
ಚುನಾವಣೆಗೆ ಸಿದ್ಧತೆ
ಪ್ರಗತಿವಾಹಿನಿ ಸುದ್ದಿ; ಚನ್ನಮ್ಮನ ಕಿತ್ತೂರು : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ, ತಾಲ್ಲೂಕು ಪಂಚಾಯಿತಿ ಹಾಗೂ ತಾಲೂಕು ಸ್ವೀಪ್ ಸಮಿತಿ ಸಹಯೋಗದಲ್ಲಿ ಮತದಾರರಿಗೆ ಮತದಾನದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮದ ಅಂಗವಾಗಿ ಶನಿವಾರದಂದು ಕಿತ್ತೂರು ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೈಕ್ ರ್‍ಯಾಲಿ ನಡೆಸಲಾಯಿತು.
ಕಿತ್ತೂರು ಪಟ್ಟಣದ ಚನ್ನಮ್ಮ ವೃತ್ತದಲ್ಲಿ ಬೈಕ್ ರ್‍ಯಾಲಿಗೆ ಕಿತ್ತೂರು ಮತಕ್ಷೇತ್ರದ ಚುನಾವಣಾಧಿಕಾರಿ ರೇಷ್ಮಾ ಹಾನಗಲ್ ಹಾಗೂ ತಾಲೂಕು ಸ್ವೀಪ ಸಮಿತಿ ಅಧ್ಯಕ್ಷ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸುಭಾಷ ಸಂಪಗಾವಿ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ
ನೀಡಿದರು.
ಬಳಿಕ ಮಾತನಾಡಿದ, ಚುನಾವಣಾ ಅಧಿಕಾರಿ ರೇಷ್ಮಾ ಹಾನಗಲ್ ಅವರು ಮಾತನಾಡಿ, ‘ಮತದಾನದ ಶೇಕಡಾವಾರು ಪ್ರಮಾಣ ಹೆಚ್ಚಾಗಬೇಕಿದ್ದು, ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ ನೈತಿಕ ಮತದಾನ ಮಾಡಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬಲಪಡಿಸಲು ಸಹಕರಿಸಬೇಕು’ ಎಂದು ತಿಳಿಸಿದರು.
ತಾಲೂಕು ಸ್ವೀಪ ಸಮಿತಿ ಅಧ್ಯಕ್ಷರಾದ, ತಾಪಂ ಇಒ ಸುಭಾಷ ಸಂಪಗಾಂವಿ ಅವರು ಮಾತನಾಡಿ, ‘ಮತದಾರರು ಪ್ರಾಮಾಣಿಕ, ನ್ಯಾಯಸಮ್ಮತ, ನಿಷ್ಪಕ್ಷಪಾತವಾಗಿ ಮತದಾನ ಮಾಡಬೇಕು. ಇದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡಬೇಕು ಅಂದಾಗ ಮಾತ್ರ ಮತದಾನದಿಂದ ಸುಭದ್ರ ಪ್ರಜಾಪ್ರಭುತ್ವ ರಾಷ್ಟ್ರ ನಿರ್ಮಾಣವಾಗಲು ಸಾಧ್ಯ’ ಎಂದು ಹೇಳಿದರು.
ಸಹಾಯಕ ಚುನಾವಣಾಧಿಕಾರಿ, ತಹಸೀಲ್ದಾರ್ ರವೀಂದ್ರ ಹಾದಿಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಆರ್.ಟಿ.ಬಳಿಗಾರ, ತಾಪಂ ಸಹಾಯಕ ನಿರ್ದೇಶಕರಾದ ಸುರೇಶ ನಾಗೋಜಿ ಹಾಗೂ ಲಿಂಗರಾಜ ಹಲಕರ್ಣಿಮಠ ಸೇರಿದಂತೆ ತಾಪಂ ಕಚೇರಿ ಸಿಬ್ಬಂದಿ, ವಿವಿಧ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿ ಅಧಿಕಾರಿಗಳು, ಕಾರ್ಯದರ್ಶಿಗಳು ಪಾಲ್ಗೊಂಡಿದ್ದರು.



