ಲೇಖನ: ರವಿ ಕರಣಂ.
ದಾಸ ಸಾಹಿತ್ಯ ಅದೆಷ್ಟು ಪರಿಣಾಮಕಾರಿ ಎಂದರೆ ಭಾಷೆಯ ದೃಷ್ಟಿಯಿಂದಲೂ, ಸಾಹಿತ್ಯದ ಹರಿವು ಮತ್ತು ಪ್ರಕಾರದಿಂದ ಮಹತ್ವ ಪಡೆದಿದೆ. ಭಕ್ತಿಯೆಡೆಗೆ ಒಂದು ಸಮೂಹವನ್ನು ತೆಗೆದುಕೊಂಡು ಹೋಗಿ, ಮನ ಶುದ್ದಿಗೆ ಹಾಗೂ ಜೀವನದ ಸತ್ಯ ದರ್ಶನ ಮಾಡುವ ಕ್ರಿಯೆಯಿಂದಲೂ ಕನ್ನಡಿಗರಿಗಷ್ಟೇ ಅಲ್ಲದೇ ಜಗತ್ತಿನ ಜನರಿಗೆಲ್ಲ ಮನೋ ಚಿಕಿತ್ಸೆ ನೀಡಿದಂತಿದೆ. ಇಲ್ಲಿ ಕೀರ್ತನೆಗಳೇ ಮನೋವೈದ್ಯನ ಕರ್ತವ್ಯವನ್ನು ಪಾಲಿಸಿದೆ ಎಂದರೆ ನಿಮಗೆ ಅಚ್ಚರಿ ಇಲ್ಲವೇ ಹಾಸ್ಯ ಎರೆಡೂ ಬಗೆಯಲ್ಲಿ ಅನುಭವಕ್ಕೆ ಬರಬಹುದು.
ನಿಜ ಸಂಗತಿ ಎಂದರೆ ಮಾನವನ ಅತಿರೇಕದ ವರ್ತನೆಗಳನ್ನರಿತು ಅದಕ್ಕೆ ಕಡಿವಾಣದ ದಾಳವನ್ನಾಗಿ ದೈವ ಭಕ್ತಿ, ಜೀವನ ಮಹತ್ವ, ಢಂಬಾಚಾರದ ಅಣಕ,ವಿಡಂಬನೆ,ಅಕ್ಷರಗಳನ್ನೇ ಮನೋ ಚಿಕಿತ್ಸಾ ಸಲಕರಣೆಗಳನ್ನಾಗಿ ಮಾಡಿಕೊಂಡ ಬಗೆ ಅನನ್ಯ. ಹಾಗಾಗಿ ದಾಸ ಪರಂಪರೆ ಕೇವಲ ಭಕ್ತಿ ರಸದ,ಮತ ಪ್ರಚಾರದ, ಏಕಮುಖಿ ವಿಚಾರದ ಸಮೂಹವಾಗಿರದೇ ಅಶಕ್ತ ಮನಸಿನ ಸಮಾಜಕ್ಕೆ ಕೊಡ ಮಾಡಿದ ಔಷಧಿಯೇ ಆಗಿದೆ. ಇದನ್ನು ಮನೋವಿಜ್ಞಾನದ ಅಡಿಯಲ್ಲಿ ನೋಡುವ ಬಗೆ ಇನ್ನೂ ಸ್ವಾರಸ್ಯಕರ. ಇಲ್ಲಿಯವರೆಗಿನ ಬರೆವಣಿಗೆಯು ಅದರ ಸಾರ ಸತ್ವವನ್ನು ಹಿಂಡಿ ಹಿಪ್ಪೆ ಮಾಡಿದ್ದಾಗಿದೆ. ಅದರ ಹಿಂದಿನ ಅರ್ಥಗಳು ನಾನಾ ಬಗೆಯಲ್ಲಿವೆ. ಅದರ ಬಗೆಗಿನ ವಿಮರ್ಶೆಗಳು ಅನಂತವಾಗಿವೆ. ಯಾವ ವಿಶ್ವ ವಿದ್ಯಾಲಯದ ಪ್ರಮಾಣ ಪತ್ರ ಪಡೆದಿರದ ದಾಸ ಶ್ರೇಷ್ಠರು, ವಿಭಿನ್ನ, ವಿಶೇಷ ರೀತಿಯಲ್ಲಿ ಸಮಾಜದ ಶುದ್ಧೀಕರಣ ಕಾರ್ಯದಲ್ಲಿ ಉದ್ದೇಶ ಪೂರ್ವಕವಾಗಿಯೋ ಇಲ್ಲ ಗೊತ್ತಿಲ್ಲದೆಯೋ ತೊಡಗಿಕೊಂಡು, ಮಾರ್ಗ ರಚಿಸಿದರೋ ಗೊತ್ತಿಲ್ಲ. ಅಂತೂ ಅವರ ಕೀರ್ತನೆಗಳ ಸಾರವಂತೂ ಅತ್ಯದ್ಭುತ
ಶ್ರೀಪಾದರಾಯ,ನರಹರಿತೀರ್ಥರು, ವ್ಯಾಸರಾಯರು, ವಾದಿರಾಜತೀರ್ಥ,ಪುರಂದರ ದಾಸ,ಕನಕದಾಸ,ರಾಘವೇಂದ್ರ ತೀರ್ಥ
ವಿಜಯದಾಸ,ಗೋಪಾಲದಾಸ, ಜಗನ್ನಾಥದಾಸ, ಪ್ರಸನ್ನ ವೆಂಕಟದಾಸ, ಮಹಿಪತಿ ದಾಸ, ಪ್ರಾಣೇಶದಾಸರಾದಿಯಾಗಿ ಮಹಾಮಹಿಮರು, ಭಕ್ತಿ ರಸದೊಡನೆ ಜ್ಞಾನ ರಸವನ್ನೂ ಹರಿಸಿದ್ದಾರೆ. ತನ್ಮೂಲಕ ಸಮಾಜದ ಹೊಟ್ಟನ್ನು ತೂರಿ, ಗಟ್ಟಿ ಕಾಳುಗಳನ್ನು ಹೆಕ್ಕಿಕೊಟ್ಟ ಧೀಮಂತರು ಅಮೂಲ್ಯ ರತ್ನಗಳಾಗಿ ಉಳಿದರು.
ನಾಲ್ವರು ದಾಸ ಯತಿಗಳ ಸಂಕ್ಷಿಪ್ತ ಇತಿಹಾಸ.
(1) ಶ್ರೀಪಾದರಾಜರು :
ಶ್ರೀಪಾದರಾಜರು ಮಧ್ವಾಚಾರ್ಯರ ಶಿಷ್ಯ ಪರಂಪರೆಯಲ್ಲಿ ಅಗ್ರಗಣ್ಯರು. ಇವರ ವ್ಯಕ್ತಿತ್ವವು ವಿಶಿಷ್ಟ . ದಾಸ ಚಳುವಳಿಯ ರೂವಾರಿ. ಸರಳಗನ್ನಡದಲ್ಲಿ ಧರ್ಮಗ್ರಂಥಗಳನ್ನು ತರುವ ಪ್ರಯತ್ನಶೀಲರು.
ಶ್ರೀಪಾದ ರಾಯರು ಚನ್ನಪಟ್ಟಣ ತಾಲೂಕಿನ ಅಬ್ಬೂರು ಎಂಬಲ್ಲಿ 1389 ರಲ್ಲಿ ಜನನ. ತಂದೆ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಮೂಲ ಹೆಸರು ಲಕ್ಷ್ಮೀನಾರಾಯಣ. ಬಾಲ್ಯದ ಗುರು ಸ್ವರ್ಣವರ್ಣತೀರ್ಥರು. 1487 ರಲ್ಲಿ ಕಾಲವಾದ ಯತಿವರ್ಯರ ಬೃಂದಾವನವು ಕೋಲಾರ ಜಿಲ್ಲೆ, ಮುಳಬಾಗಿಲು ಎನ್ನುವಲ್ಲಿದೆ.
ಹರಿಭಕ್ತಿಯ ಪದ ಲಹರಿಯಲ್ಲಿ ಮೊಳಗಿರುವುದು ಕಂಡು ಬರುತ್ತದೆ. ಭಕ್ತಿ ಜೀವನದ ಮೌಲ್ಯಗಳನ್ನು ಸಮಾಜಿಕ ಬದುಕಲ್ಲಿ ಒಡಮೂಡಿಸುವ ಕಾಯಕದಲ್ಲಿ ತೊಡಗಿ, ಉಗಾಭೋಗಗಳು, ಸುಳಾದಿಗಳು, ಕೀರ್ತನೆಗಳು, ದಂಡಕಗಳು, ವೃತ್ತನಾಮಾದಿ- ಕೃತಿಗಳನ್ನು ರಚಿಸಿದ್ದಾರೆ. ಕೃತಿಗಳಲ್ಲಿ ಮಹತ್ವದ್ದಾಗಿರುವ ಗೋಪಿಗೀತೆ, ಭ್ರಮರಗೀತೆ, ವೇಣುಗೀತೆಗಳಂತೂ ಭಕ್ತಿಯ ಪಾರಾಕಾಷ್ಟೆಗೆ ಉದಾಹರಣೆಗಳು. ಇವರ ಶಿಷ್ಯ ವ್ಯಾಸರಾಯರು(ವ್ಯಾಸತೀರ್ಥರು)”ಆದಿಶೇಷನ ಪೋಲ್ವ ಮುನಿ” ಎಂದು ಬಣ್ಣಿಸಿದ್ದಾರೆ. ಮಧ್ವ ಹರಿದಾಸರು (ಪುರಂದರದಾಸರ ಪುತ್ರ) “ವರುಧ್ರುವನ ಅವತಾರ” ಎಂಬ ಅಭಿಮಾನದ ಹೊಗಳಿಕೆ, ಅನನ್ಯ ವ್ಯಕ್ತಿತ್ವದ ಮೇಲಿನ ವರ್ಣನೆ.
ಕೊಡುಗೆಗಳು :
- ರಾಗಬದ್ದವಾಗಿ ಹಾಡುವ, ಸರಳಗನ್ನಡದಲ್ಲಿ ಅರ್ಥವಾಗುವಂತೆ ಪದ್ಯಗಳ ರಚನೆ.
- ಮುಳಬಾಗಿಲಿನಲ್ಲಿ ಮಠದ ಸ್ಥಾಪನೆ.
- ಮುಳಬಾಗಿಲಿನಲ್ಲಿ ವಿದ್ಯಾ ಕೇಂದ್ರದ ಸ್ಥಾಪನೆ.
- ಭ್ರಮರಗೀತೆ,ವೇಣುಗೀತೆ,ಗೋಪಿಗೀತೆ ಕೃತಿಗಳನ್ನು ರಚಿಸಿದ್ದಾರೆ.
(2) ನರಹರಿ ತೀರ್ಥರು : ಇದುವರೆಗೂ ಸಿಕ್ಕ ಮೂಲಾದಾರಗಳು, ನಂಬಿಕೆಗಳ ಪ್ರಕಾರ ನರಹರಿಯ ಸ್ಥಳದ ಬಗೆಗೆ ಖಚಿತವಿಲ್ಲ. ಮೂಲತಃ ಕನ್ನಡಿಗರಲ್ಲ ಎಂಬ ಸಂದೇಹವಿದೆ. ಅಂದು ಕಳಿಂಗವೆಂದು ಕರೆಯಲ್ಪಡುತ್ತಿದ್ದ ಇಂದಿನ ಓರಿಸ್ಸಾ ಅವರ ಮೂಲ ನೆಲೆಯಾಗಿತ್ತೆಂಬ ಮಾಹಿತಿಯಿದೆಯಾದರೂ, ಅವರ ಕನ್ನಡದಲ್ಲಿ ಬರೆದಿರುವ ಪ್ರಬುದ್ಧ ಕೀರ್ತನೆಗಳು ಅವರನ್ನು ಅಚ್ಚ ಕನ್ನಡಿಗರೆಂದೇ ಭಾವಿಸಲು ಪುಷ್ಟಿ ಕೊಡುತ್ತವೆ. ಅವರ ಹಿರಿಕರು ಜೀವನೋಪಾಯಕ್ಕಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋಗಿ ನೆಲೆಸಿರಲೂ ಬಹುದು. ಮಾತೃಭಾಷೆಯಲ್ಲಿ ಕೃತಿ ರಚನೆ ಮಾಡಿರಲೂ ಬಹುದು. ಈ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಪಂಪ, ಬಸವಣ್ಣ,ಹರಿಹರರಂಥವರು ಕಾರ್ಯ ನಿಮಿತ್ತ ರಾಜಾಸ್ಥಾನಗಳಲ್ಲಿದ್ದಂತೆ, ನರಹರಿಯು ಕಳಿಂಗದಲ್ಲಿದ್ದಿರಬಹುದೇನೊ ! ಈ ಊಹೆಗೆ ಆಧಾರಗಳಿಲ್ಲ.
ನರಹರಿ ತೀರ್ಥರು ಜನಿಸಿದ್ದು 1243 ಕಳಿಂಗ. ಜನ್ಮ ನಾಮ ಶ್ಯಾಮ ಶಾಸ್ತ್ರಿಯೆಂದೂ ಮಧ್ವಾಚಾರ್ಯರ ತತ್ವವನ್ನು ಮೆಚ್ಚಿ ಗುರುವನ್ನಾಗಿ ಸ್ವೀಕರಿಸಿ ಅನುಯಾಯಿಯಾಗಿ ಒರಿಸ್ಸಾದಾದ್ಯಂತ ದ್ವೈತ ಸಿದ್ದಾಂತ ಹರಡಲು ಶ್ರಮವಹಿಸಿದ್ದರೆಂದು ತಿಳಿದು ಬರುತ್ತದೆ. ಇವರು ಮೊದಲು ಪೂರ್ವ ಗಂಗರಲ್ಲಿ ಮಂತ್ರಿಯಾಗಿ ಕಾರ್ಯ ನಿರ್ವಹಿಸಿದ್ದರ ಬಗ್ಗೆ, ಭಾನುದೇವ ಮತ್ತು ಸೇನಾಧಿಪತಿ ನರಸಿಂಹ ದೇವರಿಂದ ಪ್ರೋತ್ಸಾಹಿಸಲ್ಪಟ್ಟು, ಕಳಿಂಗದಾದ್ಯಂತ ಮಾಧ್ವ ತತ್ವವನ್ನು ಪ್ರಸಾರ ಮಾಡಿದರು ಎಂಬುದಕ್ಕೆ ಪುರಾವೆಗಳಿವೆ.
ನಂತರದಲ್ಲಿ ಮಧ್ವಾಚಾರ್ಯರ ಶಿಷ್ಯ ಬಳಗದಲ್ಲಿದ್ದು, ಮಠಾಧಿಪತಿಗಳಾಗಿಯೂ ದ್ವೈತ ಮತವನ್ನು ಮುನ್ನಡೆಸಿದವರಲ್ಲಿ ಒಬ್ಬರು. ಬಹುಮುಖ ಪ್ರತಿಭೆಯುಳ್ಳವರಾಗಿದ್ದರೆಂದು, ಮಂತ್ರಿ, ರಾಜ ನೀತಿಜ್ಞ,ವಿದ್ವಾಂಸ, ಮಠಾಧೀಶರಾಗಿದ್ದರಲ್ಲದೇ, ಹರಿದಾಸ ಚಳುವಳಿಯ ಮೂಲ ನೇತಾರರಲ್ಲಿ ಶ್ರೀಪಾದರಾಜರ ಜೊತೆ ನಿಂತವರಲ್ಲಿ ನರಹರಿ ತೀರ್ಥರು ಮಾನ್ಯರು. ತನ್ನ ಅಧಿಕಾರದ ಅವಧಿಯಲ್ಲಿ, ಶ್ರೀಕೂರ್ಮಂ ನಲ್ಲಿ ನರಸಿಂಹ ದೇವಾಲಯ ನಿರ್ಮಿಸಿ, ವಿಧ್ವಂಸಕ ಕೃತ್ಯಗಳಿಂದ ದೇವಾಲಯವನ್ನು ರಕ್ಷಿಸಿದರು.
“ರಘುಕುಲತಿಲಕ” ಎಂಬ ಅಂಕಿತದೊಂದಿಗೆ ಎರೆಡು ಕೃತಿಗಳು ಲಭ್ಯವಿದ್ದರು ವಿಷಯಾಂತರದಿಂದಲೂ, ವಾಕ್ಚಾತುರ್ಯತೆಯ ದೃಷ್ಟಿಯಿಂದ ಸ್ಪಷ್ಟತೆಯಿಲ್ಲ. ಭವಪ್ರಕಾಶಿಕಾ ಅವರ ಮಹತ್ವದ ಕೃತಿ. ಆದರೆ ಅವರ ಬಗೆಗಿನ ಮಾಹಿತಿಯು ನರಹರಿಯತಿಸ್ತೋತ್ರ, ನಾರಾಯಣ ಪಂಡಿತರ “ಮಧ್ವ ವಿಜಯ” ಮುಂತಾದ ಕೃತಿಗಳಿಂದ ದೊರೆತಿವೆ. ಅಲ್ಲದೇ ಶ್ರೀಕೂರ್ಮಂ ಮತ್ತು ಸಿಂಹಾಚಲಂ ದೇವಾಲಯಗಳ ಶಾಸನಗಳಿಂದ ಜೀವನ ಮಾಹಿತಿಯು ಲಭ್ಯವಾಗಿದೆ. ಕರ್ಣಾಟಕದ ಹಂಪೆಯಲ್ಲಿ ಕ್ರಿ.ಶ. 1333 ರಲ್ಲಿ ಕಾಲವಾದರು. ಹಂಪೆಯ ಚಕ್ರತೀರ್ಥದ ಹತ್ತಿರ ಅವರ ಸಮಾಧಿ ಸ್ಥಳ ಇದೆ.
ಕೊಡುಗೆ:
- ಸಂಗೀತಕ್ಕೆ ಅಳವಡಿಸುವ ಕೀರ್ತನೆಗಳನ್ನು ರಚಿಸಿದ್ದು.
- ಹರಿದಾಸ ಚಳುವಳಿಯ ನೇತಾರರು ನರಹರಿ (ಮತ್ತು ಶ್ರೀಪಾದರಾಜರು).
- ಯಕ್ಷಗಾನ ಮತ್ತು ಬಯಲಾಟವನ್ನು ರೂಪಿಸಿದ್ದು.
- ‘ಭವಪ್ರಕಾಶಿಕಾ’ ಕೃತಿ.
3) ವ್ಯಾಸತೀರ್ಥರು. (ವ್ಯಾಸರಾಜರು)
ವ್ಯಾಸರಾಯರೆಂದ ತಕ್ಷಣ ನಮಗೆ ನೆನಪಾಗುವುದು ವಿಜಯನಗರದರಸರುಗಳಿಗೆ ಅಂದರೆ ಸಾಳುವ ನರಸಿಂಹನಿಂದ ಅಚ್ಚುತ ರಾಯನವರೆಗೆ ಇವರೇ ರಾಜಗುರುಗಳು ಎಂದು ನೆನಪಾಗುತ್ತದೆ. ಅದರಲ್ಲೂ ಶ್ರೀ ಕೃಷ್ಣ ದೇವರಾಯನಂಥ ದೊರೆಗೆ ಮಾರ್ಗದರ್ಶಕರೂ, ಧರ್ಮೋಪದೇಶಕರಾಗಿದ್ದರು.
ಮೈಸೂರು ಜಿಲ್ಲೆಯ ಬನ್ನೂರಿನಲ್ಲಿ ಕ್ರಿ.ಶ.1447 ರಲ್ಲಿ ರಾಮಾಚಾರ್ಯರ ಮತ್ತು ಸೀತಾಬಾಯಿ ಎಂಬ ದಂಪತಿಗಳಲ್ಲಿ ಜನಿಸಿದರು.ಮೂಲ ಹೆಸರು ಯತಿರಾಜ ಎಂಬುದು. ಚನ್ನಪಟ್ಟಣ ತಾಲ್ಲೂಕಿನ ಅಬ್ಬೂರು. ಅಲ್ಲಿಯ
ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದರು. ವ್ಯಾಸತೀರ್ಥರು ರಚಿಸಿರುವ 115 ಕ್ಕೂ ಹೆಚ್ಚು ಕೀರ್ತನೆಗಳು ಉಪಲಬ್ದವಾಗಿವೆ. ಉಗಾಭೋಗಗಳು ಸೇರಿದ್ದು, ಕಡೆಯಲ್ಲು ಅಂಕಿತ ನಾಮವಿಡುವ ಪಧ್ಧತಿ ಇವರಿಂದಲೇ ಪ್ರಾರಂಭವಾಯಿತು ಎಂಬುದು ಪ್ರಚಲಿತದಲ್ಲಿದೆ. ವ್ಯಾಸರಾಯರ ಅಂಕಿತ ಶ್ರೀ ಕೃಷ್ಣ. ಸಂಗೀತ ವಿದ್ಯಾ ಸಂಪ್ರದಾಯದ ಪ್ರವರ್ತಕರೆನಿಸಿದ್ದಾರೆ.
ವ್ಯಾಸರಾಯರು 1548 ರಲ್ಲಿ( ಫಾಲ್ಗುಣ ಮಾಸದ ಚತುರ್ಧಿ ದಿನ) ಹಂಪೆಯಲ್ಲಿ ಕಾಲವಾದರು. ಆನೆಗೊಂದಿಯ ಸಮೀಪ ಹರಿಯುವ ತುಂಗಭದ್ರೆಯ ದ್ವೀಪದಲ್ಲಿ ನವ ಬೃಂದಾವನವಿದೆ.
4) ವಾದಿರಾಜರು :
ದಾಸ ಪರಂಪರೆಯ ಯತಿ ಶ್ರೇಷ್ಠರಲ್ಲಿ ಪ್ರಮುಖರೆನಿಸಿದ ವಾದಿರಾಜರು ಉಡುಪಿ ಜಿಲ್ಲೆಯ ಹೂವಿನಕೆರೆ ಗ್ರಾಮದಲ್ಲಿ ರಾಮಾಚಾರ್ಯ ಮತ್ತು ಸರಸ್ವತಿದೇವಿಯರ ಗರ್ಭದಲ್ಲಿ 1480 ರಲ್ಲಿ ಜನಿಸಿದರು. ಪೂರ್ವಾಶ್ರಮದ ಹೆಸರು ಭೂವರಾಹ ಎಂಬ ಮಾಹಿತಿ ಲಭ್ಯವಿದೆ. ಇವರ ಎಂಟನೇ ವಯಸ್ಸಿನ ಲ್ಲಿ ಶ್ರೀಹರಿಯು ‘ಹಯವದನ’ನ ರೂಪದಲ್ಲಿ ದರ್ಶನ ಕೊಟ್ಟ ಕಾರಣ. ಸನ್ಯಾಸಾಶ್ರಮವನ್ನು ಸ್ವೀಕರಿಸಿದರೆಂಬ ಕಥೆಯಿದೆ. ಇಂದಿನ ಉತ್ತರ ಕನ್ನಡದ ಶಿರಸಿಯ ಸೋಂದಾ ಕ್ಷೇತ್ರದಲ್ಲಿ ಅವರು ಮಠಾಧೀಶರಾಗಿದ್ದರು.
ಇವರು ವ್ಯಾಸರಾಯರ ನಂತರದಲ್ಲಿ ಚಳವಳಿಯ ನೇತಾರರಾಗಿ ದ್ವೈತ ಸಿದ್ದಾಂತವನ್ನು ಮುಂದುವರೆಸಿದರು. ದ್ವಿಭಾಷಾ ಪಂಡಿತರಾಗಿದ್ದ ವಾದಿರಾಜರ ಪಾಂಡಿತ್ಯ ಅಸಾಧಾರಣವಾದುದಾಗಿತ್ತು. ವಾಕ್ ಸಿದ್ದಿಯನ್ನು ಪಡೆದಿದ್ದ ವಾದಿರಾಜರು ವಿಜಯನಗರದ ಪ್ರಸಿದ್ಧ ಅರಸ
ಶ್ರೀ ಕೃಷ್ಣದೇವರಾಯನಿಂದ “ಪ್ರಸಂಗಾಭರಣ ತೀರ್ಥ” ಎಂಬ ಪ್ರಶಂಸೆಗೊಳಪಟ್ಟಿದ್ದರು.
ಇಂದು ಅಷ್ಟ ಮಠಗಳಲ್ಲಿ ನಡೆದುಕೊಂಡು ಬಂದಿರುವ ಪರ್ಯಾಯ ಉತ್ಸವಕ್ಕೆ ಅಡಿಗಲ್ಲು ಹಾಕಿದವರು ಇವರೇ. ಅಂದು ಪ್ರಾರಂಭವಾದ ಪದ್ದತಿ ಪ್ರಸ್ತುತ ಸಂದರ್ಭದಲ್ಲಿಯೂ ಜಾರಿಯಲ್ಲಿದೆ. ಕ್ರಿ ಶ 1592 ರಲ್ಲಿ ತಮ್ಮ 112 ನೇ ವಯಸ್ಸಿನಲ್ಲಿ ಕಾಲವಾದ ವಾದಿರಾಜರ ಬೃಂದಾವನ ಸೋದೆಯ ಮಠದಲ್ಲಿಯೇ ಇದೆ.
ಕೊಡುಗೆಗಳು:
- ‘ಹಯವದನ’ ಅಂಕಿತದಲ್ಲಿ ದೇವರನಾಮಗಳು, ಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು, ವೃತ್ತನಾಮಗಳ ರಚನೆ.
- ಸ್ವಪ್ನಗದ್ಯ – ಭಾಮಿನಿ ಷಟ್ಪದಿಯಲ್ಲಿ, ವೈಕುಂಠವರ್ಣನೆ – ಸಾಂಗತ್ಯದಲ್ಲಿ ರಚನೆ ಇತ್ಯಾದಿಗಳು ಮುಖ್ಯವಾಗಿವೆ. ಇವರೆಲ್ಲರ ರಚನೆಗಳು ಭಾಷೆಯ ದೃಷ್ಟಿಯಿಂದ ಮಹತ್ವ ಪಡೆದಿವೆ. ಸಂಸ್ಕೃತದ ದಟ್ಟ ಪ್ರಭಾವದ ಕಾಲದಲ್ಲಿ ಜನ ಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತೆ ಸರಳಗನ್ನಡ ಬಳಸಿದ ವಚನಕಾರರಿಂದ ಆರಂಭವಾದ ಭಾಷಾ ಪ್ರಯೋಗ ಹತ್ತೊಂಬತ್ತನೇ ಶತಮಾನದವರೆಗೂ ಸಾಗಿ ಬಂತು. ಹರಿ ದಾಸರಿಂದ ನಾನಾ ಬಗೆಯಲ್ಲಿ ಪದ್ಯಗಳ ರಚನೆ ಮನ ಮುಟ್ಟುವಂತೆ ಪ್ರಸಾರವಾಯಿತು. ಇಂದಿಗೂ ಸಂಗೀತಗಾರರಿಗೆ ಅಚ್ಚುಮೆಚ್ಚಿನ ಸಾಹಿತ್ಯವಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ