43 ಅಭ್ಯರ್ಥಿಗಳ ಕಾಂಗ್ರೆಸ್ 2ನೇ ಪಟ್ಟಿ ಕೆಲವೇ ಕ್ಷಣಗಳಲ್ಲಿ; ಬೆಳಗಾವಿಯ 5 ಕ್ಷೇತ್ರಗಳು ಪಟ್ಟಿಯಲ್ಲಿ
ಪ್ರಗತಿವಾಹಿನಿ ಸುದ್ದಿ, ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆಗೆ ಕಾಂಗ್ರೆಸ್ ಸಿದ್ಧವಾಗಿದೆ. ಗುರುವಾರ ಬೆಳಗ್ಗೆ 11 ಗಂಟೆ ಹೊತ್ತಿಗೆ 43 ಅಭ್ಯರ್ಥಿಗಳನ್ನು ಒಳಗೊಂಡಿರುವ ಕಾಂಗ್ರೆಸ್ ನ 2ನೇ ಪಟ್ಟಿ ಪ್ರಕಟವಾಗುವ ನಿರೀಕ್ಷೆ ಇದೆ.
ಮೊದಲ ಪಟ್ಟಿಯಲ್ಲಿ 124 ಅಭ್ಯರ್ಥಿಗಳ ಹೆಸರಿತ್ತು. ಇನ್ನೂ 100 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಘೋಷಿಸುವುದು ಬಾಕಿ ಉಳಿದಿದೆ. ಇದಕ್ಕಾಗಿ ನವದೆಹಲಿಯಲ್ಲಿ ನಿರಂತರ ಸ್ಕ್ರೀನಿಂಗ್ ಸಮಿತಿ ಸಭೆಗಳು ನಡೆಯುತ್ತಿವೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಪ್ರಮುಖರಾದ ಕೆ.ಸಿ.ವೇಣುಗೋಪಾಲ, ಕರ್ನಾಟಕ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಸೇರಿದಂತೆ ಹಲವಾರು ನಾಯಕರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ.
2ನೇ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆಯ 5 ಕ್ಷೇತ್ರಗಳ ಹೆಸರು ಪ್ರಕಟವಾಗುವ ಸಾಧ್ಯತೆ ಇದೆ. ಈಗಾಗಲೆ 9 ಅಭ್ಯರ್ಥಿಗಳ ಹೆಸರು ಘೋಷಣೆಯಾಗಿದೆ. ಇನ್ನೂ 9 ಬಾಕಿ ಇದ್ದು, ಇಂದು 5 ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಇದೆ.
ಬೆಳಗಾವಿ ಉತ್ತರಕ್ಕೆ ಆಸೀಫ್ (ರಾಜು) ಸೇಠ್, ದಕ್ಷಿಣಕ್ಕೆ ಪ್ರಭಾವತಿ ಚಾವಡಿ, ಕಿತ್ತೂರಿಗೆ ಬಾಬಾಸಾಹೇಬ ಪಾಟೀಲ, ಸವದತ್ತಿಗೆ ವಿಶ್ವಾಸ ವೈದ್ಯ, ನಿಪ್ಪಾಣಿಗೆ ಕಾಕಾ ಸಾಹೇಬ ಪಾಟೀಲ ಹೆಸರು ಅಂತಿಮವಾಗಿದೆ ಎಂದು ಗೊತ್ತಾಗಿದೆ.
ಇನ್ನೂ 4 ಕ್ಷೇತ್ರಗಳ ಹೆಸರು 3ನೇ ಪಟ್ಟಿಯಲ್ಲಿ ಪ್ರಕಟವಾಗುವ ಸಾಧ್ಯತೆ ಇದೆ. ಗೋಕಾಕ ಕ್ಷೇತ್ರಕ್ಕೆ ಮಹಾಂತೇಶ ಕಡಾಡಿ ಅಥವಾ ಅಶೋಕ ಪೂಜಾರಿ ಹೆಸರು ಅಂತಿಮವಾಗುವ ನಿರೀಕ್ಷೆ ಇದೆ. ಅರಬಾವಿ ಭೀಮಪ್ಪ ಗಡಾದ್ ಗೆ ಟಿಕೆಟ್ ಸಾಧ್ಯತೆ ಇದೆ. ರಾಯಬಾಗ ಶಂಬು ಕಲ್ಲೋಳಿಕರ್ ಅಥವಾ ಮಹಾವೀರ ಮೋಹಿತೆ ಹೆಸರು ಘೋಷಣೆಯಾಗಬಹುದು. ಅಥಣಿಗೆ ಧರೆಪ್ಪ ಠಕ್ಕಣ್ಣವರ್ ಅಥವಾ ಗಜಾನನ ಮಂಗಸೂಳಿ ಅಥವಾ ಅಚ್ಛರಿಯ ಹೆಸರು ಬರಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ