ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: 5 ಹಾಗೂ 8ನೇ ತರಗತಿ ಬೋರ್ಡ್ ಪರೀಕ್ಷೆ ವಿಚಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಮಾರ್ಚ್ 27ರಂದು ಪರೀಕ್ಷೆ ನಿಗದಿ ಮಾಡಿ ಆದೇಶ ಹೊರಡಿಸಿದ್ದ ಹೈಕೋರ್ಟ್ ಆದೇಶ ಪ್ರಶ್ನಿಸಿ ಅನುದಾನರಹಿತ ಶಾಲೆಗಳ ಸಂಘಟನೆಗಳು ಸುಪ್ರೀಂಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಿವೆ.
5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಮಾರ್ಚ್ 13ರಕ್ಕೆ ನಿಗದಿ ಮಾಡಿ ಶಿಕ್ಷಣ ಇಲಾಖೆ ಆದೇಶ ಹೊರಡಿಸಿತ್ತು. ಶಿಕ್ಷಣ ಇಲಾಖೆ ಕ್ರಮ ಪ್ರಶ್ನಿಸಿ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ಪ್ರಸಕ್ತ ಶೈಕ್ಷಣಿಕ ವರ್ಷ ರದ್ದು ಮಾಡಿ ಆದೇಶ ಹೊರಡಿಸಿತ್ತು. ಏಕಸದಸ್ಯಪೀಠದ ಆದೇಶ ಪ್ರಶ್ನಿಸಿ ಶಿಕ್ಷಣ ಇಲಾಖೆ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆಯನ್ನು ನಡೆಸಬಹುದು. ಮಾರ್ಚ್ 27ರಿಂದ ಪರೀಕ್ಷೆ ಆರಂಭಿಸುವಂತೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ವೇಳಾಪಟ್ಟಿ ಪ್ರಕಟಿಸಿ ಮಾರ್ಚ್ 27ರಿಂದ ಏಪ್ರಿಲ್ 1ರವರೆಗೆ ಬೋರ್ಡ್ ಪರೀಕ್ಷೆ ನಿಗದಿ ಮಾಡಿತ್ತು.
ಇದೀಗ ಖಾಸಗಿಶಾಲೆಗಳ ಸಂಘಟನೆಗಳು ಹೈಕೋರ್ಟ್ ಆದೇಶಕ್ಕೆ ತಡೆ ನೀಡುವಂತೆ ಕೋರಿ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿವೆ. ಅರ್ಜಿ ವಿಚರಣೆ ಕೈಗೆತ್ತಿಕೊಂಡಿರುವ ಸುಪ್ರೀಂ ಕೋರ್ಟ್ ಮಾರ್ಚ್ 27ರಂದು ವಿಚಾರಣೆ ನಡೆಸುವುದಾಗಿ ತಿಳಿಸಿದೆ. ಆದರೆ ಅಂದೇ ಪರೀಕ್ಷೆಯೂ ನಿಗದಿಯಾಗಿರುವುದರಿಂದ ತುರ್ತಾಗಿ ಅರ್ಜಿ ವಿಚಾರಣೆ ನಡೆಸುವಂತೆ ಶಾಲೆಗಳ ಪರ ವಕೀಲರು ನ್ಯಾಯಾಲಕ್ಕೆ ಮನವಿ ಮಾಡಿದ್ದಾರೆ. ಹಾಗಾಗಿ 5 ಹಾಗೂ 8ನೇ ತರಗತಿಯ ಬೋರ್ಡ್ ಪರೀಕ್ಷೆ ವಿಚಾರ ಮತ್ತೆ ಗೊಂದಲಕ್ಕೆ ಕಾರಣವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ