ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಘೋಷಣೆ ವಿಚಾರ ರಾಜಕೀಯ ಪಕ್ಷಗಳ ನಾಯಕರ ವಾಕ್ಸಮರಕ್ಕೆ ವೇದಿಕೆಯಾಗಿದೆ. ಕಾಂಗ್ರೆಸ್ ನವರು ಈಗ ಭಿಕ್ಷುಕರಂತಾಗಿದ್ದಾರೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಆರ್.ಅಶೋಕ್, ಕಾಂಗ್ರೆಸ್ ನವರಿಗೆ ಬೇರೆ ಚಾಯ್ಸ್ ಇಲ್ಲ. ಅವರು ಭಿಕ್ಷುಕರಂತಾಗಿದ್ದಾರೆ. ಇಡೀ ದೇಶದಲ್ಲಿ ಯಾವುದೇ ಭಾಗದಲ್ಲಿಯೂ ಕಾಂಗ್ರೆಸ್ ಪಕ್ಷ ಇಲ್ಲದಂತಾಗಿದೆ. ಎಲ್ಲಾ ರಾಜ್ಯದ ಜನರು ಅವರನ್ನು ಓಡಿಸುತ್ತಿದ್ದಾರೆ. ಹಾಗಾಗಿ ಅವರು ಓಡಲು ಶುರುಮಾಡಿದ್ದಾರೆ ಎಂದು ವ್ಯಂಗ್ಯವಾಡಿದರು.
ಮುಸ್ಲಿಂರ ಮೀಸಲಾತಿಯನ್ನು ಒಕ್ಕಲಿಗರಿಗೆ, ಲಿಂಗಾಯಿತರಿಗೆ ಹಂಚಿಕೆ ಮಾಡಿದ್ದಾರೆ. ಈ ಮೂಲಕ ಯಾರದ್ದೋ ಮೀಸಲಾತಿ ಕಿತ್ತು, ಇನ್ಯಾರಿಗೋ ನೀಡಿದ್ದಾರೆ ಎಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಆರ್.ಅಶೋಕ್, ಅದನ್ನೆಲ್ಲ ಕೇಳಲು ನೀವು ಯಾರು? ನಿಮ್ಮ ಸರ್ಕಾರ ಇದ್ದಾಗ ನೀವು ಯಾಕೆ ಮಾಡಿಲ್ಲ? ಕಾಂಗ್ರೆಸ್ ನವರಿಗೆ ಮುಸ್ಲಿಂರ ಬಗ್ಗೆ ಪ್ರೀತಿ ಹೆಚ್ಚು ಅದಕ್ಕೆ ಮಾತನಾಡುತ್ತಿದ್ದಾರೆ ಎಂದು ಗರಂ ಆದರು.
ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮೀಸಲಾತಿ ವಿಚಾರವಾಗಿ ಏನೂ ಕ್ರಮಗಳನ್ನು ಕೈಗೊಂಡಿಲ್ಲ. ಈಗ ನಮ್ಮ ಸರ್ಕಾರ ದಿಟ್ಟ ನಿಲುವು ತೆಗೆದುಕೊಂಡಿರುವುದಕ್ಕೆ ಅನಗತ್ಯ ಹೇಳಿಕೆ ಕೊಟ್ಟು ಜನರಲ್ಲಿ ಗೊಂದಲ ಸೃಷ್ಟಿಸುವುದು ಸರಿಯಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ