ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸಾಧನೆ ಮಾಡುತ್ತಿರುವ ಮಹಿಳೆ ಸಬಲೆಯೇ ಹೊರತು ಅಬಲೆಯಲ್ಲ. ಮಹಿಳೆಯರು ಯಾವುದೇ ಕಾರಣಕ್ಕೂ ಅಸ್ತಿತ್ವ ಕಳೆದುಕೊಳ್ಳದೆ ಸ್ವಾಭಿಮಾನದಿಂದ ಬದುಕಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಕಾಕತಿ ಗ್ರಾಮದಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಮಹಿಳಾ ಸ್ವ-ಸಹಾಯ ಸಂಘ ವತಿಯಿಂದ ಹಮ್ಮಿಕೊಂಡ ವಿಶ್ವ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿ, ಗ್ರಾಮೀಣ ಮಹಿಳೆಯರು ಸರ್ಕಾರದ ಸವಲತ್ತು ಸದ್ಬಳಕೆ ಮಾಡಿಕೊಂಡು ಸಮಾಜದ ಮುಖ್ಯವಾಹಿನಿಗೆ ಬರಬೇಕು ಎಂದು ಸಲಹೆ ನೀಡಿದರು.
ಸರ್ಕಾರ ಗ್ರಾಮೀಣ ಮಹಿಳೆಯರಿಗೆ ಮತ್ತಷ್ಟು ಕಾರ್ಯಕ್ರಮಗಳನ್ನು ರೂಪಿಸಬೇಕು. ಮಹಿಳೆಯು ನಾಲ್ಕು ಗೋಡೆಗಳ ಮಧ್ಯೆ ಕುಟುಂಬ ನಿರ್ವಹಣೆಗಷ್ಟೇ ಸೀಮಿತವೆಂಬ ಕಾಲ ಬದಲಾಗಿದೆ. ಮಹಿಳೆಯರು ಈಗ ಪುರುಷರಿಗೆ ಸರಿ ಸಮಾನ. ಮಹಿಳೆಯರು ಸ್ವಯಂ ಉದ್ಯೋಗದ ಮೂಲಕ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಬಲರಾಗಬೇಕು. ಉನ್ನತ ಸ್ಥಾನ ಅಲಂಕರಿಸಿ ಪುರುಷರಿಗೆ ಸಮನಾಗಿ ಬೆಳೆಯಬೇಕು ಎಂದು ತಿಳಿ ಹೇಳಿದರು.
ಮಹಿಳಾ ಸಬಲೀಕರಣ ಎಂದರೆ ಮಹಿಳೆಯರ ಸುರಕ್ಷತೆಗೆ ಒತ್ತು ನೀಡುವುದಾಗಿದೆ. ಮಹಿಳೆಯರ ಮೇಲೆ ಸಮಾಜದಲ್ಲಿ ನಡೆಯುವ ದೌರ್ಜನ್ಯದ ಬಗ್ಗೆ ಅರಿವು ಮೂಡಿಸಿ ಧೈರ್ಯ ತುಂಬಿ ಸ್ವಾವಲಂಬಿಗಳಾಗಿಸಬೇಕು. ವೇದಗಳ ಕಾಲದಲ್ಲೂ ಮಹಿಳೆಯರಿಗೆ ಸಮಾನ ಅವಕಾಶಗಳಿದ್ದವು. ಮಹಿಳೆಯರನ್ನು ಕುಟುಂಬಕ್ಕೆ ಸೀಮಿತಗೊಳಿಸದೆ ಎಲ್ಲಾ ಕ್ಷೇತ್ರದಲ್ಲೂ ಭಾಗವಹಿಸುವಂತೆ ಅವಕಾಶ ಕಲ್ಪಿಸಬೇಕು ಎಂದರು.
ಸಮಾನ ಅವಕಾಶ: ಸಮಾಜ ಸುಧಾರಕರು, ಮಹನೀಯರ ಹೋರಾಟ, ತ್ಯಾಗ ಬಲಿದಾನದಿಂದ ಮಹಿಳೆಯರಿಗೆ ಇಂದು ಸಮಾಜದಲ್ಲಿ ಪುರುಷರಷ್ಟೇ ಸಮಾನ ಅವಕಾಶ ದೊರೆತಿವೆ. ಮಹಿಳೆಯರು ಎಲ್ಲಾ ಅಡೆತಡೆ ಮೀರಿ ಎಲ್ಲಾ ರಂಗದಲ್ಲೂ ಸ್ಪರ್ಧೆ ನೀಡುತ್ತಿದ್ದಾರೆ. ಮಹಿಳೆಯರಿಗೆ ರಾಜಕೀಯವಾಗಿ ಮತ್ತು ಸಾಮಾಜಿಕವಾಗಿ ಹೆಚ್ಚಿನ ಪ್ರಾತಿನಿಧ್ಯ ಸಿಗಬೇಕು ಎಂದು ಹೇಳಿದರು.
ಇದೇ ವೇಳೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರನ್ನು ವೇದಿಕೆ ಮೇಲಿದ್ದ ಗಣ್ಯರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಯುವ ನಾಯಕ ರಾಹುಲ್ ಜಾರಕಿಹೊಳಿ, ಜಿಪಂ ಮಾಜಿ ಸದಸ್ಯ ಸಿದ್ದು ಸುಣಗಾರ ಸೇರಿದಂತೆ ಕಾಕತಿ ಗ್ರಾಮದ ಮುಖಂಡರು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ