ದಾಂ ಹುಸೇನ್, ಮಹಮದ್ ಗಡಾಫಿ, ಬಿನ್ ಲಾಡೆನ್ ಅಳಿದು ಹೋದರೂ ಅವರ ತತ್ವಗಳು, ಚಿಂತನೆ, ಯೋಚನೆಗಳು ಭೂಮಿಯ ಮೇಲೆ ಅಳಿದಿಲ್ಲವೆಂಬ ಸತ್ಯ ಕಿಮ್ ಜಾಂಗ್ ಉನ್, ಕ್ಸಿ ಜಿಂಗ್ ಪಿಂಗ್, ಅಂತಹವರಲ್ಲಿ ಕಾಣುತ್ತಿದೆ. ಅಣ್ವಸ್ತ್ರಗಳನ್ನು ಹಿಡಿದು, ತಾನು ಸರ್ವ ನಾಶವಾದರೂ ಸರಿಯೇ ಭೂಮಿಯ ಮೇಲೆ ಯಾರನ್ನೂ ಉಳಿಸಲ್ಲವೆಂಬ ಧೋರಣೆಯು ಮುಗ್ಧ ಜೀವಿಗಳ ಮೇಲಿನ ಅತೀ ಭಯಾನಕ ಸಂಗತಿ! ಇದು ಸಬಲತೆ ಮತ್ತು ದುರ್ಬಲತೆಯ ನಡುವಿನ ಸಂಘರ್ಷ!

    ಒಂದು ಕಾಲದಲ್ಲಿ ತಣ್ಣಗಿದ್ದ ರಷ್ಯಾ, ಚೀನಾ, ಉತ್ತರ ಕೊರಿಯಾ,ಇಸ್ರೇಲ್, ಇರಾನ್,ಇರಾಕ್, ದ ಆಫ್ರಿಕಾ, ಜಪಾನ್ ಮತ್ತು ಎಷ್ಟೋ ರಾಷ್ಟ್ರಗಳಿಂದು ಅಮೆರಿಕಾದ ಮುಂದಾಳತ್ವಕ್ಕೆ ಬಿಡಿಗಾಸು ಕಿಮ್ಮತ್ತು ಕೊಡುತ್ತಿಲ್ಲ. ಹಿಂದೆ ಎಷ್ಟೋ ಸಲ ಸಹಾಯ-ಸಹಕಾರದ ನೆಪದಲ್ಲಿ ಬೆದರಿಕೆಯೊಡ್ಡುತ್ತಿದ್ದ ಅಮೆರಿಕಾಕ್ಕೆ ರಷ್ಯಾ ನೇರಾನೇರ ಸವಾಲಿಗೆ ಪ್ರತಿ ಸವಾಲೊಡ್ಡಿದೆ. ಅದರ ಹಿಂದೆಯೇ ಉ ಕೋರಿಯಾ. ಅದರ ಬೆನ್ನ ಹಿಂದೆ ಚೀನಾ ಹೀಗೆ ಸಾಲುಗಟ್ಟುತ್ತಿರುವ ಹೊತ್ತಲ್ಲಿಯೇ ಅಮೆರಿಕಾದ ಬ್ಯಾಂಕ್ ಗಳು ಬರಿದಾಗುತ್ತಿವೆ ಎಂದರೆ ನಂಬಲೇಬೇಕು. ನಿನ್ನೆಯಷ್ಟೇ ನಡೆದ ಪತ್ರಿಕಾಗೋಷ್ಟಿಯಲ್ಲಿ ಬ್ಯಾಂಕ್ ದಿವಾಳಿತನದ ಕುರಿತಾಗಿ ಪತ್ರಕರ್ತರು ಪ್ರಶ್ನೆ ಕೇಳಿದರೆ ಉತ್ತರಿಸಲಾಗದೇ ಅಧ್ಯಕ್ಷ ಜೋ ಬೈಡನ್ ವೇದಿಕೆಯಿಂದ ನಿರ್ಗಮಿಸಿಬಿಟ್ಟರು. ಅರ್ಥಾತ್ ವೇದಿಕೆಯಿಂದ ಪಲಾಯನ ಮಾಡಿದರು.

    ಇನ್ನು ಬ್ರಿಟನ್ ಸೂರ್ಯ ಮುಳುಗದ ಸಾಮ್ರಾಜ್ಯದಲ್ಲಿ ಆರ್ಥಿಕ ಕತ್ತಲು ತುಂಬುತ್ತಿದೆ ಎಂದರೆ ಸುಳ್ಳಲ್ಲ. ತನ್ನ ದೇಶದ ಕಡೆಗೆ ಸರಿಯಾಗಿ ಗಮನ ಕೊಡಲಾಗುತ್ತಿಲ್ಲ. ಪ್ರಧಾನ ಮಂತ್ರಿಗಳೇ ರಾಜಿನಾಮೆ ಕೊಟ್ಟರು. ಆ ಸ್ಥಾನಕ್ಕೆ ಬಂದ ರಿಷಿ ಸುನಕ್ ಏನು ಕಡೆದು ಕಟ್ಟೆ ಹಾಕಿ ಬಿಡುತ್ತಾರೆ ಎಂದುಕೊಳ್ಳಬೇಡಿ. ಆ ದೇಶ ಇನ್ನು ಮುಂದೆ ಸೂರ್ಯ ಉದಯಿಸದ ಸಾಮ್ರಾಜ್ಯ ಎನಿಸಿಕೊಳ್ಳುವ ಕಾಲ ದೂರವಿಲ್ಲ. ಮೆರೆದುರಿದವರು ಅಳಿಯಲೇ ಬೇಕಲ್ಲ. ಇದು ನಿಸರ್ಗ ನಿಯಮವೇ ! ಅವರೇನು ಭಾರತದ ಕರ್ಣಾಟಕದ ಅಳಿಯ ಆದ ಮಾತ್ರಕ್ಕೆ ಭಾರತದ ಹಿಂದೇನೂ ಬರುವುದಿಲ್ಲ. ಆ ದೇಶದ ಜನರ ಆಶೋತ್ತರಗಳಿಗೆ ತಕ್ಕಂತೆ ಆಡಳಿತ ನಡೆಸಬೇಕು. ಇಲ್ಲವಾದಲ್ಲಿ ಬೆಂಬಲ ಕಳೆದುಕೊಂಡು ಮನೆಯಲ್ಲಿ ಕೂರಬೇಕಾದೀತು. ಹಾಗಾಗಿ ಅದೇನೂ ಭಾರತೀಯರಿಗೆ ಹೆಮ್ಮೆಯ ಸಂಗತಿಯೇನಲ್ಲ.

    ಈಗ ಅಮೆರಿಕಾ ಬ್ರಿಟನ್ ಪ್ರಾಬಲ್ಯ ಕಡಿಮೆಯಾಗುತ್ತಿದೆ. ರಷ್ಯಾ ಚೀನಾ ಬಲವಾಗುತ್ತಾ ಸಾಗಿವೆ. ಫ್ರಾನ್ಸ್ ಯಾವುದರ ತಂಟೆಯೂ ಬೇಕಿಲ್ಲವೆಂದು ಭಾರತದಂತಹ ರಾಷ್ಟ್ರಗಳೊಡನೆ ಬಾಂಧವ್ಯ ವೃದ್ಧಿಗೆ ಮುಂದಾಗಿದೆ. ಸಧ್ಯಕ್ಕೆ ಅಲಿಪ್ತ ನೀತಿಯಿಂದಾಗಿ ಎಲ್ಲ ರಾಷ್ಟ್ರಗಳ ಜೊತೆಗೆ ಉತ್ತಮ ಸಂಬಂಧ ಕುದುರಿಸಿಕೊಳ್ಳುತ್ತಿರುವ ಭಾರತಕ್ಕೆ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಸ್ಥಾನ ಕಲ್ಪಿಸಿಕೊಡಬೇಕೆಂಬ ಮಹದಾಸೆ ಹೆಚ್ಚಾಗುತ್ತಿದೆ. ಕಾರಣ ಶಾಂತಿ ಸಂದೇಶ ಸಾರುವ ಈ ದೇಶ, ತನ್ನ ಭಾಗವಾಗಿದ್ದ ಪಾಕಿಸ್ತಾನದ ಜೊತೆಗಿನ ಸಂಬಂಧದಲ್ಲಿ ಮಾತ್ರ ಕಾದಾಟವಿದೆ. ಹಾಗೆಂದು ಅಟ್ಟಹಾಸ ಮೆರೆದಿಲ್ಲ. ಕಿತ್ತುಕೊಂಡಾಗ ಮಾತ್ರ, ಮುಟ್ಟಿ ನೋಡಿಕೊಳ್ಳುವಂತೆ ಮಾಡಿದೆ ಅಷ್ಟೇ. ಇನ್ನು ಚೀನಾದೊಂದಿಗಿನ ಯುದ್ದ ಅಂದಿನ ಸ್ಥಿತಿಗತಿಗಳ ಮೇಲೆ ಹಿಂದೆ ಸರಿದು, ಸೋತಿತು ಎಂಬ ಪಟ್ಟ ಹೊಂದಿತು. ಈಗ ಬದಲಾದ ಸನ್ನಿವೇಶದಲ್ಲಿ ಚೀನಾಕ್ಕೂ ಭಾರತ ಎಂದರೆ ಎದೆ ನಡುಗುತ್ತದೆಂದರೆ ನಂಬಲೇಬೇಕು.

    ರಷ್ಯಾ,ಬ್ರೆಜಿಲ್,ಇಟಲಿ,ಜಪಾನ್,ಆಸ್ಟ್ರೇಲಿಯಾ, ನಾರ್ವೆ,ಸ್ವೀಡನ್‌, ಥಾಯ್ಲಾಂಡ್, ಮ್ಯಾನ್ಮಾರ್, ನೇಪಾಳ, ಇರಾನ್, ಉಕ್ರೈನ್, ಕೆನಡಾ, ಜರ್ಮನಿಯಂತಹ ರಾಷ್ಟ್ರಗಳಿಗೆ ಅದ್ಬುತ ಸ್ನೇಹಿತನಾಗಿರುವ ಭಾರತದ ನೀತಿ ನಿಜಕ್ಕೂ ಅಭಿನಂದನೀಯ. ಇದನ್ನು ಪಕ್ಷಾತೀತವಾಗಿ ಪರಿಗಣಿಸಬೇಕು. ಕಾಲಚಕ್ರದಡಿಯಲ್ಲಿ ಕೆಳಗಿದ್ದ ದೇಶಗಳು ಮೇಲೆ, ಮೇಲಿದ್ದ ದೇಶಗಳು ಅತಂತ್ರ! ಸಬಲತೆ-ದುರ್ಬಲತೆ ಶಾಶ್ವತವಲ್ಲ ಎಂಬುದನ್ನು ವಸ್ತು ಸ್ಥಿತಿ ಸಾರಿ ಹೇಳುತ್ತಿದೆ.

    https://pragati.taskdun.com/an-unknown-vehicle-killed-the-biker/

    https://pragati.taskdun.com/teacherstransferfilecm-basavaraj-bommai/
    https://pragati.taskdun.com/i-will-serve-the-people-as-long-as-there-is-blessing-of-public-cm-bommai/

    ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

    Related Articles

    Back to top button