Latest

ಎಲ್ಲರಿಗಿಂತಲೂ ನಾನು ಚೆನ್ನಾಗಿರಬೇಕೆಂಬ ಸ್ವಾರ್ಥದ ಫಲವೇ ಮನಸು ಮನಸುಗಳ ಅಂತರಕ್ಕೆ ಕಾರಣ


ಲೇಖನ: ರವಿ ಕರಣಂ.

ಪರರ ಬೆಳವಣಿಗೆಯನ್ನು ಕಂಡು ಯಾವ ಮನಸು ಸಂತೋಷ ಪಡುತ್ತದೆಯೋ ಆ ಮನಸ್ಸು ಅತ್ಯಂತ ಆನಂದವನ್ನು ಹೊಂದುತ್ತದೆ. ಪ್ರತಿ ಸ್ಪರ್ಧಿಯೆಂದು ಪರಿಗಣಿಸಿ, ಮಾತ್ಸರ್ಯದಲ್ಲಿ ಮುಳುಗಿದರೆ ಸಹಿಸಿಕೊಳ್ಳುವ ಗುಣ ದೂರವೇ ಸರಿ. ಉತ್ತಮ ಗುಣ ಯಾರಲ್ಲಿದ್ದರೂ ಅದಕ್ಕೆ ಪ್ರಶಂಸೆ ಮಾಡಲೇ ಬೇಕು. ಆ ಮೂಲಕ ಅಂತಹ ಉತ್ತಮ ಗುಣವನ್ನು ಸ್ಪೂರ್ತಿಯನ್ನಾಗಿಟ್ಟುಕೊಂಡು, ವಿನೂತನ ರೀತಿಯಲ್ಲಿ ಬದುಕಬೇಕಾದುದು ನಮ್ಮ ವಿಶೇಷತೆಯಾಗಿರಬೇಕು.

ಆದರೆ ನಮ್ಮ ಜಗತ್ತು ಎಷ್ಟೇ ಬದಲಾದರೂ ಮಾನವನ ಪರರ ಬಗೆಗಿನ ಭಾವನೆಗಳು, ವರ್ತನೆಗಳು ಎಂದೂ ಬದಲಾಗದೇ ಅರಣ್ಯ ವಾಸಿ ಹಂತದ ಗುಣಗಳು ಇಂದಿಗೂ ಬದಲಾಗದೇ ಉಳಿದಿವೆ ಎಂದರೆ ಅದಕ್ಕೆ ಅವನ ಸ್ವಾರ್ಥದ ಕಟ್ಟೆ ತುಂಬಿ ತುಳುಕುತ್ತಿರುತ್ತದೆ ಎಂದರ್ಥ. ಅವನು ಶತೃವಾದರೂ ಸರಿಯೇ ಉತ್ತಮ ಗುಣಕ್ಕೆ ಮಾತ್ಸರ್ಯವಿರಬಾರದು. ಇಂತಹದೊಂದು ಗುಣ ಪ್ರತಿಯೊಬ್ಬರಲ್ಲೂ ಇದ್ದಿದ್ದರೆ, ಈ ದೇಶ ಸ್ವಾತಂತ್ರ್ಯ ಬಂದಾಗಿನಿಂದ ಇಲ್ಲಿಯವರೆಗೆ ಅನ್ನುವಷ್ಟರಲ್ಲಿ ಅಭಿವೃದ್ಧಿಯ ಪರಾಕಾಷ್ಟೆಯನ್ನು ಮುಟ್ಟಬೇಕಿತ್ತು. ಆದರೆ ಹಾಗಾಗಲಿಲ್ಲ. ಕಾರಣ ಒಬ್ಬರ ಏಳಿಗೆಯನ್ನು ಕಂಡು ಸಹಿಸಿಕೊಳ್ಳದಷ್ಟು ಕೆಳ ಮಟ್ಟಕ್ಕೆ ಮನುಷ್ಯ ಇಳಿದು ಹೋದನೇ? ಎನಿಸಿ ಬಿಡುತ್ತದೆ.

ದೈನಂದಿನ ಜೀವನದ ಆಗು-ಹೋಗುಗಳನ್ನು ನಾಲ್ಕಾರು ಉದಾಹರಣೆಗಳಲ್ಲಿ ನೋಡಿ ಬಿಡೋಣ. ನಮ್ಮ ನೆರೆ ಹೊರೆಯವರು ಕಷ್ಟ ಪಟ್ಟು ಹಾಗೂ ಹೀಗೂ ಸಾಲ ಮಾಡಿಕೊಂಡು, ಇಲ್ಲವೇ ಆಸ್ತಿ ಒಡವೆ ಮಾರಿಕೊಂಡು ಮನೆ ಕಟ್ಟಿಸಿಕೊಂಡರೆ ಅದಕ್ಕೂ ಹೊಟ್ಟೆಕಿಚ್ಚು!
ಮನೆಯಲ್ಲಿ ಸೌಕರ್ಯಗಳನ್ನು ಇಟ್ಟುಕೊಂಡರೂ ಹೊಟ್ಟೆಕಿಚ್ಚು! ಉತ್ತಮ ಶಿಕ್ಷಣ ಪಡೆದು, ಒಳ್ಳೆಯ ರೀತಿಯಲ್ಲಿ ಹಣಗಳಿಕೆ ಮಾಡುತ್ತಿದ್ದವನನ್ನು ಕಂಡರೂ ಹೊಟ್ಟೆಕಿಚ್ಚು ! ಕೆಲಸ ಮಾಡುವ ಸ್ಥಳಗಳಲ್ಲಿ ಒಳ್ಳೆಯ ಹೆಸರು ಮಾಡಿದರೂ ಹೊಟ್ಟೆಕಿಚ್ಚು ! ಹೀಗೆ ಹೇಳುತ್ತಾ ಹೋದರೆ ಹೊಟ್ಟೆಕಿಚ್ಚಿಗೆ ಕೊನೆಯಿಲ್ಲ ಎನಿಸಿ ಬಿಡುತ್ತದೆ ! ಆದರೆ ಅದು ಹಾಗಲ್ಲ. ಮನುಷ್ಯ ತನ್ನ ಆರೋಗ್ಯಕರ ಮನಸ್ಸನ್ನು ಹಾಳು ಮಾಡಿಕೊಳ್ಳಲು ಇಂಥವೇ ಕುಂಟು ನೆಪಗಳು ಸಾಕು. ತಾನೂ ನೆಮ್ಮದಿಯಾಗಿರಲಾರ. ಇತರರನ್ನೂ ನೆಮ್ಮದಿಯಿಂದ ಇರಲು ಬಿಡಲಾರ. ಇದೊಂದು ಮಾನಸಿಕ ಅಂಟು ಜಾಡ್ಯವೇ ಸರಿ.

ನಮ್ಮ ಸುತ್ತ ಮುತ್ತಲ ಜನರನ್ನು ಪ್ರೀತಿಸುವುದು. ಅವರೊಂದಿಗೆ ಜೀವನದ ಉದ್ದಕ್ಕೂ ಹೊಂದಿಕೆ ಮಾಡಿಕೊಂಡು ಬದುಕುವುದು ಭಗೀರಥ ಪ್ರಯತ್ನವೇ ಆಗಬೇಕು. ಅದು ಅಸಾಧ್ಯದ ಮಾತು. ಆದರೆ ಸರಳ ಉಪಾಯವೆಂದರೆ ಇತರರ ಬದುಕು ತನ್ನ ಬದುಕಿನ ನಡುವಿನ ತುಲನೆ ಮಾಡದೇ, ತಾನು ಇದ್ದದ್ದೇ ಹೀಗೆಂದು ಹೆಮ್ಮೆಯಿಂದ ಬದುಕುವುದು ಇದೆಯಲ್ಲ, ಅದು ಎಲ್ಲರಿಗೊಲಿಯದ ಕಲೆ. ಹಾಗೆಂದೇ ನಮ್ಮ ಹಿರಿಯರು “ಹಾಸಿಗೆ ಇದ್ದಷ್ಟು ಕಾಲು ಚಾಚು” ಎಂದು ಹೇಳಿರಬಹುದೇನೋ ! ಆದರೆ ರಾಮಾಯಣ, ಮಹಾಭಾರತ, ಪುರಾಣಗಳು, ವೇದೋಪನಿಷತ್ತುಗಳು,ಅರಣ್ಯಕಗಳು, ಪಂಚತಂತ್ರ ಕಥೆಗಳು ಇತ್ಯಾದಿಗಳೆಲ್ಲ ಬಾಯಿ ಮಾತಿನ ಚಪಲದ ವಸ್ತುಗಳನ್ನಾಗಿ ಮಾಡಿಕೊಂಡರೇ ಹೊರತು, ಅದರ ಒಳಾರ್ಥವನ್ನು ಮೈಗೂಡಿಸಿಕೊಳ್ಳಲು ಯಾರೂ ಮುಂದಾಗಲೇ ಇಲ್ಲ. ವಿಪರ್ಯಾಸ ! ಮತ್ತೆ ಎಲ್ಲಿಗೆ ಎಂದರೆ, ಇದ್ದಲ್ಲಿಯೇ ಇದ್ದೇನೆಂದು ತೋರಿಸುವುದಷ್ಟೇ. ನಮ್ಮೊಳಗಿನ ಬದಲಾವಣೆ ಸುಳ್ಳು.

ಅವರವರ ಯೋಗ್ಯತೆ, ಸಾಮರ್ಥ್ಯ, ಬುದ್ದಿವಂತಿಕೆ, ಸತತ ಪ್ರಯತ್ನಗಳ ಆಧಾರದ ಮೇಲೆ ಜೀವನದ ಉನ್ನತೀಕರಣವನ್ನು ಸಾಧಿಸಿದರೆ, ಅದಕ್ಕೇಕೆ ಟೀಕೆಗಳು,ಕೊಂಕು ನುಡಿ,ವಿಮರ್ಶೆ ? ಆಡುನುಡಿಯಲ್ಲಿ ಹೇಳುವುದಾದರೆ ಆಡಿಕೊಳ್ಳುವುದು ? ನಮ್ಮ ಪ್ರಯತ್ನವೇನೆಂದು ಹೇಳಲು ಮುಂದಾಗಲ್ಲ. ನಾವೇಕೆ ಜೀವನದಲ್ಲಿ ಹಿಂದೆ ಬಿದ್ದೆವು ಎಂದು ಯೋಚಿಸಲು ಮುಂದಾಗುವುದಿಲ್ಲ. ನಮ್ಮ ಸೋಲಿಗೆ ವ್ಯವಸ್ಥೆ ಕಾರಣವಲ್ಲ. ಇದೊಂದು ನಮ್ಮ ವಿಚಿತ್ರ ರೋಗವೇನೋ ? ಎಲ್ಲವನ್ನೂ ವ್ಯವಸ್ಥೆಯ ಮೇಲೆ ಹೊರಿಸಿ ಬಿಡುವುದು !ಎಲ್ಲರ ಏಳಿಗೆಯನ್ನು ಕಾಣುವುದು ನಮ್ಮ ಸೌಭಾಗ್ಯವಾಗಬಾರದೇಕೆ? ದೇಶದ ಉದ್ದಾರವೆಂದರೆ ಆ ನೆಲದ ಜನತೆಯ ಜೀವನದ ಉದ್ದಾರವಲ್ಲದೇ ಮತ್ತಿನ್ನೇನು?

ಶಿಕ್ಷಕರು ಹೇಳಿದ ಕಥೆ ಒಂದೊಮ್ಮೆ ನೆನಪಾಗುತ್ತದೆ. ಮಾನವನ ವಾಸ್ತವ ಪ್ರಪಂಚದ ಅರಿವನ್ನು ಮೂಡಿಸುತ್ತದೆ. ಇದು ನಿಮಗೂ ಗೊತ್ತಿಲ್ಲವೆಂದಲ್ಲ. ಅದೇ ನಾಲ್ಕು ಗಾಜಿನ ಭರಣಿಗಳನ್ನು ಇಟ್ಟು, ಒಂದರಲ್ಲಿ ಫ್ರಾನ್ಸ್, ಜಪಾನ್, ಅಮೆರಿಕಾ, ಭಾರತ ದೇಶದ ಏಡಿಗಳನ್ನು ಹಾಕುತ್ತಾರಂತೆ. ಆ ಗಾಜಿನ ಭರಣಿಯ ಮೇಲೆ ಏಡಿಗಳ ಕಾಲು ಜಾರುತ್ತಿದ್ದವಂತೆ. ಹೇಗಾದರೂ ಮಾಡಿ, ಭರಣಿಯಿಂದ ಆಚೆಗೆ ಹೋಗುವ ಉಪಾಯ ಮಾಡಿದವು. ಅವು ಒಂದರ ಮೇಲೆ ಒಂದು ಹತ್ತಿದವು. ಮೇಲೆ ಹೋದ ಏಡಿಯು ಸರಪಳಿ ಮಾಡಲು ತಿಳಿಸಿ, ಮೇಲೆಳೆದುಕೊಳ್ಳತೊಡಗಿತು. ಮೇಲೆ ಹೋದವುಗಳೆಲ್ಲ ಸೇರಿ, ಕೆಳಗಿನವುಗಳನ್ನು ಎತ್ತಿಕೊಂಡವು. ಭಾರತ ದೇಶದ ಭರಣಿಯೊಂದನ್ನು ಬಿಟ್ಟು ಉಳಿದ ಭರಣಿಗಳಿಂರ ಏಡಿಗಳೆಲ್ಲ ಹೊರಗಿದ್ದವಂತೆ. ಅದೇ ಭಾರತದ ಭರಣಿಯ ಕಡೆ ತಿರುಗಿ ನೋಡಿದಾಗ, ಒಂದು ಹತ್ತಲೆತ್ನಿಸಿದರೆ ಮತ್ತೊಂದು ಕಾಲು ಹಿಡಿದು ಎಳೆಯುತ್ತಿತ್ತು. ಎಲ್ಲದರ ಕಥೆಯೂ ಅಷ್ಟೇ. ಹಾಗಾಗಿ ಒಂದೂ ಹೊರಗೆ ಬರಲಿಲ್ಲವಂತೆ! ಇದರ ಹಿಂದಿನ ಅರ್ಥ ನಿಜಕ್ಕೂ ಸತ್ಯ. ನಾವು ಸಮಸ್ಯೆಯಿಂದ ಹೊರ ಬರಲು ಪರಸ್ಪರ ಸಹಕರಿಸುವುದಿಲ್ಲ. ಎಲ್ಲರೂ ಕಾಲೆಳೆಯುವುದರಲ್ಲಿ ಮುಳುಗಿರುವುದು. ಎಷ್ಟು ಮನ ಮುಟ್ಟುವಂತೆ ಹೇಳಿದ್ದರೆಂದರೆ, ಅಂದು ಮೊಳಕೆಯೊಡೆದ ಭಾವನೆ ಇಷ್ಟು ಬಲಿಯಲು ಕಾರಣ. ಹಾಗಾಗಿ ಪರರ ಏಳಿಗೆಯ ಕಂಡು ಖುಷಿ ಪಡುವ ಹಾಗಾಯಿತು. ಅದು ಜಗತ್ತನ್ನು ನೋಡುವ ಬಗೆಯನ್ನು ತಿಳಿಸಿತು. ನಮ್ಮಲ್ಲಿರದ ಸೌಭಾಗ್ಯ ಅವರಲ್ಲಿದ್ದರೆ ಸಂತೋಷ ಪಡಬೇಕು. ಮಾತ್ಸರ್ಯದ ಭಾವ ಮನಸ್ಸನ್ನು ರೋಗಗ್ರಸ್ಥ ಮಾಡುತ್ತದೆ.

ಹೌದಲ್ಲವೇ? ಹೃದಯ ವೈಶಾಲ್ಯತೆ ಬೆಳೆಸಿಕೊಳ್ಳದೇ ಹೋದಲ್ಲಿ, ಮನಸು ತೀರಾ ಸಂಕುಚಿತ ಬುದ್ದಿಗೆ ಬಲಿಯಾಗುತ್ತದೆಯೇ ವಿನಃ ಸಂತೋಷ ಸವಿಯುವ, ಹಂಚುವ ಉದಾರತೆ ಬೆಳೆಯುವುದಿಲ್ಲ. ನಮ್ಮ ಶತ್ರು ಸಾಧನೆ ಮಾಡಿದ್ದಲ್ಲಿ ಅದಕ್ಕೆ ಪ್ರಶಂಸೆ ಮಾಡುವ ಗುಣವೂ ಇರಬೇಕು. ಅಂದಾಗ ಅದು ವ್ಯಕ್ತಿತ್ವದ ಪಾರದರ್ಶಕತೆಯಾಗುತ್ತದೆ. ಅರಿಷಡ್ವರ್ಗಗಳಾದ ಕಾಮ, ಕ್ರೋಧ,ಮದ,ಮತ್ಸರ,ಲೋಭ ಮತ್ತು ಮೋಹಗಳಿಂದ ದೂರವಿರಬೇಕಾದ ಸಂನ್ಯಾಸಿಯು ಕೃತಿಯಿಂದ ವಿಮುಖ. ಅಂದ ಮೇಲೆ ಜನ ಸಾಮಾನ್ಯರ ಸ್ಥಿತಿ ಎಂತಹುದು? ಪರಿಪೂರ್ಣ ಜೀವನದ ಸತ್ಯ ಅರ್ಥವಾಗದ ಹೊರತು, ಕ್ಷುಲ್ಲಕ ವಿಚಾರಗಳಿಂದ ಹೊರ ಬರಲು ಸಾಧ್ಯವಿಲ್ಲ. ಮತ್ತು ಸಂತೋಷವು ಮರೀಚಿಕೆಯಾಗಿ ಉಳಿಯುತ್ತದೆ.

ಮನಸ್ಸು ಆರೋಗ್ಯದಿಂದ ಇರಬೇಕೆಂದರೆ ಜೀವನದ ಅವಶ್ಯಕತೆಗಳು ಒಂದು ಮಿತಿಯಲ್ಲಿರಬೇಕು. ಅದರಿಂದ ಸಂತೋಷ, ತೃಪ್ತಿ, ಸಾಧನೆಗೆ ಅವಶ್ಯ ಮತ್ತು ಅನಿವಾರ್ಯ ಎಂದವುಗಳ ಪಟ್ಟಿ ನಮ್ಮಲ್ಲಿರಬೇಕು. ಎಷ್ಟು ಕಡಿಮೆಯೋ ಅದರಲ್ಲಿ ಪೂರೈಸಿಕೊಳ್ಳಲು ಸಾಧ್ಯವಾಗುವಂತೆ ಮಾಡಿಕೊಳ್ಳುವ ಕಲೆಯೂ ಇರಬೇಕಲ್ಲವೇ? ಅಂತೆಯೇ ಭಗವಾನ್ ಬುದ್ದರು “ಆಸೆಯೇ ದುಃಖಕ್ಕೆ ಮೂಲ” ಎಂದರು. ಅಂದರೆ ಆಸೆಯು ಸೀಮಿತ ವಲಯವನ್ನು ದಾಟಿದರೆ, ಅತೃಪ್ತಿಗೆ ಬಲಿಯಾಗುತ್ತದೆ. ಆಗ ಮನೋ ಬಾಧೆ ಬೆನ್ನು ಹತ್ತುತ್ತವೆ. ಎಲ್ಲರಿಗಿಂತಲೂ ನಾನು ಚೆನ್ನಾಗಿರಬೇಕೆಂಬ ಸ್ವಾರ್ಥದ ಫಲವೇ ಮನಸು ಮನಸುಗಳ ಅಂತರಕ್ಕೆ ಕಾರಣ. ಅಲ್ಲದೇ ಗೊತ್ತಿಲ್ಲದೇ ನಮ್ಮೊಳಗೆ ಶ್ರೇಷ್ಠತಾ ಭಾವನೆಯು ಕೂಪಮಂಡೂಕವನ್ನಾಗಿಸುತ್ತದೆ. ಹಾಗಾಗಿ ಮೊದಲಿನಿಂದಲೂ ಈ ಮಣ್ಣಿನ ಕಣದ ಮುಂದೆ ನಾನೇನೂ ಅಲ್ಲ ಎಂಬ ಸತ್ಯ, ಭಾವ ಇದ್ದರೆ ಒಳಿತು. ಎಲ್ಲವೂ ಇದ್ದು ಸಂತೋಷವಿರದ, ನೆಮ್ಮದಿ ಕಾಣದ ಬದುಕು ನೀರ ಮೇಲಿನ ಗುಳ್ಳೆಗಳಂತೆ. ಬದುಕಿನ ದೃಷ್ಟಿಕೋನ ಭ್ರಮೆಯ ಪರದೆಯೊಳಗಿರದೇ ಬಯಲಲ್ಲಿರಬೇಕು.

ನಾವು ಓದುವ ಸಾಹಿತ್ಯವೆಲ್ಲ ಬದುಕಿನ ನೈಜತೆಯ ಅನಾವರಣಗೊಳಿಸುವ ಆಕರಗಳು. ಆದರೆ ಕೃತಿಗಿಳಿಸದೇ ಮತ್ತೆ ಅದೇ ರಾಗ ಅದೇ ಹಾಡು. ಬದಲಾಗದ ಮನಸುಗಳ ತುಮುಲಗಳೇ ನೆಮ್ಮದಿಗೆ ಕಂಟಕ. ಇದು ಪ್ರಯೋಗಾತ್ಮಕ ಬದುಕೆಂಬುದು ತಿಳಿಯಬೇಕು. ಜೀವನ ಕಾಲ್ಪನಿಕ ಅಂಶಗಳಿಂದ ಕೂಡಿಲ್ಲ. ಭ್ರಮೆಯಿಂದ ರಚಿತವಾಗಿಲ್ಲ. ನಮ್ಮ ನಡೆ-ನುಡಿ, ಯೋಚನಾ ಲಹರಿ, ಸಹಿಷ್ಣುತೆ, ಆದರಿಸುವ ಮುಂತಾದ ಧನಾತ್ಮಕ ರೂಪುರೇಷೆಗಳು ಸುಂದರ ಬದುಕಿಗೆ ಬೆಳಕನ್ನು ಚೆಲ್ಲುತ್ತವೆ. ಅದೇ ಋಣಾತ್ಮಕ ವಿಚಾರಗಳು ನಮ್ಮನ್ನೇ ಕಿತ್ತು ತಿನ್ನುತ್ತವೆ. ಅದಕ್ಕಾಗಿ ನಮ್ಮೊಳಗೆ ಇವುಗಳನ್ನು ಅಳವಡಿಸಿಕೊಳ್ಳುವುದು ಸೂಕ್ತವೆನಿಸುತ್ತದೆ.

  • ಯಾರನ್ನೇ ಆಗಲಿ ಪ್ರೀತಿಸುವ,ಗೌರವಿಸುವ, ಸತ್ಕರಿಸುವ ಗುಣವನ್ನು ಹೊಂದಬೇಕು.
  • ಒಬ್ಬರ ಬಗೆಗಿನ ನಕಾರಾತ್ಮಕ ವಿಚಾರಗಳು ವೈರತ್ವವನ್ನು, ಅಸೂಯೆಯನ್ನು ಬೆಳೆಸುತ್ತವೆ. ಹಾಗಾಗೀ ಬೇಡವೆನಿಸಿದ ವ್ಯಕ್ತಿಗಳ ಜೊತೆಗೆ ಅಂತರ ಕಾಯ್ದುಕೊಳ್ಳುವುದಕ್ಕಿಂತ ಆಗಾಗ ಸಣ್ಣನಗೆಯೊಂದರಿಂದ ತನ್ನ ವಿಷಯದಲ್ಲಿ ಸಕಾರಾತ್ಮಕ ಭಾವವಿದೆ ಎಂಬ ಸಂದೇಶ ಕಳಿಸಬಹುದು. ಅದರಲ್ಲೂ ವಿಶೇಷ ಸಂದರ್ಭಗಳಲ್ಲಿ ಆಹ್ವಾನಿಸುವುದಿದ್ದರೆ ಇನ್ನೂ ಒಳ್ಳೆಯದು.
  • ಯಾರ ಬಳಿಯೂ ಒಬ್ಬರ ಬಗೆಗಿನ ಅನಿಸಿಕೆಗಳನ್ನು ಹಂಚಿಕೊಳ್ಳುವಾಗ, ಧನಾತ್ಮಕ ಅಂಶಗಳನ್ನು ಎತ್ತಿ ಹಿಡಿಯಬೇಕು. ಬೇಡವಾದವುಗಳ ಬಗ್ಗೆ ಎತ್ತಿ ತೋರಿಸುವ ಅವಶ್ಯಕತೆ ಇಲ್ಲ.
  • ನಮ್ಮ ಸದ್ವಿಚಾರಗಳು ಮಾತ್ರ ನಮ್ಮೊಂದಿಗೆ ಸಂಚರಿಸಬೇಕು. ಅದು ಪರರ ಮುಂದೆ ತಾನಾಗೇ ಅನಾವರಣಗೊಳ್ಳಬೇಕು.
  • ನಮ್ಮ ಬಗೆಗಿನ ವಿಷಯಗಳಲ್ಲಿ ಶ್ರೇಷ್ಠತಾ ಭಾವ ತೋರಿಸದೇ, ಸಾಮಾನ್ಯರಲ್ಲಿ ಸಾಮಾನ್ಯನೆಂಬ ಸಂದೇಶವಿರಬೇಕು. ಎಲ್ಲರೂ ಸಮಾನರೇ ಎಂಬ ಭಾವ ಬಲವಾಗಿರಬೇಕು. ಎನಗಿಂತ ಕಿರಿಯನಿಲ್ಲ ಶಿವ ಶರಣರಿಗಿಂತ ಹಿರಿಯರಿಲ್ಲ ಎಂದು ಹೇಳಿದ ಬಸವಣ್ಣನವರೇ ಎಲ್ಲರಿಗಿಂತಲೂ ಹಿರಿಯರೆನಿಸಿದರು.
  • ಇನ್ನೊಬ್ಬರ ಬಗೆಗೆ ಟೀಕೆ, ಟಿಪ್ಪಣಿ ಮಾಡುವಾಗ ಆ ವ್ಯಕ್ತಿಯ ಮುಂದೆಯೇ ಹೇಳಬೇಕು. ಅದು ಸತ್ಯವಾಗಿದ್ದರೆ ಆ ವ್ಯಕ್ತಿಯೇ ಹೌದು ಎಂದು ಒಪ್ಪಿಕೊಳ್ಳುತ್ತಾನೆ. ಬೆನ್ನ ಹಿಂದಿನ ಮಾತು ನಿಂದನೆಯೆನಿಸಿಬಿಡುತ್ತದೆ.
  • ವೈರತ್ವ ಹೊಂದಿದ ವ್ಯಕ್ತಿಯ ಬಗೆಗಿನ ಯೋಚನೆಯೇ ಅನಾವಶ್ಯಕ ಸ್ಪರ್ಧೆಗೀಡು ಮಾಡುತ್ತದೆ. ಅದರಿಂದ ಸಮಯ, ಯೋಚನಾ ಶಕ್ತಿ, ನೆಮ್ಮದಿಯ ಕೊರತೆಗೆ ಕಾರಣವಾಗುತ್ತದೆ. ಅದಕ್ಕಾಗಿ ವೈರತ್ವ ಭಾವಕ್ಕೆ ಕತ್ತರಿ ಹಾಕಿದರಂತೂ ಒಳ್ಳೆಯದೇ.
  • ನಮ್ಮ ಬಗೆಗೆ ಇತರರ ಅನಿಸಿಕೆಗಳನ್ನು ಹುಡುಕುವ ಅವಶ್ಯಕತೆಯೇ ಬೀಳಬಾರದು. ಅಂತಹ ರೀತಿಯಲ್ಲಿದ್ದು, ಆತ್ಮವಿಶ್ವಾಸ ಇರಬೇಕು.
  • ಅಪಾರ ಸಾಹಿತ್ಯ ಕಣಜ ತಲೆಯಿದ್ದರೆ ಜೀವನಾದರ್ಶಗಳು ಗರಿ ಬಿಚ್ಚುತ್ತವೆ. ಓದುವ ಹವ್ಯಾಸವಿರಬೇಕು.
  • ಮನಸೋ ಇಚ್ಛೆ ಮಾತಾಡುವ ಬದಲು ಮಾತಿಗೆ ಮಿತಿಯಿರಬೇಕು.
  • ಹಿರಿಯರ ಮಾತುಗಳು ವ್ಯಕ್ತಿತ್ವ ವಿಕಸನಕ್ಕೆ ಸಹಾಯಕವಾಗಬಹುದು. ಗೌರವಿಸುವ ಗುಣ ಸನಿಹವಿರಬೇಕು.

ಇಂಥವೇ ಸರಿ ತೋಚಿದ, ಸಹ್ಯವೆನಿಸಿದ ವಿಚಾರಗಳನ್ನು ಹೊಂದಿದರೆ ಸಂತೋಷಕ್ಕೆ ಕೊರತೆಯಿರದು. “ನಾನು ನಾನೆಂಬುದು ಬರಿದೇ ಬರಿದು ಪಾತ್ರೆ ಬಯಲೊಳಗೆ” ಹಾಗಾಗಿ ಮನಸ್ಸನ್ನು ಉತ್ಸಾಹದ ಚಿಲುಮೆಯಿಡುವುದು ಅವಶ್ಯ.

https://pragati.taskdun.com/cm-basavaraj-bommaibelagavisuvarnavidhanasoudha/
https://pragati.taskdun.com/approval-for-irrigation-projectsworth-more-than-rs-5500-thousand-crorescm-basavaraj-bommai/
https://pragati.taskdun.com/karnataka-election-announcement-in-few-moments/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button