ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ ಜಿಲ್ಲೆಯ ಭಾರತೀಯ ಜನತಾ ಪಾರ್ಟಿಯಲ್ಲಿ ಸೋಮವಾರ ದೊಡ್ಡ ಸಂಚಲನ ಉಂಟಾಗುತ್ತಾ? ಜಿಲ್ಲೆಯ ರಾಜಕಾರಣದಲ್ಲಿ ಕುತೂಹಲ ಮೂಡಿದ್ದು, ಮಾ.27ರಂದು ಏನಾಗಲಿದೆ ಎನ್ನುವ ಪ್ರಶ್ನೆ ಎದ್ದಿದೆ.
ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಕಳೆದ ವಾರ ನೀಡಿದ ಹೇಳಿಕೆಯಿಂದ ಜಿಲ್ಲಾ ಬಿಜೆಪಿಯಲ್ಲಿ ಭಾರೀ ಬೆಳವಣಿಗೆಗಳು ನಡೆದಿವೆ. ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ ನನ್ನ ಮುಂದಿನ ನಿರ್ಧಾರವೇನು ಎನ್ನುವುದನ್ನು ಮಾ.27ರಂದು ತಿಳಿಸುತ್ತೇನೆ ಎಂದು ಲಕ್ಷ್ಮಣ ಸವದಿ ಹೇಳಿದ್ದರು. 27ರೊಳಗೆ ಎಲ್ಲ ಸಮುದಾಯಗಳ ಮುಖಂಡರೊಂದಿಗೆ ಚರ್ಚೆ ನಡೆಸಿ ನನ್ನ ನಿರ್ಧಾರ ಪ್ರಕಟಿಸುತ್ತೇನೆ ಎಂದು ಅವರು ಒಗಟಾಗಿ ಹೇಳಿದ್ದರು.
ನಂತರ ಈ ಬಗ್ಗೆ ಮಾಧ್ಯಮಗಳು ಪ್ರಶ್ನಿಸಿದಾಗ, ಚುನಾವಣೆಗೆ ನಿಲ್ಲಬೇಕೋ ಬೇಡವೋ, ವರಿಷ್ಠರ ಬಳಿ ಟಿಕೆಟ್ ಕೇಳಬೇಕೋ ಬೇಡವೋ ಎನ್ನುವುದನ್ನು 27ರಂದು ನಿರ್ಧರಿಸುತ್ತೇನೆ ಎನ್ನುವುದು ನನ್ನ ಹೇಳಿಕೆಯ ಅರ್ಥ ಎಂದು ಸಮಜಾಯಿಸಿ ನೀಡಿದ್ದರು.
ಆದರೆ ನಡೆಯುತ್ತಿರುವ ಬೆಳವಣಿಗೆಗಳನ್ನು ಹತ್ತಿರದಿಂದ ಬಲ್ಲವರು ಬೇರೆ ರೀತಿಯಲ್ಲೇ ಅರ್ಥೈಸಿದ್ದಾರೆ. ಲಕ್ಷ್ಮಣ ಸವದಿ ಈ ಬಾರಿ ವಿಧಾನ ಸಭೆ ಚುನಾವಣೆಗೆ ಅಥಣಿ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಬೇಕೆಂದು ನಿರ್ಧರಿಸಿದ್ದಾರೆ. ಆದರೆ ಅಥಣಿ ಕ್ಷೇತ್ರದಿಂದ ಮಹೇಶ ಕುಮಟಳ್ಳಿಗೆ ಟಿಕೆಟ್ ಕೊಡಬೇಕೆಂದು ಮಾಜಿ ಸಚಿವ ರಮೇಶ ಜಾರಕಿಹೊಳಿ ಪಟ್ಟು ಹಿಡಿದಿದ್ದಾರೆ. ಮಹೇಶ ಕುಮಟಳ್ಳಿಗೆ ಟಿಕೆಟ್ ನೀಡದಿದ್ದರೆ ತಾವೂ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದಿದ್ದಾರೆ. ಇಷ್ಟಕ್ಕೇ ನಿಲ್ಲದೆ, ಮಾಜಿ ಉಪಮುಖ್ಯಮಂತ್ರಿ ಸ್ವಲ್ಪವಾದರೂ ಜ್ಞಾನ ಬೇಕು ಎಂದೂ ಹೇಳಿದ್ದರು.
ಇದರಿಂದ ನೊಂದ ಲಕ್ಷ್ಮಣ ಸವದಿ, ರಮೇಶ ಜಾರಕಿಹೊಳಿ ಬಹಳ ಪ್ರಭುದ್ಧರು. ಜಿಲ್ಲೆಯಲ್ಲಿ ಸಾಹುಕಾರ ಎಂದು ಹೇಳಿಸಿಕೊಂಡವರು. ಅವರಿಗೆ ನಾನು ಏನನ್ನೂ ಹೇಳುವುದಿಲ್ಲ ಎಂದು ತಿರುಗೇಟು ನೀಡಿದ್ದರು. ಜೊತೆಗೆ, ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ, ರಮೇಶ ಜಾರಕಿಹೊಳಿಗೆ ಮಹೇಶ ಕುಮಟಳ್ಳಿ ಮೇಲೆ ಪ್ರೀತಿ ಇದ್ದರೆ ತಮ್ಮ ಗೋಕಾಕ ಕ್ಷೇತ್ರ ಬಿಟ್ಟುಕೊಟ್ಟು ಆರಿಸಿತರಲಿ ಎಂದು ಟಾಂಗ್ ನೀಡಿದ್ದರು.
ಈ ಎಲ್ಲ ಬೆಳವಣಿಗೆಗಳು ಜಿಲ್ಲೆ ಹಾಗೂ ರಾಜ್ಯ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದವು. ಇದರ ಬೆನ್ನಿಗೇ ಲಕ್ಷ್ಮಣ ಸವದಿ, ಕ್ಷೇತ್ರದ ಮುಸ್ಲಿಂ ಸಮುದಾಯದ ಮುಖಂಡರ ಸಭೆ ನಡೆಸಿದ್ದರು. ಆ ಸಭೆಯಲ್ಲಿ ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದರು. ಯಾವುದೇ ಕಾರಣದಿಂದ ನಿಮಗೆ ಅನ್ಯಾಯವಾಗಲು ಬಿಡುವುದಿಲ್ಲ. ನಿಮ್ಮ ಜೊತೆ ನಾನಿರುತ್ತೇನೆ ಎಂದಿದ್ದರು.
ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದೆ. ಹಾಗಾಗಿ ಎಲ್ಲ ಸಮುದಾಯದ ಮುಖಂಡರ ಜೊತೆ ಚರ್ಚಿಸಿ 27ರಂದು ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದಿದ್ದರು. ಹಾಗಾಗಿ ಸೋಮವಾರ ಲಕ್ಷ್ಮಣ ಸವದಿ ಎಂತಹ ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವ ಕುತೂಹಲ ಮೂಡಿದೆ.
ದೊಡ್ಡ ಮಟ್ಟದ ಗೊಂದಲ
ಬೆಳಗಾವಿ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ಎನ್ನುವುದು ಹೊಸ ವಿಷಯವೇನಲ್ಲ. ಮಾಜಿ ಸಚಿವ ರಮೇಶ ಜಾರಕಿಹೊಳಿ ಕುರಿತು ಈಗಾಗಲೆ ಸಂಸದ ಅಣ್ಣಾ ಸಾಹೇಬ ಜೊಲ್ಲೆ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಬಹಿರಂಗವಾಗಿಯೇ ಆಕ್ರೋಶ ಹೊರಹಾಕಿದ್ದರೆ, ಶಾಸಕರಾದ ಪಿ.ರಾಜೀವ ಮತ್ತು ಅಭಯ ಪಾಟೀಲ ಆಪ್ತರ ಬಳಿ ಅಸಮಾಧಾನ ತೋಡಿಕೊಂಡಿದ್ದಾರೆ. ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ಅವರಂತೂ ಕೊತ ಕೊತ ಕುದಿಯುತ್ತಿದ್ದಾರೆ. ಬೇರೆ ಕ್ಷೇತ್ರಗಳಲ್ಲಿ ರಮೇಶ ಜಾರಕಿಹೊಳಿ ಹಸ್ತಕ್ಷೇಪ ಮಾಡುತ್ತಿದ್ದಾರೆ ಎನ್ನುವುದು ಹಾಗೂ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆ ಛಿದ್ರವಾಗುತ್ತಿದೆ ಎನ್ನುವುದು ಇವರ ದೂರು.
ಈ ಸಂಬಂಧ ಈಗಾಗಲೆ ರಾಜ್ಯ ನಾಯಕರಷ್ಟೇ ಅಲ್ಲ, ರಾಷ್ಟ್ರೀಯ ನಾಯಕರ ಬಳಿಯೂ ದೂರು ಹೋಗಿದೆ. ಮೌಖಿಕವಷ್ಟೇ ಅಲ್ಲದೆ, ಲಿಖಿತ ದೂರನ್ನೂ ಸಲ್ಲಿಸಲಾಗಿದೆ. ಹಾಗಾಗಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ರಮೇಶ ಜಾರಕಿಹೊಳಿ ಅವರನ್ನು ಕರೆದು ಮಾತನಾಡಿದ್ದಾರೆ. ಆದರೆ ಇದರಿಂದ ಈ ನಾಯಕರು ಸಮಾಧಾನಗೊಂಡಿಲ್ಲ. ಗಂಭೀರ ಕ್ರಮವಾಗದಿದ್ದರೆ ಈ ಚುನಾವಣೆಯಲ್ಲಿ ದೊಡ್ಡಮಟ್ಟದ ಹಿನ್ನಡೆ ಅನುಭವಿಸಬೇಕಾಗುತ್ತದೆ ಎನ್ನುವ ಎಚ್ಚರಿಕೆಯನ್ನು ಬಿಜೆಪಿ ವರಿಷ್ಠರಿಗೆ ನೀಡಿದ್ದಾರೆ.
ಈಚೆಗೆ ಬೆಳಗಾವಿಗೆ ಆಗಮಿಸಿದ್ದ ಬಿಜೆಪಿ ಕರ್ನಾಟಕ ಚುನಾವಣೆ ಉಸ್ತುವಾರಿ ಧರ್ಮೇಂದ್ರ ಪ್ರಧಾನ ಅವರ ಬಳಿಯೂ ದೂರು ಸಲ್ಲಿಸಲಾಗಿದೆ.
ಈ ಮಧ್ಯೆ ರಮೇಶ ಜಾರಕಿಹೊಳಿ, ಈ ಬಾರಿಯ ಬೆಳಗಾವಿ ಜಿಲ್ಲೆಯ 16 ಕ್ಷೇತ್ರಗಳ ಚುನಾವಣೆ ಉಸ್ತುವಾರಿಯನ್ನು ತಮಗೆ ನೀಡುವಂತೆ ಬಿಜೆಪಿ ವರಿಷ್ಠರ ಬಳಿ ಕೇಳಿದ್ದಾರೆ. ತಾವು ಹೇಳಿದವರಿಗೆ ಟಿಕೆಟ್ ನೀಡಬೇಕು. ಕನಿಷ್ಠ 14 ಕ್ಷೇತ್ರಗಳಲ್ಲಿ ಗೆಲ್ಲಿಸಿಕೊಂಡು ಬರುತ್ತೇನೆ ಎಂದು ಹೇಳಿದ್ದಾರೆ.
ಈ ಎಲ್ಲ ಬೆಳವಣಿಗೆಗಳು ಚುನಾವಣೆಯ ಹೊಸ್ತಿಲಲ್ಲಿ ಬಿಜೆಪಿಯಲ್ಲಿ ದೊಡ್ಡ ಗೊಂದಲ ಹುಟ್ಟುಹಾಕಿದೆ. ಇದಕ್ಕೆಲ್ಲ ಪಕ್ಷದ ನಾಯಕರು ಹೇಗೆ ತೇಪೆ ಹಚ್ಚಲಿದ್ದಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ