ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಕಾಟಗಾಳಿ ಗ್ರಾಮದ ಬಳಿಯ ಭೀಮಗಡ ಅಡ್ವೆಂಚರ್ ಕ್ಯಾಂಪ್
ಆವರಣದಲ್ಲಿ ಅರಣ್ಯ ವಸತಿ ವಿಹಾರಧಾಮ ಸಂಸ್ಥೆಯ ವತಿಯಿಂದ ನೂತನವಾಗಿ
ಸಾಹಸಕ್ರೀಡೆಗಳನ್ನು ಕೈಗೊಳ್ಳಲು ವಿಶೇಷ ವ್ಯವಸ್ಥೆ ಮತ್ತು ಈಜುಗೊಳವನ್ನು
ನಿರ್ಮಿಸಲಾಗಿದೆ ಎಂದು ಅರಣ್ಯ ವಸತಿ ವಿಹಾರಧಾಮ ಸಂಸ್ಥೆಯ ಅಧ್ಯಕ್ಷ ರಾಜೇಶ
ಕೊಟ್ಟೆಣ್ಣವರ ಹೇಳಿದರು.
ಭಾನುವಾರ ಕ್ಯಾಂಪ್ ಆವರಣದಲ್ಲಿ ಈಜುಗೊಳವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿ
ಮಾತನಾಡಿದ ಅವರು, ಅಡ್ಚೆಂಚರ್ ಕ್ಯಾಂಪ್ ನಲ್ಲಿ ಸಾಹಸಕ್ರೀಡೆಗಳನ್ನು ಉತ್ತೇಜಿಸಲು
ಪ್ರಯತ್ನಿಸಲಾಗುವುದು. ಯುವಜನತೆ ಮತ್ತು ವಿದ್ಯಾರ್ಥಿಗಳು ಅರಣ್ಯ ಚಾರಣದತ್ತ
ಆಕರ್ಷಿತರಾಗುವ ನಿಟ್ಟಿನಲ್ಲಿ ವಿಶೇಷ ಯೋಜನೆಗಳನ್ನು ರೂಪಿಸಲಾಗುವುದು ಎಂದರು.
ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಸಾಹಸಕ್ರೀಡೆಗಳ ಸಂಕೀರ್ಣವನ್ನು
ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳೀಯ ಶಾಸಕಿ ಡಾ.ಅಂಜಲಿ
ನಿಂಬಾಳಕರ, ಅಡ್ವೆಂಚರ್ ಕ್ಯಾಂಪ್ ನಿಂದ ಭೀಮಗಡ ವನ್ಯಧಾಮಕ್ಕೆ ತೆರಳುವ ವಿಶೇಷ
ವಾಹನವನ್ನು ಸಂಚಾರಕ್ಕೆ ಮುಕ್ತಗೊಳಿಸಿದರು.
ಈ ಸಂದರ್ಭದಲ್ಲಿ ದೇವರಾಜ ಬಸ್ತವಾಡೆ, ವಿಕ್ರಂ ಓಸ್ವಾಲ್, ರಾಜೇಶ ಕಾಮತ, ಮಹೇಶ
ಚಟ್ನಳಿ, ಮಹಾಲಿಂಗಪ್ಪ ಹಾಲವಳ್ಳಿ, ಮಂಜುನಾಥ ಗಾಣಿಗೇರ ಸೇರಿದಂತೆ ಭೀಮಗಡ ಅಡ್ವೆಂಚರ್
ಕ್ಯಾಂಪ್, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ವಸತಿ ವಿಹಾರಧಾಮ
ಸಂಸ್ಥೆಯ ನಿರ್ದೇಶಕರು, ಅಧಿಕಾರಿಗಳು, ಸಿಬ್ಬಂದಿ, ಗ್ರಾಪಂ ಸದಸ್ಯರು ಮತ್ತು
ಸ್ಥಳೀಯರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ