Kannada NewsKarnataka NewsUncategorized

ರಾಣಿಚನ್ನಮ್ಮ ವಿಶ್ವವಿದ್ಯಾಲಯದ ೧೧ನೇ ವಾರ್ಷಿಕ ಘಟಿಕೋತ್ಸವ ಮಾ.೨೦ ರಂದು



ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೧೧ ನೇ ಘಟಿಕೋತ್ಸವ ಸೋಮವಾರ (ಮಾ.೨೦) ರಂದು ಮುಂಜಾನೆ ೧೧ ಗಂಟೆಗೆ ಸುವರ್ಣ ವಿಧಾನ ಸೌಧದ ಸಭಾಂಗಣದಲ್ಲಿ ಆಯೋಜಿಸಲಾಗಿದ್ದು, ಘಟಿಕೋತ್ಸವದಲ್ಲಿ ಒಟ್ಟು ೪೭,೧೮೫ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಳ್ಳಲಿದ್ದಾರೆ. ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ ೧೧ ಸ್ವರ್ಣ ಪದಕಗಳನ್ನು ನೀಡಲಾಗುವುದು. ೨೭ ಪಿಹೆಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೋ. ರಾಮಚಂದ್ರಗೌಡ ಅವರು ತಿಳಿಸಿದರು.
ನಗರದ ವಾರ್ತಾ ಭವನದಲ್ಲಿ ಶನಿವಾರ(ಮಾ.೧೮) ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ೧೧ ನೇ ಘಟಿಕೋತ್ಸವದ ಕುರಿತು ಪತ್ರಿಕಾಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ರಾಜ್ಯದ ಗೌರವಾನ್ವಿತ ಕುಲಾಧಿಪತಿಗಳು ಹಾಗೂ ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೋಟ್ ಅವರು ವಹಿಸಲಿದ್ದಾರೆ. ಸಹಕುಲಾಧಿಪತಿಗಳು ಹಾಗೂ ಉನ್ನತ ಶಿಕ್ಷಣ, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಕೌಶಲ್ಯಾಭಿವೃದ್ಧಿ ಸಚಿವರಾದ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಉಪಸ್ಥಿತರಿರುವರು. ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತು ಉಪಾಧ್ಯಕ್ಷರಾದ ಪ್ರೊ. ಬಿ. ತಿಮ್ಮೇಗೌಡ ಘಟಿಕೋತ್ಸವ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ವ್ಯಾಪ್ತಿ ಮತ್ತು ಗಾತ್ರದಲ್ಲಿ ರಾಜ್ಯದಲ್ಲಿಯೇ ಮಹತ್ವ ಸ್ಥಾನವನ್ನು ಪಡೆದುಕೊಂಡಿದೆ. ವಿಶ್ವವಿದ್ಯಾಲಯವು ಕಳೆದ ವರ್ಷ ನ್ಯಾಕ್ ಮನ್ನಣೆಯಲ್ಲಿ ಉನ್ನತ ಶ್ರೇಣಿಯನ್ನು ಪಡೆದುಕೊಂಡಿದೆ. ಇ-ಆಡಳಿತ ವ್ಯವಸ್ಥೆ ಜಾರಿಯಲ್ಲ್ಲಿ ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿ-೨೦೨೦ನ್ನು ಕಳೆದೆರಡು ವರ್ಷಗಳಿಂದ ಅನುಷ್ಠಾನಗೊಳಿಸಿದೆ ಎಂದು ಹೇಳಿದರು.
ವಿಶ್ವವಿದ್ಯಾಲಯಕ್ಕೆ ಬೆಳಗಾವಿ, ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ೪೧೯ ಮಹಾವಿದ್ಯಾಲಯಗಳು ವಿಶ್ವವಿದ್ಯಾಲಯದ ಅಧೀನದಲ್ಲಿ ಸಂಯೋಜನೆಗೊಂಡಿವೆ. ಸುಮಾರು ೧.೫೦ ಲಕ್ಷ ವಿದ್ಯಾರ್ಥಿಗಳು ಅಧ್ಯಯನ ಮಾಡುತ್ತಿದ್ದಾರೆ. ವಿಜಯಪುರ ಮತ್ತು ಜಮಖಂಡಿಯಲ್ಲಿ ಸ್ನಾತಕೋತ್ತರ ಕೇಂದ್ರಗಳನ್ನು, ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆಘಟಕ ಮಹಾವಿದ್ಯಾಲಯವನ್ನು ವಿಶ್ವವಿದ್ಯಾಲಯವು ಹೊಂದಿದ್ದು, ಅಲ್ಲದೆ ೪೯ ಕಾಲೇಜುಗಳಲ್ಲಿ ಸ್ನಾತಕೋತ್ತರ ಕೇಂದ್ರಗಳಲ್ಲಿ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಲಾಗಿದೆ.
೨೨ ವಿಷಯಗಳಲ್ಲಿ ಸ್ನಾತಕೋತ್ತರ ಕೋರ್ಸ್‌ನಲ್ಲಿ ೨೫೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉನ್ನತ ಅಧ್ಯಯನ ನಡೆಸುತ್ತಿದ್ದಾರೆ.೬೬೫ಕ್ಕಿಂತ ಹೆಚ್ಚು ಸಂಶೋಧನಾರ್ಥಿಗಳಿಂದ ಹಲವಾರು ವಿಷಯಗಳಲ್ಲ್ಲಿ ಪಿಎಚ್.ಡಿ ಸಂಶೋಧನೆಗಳು ನಿರಂತರವಾಗಿ ನಡೆಯುತ್ತಿವೆ. ವಿಶ್ವವಿದ್ಯಾಲಯವು ವಿವಿಧ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿಕೊಳ್ಳುತ್ತ ಜ್ಞಾನಮುಖಿ, ಸಮಾಜಮುಖಿ, ಉದ್ಯೋಗಮುಖಿ ಚಿಂತನೆಗಳನ್ನು ಯಶಸ್ವಿಯಾಗಿ ಕಾರ್ಯರೂಪಕ್ಕೆ ತರುವುದರೊಂದಿಗೆ ಶೈಕ್ಷಣಿಕವಾಗಿ ರಾಣಿಚನ್ನಮ್ಮ ವಿಶ್ವವಿದ್ಯಾಲಯವು ಗುಣಾತ್ಮಕವಾಗಿ ಬೆಳೆದು ನಿಂತಿದೆ.
ಇದುವರೆಗೆ ಭೂತರಾಮನಹಟ್ಟಿಯ ಬಳಿ ಇರುವ ೧೬೯.೦೨ ಎಕರೆ ಜಮೀನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಹಸ್ತಾಂತರವಾಗದೇ ನೆನಗುದಿಗೆ ಬಿದ್ದಿರುವ ಹಿನ್ನೆಲೆಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿದ್ದವು. ಈ ಸಂದರ್ಭದಲ್ಲಿ ಕರ್ನಾಟಕ ಘನ ಸರ್ಕಾರದ ಮಂತ್ರಿಮಂಡಳವು ಹಿರೇಬಾಗೇವಾಡಿಯ ಮಲ್ಲಪ್ಪನಗುಡ್ಡದ ಬಳಿ ೧೨೬ಎಕರೆ ೨೭ ಗುಂಟೆ ನೀಡಿರುವ ಜಮೀನಿನಲ್ಲಿ ಈಗಾಗಲೇ ಕಂಪೌಂಡ್ ಗೋಡೆಯ ನಿರ್ಮಾಣ ಪೂರ್ಣ ಗೊಂಡಿದ್ದು ಕಟ್ಟಡದ ನಿರ್ಮಾಣ ಕಾರ್ಯವು ತೀವ್ರ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯವಾಗಿ ಸೇವೆ ಸಲ್ಲಿಸಿದ ಗಣ್ಯರಿಗೆ ಗೌರವಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು. ಅವರುಗಳೆಂದರೆ ದಿ. ಸುರೇಶ್ ಸಿ.ಅಂಗಡಿ ಇವರು ಸಲ್ಲಿಸಿದ ಗಣನೀಯ ಸೇವೆಗೆ ಸಮಾಜ ಸೇವಾಕ್ಷೇತ್ರಕ್ಕೆ ಮರಣೋತ್ತರವಾಗಿ ನೀಡಲಾಗುವುದು ಹಾಗೂ ನಾಡಿನ ಹಿರಿಯ ವಿದ್ವಾಂಸರು ಹಾಗೂ ಶ್ರೇಷ್ಠ ಸಾಹಿತಿಗಳಾದ ಪ್ರೊ. ಮಲ್ಲೆಪುರಂ ಜಿ. ವೆಂಕಟೇಶ ಅವರು ಸಾಹಿತ್ಯಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಇವರಿಗೆ ಸಾಹಿತ್ಯ ಕ್ಷೇತ್ರಕ್ಕೆ ಗೌರವ ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಲಾಗುವುದು.
ಸದರಿ ಘಟಿಕೋತ್ಸವದಲ್ಲಿ ಒಟ್ಟು ೪೭,೧೮೫ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳು ಪದವಿಯನ್ನು ಪಡೆದುಕೊಳ್ಳಲು ಅರ್ಹರಾಗಿದ್ದಾರೆ .ಜೊತೆಗೆ ೧೧ ಸ್ವರ್ಣ ಪದಕಗಳನ್ನು ಸ್ನಾತಕೋತ್ತರ ಹಾಗೂ ಸ್ನಾತಕ ವಿದ್ಯಾರ್ಥಿಗಳಿಗೆ ನೀಡಲಾಗುವುದು. ೨೭ ಪಿಹೆಚ್.ಡಿ. ಪದವಿಗಳನ್ನು ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.
ಕುಲಸಚಿವರಾದ ರಾಜೇಶ್ವರಿ ಜೈನಾಪುರಿ, ಮೌಲ್ಯಮಾಪನ ಕುಲಸಚಿವರಾದ ಪ್ರೋ. ಶಿವಾನಂದ ಗೋರನಾಳೆ, ಹಣಕಾಸು ಅಧಿಕಾರಿ ಎಸ್.ಬಿ ಆಕಾಶ, ಪ್ರೋ. ಚಂದ್ರಕಾಂತ ವಾಘಮೋರೆ ಪತ್ರಿಕಾಗೋಷ್ಟಿಯಲ್ಲಿ ಉಪಸ್ತಿತರಿದ್ದರು.

https://pragati.taskdun.com/journalists-are-the-reason-why-rani-channamma-university-is-not-developed/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button