ಪ್ರಗತಿವಾಹಿನಿ ಸುದ್ದಿ, ನವದೆಹಲಿ:
ಸಂಗಮೇಶ ನಿರಾಣಿ ವರದಿಯಂತೆ ಕಾಳಿ ನದಿ ಜೋಡಣೆ ವಿಶೇಷವಾಗಿದೆ. ಇದಕ್ಕೆ ನಾವು ಕೂಡ ಸ್ಪಂದಿಸಲು ಸನ್ನದ್ದರಾಗಿದ್ದೇವೆ. ಆದರೆ ವ್ಯವಸ್ಥಿತವಾದ ವರದಿ ನೀಡಿ ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗುವಂತೆ ಕೇಂದ್ರ ಸಚಿವ ಸದಾನಂದ ಗೌಡ ಸಲಹೆ ನೀಡಿದರು ಎಂದು ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ, ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಶುಕ್ರವಾರ ಶ್ರೀಗಳು ನವದೆಹಲಿಯಲ್ಲಿ ಕೇಂದ್ರ ಸಚಿವರನ್ನು ಭೇಟಿಯಾದ ಬಳಿಕ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಕೇಂದ್ರ ಸಚಿವ ಸದಾನಂದ ಗೌಡರು ಪ್ರಧಾನಿ ನರೇಂದ್ರ ಮೋದಿ ಭೇಟಿಗೂ ಮುನ್ನ ತಾಂತ್ರಿಕ ವ್ಯವಸ್ಥೆಯ ದೃಷ್ಟಿ ಕೋನದಿಂದ ಅಚ್ಚುಕಟ್ಟಾದ ವರದಿ ತಯಾರಿಸಿ ಪ್ರಧಾನಿ ಭೇಟಿಯಾಗಲು ಸೂಚಿಸಿದರು ಎಂದರು.
ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ತೆರಳಿದ ಸಂದರ್ಭದಲ್ಲಿ ಕೇಂದ್ರ ಸಚಿವ ಸದಾನಂದ ಗೌಡರು ನಮ್ಮ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿ ಸಂಗಮೇಶ ನಿರಾಣಿ ಅವರ ಕಾಳಿ ನದಿ ಜೋಡಣೆ ವಿಶೇಷವಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ವ್ಯವಸ್ಥಿತವಾದ ವರದಿ ನೀಡುವಂತೆ ಸಲಹೆ ನೀಡಿದರು ಎಂದು ಹೇಳಿದರು.
ಮಹದಾಯಿ ವಿಚಾರ ಕುರಿತಾಗಿ ಮಾತನಾಡಿದ ಶ್ರೀಗಳು ಮಹದಾಯಿ ವಿಚಾರ ಕುರಿತು ವಿಶೇಷ ಆಸಕ್ತಿಯನ್ನು ಕೇಂದ್ರ ಸರಕಾರ ವಹಿಸಿದೆ. ಅದನ್ನು ಶೀಘ್ರದಲ್ಲೇ ಬಗೆ ಹರಿಸುವುದಾಗಿ ಕೇಂದ್ರ ಸಚಿವರು ಭರವಸೆ ನೀಡಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಮೊದಲ ಆದ್ಯತೆ ನೀರಾವರಿ ಇದಕ್ಕಾಗಿ ವಿಶೇಷ ಆಸಕ್ತಿ ವಹಿಸಲು ಕೇಂದ್ರ ಸರಕಾರ ಸನ್ನದ್ದವಾಗಿದೆ ಎಂದು ತಿಳಿಸಿದ್ದಾರೆ ಎಂದರು.
ಕಾಳಿ ನದಿ ಜೋಡಣೆಯ ವಿಚಾರ ಕುರಿತು ಪ್ರಧಾನಿ ನರೇಂದ್ರ ಮೋದಿ ಭೇಟಿಯಾಗಲು ಕರ್ನಾಟಕದ ವಿವಿಧ ಮಠಾಧೀಶರು ದೆಹಲಿಗೆ ತೆರಳಿದಾಗ ವಿಶೇಷವಾಗಿ ಉತ್ತರ ಕರ್ನಾಟಕದ ಸಮಗ್ರ ನೀರಾವರಿಗೆ ಸ್ಪಂದಿಸಲು ಕೇಂದ್ರ ರಾಜ್ಯ ರೈಲ್ವೆ ಖಾತೆ ಸಚಿವ ಸುರೇಶ ಅಂಗಡಿ, ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ ಕೋರೆ, ಸಂಸದರಾದ ಪಿ.ಸಿ ಗದ್ದಿಗೌಡರ, ಜಿ.ಎಂ.ಸಿದ್ದೇಶ್ವರ, ಮಾಜಿ ಸಚಿವ ಮುರುಗೇಶ ನಿರಾಣಿ ಉತ್ತರ ಕರ್ನಾಟಕದ ಸಮಗ್ರ ನೀರಾವರಿ ಯೋಜನೆ ಅನುಷ್ಠಾನಕ್ಕೆ ಪ್ರಾಮಾಣಿಕವಾಗಿ ತೊಡಗಿಕೊಳ್ಳುತ್ತೇವೆ ಎಂದು ಭರವಸೆ ನೀಡಿದರು.
ಈ ನಿಯೋಗದಲ್ಲಿ ಕೂಡಲಸಂಗಮದ ಶ್ರೀ ಜಯಮೃತ್ಯಂಜ್ಯಯ ಸ್ವಾಮೀಜಿ, ರಾಜೇನಹಳ್ಳಿ ವಾಲ್ಮೀಕಿ ಪೀಠದ ಸ್ವಾಮೀಜಿ, ಹೊಸ ದುರ್ಗದ ಶಾಂತವೀರ ಸ್ವಾಮೀಜಿ, ಭೋವಿಪೀಠದ ಸಿದ್ದರಾಮ ಸ್ವಾಮೀಜಿ, ಮಡಿವಾಳ ಸಮಾಜದ ಸ್ವಾಮೀಜಿ, ಭಗೀರಥ ಪೀಠದ ಉಪ್ಪಾರ ಸಮಾಜದ ಸ್ವಾಮೀಜಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ