Kannada NewsKarnataka News

ಕೆಎಲ್ಎಸ್ ಜಿಐಟಿಯಲ್ಲಿ ಖಗೋಳ ಭೌತಶಾಸ್ತ್ರ ಕೇಂದ್ರ ಉದ್ಘಾಟನೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ (ಐಐಎ) ಇವರ ಸಹಯೋಗದೊಂದಿಗೆ ಖಗೋಳ ಭೌತಶಾಸ್ತ್ರದ ಕೇಂದ್ರವನ್ನು ಗೋಗಟೆ  ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಯಲ್ಲಿ , 18 ಮಾರ್ಚ್ ರಂದು ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ನ ನಿರ್ದೇಶಕಿಯಾದ ಪ್ರೊ. ಅನ್ನಪೂರ್ಣಿ ಸುಬ್ರಮಣ್ಯಂ ಅವರು ಉದ್ಘಾಟಿಸಿದರು.

ಐಐಎಯಿಂದ ಸಂಯೋಜಕರಾದ ಡಾ. ರವೀಂದ್ರ ಬಿ. ; ಶ್ರೀ ಅನಂತ ಮಂಡಗಿ, ಅಧ್ಯಕ್ಷರು, ಕೆಎಲ್ಎಸ್, ; ಚೇರಮನ  ಕೆಎಲ್ಎಸ್, ಶ್ರೀ ಪ್ರದೀಪ್ ಸಾವಕಾರ ; ಕೆಎಲ್ಎಸ್ನ ಎಲ್ಲ  ಆಡಳಿತ ಮಂಡಳಿಯ ಸದಸ್ಯರು  ಉಪಸ್ಥಿತರಿದ್ದರು. ಇದೆ ಸಂಧರ್ಭದಲ್ಲಿ, ಕೆಎಲ್ಎಸ್ ಜಿಐಟಿ ಮತ್ತು ಐಐಎ ಒಡಂಬಡಿಕೆ ಪತ್ರಕ್ಕೆ ಸಹಿ ಮಾಡಿದರು.

ಈ ಕೇಂದ್ರದಲ್ಲಿ 10 ಇಂಚಿನ ದೂರದರ್ಶಕ ಮತ್ತು ಚಲಿಸಬಲ್ಲ ಗುಮ್ಮಟದೊಂದಿಗೆ ವೀಕ್ಷಣಾ  ಗೋಪುರದ ಸೌಲಭ್ಯವನ್ನು ಸ್ಥಾಪಿಸಿದೆ. ಐಐಎ ಸಹಯೋಗದೊಂದಿಗೆ ಖಗೋಳಶಾಸ್ತ್ರದಲ್ಲಿ ಕೋರ್ಸ್‌ಗಳು ಮತ್ತು ಸಂಶೋಧನಾ ಯೋಜನೆಗಳನ್ನು ನಡೆಸಲು ಗ್ರಂಥಾಲಯ, ಪ್ರಯೋಗಾಲಯ ಮತ್ತು ಗಣಕಯಂತ್ರದ ಸೌಲಭ್ಯವನ್ನು ಸ್ಥಾಪಿಸಿದೆ. ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಈ ಕೇಂದ್ರವನ್ನು ಸ್ಥಾಪಿಸಲು ಇದುವರೆಗೆ ಅಂದಾಜು ₹ 30 ಲಕ್ಷಗಳ ಹೂಡಿಕೆಯನ್ನು ಕೈಗೊಂಡಿದೆ.

 ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಸಹಯೋಗದೊಂದಿಗೆ ಸರ್ಟಿಫಿಕೇಟ್ ಕೋರ್ಸ್‌ಗಳನ್ನು ನೀಡಲು ಪ್ರಸ್ತಾಪಿಸಿದೆ. ಬೆಳಗಾವಿಯ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳು ಕೇಂದ್ರದ ಸೌಲಭ್ಯಗಳಿಗೆ ಪ್ರವೇಶವನ್ನು ಹೊಂದಿರುತ್ತಾರೆ ಮತ್ತು ಕೇಂದ್ರವು ನೀಡುವ ಪ್ರಮಾಣಪತ್ರ ಕೋರ್ಸ್‌ಗಳನ್ನು ಈ ಕೇಂದ್ರದಲ್ಲಿ ಆಯ್ಕೆ ಮಾಡಿಕೊಳ್ಳಬಹುದು. ಭವಿಷ್ಯದಲ್ಲಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಆಸ್ಟ್ರೋಫಿಸಿಕ್ಸ್ ಮತ್ತು ಜಿಐಟಿ ಜಂಟಿಯಾಗಿ ಖಗೋಳವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನದಲ್ಲಿ ಪದವಿಪೂರ್ವ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅಲ್ಪಾವಧಿಯ ಸಂಶೋಧನಾ ಯೋಜನೆಗಳನ್ನು ನೀಡಲಿವೆ.

ಐಐಎ, ನಿರ್ದೇಶಕಿ ಪ್ರೊ.ಅನ್ನಪೂರ್ಣಿ ಸುಬ್ರಮಣ್ಯಂ ಅವರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಐಐಎ ಕರ್ನಾಟಕದಾದ್ಯಂತ ಕೇಂದ್ರವನ್ನು ಸ್ಥಾಪಿಸುವ ಮೂಲಕ ವಿಸ್ತರಣೆಯ ಯೋಜನೆಯನ್ನು ಹೊಂದಿದೆ ಮತ್ತು ಆಕಾಶದ ವಿದ್ಯಮಾನವನ್ನು ಅರ್ಥಮಾಡಿಕೊಳ್ಳಲು ಮತ್ತು ಲಕ್ಷಾಂತರ ಜ್ಯೋತಿರ್ವರ್ಷ ಅಂತರದಲ್ಲಿರುವ ಆಕಾಶಕಾಯಗಳ  ಹೊಸ ಅನ್ವೇಷಣೆಗೆ  ಸಹಾಯಕವಾಗಲಿದೆ ಎಂದು ತಿಳಿಸಿದರು.

ಕೆಎಲ್‌ಎಸ್ ಚೇರಮನ ಪ್ರದೀಪ್ ಸಾವಕಾರ ಅವರು ತಮ್ಮ ಭಾಷಣದಲ್ಲಿ, ಕರ್ನಾಟಕದ ಈ ಭಾಗಕ್ಕೆ ಸಂಶೋಧನಾ ಕೇಂದ್ರವನ್ನು ತರುವಲ್ಲಿ ಜಿಐಟಿ ಕೆಲಸ ಮಾಡಿದೆ, ಇದು ಖಗೋಳಶಾಸ್ತ್ರದ ಯುವ ಸಂಶೋಧಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು. ಮತ್ತು ಐಐಎ ಜೊತೆ ಒಪ್ಪಂದ ಸಹಿ ಹಾಕಿದ್ದಕ್ಕೆ ಸಂತಸ ವ್ಯಕ್ತಪಡಿಸಿದರು.

ಐಐಎಯ ಸಂಯೋಜಕರಾದ ಡಾ. ರವೀಂದ್ರ ಬಿ. ಈ ಪ್ರಮಾಣೀಕೃತ ಕೋರ್ಸ್‌ಗಳನ್ನು ಐಐಎ ನಿಂದ ಸಂಯೋಜಿಸಲಾಗುವುದು ಮತ್ತು ಭವಿಷ್ಯದಲ್ಲಿ ಅವರು ಜಿಐಟಿಯಲ್ಲಿ ಉತ್ಕೃಷ್ಟತೆಯ ಕೇಂದ್ರವನ್ನು ತೆರೆಯುವ ಉದ್ದೇಶವನ್ನು ಹೊಂದಿದ್ದಾರೆ ಎಂದು ತಮ್ಮ ಬಯಕೆಯನ್ನು ವ್ಯಕ್ತಪಡಿಸಿದರು.

ಕೆಎಲ್‌ಎಸ್‌ನ ಅಧ್ಯಕ್ಷ ಶ್ರೀ. ಅನಂತ ಮಂಡಗಿ, ಇದೆ ಸಂಧರ್ಭದಲ್ಲಿ ಜಿಐಟಿಯನ್ನು ಅಭಿನಂದಿಸಿ, ಐಐಎ ಸಹಯೋಗದಲ್ಲಿ ನಿರ್ಮಿಸಲಾದ  ಅತ್ಯಾಧುನಿಕ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಲು ಸಲಹೆ ನೀಡಿದರು ಮತ್ತು ಕೆಎಲ್‌ಎಸ್ ಇಂತಹ ಉತ್ಕೃಷ್ಟ ಕೇಂದ್ರವನ್ನು ನಡೆಸಲು ಉತ್ಸುಕವಾಗಿದೆ ಎಂದು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ತಿಳಿಸಿದರು .

ಆಸ್ಟ್ರೋಫಿಸಿಕ್ಸ್ ವಿಭಾಗದ ಸಂಯೋಜಕ ಡಾ.ಚೇತನ ಕೊಟಬಾಗಿ ಗಣ್ಯರನ್ನು ಸ್ವಾಗತಿಸಿದರು. ಕೆಎಲ್‌ಎಸ್‌ ಜಿಐಟಿ ಪ್ರಾಂಶುಪಾಲರಾದ  ಪ್ರೊ.ಡಿ.ಎ.ಕುಲಕರ್ಣಿ , ನೆರೆದ ಎಲ್ಲ ಗಣ್ಯರನ್ನು ವಂದಿಸಿದರು. ಕಾರ್ಯಕ್ರಮವನ್ನು ಪ್ರೊ. ಪ್ರಾಜಕ್ತ ಪಾಟೀಲ್  ನಿರ್ವಹಿಸಿದರು.

ಕೆಎಲ್‌ಎಸ್‌ನ ಎಲ್ಲ ಸದಸ್ಯರು ,ಖಗೋಳವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನಾ ಚಟುವಟಿಕೆಗಳನ್ನು ಕರ್ನಾಟಕದ ಈ ಭಾಗದಲ್ಲಿ,  ವಿಶಿಷ್ಟವಾದ ಖಗೋಳ ಭೌತಶಾಸ್ತ್ರ ಕೇಂದ್ರ  ಸ್ಥಾಪಿಸುವ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button