ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:
ಆಟೋಗಳಲ್ಲಿ 8 ಮಕ್ಕಳನ್ನು ಹಾಕಲು ಅನುಮತಿ ನೀಡಿಲ್ಲ. ನ್ಯಾಯಾಲಯದ ಆದೇಶದಂತೆ ಕೇವಲ 6 ಮಕ್ಕಳನ್ನು ಒಯ್ಯಬಹುದು. ಆದರೆ ಕೆಲವು ಆಟೋಚಾಲಕರು 8 ಮಕ್ಕಳನ್ನು ಒಯ್ಯಲು ಪೊಲೀಸರು ಅನುಮತಿ ನೀಡಿದ್ದಾರೆಂದು ಸುಳ್ಳು ಹೇಳುತ್ತಿದ್ದಾರೆ. ಇದನ್ನು ನಂಬಬಾರದು ಎಂದು ಪೊಲೀಸ್ ಆಯುಕ್ತರು ಕೋರಿದ್ದಾರೆ.
ಈ ಕುರಿತು ಅವರು ಪ್ರಕಟಣೆ ಹೊರಡಿಸಿದ್ದಾರೆ. ಅದರ ಪೂರ್ಣ ವಿವರ ಹೀಗಿದೆ:
ಬೆಳಗಾವಿ ನಗರದಲ್ಲಿ ಸಾರ್ವಜನಿಕರು ಮತ್ತು ಶಾಲಾ ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಸರಕು ಸಾಗಾಣಿಕೆ ವಾಹನಗಳಲ್ಲಿ ಸಾರ್ವಜನಿಕರು ಹಾಗೂ ಕಾರ್ಮಿಕರ ಸಾಗಾಣಿಕೆ ನಿಷೇಧ ಮತ್ತು ಅಟೋ ರಿಕ್ಷಾಗಳಲ್ಲಿ ನಿಯಮಾನುಸಾರ ನಿಗಧಿಗಿಂತ ಅತಿ ಹೆಚ್ಚಿನ ಪ್ರಮಾಣದಲ್ಲಿ ಶಾಲಾ ಮಕ್ಕಳನ್ನು ಸಾಗಾಟ ಮಾಡುತ್ತಿರುವ ಕುರಿತು ವಿಶೇಷ ಜಂಟಿ ಕಾರ್ಯಾಚರಣೆಯನ್ನು ಜೂನ್ 28 ರಂದು ಪ್ರಾರಂಭಿಸಿ ತಪ್ಪಿತಸ್ಥ ವಾಹನ ಚಾಲಕ/ಮಾಲೀಕರುಗಳ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಪ್ರಕರಣಗಳನ್ನು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.
ಆದರೆ ಶಾಲಾ ಮಕ್ಕಳನ್ನು ಸಾಗಿಸುವ ಅಟೋರಿಕ್ಷಾ ಚಾಲಕರು ಇದನ್ನು ವಿರೋಧಿಸಿ ಬೆಳಗಾವಿ ನಗರದಲ್ಲಿ ಇಲ್ಲಿಯವರೆಗೆ ಬಂದ್ ಘೋಷಿಸಿ ತಮ್ಮ ಅಟೋ ರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಒಯ್ಯುವುದನ್ನು ನಿರಾಕರಿಸುತ್ತಿದ್ದು, ಈ ದಿನ ಕೆಲವು ಪಾಲಕರು ಮತ್ತು ಅಟೋ ಚಾಲಕರು ಪೊಲೀಸ್ ಆಯುಕ್ತರ ಕಛೇರಿಗೆ ಬಂದು ಕನಿಷ್ಟ ೮ ಮಕ್ಕಳನ್ನು ಅಟೋರಿಕ್ಷಾಗಳಲ್ಲಿ ಸಾಗಿಸಲು ಅನುಮತಿ ನೀಡಬೇಕೆಂದು ಕೇಳಿಕೊಂಡಿರುತ್ತಾರೆ.
ಆದರೆ ಉಚ್ಛ ನ್ಯಾಯಾಲಯದ ಆದೇಶದ ಬಗ್ಗೆ ಅವರಿಗೆ ತಿಳಿಹೇಳಿ ೬ಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸಲು ಅನುಮತಿ ನೀಡಿರುವುದಿಲ್ಲ, ಆದಾಗ್ಯೂ ೬ಕ್ಕಿಂತ ಹೆಚ್ಚಿನ ಮಕ್ಕಳನ್ನು ಸಾಗಿಸಿದಲ್ಲಿ ಅಂತಹ ಅಟೋ ಚಾಲಕರ ವಿರುದ್ಧ ನಿಯಮಾನುಸಾರ ಪ್ರಕರಣ ದಾಖಲಿಸಲಾಗುವುದೆಂದು ಅವರಿಗೆ ತಿಳಿಸಲಾಗಿದೆ.
ಆದರೆ ಕೆಲವು ಅಟೋ ಚಾಲಕರು ಮತ್ತೆ ಪೊಲೀಸ್ ಆಯುಕ್ತರ ಮಾತನ್ನು ತಿರುಚಿ ಒಂದು ಅಟೋರಿಕ್ಷಾದಲ್ಲಿ ೮ ಮಕ್ಕಳನ್ನು ಸಾಗಿಸಲು ಅನುಮತಿ ನೀಡಿದ್ದಾರೆಂದು ಎಲ್ಲ ಪಾಲಕರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿರುವುದಾಗಿ ತಿಳಿದು ಬಂದಿದೆ. ಈ ಕಛೇರಿಯಿಂದ ಅಂತಹ ಯಾವುದೇ ಅನುಮತಿ ನೀಡಿರುವುದಿಲ್ಲ. ರಿಕ್ಷಾ ಚಾಲಕರು ಆ ರೀತಿಯ ಸುಳ್ಳು ಮಾಹಿತಿಯನ್ನು ಹೇಳುತ್ತಿದ್ದಲ್ಲಿ ಸಾರ್ವಜನಿಕರು/ಪಾಲಕರು ಅದಕ್ಕೆ ಕಿವಿಗೊಡಬಾರದೆಂದು ಸ್ಪಷ್ಟವಾಗಿ ತಿಳಿಯಪಡಿಸುತ್ತೇವೆ.
ಸಾರ್ವಜನಿಕರ ಮತ್ತು ಮಕ್ಕಳ ಸುರಕ್ಷತೆಯ ಹಿತದೃಷ್ಟಿಯಿಂದ ಬೆಳಗಾವಿ ನಗರದಲ್ಲಿ ತಪ್ಪಿತಸ್ಥ ಅಟೋಚಾಲಕರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುತ್ತಿದ್ದು, ಅಟೋರಿಕ್ಷಾದಲ್ಲಿ ಶಾಲಾ ಮಕ್ಕಳನ್ನು ಕಳುಹಿಸುವ ನಗರದ ಎಲ್ಲ ಪಾಲಕರು ತಮ್ಮ ಮಕ್ಕಳ ಸುರಕ್ಷತಾ ವಿಷಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಲು ಕೋರಲಾಗಿದೆ.
ಈ ಮಧ್ಯೆ ಕೆಲವು ಆಟೋಚಾಲಕರು ಶುಕ್ರವಾರದಿಂದ ಶಾಲಾ ಮಕ್ಕಳನ್ನು ಕರೆದೊಯ್ಯುವುದಾಗಿ ಹೇಳುತ್ತಿದ್ದಾರೆ. 8 ಮಕ್ಕಳನ್ನು ಒಯ್ಯಲು ಅನುಮತಿ ಸಿಕ್ಕಿದೆ. ಹಾಗಾಗಿ ಶುಕ್ರವಾರದಿಂದ ಕಾರ್ಯ ಆರಂಭಿಸುತ್ತೇವೆ ಎನ್ನುತ್ತಿದ್ದಾರೆ. ಇದೀಗ ಪೊಲೀಸರು ಸ್ಪಷ್ಟನೆ ನೀಡಿರುವುದರಿಂದ ಗೊಂದಲ ಮುಂದುವರಿದಿದೆ.
ಮುಂದುವರೆದ ಕಾರ್ಯಾಚರಣೆ; ಒಟ್ಟು 245 ಪ್ರಕರಣ ದಾಖಲು:
ಬೆಳಗಾವಿ ನಗರದಲ್ಲಿ ಆಟೋರಿಕ್ಷಾ/ಬಸ್/ಮಿನಿ ಬಸ್‌ಗಳಲ್ಲಿ ಮಿತಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ಹಾಗೂ ಸರಕು ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸುವ ವಾಹನಗಳ ವಿರುದ್ಧ ಬೆಳಗಾವಿ ನಗರ ಪೊಲೀಸ ಅಧಿಕಾರಿ & ಸಿಬ್ಬಂದಿಯ ವಿಶೇಷ ಕಾರ್ಯಾಚರಣೆಯನ್ನು ಮುಂದುವರೆಸಿ ೧)ಮಿತಿಗಿಂತ ಹೆಚ್ಚು ಶಾಲಾ ಮಕ್ಕಳನ್ನು ಸಾಗಿಸುವ ೨)ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೩) ಬಸ್/ಇತರೆ ಸಾರಿಗೆ ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೪)ಅಟೋರಿಕ್ಷಾದಲ್ಲಿ ನಿಗದಿಗಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೫)ಭಾರಿವಾಹನಗಳಲ್ಲಿ ೫ ಕ್ಕಿಂತ ಹೆಚ್ಚಿನ ಪ್ರಯಾಣಿಕರನ್ನು ಸಾಗಿಸುವ ೬)ವಾಹನಗಳ ಮೇಲ್ಛಾವಣಿ ಮೇಲೆ ಪ್ರಯಾಣಿಕರನ್ನು ಸಾಗಿಸುವಂತಹ ತಪ್ಪಿತಸ್ಥ ವಾಹನ ಚಾಲಕರುಗಳ ವಿರುದ್ಧ ಮೋಟರ್ ವಾಹನ ಕಾಯ್ದೆಯಡಿ ೨೨೧ ಪ್ರಕರಣಗಳನ್ನು ದಾಖಲಿಸಿ ರೂ.೨೮,೭೦೦ ಹಾಗೂ ಇನ್ನಿತರ ಸಂಚಾರ ನಿಯಮ ಉಲ್ಲಂಘಿಸಿದವರ ವಿರುದ್ಧ ೨೪ ಪ್ರಕರಣಗಳನ್ನು ದಾಖಲಿಸಿ ರೂ.೨,೪೦೦, ಹೀಗೆ ತಪ್ಪಿತಸ್ಥ ವಾಹನ ಮಾಲೀಕ/ಚಾಲಕರ ವಿರುದ್ಧ ಒಟ್ಟು ೨೪೫ ಪ್ರಕರಣಗಳನ್ನು ದಾಖಲಿಸಿ ರೂ. ೩೧,೧೦೦ ದಂಡವನ್ನು ವಿಧಿಸಲಾಗಿದೆ.
(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲರಿಗೂ ಶೇರ್ ಮಾಡಿ. ಹೆಚ್ಚಿನ ಸುದ್ದಿಗಾಗಿ pragativahini.com ನೋಡಿ)
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ