ಲೇಖನ – ರವಿ ಕರಣಂ.
ಬೈಕ್ ಸವಾರರು ಅತಿಯಾದ ಉನ್ಮಾದಕ್ಕೊಳಗಾಗಿ ಓಡಿಸುವುದನ್ನು ನೋಡಿದ್ದೀರಿ. ಅದೇನೂ ಹುಡುಗಾಟದ ವಿಷಯವಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಮನೆಯಲ್ಲಿ ತಮ್ಮವರು ತನಗಾಗಿ ಕಾಯುತ್ತಿರುತ್ತಾರೆ. ಕನಸುಗಳನ್ನು ಕಟ್ಟಿ ಕೊಂಡಿರುತ್ತಾರೆ. ಜೀವನದ ಮುಂದಿನ ಹಂತಗಳ ಬಗ್ಗೆ ಭರವಸೆ ಇಟ್ಟು ಕೊಂಡಿರುತ್ತಾರೆ. ಮಗನ ಸುಂದರ ಬದುಕಿನ ಆನಂದದ ದೃಶ್ಯಗಳನ್ನು ಕಾಣಲು ತವಕಿಸುತ್ತಿರುತ್ತಾರೆ. ಒಂದಲ್ಲ ಎರೆಡಲ್ಲ ನೂರಾರು ಬಗೆಯ ಆಸೆಗಳ ಹೊಂಡ ತೋಡಿರುವ ಮನಸುಗಳವು ಎಂಬುದನ್ನು ಅರಿತುಕೊಳ್ಳುವುದುಚಿತ.
ಕೇವಲ ಒಂದೂವರೆ ಇಂಚು ಬೈಕ್ ನ ಟಯರ್ ನೆಲಕ್ಕೆ ಅಂಟಿಕೊಂಡಿರುತ್ತದೆ. ಹಿಂದೆ ಮುಂದೆ ಗಾಳಿ ತುಂಬಿದ ಟ್ಯೂಬ್ ಗಳು,ಟಯರ್ ಗಳ ಸಹಾಯದಿಂದ ಸಮತೋಲಿತ ಚಲನೆಯ ಮೇಲೆ ಜೀವ ಜೋಕಾಲಿಯಾಡುತ್ತಿರುತ್ತದೆ ಎಂಬುದು ಅದೆಷ್ಟು ಮಾರ್ಮಿಕ ಸಂಗತಿ ಅಲ್ಲವೇ? ಮುಂಜಾಗ್ರತಾ ಕ್ರಮಗಳನ್ನು ಅನುಸರಿಸದ ಯುವಕರಿಗೆ, ಭವಿಷ್ಯದ ಬಗೆಗೆ ಕೊಂಚ ಜವಾಬ್ದಾರಿ ಇಲ್ಲವೇನೋ ಎನಿಸಿ ಬಿಡುತ್ತದೆ. ಇದಕ್ಕೆ ಮನೆಯವರು, ಚಾಲನಾ ಪರವಾನಿಗೆ ಕೊಡುವ ಇಲಾಖೆಯು ಸ್ವಲ್ಪ ಗಂಭೀರ ವಿಚಾರ ಮಾಡಲೇ ಬೇಕು. ವಾಹನಗಳು ಅನುಕೂಲಕ್ಕಾಗಿವೆಯೇ ಹೊರತು ಮೋಜಿಗಾಗಿ ಅಲ್ಲ. ಅವುಗಳ ಅವಶ್ಯಕತೆ ಎಷ್ಟು ಎಂಬುದರ ಮೇಲೆ ನಿಗಾ ಇಡಬೇಕಲ್ಲವೇ ? ಮೋಟಾರ್ ಬೈಕ್ ಗಳ ಅವಶ್ಯಕತೆ ಏಕೆ ಎಂಬುದಕ್ಕಿಂತ ಮುಂಚೆ, ಅಂದಿನ ವಸ್ತು ಸ್ಥಿತಿಯ ಬಗ್ಗೆ ನೋಡೋಣ.
ನಾಲ್ಕು -ಐದು ದಶಕಗಳ ಹಿಂದೆ ಬಸ್ಸುಗಳ ಮೇಲೆ ನಮ್ಮ ಪ್ರಯಾಣ ಅವಲಂಬಿತವಾಗಿರುತ್ತಿತ್ತು. ಆಗ ಅವುಗಳ ಸಂಖ್ಯೆ ಕಡಿಮೆ. ವೇಳಾಪಟ್ಟಿಯನ್ನು ಅನುಸರಿಸಲು ಸಾಧ್ಯವಾಗುತ್ತಿರಲಿಲ್ಲ. ಎಷ್ಟೋ ಬಾರಿ ಕಾದು ಕಾದು ಸುಸ್ತಾಗಿ, ಶಾಪ ಹಾಕುತ್ತಾ ಕಾದ ಘಳಿಗೆಗಳನ್ನು ನೆನಪಿಸಿಕೊಳ್ಳಿರಿ. ಅದು ಯಾತನಾಮಯ ಸಂದರ್ಭವಾಗಿರುತಿತ್ತು. ಇನ್ನು ಮುಂದೆ ಪ್ರಯಾಣದ ಉಸಾಬರಿಯೇ ಬೇಡ ಎನಿಸುವಷ್ಟು ! ಕಾರಣಗಳನೇಕ. ರಸ್ತೆಗಳು ಸರಿಯಾಗಿ ಇರುತ್ತಿರಲಿಲ್ಲ. ಜನ ಜಂಗುಳಿ. ಕಡಿಮೆ ವಾಹನಗಳು. ಜನರನ್ನು ಇಳಿಸಿ, ಹತ್ತಿಸಿಕೊಂಡು ಬರುವುದು. ಚಿಲ್ಲರೆ ಹಿಂತಿರುಗಿಸಿ ಕೊಡಲು ಕಾಸು ಸಿಗದೇ ಪರದಾಟ! ಹೀಗೆ ಸಮಯ ವ್ಯರ್ಥವಾಗುತಿತ್ತು.
ಅಂದಿನ ಸರ್ಕಾರಗಳು ಅದಕ್ಷ, ಅಪ್ರಮಾಣಿಕ, ಭ್ರಷ್ಟಾತಿಭ್ರಷ್ಟವಾಗಿತ್ತು. ಕಳ್ಳ ಲೆಕ್ಕ ಬರೆದು, ಜನತೆಗೆ ಮೋಸ ಮಾಡಿದ್ದು ಸುಳ್ಳೇನೂ ಅಲ್ಲ. ಆ ಲೆಕ್ಕಾಚಾರ ಕೇಳಲು ಸಾರ್ವಜನಿಕ ಮಾಹಿತಿ ಹಕ್ಕು ಇರಲಿಲ್ಲವಲ್ಲ! ಅದು ಜಾರಿಗೆ ಬಂದಿದ್ದು 2005 ರಲ್ಲಿ. ಹೀಗಾಗಿ ಅನುಕೂಲಗಳು ಕಡಿಮೆ ಇದ್ದವು. ಇನ್ನು ರೈಲು ಸಂಚಾರ ಕಷ್ಟವೋ ಕಷ್ಟ. ಮೀಟರ್ ಗೇಜ್ ಗಳಿಂದ ಬ್ರಾಡ್ ಗೇಜ್ ಗಳಿಗೆ ಪರಿವರ್ತನೆಯಾಗುವ ಕಾಲವದು. ಮಂದಗತಿಯಲ್ಲಿ ಜೀವನದ ಗತಿಯೂ ಮಂದವಾಗಿತ್ತು. ಹೀಗಾಗಿ ಬದುಕು ಪರಿವರ್ತನಾ ಮತ್ತು ಗುಣಮಟ್ಟದ ಕಡೆಗೆ ತಿರುಗಲು ನಿಧಾನವಾಗಿತ್ತು. ಹಿರಿಯರು ಹೇಳಿದಂತೆ “ನಿಧಾನವೇ ಪ್ರಧಾನ” ಎಂಬ ಮಾತೇನೋ ನಿಜ. ಆದರೆ ಅಂದಿನ “ಪ್ರಧಾನಿಯೇ ನಿಧಾನ” ವಾಗಿ ಅಭಿವೃದ್ಧಿ ಮರೀಚಿಕೆಯಾಗಿದ್ದು ಸುಳ್ಳಲ್ಲ. ವ್ಯಾಪಕ ಭ್ರಷ್ಟಾಚಾರಕ್ಕೆ ಅಡಿಪಾಯ ಬಿದ್ದದ್ದು ಆಗಲೇ. ಸರ್ಕಾರದ ಉಳಿವಿಗೆ ಏನೆಲ್ಲಾ ಆಯಿತು ನಿಮಗೆ ಗೊತ್ತಿದೆ. ಕಡೆಗೆ ತುರ್ತು ಪರಿಸ್ಥಿತಿ ಹೇರಿದ್ದನ್ನು ನೆನಪಿಸಿಕೊಳ್ಳಿ.
ಇರಲಿ. ವಿಷಯಕ್ಕೆ ಬರೋಣ. ಆಗ ತಾನೇ ದ್ವಿ ಚಕ್ರ ವಾಹನಗಳು ಜನತೆಯ ಮನಸ್ಸನ್ನು ಗೆದ್ದಿದ್ದವಲ್ಲ. ಸಿನಿಮಾ ಪ್ರಪಂಚ, ಅವುಗಳ ಕ್ರೇಜ್ ನ್ನು ಹುಟ್ಟಿಸಿದ್ದವು. ಚಿತ್ರದ ನಾಯಕ ಗಾಡಿ ಓಡಿಸುವ ಪರಿಗೆ ಮರುಳಾಗಿ, ಅಂದಿನ ಯುವ ಸಮೂಹ ಅಂದರೆ ಇಂದಿನ ಮಧ್ಯ ವಯಸ್ಕರು ಮತ್ತು ವೃದ್ದರು, ಹಾಗೂ ಹೀಗೂ ಹಣ ಜೋಡಿಸಿ, ದ್ವಿ ಚಕ್ರ ವಾಹನಗಳ ಖರೀದಿಗೆ ನಿಂತರು. ಚೇತಕ್, ಯಜಿಡಿ, ಬುಲೆಟ್ ಗಳಂತಹ ಗಾಡಿಗಳು ರೋಡಿಗಿಳಿದವು. ಅದು ಕಳೆದ ಶತಮಾನದ 8 -9 ರ ದಶಕಗಳಲ್ಲಿ ಭಾರಿ ಪ್ರಮಾಣದಲ್ಲಿ ಮೆರೆಯಿತು. 3000 ರೂ ಗಳಿಂದ 5000 ಗಳಲ್ಲಿ ದೊರೆತು, ಮನೆ ಮನೆಗೂ, ಮನ ಮನಕೂ ಲಗ್ಗೆಯಿಟ್ಟವು. ಅಲ್ಲಿಂದ ಶುರುವಾದ ಪ್ರಕ್ರಿಯೆ ಇಂದು ಬಗೆ ಬಗೆ ವಿನ್ಯಾಸದ, ಬಣ್ಣದ, ವಿಶೇಷತೆಗಳ ಮಹಾಪೂರವಾಗಿದೆ.
ಲಕ್ಷ ಲಕ್ಷ ಹಣದ ಬೈಕ್ ಗಳು ರಸ್ತೆ ಮೇಲೆ ಕಣ್ಣು ಕುಕ್ಕುತ್ತಿವೆ. ಅಷ್ಟೇ ಜೀವಗಳು ರಸ್ತೆ ಮೇಲೆ ಕಕ್ಕುತ್ತಿವೆ. ಮಕ್ಕಳನ್ನು ಕಳೆದುಕೊಂಡ ಜೀವಗಳು ಬಿಕ್ಕುತ್ತಿವೆ. ಪೋಸ್ಟ್ ಮಾಟಂ ಮಾಡಲು ಕೈಗಳು ಹೆಣಗಳನ್ನು ಹೆಕ್ಕುತ್ತಿವೆ. ಇದಕ್ಕೆ ಹೊಣೆ ತಾನಲ್ಲದೇ ಮತ್ಯಾರು ಬೈಕ್ ದೇವ ॥ ಎಂದು ವಚನ ಕಟ್ಟಬೇಕಷ್ಟೇ.
ಸರಿಯಾಗಿ ನಿಯಮಗಳನ್ನು ತಿಳಿದಿರುವುದಿಲ್ಲ. ಶಿರಸ್ತ್ರಾಣ ಧರಿಸುವುದಿಲ್ಲ. ಹಿಂದೆ ಮುಂದಿನವರಿಗೆ ಸೂಚನೆ ಕೊಡುವುದಿಲ್ಲ. ರಾತ್ರಿ ವೇಳೆ ಇಂಡಿಕೇಟರ್ ಮನೆ ಹಾಳಾಗಲಿ, ಹೆಡ್ ಲೇಟ್ ಇರುವುದಿಲ್ಲ. ಚಾಲನಾ ಪರವಾನಿಗೆ, ವಿಮೆ, ವಾಯು ಮಾಲಿನ್ಯ ತಪಾಸಣಾ ಪತ್ರ, ವಾಹನಗಳ ದಾಖಲಾತಿಗಳು ಯಾವುದೂ ಸರಿಯಾಗಿ ಇಟ್ಟುಕೊಳ್ಳಲು ಆಗದ ಸವಾರರುಗಳಿಗೆ ಏನೆಂದು ತಿಳಿ ಹೇಳಬೇಕು? ಜಗತ್ತನ್ನು ತಿದ್ದುವುದುಂಟೇ? ಸರ್ಕಾರಗಳೂ ಕಟ್ಟು ನಿಟ್ಟಿನ ಕ್ರಮಗಳನ್ನು ಅನುಸರಿಸುವುದಿಲ್ಲ. ಜನರಿಗೂ ಅದೇ ಬೇಕು. ಗಾಡಿ ಹಿಡಿದು ನಿಲ್ಲಿಸಿದರೆ, 500 ಕೇಳ್ತಿದ್ದರಂತೆ. ಅದರಲ್ಲಿ ಚೌಕಾಸಿ ಮಾಡಿ, ಸರಿ ಮಾಡಿಕೊಂಡು ಬರುವ ಜನರೇ ಹೆಚ್ಚಾಗಿತ್ತು. ಸಧ್ಯಕ್ಕಂತೂ ವಾಹನಗಳನ್ನು ತಪಾಸಣೆ ಮಾಡಬಾರದು, ನಿಲ್ಲಿಸಬಾರದೆಂಬ ಸೂಚನೆ, ಮತ್ತಷ್ಟು ಅಶಿಸ್ತಿಗೆ ಕಾರಣವಾಗುತ್ತಿದೆ. ರಾಜಾರೋಷವಾಗಿ ಅಡ್ಡಾದಿಡ್ಡಿಯಾಗಿ ಓಡಿಸಿ, ತಮಗೂ, ಎದುರಿಗಿನವರಿಗೂ ಪ್ರಾಣ ಕಂಟಕ ತಂದು ಬಿಡುತ್ತಾರೆ.
ರಾಷ್ಟ್ರೀಯ ಹೆದ್ದಾರಿಗಳ ಮೇಲೆ ಬೈಕರ್ ಗಳ ವೇಗ 100 ರಿಂದ 120 ಕಡಿಮೆ ಇರುವುದಿಲ್ಲ ಗೊತ್ತಾ? ಆ ವೇಗದ ಪರಿಣಾಮ ಎಷ್ಟು ತೀವ್ರವಾಗಿರುತ್ತದೆ ಎಂದರೆ, ನೇರವಾಗಿ ದೇಹ ಮಾರ್ಚರಿಯಲ್ಲಿ ಕಟ್ಟೆಯ ಮೇಲಿರುತ್ತದೆ. ಒಂದು ಕ್ಷಣ ಅಂತಹ ದೃಶ್ಯವನ್ನು ನೋಡಿಕೊಂಡು ಬರಲು ಒತ್ತಾಯಿಸುತ್ತೇನೆ. ಹಾಗಾಗಬಾರದಲ್ಲವೇ? ಅಮೂಲ್ಯ ಜೀವವನ್ನು ಮೋಜಿಗಾಗಿ ಪಣಕ್ಕಿಡುವುದು ಬೇಡ ಅಷ್ಟೇ. ಪ್ರತಿಯೊಬ್ಬನೂ ದೇಶದ ಸಂಪತ್ತು ಆಗಬೇಕು. ಯಾರಿಂದ ಯಾವ ಸೇವೆ, ಕಾರ್ಯ ಜರುಗುತ್ತದೆಯೋ ಗೊತ್ತಿಲ್ಲ. ನೋಡಿ ಚಹಾ ಅಂಗಡಿ ನಡೆಸುತಿದ್ದ ಮೋದಿ, ಇಂದು ಜಗದ್ವಿಖ್ಯಾತ ನಾಯಕ. (ಹಾಗೆಂದು ಪಕ್ಷದ ಪರ ಪ್ರಚಾರವೆಂದು ಭಾವಿಸಬೇಡಿ. ಒಬ್ಬ ಬರೆಹಗಾರ ಪಕ್ಷಾತೀತವಾಗಿರಬೇಕೆಂಬ ನಿಯಮದಲ್ಲಿ ಇರುತ್ತೇನೆ) ಸದ್ಗುಣಕ್ಕೆ ಮಾತ್ಸರ್ಯ ಬೇಡ. ಅಲ್ಲವೇ? ಹೇಳಲಿಷ್ಟು ಕಾರಣ. ಪೂರ್ಣ ಜೀವನ ಮುಗಿಸಿ. ಬಲಿಯಾಗಬೇಡಿ ಎಂದು.
ಮನೆಯವರು ಬೈಕ್ ಕೊಡಿಸುವ ಮುನ್ನ ಹತ್ತು ಸಲ ಯೋಚಿಸಿ. ಮತ್ತು ಅಂದೇ ಅವನ/ಅವಳ ಅಸ್ತಿತ್ವದ ಬಗ್ಗೆ ಕನಸನ್ನು ಬಿಟ್ಟು ಬಿಡಿ. ಕಾರಣ ನಾವು ಸರಿಯಿದ್ದರೂ ಎದುರಿಗಿರುವವರು ಸರಿಯಿರಬೇಕಲ್ಲ! ಅತಿಯಾದ ಜನಸಂಖ್ಯೆ. ಅಧಿಕ ವಾಹನಗಳು. ಕಿರಿದೆನಿಸುವ ರಸ್ತೆಗಳು. ರಸ್ತೆ ಗುಂಡಿಗಳು, ತಿರುವುಗಳು, ವಿಭಜಕಗಳು, ಹಂಪ್ಸ್ ಗಳು ಒಂದಲ್ಲ ಒಂದು ನೆಪಕ್ಕೆ ಜೀವಕ್ಕೆ ಸಂಚಕಾರ ಇದ್ದೇ ಇರುತ್ತದೆ. ನಮ್ಮ ಕಣ್ಣ ಮುಂದೆಯೇ ಎಷ್ಟೋ ಘಟನೆಗಳು ನಡೆದು ಹೋಗಿವೆ. ಪ್ರತಿ ನಿತ್ಯ ಮಾಧ್ಯಮಗಳಲ್ಲಿ ಇವೇ ಸುದ್ದಿಗಳ ಮಹಾಪೂರವೇ ! ಇದೇನು ಸಂತೋಷದ ಸುದ್ದಿಯಲ್ಲ. ತರಾತುರಿಯಲ್ಲಿ ತೋರಿಸುವ, ತಿಳಿಸುವ ಶೋಕ ಸಂದೇಶವಾಗಿದೆ.
ಅಷ್ಟೇ ಅಲ್ಲ. ಇನ್ನೂ ರಸ್ತೆ ಮೇಲೆ ಪುಂಡಾಟಿಕೆ ನಡೆಸುವವರಿದ್ದಾರೆ. ವ್ಹೀಲಿಂಗ್ ಮಾಡುವ ಹುಡುಗರು ಅಪಾಯಕ್ಕೆ ಸಿಲುಕುವುದಿದೆ. ಮನೆಯವರಿಗೆ ಗೊತ್ತಾಗದಂತೆ ರಸ್ತೆಗಳ ಮೇಲೆ ವ್ಹೀಲಿಂಗ್ ಮಾಡುವ ದೃಶ್ಯಗಳನ್ನು ಸೆರೆ ಹಿಡಿಯುವುದು. ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಡುವುದೆಲ್ಲ ನಡೆದಿದೆ. ಇದು ಆರೋಗ್ಯದ ಲಕ್ಷಣವಲ್ಲ. ಖ್ಯಾತಿ ಗಳಿಸ ಹೋಗಿ, ಮಣ್ಣೊಳಗೆ ಸೇರುವುದು ಬೇಕೇ? ಲೈಕ್ ಮಾಡಿ, ಶೇರ್ ಮಾಡಿ, ಸಬ್ ಸ್ಕ್ರೈಬ್ ಮಾಡಿ ಎನ್ನುತ್ತಲೇ ಜಗತ್ತಿಗೆ ಟಾಟಾ ಹೇಳಿ ಬಿಟ್ಟರೆ ಗತಿ ಏನಾದೀತು? ಸ್ವಲ್ಪ ಯೋಚಿಸಬೇಕು ಯುವ ಜನಾಂಗ.
ರಸ್ತೆ ಬದಿಯಲ್ಲಿ ಕೆಲವು ಸೂಚನೆಗಳನ್ನು ಬರೆದಿರುವ ಫಲಕಗಳ ಕಡೆಗೆ ಗಮನ ಹರಿಸಬೇಕು. ರಸ್ತೆ ತಿರುವಿನ ಚಿತ್ರಗಳು, ವೇಗ ಮಿತಿ, ಹಂಪ್ಸ್ ಗಳು ಇತ್ಯಾದಿಗಳೆಲ್ಲ ನಮ್ಮ ರಕ್ಷಣೆಗಾಗಿ ಇರುತ್ತವೆ. ಅವುಗಳ ಬಗ್ಗೆ ಅರಿವನ್ನು ಇಟ್ಟುಕೊಳ್ಳಬೇಕು. ಅಲ್ಲದೇ Speed thrills but kills ಎಂಬ ಸಂದೇಶ ಅರ್ಥಗರ್ಭಿತವಾಗಿದೆ. ಸುರಕ್ಷಿತ ಪ್ರಯಾಣಕ್ಕಾಗಿ ಶುಭ ಹಾರೈಕೆಗಳ ಫಲಕಗಳು, ಜೀವ ಮತ್ತು ಜೀವನದ ಮಹತ್ವವನ್ನು ಸಾರುತ್ತವೆ.ಅಲ್ಲವೇ ? ಹಾಗಿದ್ದಾಗ್ಯೂ ಬೈಕರ್ ಗಳ ನಡೆವಳಿಕೆ ಸುಧಾರಣೆಯಾಗಿಲ್ಲ. ಅದಕ್ಕಾಗಿ ನಮ್ಮೊಳಗೆ ಅರಿವಿರಬೇಕು.
ಸುರಕ್ಷತಾ ಕ್ರಮಗಳನ್ನು ಅನುಸರಿಸಬೇಕು. ಶಿರಸ್ತ್ರಾಣ (Helmet), ಹ್ಯಾಂಡ್ ಗ್ಲೌಸ್, Knee pad, ಮೆಡಿಕಲ್ ಕಿಟ್, ವಾಹನದ ದಾಖಲೆಗಳು, ಹೆಡ್ ಲೈಟ್, ಇಂಡಿಕೇಟರ್ ಗಳು, ಮಿರರ್ ಗಳು, ಚಾಲನಾ ಪರವಾನಿಗೆ, ವಿಮೆ, ವಾಯು ಮಾಲಿನ್ಯ ತಪಾಸಣಾ ಪ್ರತಿ, ವಾಹನದ ನಂಬರ್ ಪ್ರತಿಯೊಂದನ್ನು ಹೊರಗಿಟ್ಟುಕೊಂಡು ಹೋಗಬೇಕು. ಡಿಜಿ ಲಾಕರ್ ಅ್ಯಪ್ ನಲ್ಲಿ ಇಟ್ಟುಕೊಳ್ಳಲು ಸುಲಭವಾಗಿದೆ. ಮುಖ್ಯವಾಗಿ ನಮ್ಮ ಗುರುತಿನ ಪ್ರತಿ ಆಧಾರ್, ವೋಟರ್ ಐಡಿ, ಬ್ಯಾಂಕ್ಞಾವುದಾದರೊಂದು ಜೊತೆಗಿದ್ದು, ರಕ್ತದ ಗುಂಪಿನ ಮಾಹಿತಿಯೂ ಇದ್ದರೊಳಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ