ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಗುಜರಾತ್ ನ ಅಮೂಲ್ ಉತ್ಪನ್ನಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿರುವುದಕ್ಕೆ ಕನ್ನಡಿಗರು, ವಿಪಕ್ಷ ನಾಯಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ರಾಜ್ಯಾದ್ಯಂತ ಆಕ್ರೋಶ ಭುಗಿಲೆದ್ದಿದೆ. ಇದು ರಾಜ್ಯದ ನಂದಿನಿ ಬ್ರ್ಯಾಂಡ್ ಮುಗಿಸಲು ಪ್ರಧಾನಿ ಮೋದಿ, ಅಮಿತ್ ಶಾ ನಡೆಸಿರುವ ಹುನ್ನಾರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ರಾಜ್ಯದ ರೈತರಿಗೆ ಕೇಂದ್ರ ಸರ್ಕಾರ ಮಾಡುತ್ತಿರುವ ದ್ರೋಹ. ಕೆ.ಎಂ.ಎಫ್, ನಂದಿನಿಯನ್ನು ಕಬಳಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಅಮಿತ್ ಶಾ ಷಡ್ಯಂತ್ರ ನಡೆಸಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಹೆಚ್.ಡಿ.ಕುಮರಸ್ವಾಮಿ ಕಿಡಿಕಾರಿದ್ದಾರೆ.
ಕನ್ನಡಿಗರ ಜೀವನಾಡಿ ನಂದಿನಿಯನ್ನು ಮುಗಿಸಲು ಈಗ 3ನೇ ಸಂಚು ನಡೆದಿದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ. ಸಂಚು1: ಅಮುಲ್ ಜತೆ ನಂದಿನಿ ವಿಲೀನ; ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ
ಸಂಚು2: ಮೊಸರಿನ ಮೇಲೆ ಹಿಂದಿಯ ‘ದಹಿ’ ಪದ ಮುದ್ರಣ ಕನ್ನಡಿಗರ ತೀವ್ರ ವಿರೋಧದಿಂದ ಎರಡೂ ಸಂಚು ವಿಫಲ. 3ನೇ ಸಂಚು ಸಫಲಗೊಳಿಸಲು ಅಮುಲ್ ಮೂಲಕ ಕೇಂದ್ರ ಸರಕಾರ ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತನ್ನ ಏಕೈಕ ಪ್ರತಿಸ್ಪರ್ಧಿ ನಂದಿನಿಗೆ ಕರ್ನಾಟಕದಲ್ಲೇ ಅಡ್ಡಿ ಮಾಡಬೇಕೆನ್ನುವುದು ಅಮುಲ್ ದುರಾಲೋಚನೆ. ʼ ಒಂದು ದೇಶ, ಒಂದು ಅಮುಲ್, ಒಂದೇ ಹಾಲು, ಒಂದೇ ಗುಜರಾತ್ʼ ಎನ್ನುವುದು ಕೇಂದ್ರ ಸರಕಾರದ ಅಧಿಕೃತ ನೀತಿಯಂತಿದೆ. ಅದಕ್ಕೆ ಅಮುಲ್ʼಗೆ ಒತ್ತಾಸೆಯಾಗಿ ನಿಂತು ಕೆಎಂಎಫ್ ಕತ್ತು ಹಿಚುಕುತ್ತಿದೆ. ಈಗ ಅಮುಲ್ ಹಿಂಬಾಗಿಲ ಮೂಲಕ ಒಳನುಗ್ಗುತ್ತಿದೆ ಎಂದು ಕಿಡಿಕಾರಿದ್ದಾರೆ.
ಹೈನುಗಾರಿಕೆಯ ಮೂಲ ಉತ್ಪನ್ನ ಹಾಲನ್ನು ತನ್ನ ಬ್ರ್ಯಾಂಡ್ʼನಲ್ಲಿಯೇ ಕರ್ನಾಟಕದಲ್ಲಿಯೇ ಮಾರಲು ಹೊರಟಿರುವ ಅಮುಲ್, ನಂದಿನಿಯನ್ನು ಆಪೋಶನ ತೆಗೆದುಕೊಳ್ಳುವುದು ಖಚಿತ. ವಿಲೀನಕ್ಕೆ, ಹಿಂದಿ ಹೇರಿಕೆಗೆ ಪ್ರಬಲ ಪ್ರತಿರೋಧ ಒಡ್ಡುತ್ತಿರುವ ಕನ್ನಡಿಗರು ಮತ್ತು ಕೆಎಂಎಫ್ʼನ ಕಥೆ ಮುಗಿಸಲೇಬೇಕು ಎಂದು ಅಮುಲ್ ಪಣ ತೊಟ್ಟಂತಿದೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ ಸಿಂಗ್ ಸುರ್ಜೆವಾಲಾ ಸಹ ಅಮುಲ್ ವಿಷಯದಲ್ಲಿ ಅಮಿತ್ ಶಾ ಹಾಗೂ ಸಚಿವೆ ಶೋಭಾ ಕರಂದ್ಲಾಚೆ ನಡೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಪಕ್ಷಗಳ ಆರೋಪಕ್ಕೆ ನವದೆಹಲಿಯಲ್ಲಿ ಪ್ರತಿಕ್ರಿಯಿಸಿರುವ ಸಿಎಂ ಬಸವರಾಜ್ ಬೊಮ್ಮಾಯಿ, ಕೆ.ಎಂ.ಎಫ್ ನ ನಂದಿನಿ ರಾಷ್ಟ್ರಮಟ್ಟದ ಬ್ರ್ಯಾಂಡ್, ನಂದಿನಿ ಬ್ರ್ಯಾಂಡ್ ದೇಶದಲ್ಲಿ ನಂಬರ್ 1 ಸ್ಥಾನಕ್ಕೆ ಏರಲಿದೆ ಎಂದು ತಿಳಿಸಿದ್ದಾರೆ.
ಅಮುಲ್ ವಿಚಾರದಲ್ಲಿ ಕಾಂಗ್ರೆಸ್ ರಾಜಕೀಯ ಮಾಡುತ್ತಿದೆ. ಅಮುಲ್ ವಿಚಾರದಲ್ಲಿ ಯಾರೂ ಆತಂಕ ಪಡುವ ಅಗತ್ಯವಿಲ್ಲ. ರಾಜ್ಯದ ನಂದಿನಿ ಬ್ರ್ಯಾಂಡ್ ಉತ್ಪನ್ನಗಳ ವೃದ್ಧಿಗೆ ಮತ್ತಷ್ಟು ಕ್ರಮ ಕೈಗೊಳ್ಳುತ್ತೇವೆ. ನಮ್ಮ ಕಾಲದಲ್ಲಿಯೇ ಮೆಗಾ ಡೈರಿಗಳು ಸ್ಥಾಪನೆಯಾಗಿವೆ. ಮುಂದಿನ ದಿನಗಳಲ್ಲಿ ರಾಷ್ಟ್ರಮಟ್ಟದ ಬ್ರ್ಯಾಂಡ್ ಆಗಲಿದೆ ಎಂದು ಹೇಳಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ