Latest

ಅಮೃತ ನಗರೋತ್ಥಾನ ಯೋಜನೆ; ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಚಿವೆ ಶಶಿಕಲಾ ಜೊಲ್ಲೆ ಮತ್ತು ಸಂಸದ ಅಣ್ಣಾಸಾಹೇಬ ಜೊಲ್ಲೆ

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ʼನಗರದಲ್ಲಿ ನನ್ನ ಆಡಳಿತಾವಧಿಯಲ್ಲಿ ಇಲ್ಲಿಯವರೆಗೆ(ಇಂದಿನವುಗಳನ್ನು ಹೊರತುಪಡಿಸಿ) ೪೧೭ ಕೋಟಿ ರೂ. ಅನುದಾನದಲ್ಲಿ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಂಡು ಸುಂದರ ನಗರವನ್ನಾಗಿ ಮಾರ್ಪಡಿಸಲು ಪ್ರಯತ್ನಿಸುತ್ತಿದ್ದೇವೆ. ಸ್ಮಾರ್ಟ್‌ ಸಿಟಿ-ಸ್ಮಾರ್ಟ್‌ ನಿಪ್ಪಾಣಿಗೆ ನಮ್ಮ ಆದ್ಯತೆ, ಕನಸಾಗಿದೆʼ ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

ಸ್ಥಳೀಯ ನಗರಸಭೆ ಎದುರು ಸೋಮವಾರ ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಹಂತ ೪ರ ಯೋಜನೆಯಡಿ ರೂ.೧೧.೬೦ ಕೋಟಿ ರೂ. ಅನುದಾನದಲ್ಲಿ ರಸ್ತೆ ಮತ್ತು ಚರಂಡಿ ಕಾಮಗಾರಿಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು. ʼ ಸ್ಥಳೀಯ ಸರಲಾಬಾಯಿ ಹೆರಿಗೆ ಆಸ್ಪತ್ರೆ ೨೦೧೩ರಿಂದ ಮುಚ್ಚಲ್ಪಟ್ಟಿತ್ತು. ಅದು ಪುನರಾರಂಭಿಸಲು ಪ್ರಯತ್ನಪಟ್ಟರೂ ಅದು ಸಾಧ್ಯವಾಗಲಿಲ್ಲ. ಕೊನೆಗೆ ಜೊಲ್ಲೆ ಗ್ರುಪ್‌ ಅಡಿಯಲ್ಲಿ ಆರಂಭಿಸಿದ್ದು ಅಪಾರ ಜನರು ಅದರ ಪ್ರಯೋಜನ ಪಡೆದಿದ್ದಾರೆ. ಒಂದು ವರ್ಷದಲ್ಲಿ ಸುಮಾರು ೧೬ ಸಾವಿರ ರೋಗಿಗಳು ತಪಾಸಣೆ ಮಾಡಿಕೊಂಡಿದ್ದಾರೆ. ೮೦ ಉಚಿತ ಹೆರಿಗೆಗಳಾಗಿವೆ. ಇದು ನಮಗೆ ಹರ್ಷ ತಂದಿದೆʼ ಎಂದರು.


ʼ ೩.೧೦ ಕೋಟಿ ರೂ. ಅನುದಾನದಲ್ಲಿ ನಗರದಲ್ಲಿ ಈಜುಕೊಳ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿ ಚಾಲನೆ ನೀಡಲಾಗುವುದು. ಕೆಲವೇ ದಿನಗಳಲ್ಲಿ ನಗರಕ್ಕೆ ಆಗಮಿಸಲಿರುವ ಯುದ್ಧವಿಮಾನಕ್ಕಾಗಿ ಜಾಗ ಕಲ್ಪಿಸಲಾಗಿದ್ದು ಅಲ್ಲಿ ಶಿವಾಜಿ ಉದ್ಯಾನವನ ನಿರ್ಮಿಸಲಾಗುವುದು. ವಾರ ಮ್ಯೂಜಿಯಂ ನಿರ್ಮಾಣಕ್ಕೆ ೨.೫ ಕೋಟಿ ಅನುದಾನ ಮಂಜೂರು ಮಾಡಿಸಿಕೊಂಡು ಬರಲಾಗಿದೆʼ ಎಂದರು.


ʼ ಎಪಿಎಂಸಿ ಜಾಗದಲ್ಲಿ ಮಿನಿವಿಧಾನಸೌಧ ನಿರ್ಮಾಣಕ್ಕೆ ೫ ಎಕರೆ ಜಾಗ ಕಲ್ಪಿಸಿಕೊಡಲಾಗಿದೆ. ಅದಕ್ಕಾಗಿ ೧.೦೮ ಕೋಟಿ ರೂ. ಅನುದಾನ ಮಂಜೂರಾಗಿದೆ. ಮಿನಿವಿಧಾನಸೌಧ ೨೦ ಕೋಟಿ ರೂ. ಅನುದಾನ ಮಂಜೂರಾಗಿದೆ. ತಾಲೂಕುಮಟ್ಟದ ಎಲ್ಲ ಕಛೇರಿಗಳನ್ನು ಒಂದೆಡೆ ತರಲಾಗುವುದುʼ ಎಂದರು.

ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ʼಎಲ್ಲೆಲ್ಲಿ ರಸ್ತೆ ಸುಧಾರಣೆ ಕಾಮಗಾರಿಗಳು ಆಗಬೇಕಿತ್ತೊ ಅಲ್ಲಲ್ಲಿ ಎಲ್ಲ ಕಾಮಗಾರಿಗಳು ಆರಂಭಗೊಂಡಿವೆ. ಮೂಲಭೂತ ಸೌಕರ್ಯಗಳು ಅವಶ್ಯವಿರುವ ಎಲ್ಲ ವಾರ್ಡ್‌ಗಳಲ್ಲಿ ೧೧.೬೦ ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳು ನಡೆಯಲಿವೆ. ಈ ಕಾಮಗಾರಿಗಳು ತಾಂತ್ರಿಕ ಕಾರಣಗಳಿಂದ ವಿಳಂಬಗೊಂಡಿದ್ದವು. ನಿರಂತರ ಕುಡಿಯುವ ನೀರಿನ ಯೋಜನೆ ೨೦೧೨ರಲ್ಲಿ ಆರಂಭಗೊಂಡಿದೆ. ಆಗ ತಯಾರಿಸಿದ ಕ್ರಿಯಾಯೋಜನೆಯಲ್ಲಿ ಕೇವಲ ೬೨೫೦ ನಲ್ಲಿಗಳನ್ನು ತೋರಿಸಲಾಗಿತ್ತು. ಆದರೆ ಪ್ರತ್ಯಕ್ಷವಾಗಿ ಈಗ ಅವುಗಳ ಸಂಖ್ಯೆ ೧೫ ಸಾವಿರ ತಲುಪಿದೆ. ಈ ತಾಂತ್ರಿಕ ಅಡಚಣೆಯಿಂದ ನೀರಿನ ಯೋಜನೆಗೆ ವಿಳಂಬವಾಗುತ್ತಿದೆ. ಇದು ಗೊತ್ತಿದ್ದೂ ಕೆಲವರು ತಾವು ಮಾಡಿದ ತಪ್ಪನ್ನು ಮುಚ್ಚಲು ಇದನ್ನು ಎತ್ತಿ ಹಿಡಿಯುತ್ತಿದ್ದಾರೆ. ಇನ್ನೂ ಸ್ವಲ್ಪ ವಿಳಂಬವಾಗಬಹುದು. ಆದರೆ ಅದನ್ನು ಸರಿಪಡಿಸಿ ನೀರಿನ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದು. ನಾಗರಿಕರಿಗೆ ಯಾವುದೇ ತೊಂದರೆಯಾಗದಂತೆ, ಅವರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಲಾಗುತ್ತಿದೆʼ ಎಂದರು.

ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ ʼಜೊಲ್ಲೆ ದಂಪತಿ ತಮ್ಮ ಕಾರ್ಯವನ್ನು ಮಾಡಿದ್ದಾರೆ. ನಾವೆಲ್ಲರೂ ಸೇರಿ ಈಗ ನಮ್ಮ ಕಾರ್ಯ ಮಾಡಬೇಕಿದೆ. ಮಹಾಭಾರತದಲ್ಲಿ ಅರ್ಜುನ ಬಿಲ್ಲುಬಾಣದಿಂದ ಗುರಿಯಿಟ್ಟಾಗ ಹಕ್ಕಿಯ ಕಣ್ಣು ಮಾತ್ರ ಅವನಿಗೆ ಕಾಣುತ್ತಿತ್ತು. ಹಾಗೆಯೇ ಬರುವ ಚುನಾವಣಾ ಅಖಾಡದಲ್ಲಿ ಕೇವಲ ಸಚಿವೆ ಶಶಿಕಲಾ ಜೊಲ್ಲೆಯವರ ಗೆಲುವಿನತ್ತ ಚಿತ್ತ ನಮಗೆಲ್ಲರಿಗೂ ಸಹ ಇರಬೇಕು. ಅವರಿಗೆ ಅತ್ಯಧಿಕ ಮತಗಳಿಂದ ಗೆಲ್ಲಿಸೋಣʼ ಎಂದರು.


ಖಾನಾಪೂರದ ಮಾಜಿ ಶಾಸಕ ಅರವಿಂದ ಪಾಟೀಲ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ನಗರ ಯೋಜನಾ ಪ್ರಾಧಿಕಾರದ ಕಾರ್ಯಾಧ್ಯಕ್ಷ ಅಭಯ ಮಾನವಿ, ನರೇಂದ್ರ ಬಾಡಕರ, ಮಧ್ಯವರ್ತಿ ಆಟೋರಿಕ್ಷಾ ಚಾಲಕ-ಮಾಲೀಕರ ಸಂಘದ ಸದಸ್ಯ ವಿಜಯ ಕಾಂಬಳೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳಲ್ಲಿಯ ಫಲಾನುಭವಿಗಳಿಗೆ ಚೆಕ್‌ ಹಾಗೂ ಸಾಹಿತ್ಯಗಳನ್ನು ಸಚಿವೆ ಜೊಲ್ಲೆ, ಸಂಸದ ಜೊಲ್ಲೆ ಹಾಗೂ ಗಣ್ಯರು ವಿತರಿಸಿದರು.


ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ನೀತಾ ಬಾಗಡೆ, ಮಾಜಿ ಅಧ್ಯಕ್ಷ ಪ್ರವೀಣ ಭಾಟಲೆ, ಭರತ ಚವಾಣ, ನಗರಸಭೆ ಸದಸ್ಯರು, ಸುರೇಶ

ಶೆಟ್ಟಿ, ಆರ್‌.ವೈ. ಪಾಟೀಲ, ಮೊದಲಾದವರು ಸೇರಿದಂತೆ ಫಲಾನುಭವಿಗಳು, ನಾಗರಿಕರು ಉಪಸ್ಥಿತರಿದ್ದರು. ಪೌರಾಯುಕ್ತ ಜಗದೀಶ ಹುಲಗೆಜ್ಜಿ ಸ್ವಾಗತಿಸಿದರು. ರಮೇಶ ಪಾಟೀಲ ಮತ್ತು ಸಾಗರ ಮಿರ್ಜೆ ಕಾರ್ಯಕ್ರಮ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button