ಪ್ರಗತಿವಾಹಿನಿ ಸುದ್ದಿ, ಧಾರವಾಡ
ಆಪ್ತಸಮಾಲೋಚನೆ ಒಂದು ಸಾಮಾಜಿಕ ಜವಾಬ್ದಾರಿಯಾಗಿದ್ದು, ಅತ್ಯಂತ ಜವಾಬ್ದಾರಿಯಿಂದ ಅದನ್ನು ನಿಭಾಯಿಸಬೇಕು ಎಂದು ಖ್ಯಾತ ಮನೋವಿಜ್ಞಾನಿ, ಬೆಂಗಳೂರಿನ ಸಮಾಧಾನ ಆಪ್ತಸಮಾಲೋಚನಾ ಕೇಂದ್ರದ ಮುಖ್ಯಸ್ಥ ಸಿ.ಆರ್.ಚಂದ್ರಶೇಖರ ಹೇಳಿದ್ದಾರೆ.
ಧಾರವಾಡದ ವಿದ್ಯಾಪೋಷಕ ಆಯೋಜಿಸಿದ್ದ ಆಪ್ತಸಮಾಲೋಚಕರ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಶಿಬಿರಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಅವರು ಮಾತನಾಡಿದರು. ಸಮಸ್ಯೆಗಳಿಲ್ಲದ ಮನುಷ್ಯ ಯಾರೂ ಇಲ್ಲ. ಹಾಗಾಗಿ ಆಪ್ತ ಸಮಾಲೋಚನೆ ಪ್ರತಿಯೊಬ್ಬರಿಗೂ ಅಗತ್ಯವಿರುತ್ತದೆ. ಅದು ಸರಿಯಾಗಿ ಸಿಕ್ಕಿದರೆ ಮನುಷ್ಯ ಎಲ್ಲ ರೀತಿಯ ಸಮಸ್ಯೆಗಳಿಂದ ಹೊರಗೆ ಬಂದು ಸುಖಮಯವಾಗಿ ಬದುಕುತ್ತಾನೆ. ಹಾಗಾಗಿ ಈ ಜವಾಬ್ದಾರಿ ನಿರ್ವಹಿಸುವಾಗ ಯಾವುದೇ ಪ್ರತಿಫಲ ನಿರೀಕ್ಷಿಸದೆ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಧಾರವಾಡದ ನಿಮ್ಹಾನ್ಸ್ ಆಸ್ಪತ್ರೆಯ ಮೆಡಿಕಲ್ ಸುಪರಿಂಟೆಂಡೆಂಟ್ ಶ್ರೀನಿವಾಸ ಮಾತನಾಡಿ, ಆಪ್ತಸಮಾಲೋಚನೆಗೆ ಬರುವವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವುದಲ್ಲದೆ ಅವರಲ್ಲಿ ವಿಶ್ವಾಸಮೂಡಿಸುವ ಕೆಲಸ ಮಾಡಬೇಕು. ಆಪ್ತಸಮಾಲೋಚನೆ ಸಂದರ್ಭದಲ್ಲಿ ಎದುರಾಗಬಹುದಾದ ಕಾನೂನು ಸಮಸ್ಯೆಗಳ ಕುರಿತು ಎಚ್ಚರಿಕೆ ವಹಿಸಬೇಕು ಎಂದರು.
ಎಸ್ ಡಿಎಂ ಕಾಲೇಜಿನ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಸಚಿನ್ ಬಿ.ಎಸ್. ಮಾತನಾಡಿ, ಈ ಭಾಗದಲ್ಲಿ ಆಪ್ತಸಮಾಲೋಚನಾ ಕೇಂದ್ರಗಳ ಕೊರತೆ ಇದ್ದು, ಹೆಚ್ಚಿನ ಸಂಖ್ಯೆಯಲ್ಲಿ ಆಪ್ತಸಮಾಲೋಚಕರ ಅಗತ್ಯವಿದೆ. ಇಲ್ಲಿ ಕಲಿತವರು ಆತ್ಮವಿಶ್ವಾಸದಿಂದ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದರು.
ವಿದ್ಯಾಪೋಷಕದ ಕಾರ್ಯದರ್ಶಿ ಜಿ.ಬಿ. ಮೇಟಿ ಮಾತನಾಡಿ, ವಿದ್ಯಾಪೋಷಕ ನಿರಂತರವಾಗಿ ಇಂತಹ ಶಿಬಿರ ನಡೆಸಿಕೊಂಡು ಬರುತ್ತಿದೆ. ಇದು ಮೂರನೇ ಶಿಬಿರವಾಗಿದ್ದು, ಇನ್ನೂ ಮುಂದುವರಿಯಲಿದೆ ಎಂದರು.
ವಿದ್ಯಾಪೋಷಕದ ಸಿಇಓ ಉಮೇಶ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಲ್ಲಾಸದ ಕಾರ್ಯದರ್ಶಿ ಸುನೀಲ, ವಿದ್ಯಾಪೋಷಕ ಹಾಗೂ ಮನೋಲ್ಲಾಸ ಕೇಂದ್ರದ ಮಾಹಿತಿ ನೀಡಿದರು.
ಶಿಬಿರಾರ್ಥಿಗಳ ಪರವಾಗಿ ಸರಸ್ವತಿ ಬೋಸಲೆ, ಮಹಾಬಲೇಶ್ವರ ಬೀಳಗಿ, ನರಸಿಂಹ ಶಿರಹಟ್ಟಿ, ಗಂಗಪ್ಪ ಮೇದಾರ, ರೂಪಾ ಜೋಶಿ ಮಾತನಾಡಿದರು.
ತರಂಗಿಣಿ ಕಾರ್ಯಕ್ರಮ ನಿರ್ವಹಿಸಿದರು. ತಪಸ್ವಿನಿ ಪ್ರಾರ್ಥನೆ ಹಾಡಿದರು. ರತ್ನಾ ಹಿಪ್ಪರಗಿ ವಂದಿಸಿದರು.
ನವೆಂಬರ್ 4ರಿಂದ ಡಿಸೆಂಬರ್ 9ರ ವರೆಗೆ 6 ಭಾನುವಾರ ನಡೆದ ಶಿಬಿರದಲ್ಲಿ 21 ಜನ ಭಾಗವಹಿಸಿದ್ದರು. ಸಿ.ಆರ್.ಚಂದ್ರಶೇಖರ, ಎ.ಎಸ್. ರಾಮಚಂದ್ರ, ಎ.ಎಸ್.ಆನಂದ, ಡಿ.ಸಿ. ರಂಗನಾಥರಾವ್, ಕಿರಣಕುಮಾರಿ, ಶ್ರೀನಿವಾಸಮೂರ್ತಿ, ಗುಂಡೂರಾವ್ ಸಂಪನ್ಮೂಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಿದರು.
ಅಕ್ಷಯಕುಮಾರ ಜೋಶಿ ಹಾಗೂ ರಶ್ಮಿ ಭಟ್ ಶಿಬಿರದ ಜವಾಬ್ದಾರಿ ನಿರ್ವಹಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ