ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ‘ಬಿಜೆಪಿಯಲ್ಲಿ ಸಾಕಷ್ಟು ಗೊಂದಲಗಳಿವೆ. ಅವರಿಗೆ ಅಭ್ಯರ್ಥಿ ಅಂತಿಮ ಮಾಡಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯ ನಾಯಕರು ಆ ಪಕ್ಷ ತೊರೆಯಲು ಕಾಯುತ್ತಿದ್ದಾರೆ. ಹೀಗಾಗಿ ತಮ್ಮ ನಾಯಕರುಗಳನ್ನು ಪಕ್ಷದಲ್ಲೇ ಹಿಡಿದಿಟ್ಟುಕೊಳ್ಳು ಅವರು ಪಟ್ಟಿ ಬಿಡುಗಡೆ ಮಾಡುತ್ತಿಲ್ಲ. ಕೊನೆ ಕ್ಷಣದವರೆಗೂ ಪಕ್ಷ ತೊರೆಯಲು ಅವಕಾಶ ನೀಡಬಾರದು ಎಂದು ಕಾಯುತ್ತಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಟಾಂಗ್ ಕೊಟ್ಟಿದ್ದಾರೆ.
ಕಾಂಗ್ರೆಸ್ ಪಕ್ಷದ ಮೂರನೇ ಪಟ್ಟಿ ಬಿಡುಗಡೆ ಯಾವಾಗ ಎಂದು ಕೇಳಿದಾಗ, ‘ಬಿಜೆಪಿಯ ಪಟ್ಟಿ ನೋಡೋಣ. ಅವರ ಮೊದಲ ಪಟ್ಟಿ ಬಿಡುಗಡೆ ಯಾವಾಗ ಎಂದು ನೀವು ಅವರನ್ನು ಕೇಳುತ್ತಲೇ ಇಲ್ಲ. ಅವರು ಪಟ್ಟಿ ಬಿಡುಗಡೆ ಮಾಡಲಿ ನೋಡೋಣ’ ಎಂದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳು ಭಾನುವಾರ ಬಿಜೆಪಿ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ತಡವಾಗುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಬಿಜೆಪಿಯವರು ತಮ್ಮ ನಾಯಕರನ್ನು ಈ ರೀತಿ ಹಿಡಿದಿಟ್ಟುಕೊಳ್ಳಬಹುದು. ಆದರೆ ರಾಜ್ಯದ ಮತದಾರರು ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕಾಂಗ್ರೆಸ್ ಸರ್ಕಾರವನ್ನು ತರಲು ತೀರ್ಮಾನ ಮಾಡಿಯಾಗಿದೆ’ ಎಂದು ತಿಳಿಸಿದರು. ಉಳಿದಂತೆ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಕೊಟ್ಟಿರುವ ಉತ್ತರಗಳು ಹೀಗಿವೆ.
ಚಂದ್ರಪ್ಪ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಿರುವ ಬಗ್ಗೆ ಕೇಳಿದಾಗ, ‘ಧೃವನಾರಾಯಣ ಅವರು ಇಂದು ನಮ್ಮ ಜತೆ ಇಲ್ಲ. ಅವರ ಸ್ಥಾನವನ್ನು ತುಂಬಲು ಅದೇ ಪ್ರಭಾವ ಹಾಗೂ ಅವರ ಆತ್ಮೀಯರಾದ ಚಂದ್ರಪ್ಪ ಅವರನ್ನು ಕೆಪಿಸಿಸಿ ಕಾರ್ಯಾಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಚಂದ್ರಪ್ಪ ಅವರು ಹಿರಿಯರು, ಉತ್ತಮವಾಗಿ ಕೆಲಸ ಮಾಡುತ್ತಾರೆ. ಅವರಿಗೆ ಶುಭವಾಗಲಿ. ಅವರು ಧೃವನಾರಾಯಣ ಅವರ ಜಾಗದಲ್ಲಿ ಕೂತು ಕಾಂಗ್ರೆಸ್ ಪಕ್ಷ ಸಂಘಟನೆ ಮಾಡುವ ಕೆಲಸ ಮಾಡುತ್ತಾರೆ’ ಎಂದು ತಿಳಿಸಿದರು.
ಅನೇಕ ಟಿಕೆಟ್ ವಂಚಿತರಿಗೆ ಜೆಡಿಎಸ್ ಗಾಳ ಹಾಕುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಅವರು ಹಾಕಲಿ, ತೊಂದರೆ ಇಲ್ಲ. ಅವರ ಪಕ್ಷದಿಂದ ಹಾಲಿ ಶಾಸಕರುಗಳೇ ನಮ್ಮ ಪಕ್ಷ ಸೇರುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಅವರ ಪಕ್ಷದಿಂದ ಸ್ಪರ್ಧಿಸಿದ್ದ 20 ಮಂದಿ ಕಾಂಗ್ರೆಸ್ ಪಕ್ಷ ಸೇರಿದ್ದಾರೆ. ನಾವು ಅವರ ಪ್ರಯತ್ನವನ್ನು ಪ್ರಶ್ನಿಸುವುದಿಲ್ಲ. ರಾಜಕೀಯದಲ್ಲಿ ಇದೆಲ್ಲವೂ ಸರ್ವೇ ಸಾಮಾನ್ಯ. ರಾಜ್ಯದ ಜನರ ಆಶೀರ್ವಾದದಿಂದ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಸ್ಪಷ್ಟ ಬಹುಮತ ಪಡೆಯಲಿದೆ. ಜನರ ಸೇವೆ ಮಾಡಿ ಪ್ರಜಾಪ್ರಭುತ್ವ ರಕ್ಷಣೆ ಮಾಡುತ್ತೇವೆ’ ಎಂದು ಉತ್ತರಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ನಿಂದ ಮತ್ತಷ್ಟು ಶಾಸಕರು ಕಾಂಗ್ರೆಸ್ ಸೇರುತ್ತಾರಾ ಎಂಬ ಪ್ರಶ್ನೆಗೆ, ‘ನಾನು ಈಗಲೇ ಆ ಗುಟ್ಟನ್ನು ರಟ್ಟು ಮಾಡುವುದಿಲ್ಲ’ ಎಂದು ತಿಳಿಸಿದರು.
ಕಾಂಗ್ರೆಸ್ ಪಕ್ಷದ ಸ್ಟಾರ್ ಪ್ರಚಾರಕರು ಯಾರು ಎಂದು ತಿಳಿಸಿಲ್ಲ ಎಂಬ ಪ್ರಶ್ನೆಗೆ, ‘ನಮ್ಮ ಸಂಸ್ಕೃತಿಯೇ ನಮ್ಮ ದೇಶದ ಆಸ್ತಿ. ಪ್ರತಿಯೊಬ್ಬರಿಗೂ ಅವರದೇ ಆದ ನಂಬಿಕೆ, ಆಚರಣೆ ಇರುತ್ತದೆ. ನಮ್ಮ ದೇಶದಲ್ಲಿ ರಾಮನ ತಂದೆ ಧಶರಥನಿಗಿಂತ ರಾಮನ ಭಂಟ ಹನುಮಂತನಿಗೆ ಹೆಚ್ಚು ದೇವಾಲಯಗಳಿವೆ. ಕಾರಣ ಸಮಾಜದಲ್ಲಿ ಯಾರು ಸೇವೆ ಮಾಡುತ್ತಾರೋ ಅವರಿಗೆ ಜನ ಆದ್ಯತೆ ನೀಡುತ್ತಾರೆ’ ಎಂದು ತಿಳಿಸಿದರು.
ನಾವು ಕೋವಿಡ್ ಸಮಯದಲ್ಲಿ ಜೀವ ಉಳಿಸಿದ್ದೇವೆ ನಮ್ಮ ಸರ್ಕಾರಕ್ಕೆ ಬೆಂಬಲ ನೀಡಿ ಎಂಬ ಆರೋಗ್ಯ ಸಚಿವ ಸುಧಾಕರ್ ಅವರ ಹೇಳಿಕೆ ವಿಚಾರವಾಗಿ ಪ್ರಶ್ನಿಸಿದಾಗ, ‘ಆವರು ಯಾರ ಜೀವ ಉಳಿಸಿದ್ದಾರೆ. ಆಕ್ಸಿಜನ್ ನೀಡದೇ ಅವರು ಜನರನ್ನು ಕೊಲೆ ಮಾಡಿದ್ದಾರೆ. ಚಾಮರಾಜನಗರದಲ್ಲಿ 36 ಮಂದಿ ವಿಲವಿಲನೆ ಒದ್ದಾಡಿ ಸತ್ತರೆ ಕೇವಲ 3 ಜನ ಸತ್ತಿದ್ದಾರೆ ಎಂದರು. ಕೋವಿಡ್ ಸಮಯದಲ್ಲಿ 4.50 ಲಕ್ಷ ಜನ ಸತ್ತಿದ್ದು, ಅವರಲ್ಲಿ ಯಾರಿಗೂ ಸರಿಯಾಗಿ ಪರಿಹಾರ ನೀಡಿಲ್ಲ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದವರಿಗೆ ಬಿಲ್ ಕಟ್ಟುವುದಾಗಿ ಹೇಳಿದ್ದರು. ನೀಡಲಿಲ್ಲ. ರಾತರಿಗೆ ಬೆಂಬಲ ಬೆಲೆ ನೀಡಲಿಲ್ಲ, ಮಾರುಕಟ್ಟೆ ನೀಡಲಿಲ್ಲ. ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಕಚೇರಿ ಮುಚ್ಚದೇ, ಆರೋಗ್ಯ ಹಸ್ತ ಸೇರಿದಂತೆ ಅನೇಕ ಕಾರ್ಯಕ್ರಮ ಮಾಡಿದೆವು. ವಲಸೆ ಕಾರ್ಮಿಕರು ಮರಳಿ ತಮ್ಮ ಊರಿಗೆ ಹೋಗಲು ಮುಂದಾದಾಗ, 3 ಪಟ್ಟು ಟಿಕೆಟ್ ದರ ನಿಗದಿ ಮಾಡಿ ಸುಲಿಗೆ ಮಾಡಲು ಸರ್ಕಾರ ಮುಂದಾಗಿತ್ತು. ಆ ಸಮಯದಲ್ಲಿ 1 ಕೋಟಿ ಚೆಕ್ ನೀಡಲು ಮುಂದಾಗಿ ಅವರಿಗೆ ಒಂದು ವಾರ ಉಚಿತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಮಾಡಿದ್ದು ಕಾಂಗ್ರೆಸ್ ಪಕ್ಷ. ರೈತರಿಂದ ಹಣ್ಣು, ತರಕಾರಿ ಖರೀದಿ ಮಾಡಿ ಅವರ ರಕ್ಷಣೆ ಮಾಡಿದ್ದುಕಾಂಗ್ರೆಸ್ ಪಕ್ಷ. ಇಷ್ಟೆಲ್ಲಾ ಆದರೂ ಕೋವಿಡ್ ಸಮಯದಲ್ಲಿ ಬಿಜೆಪಿ ಜೀವ ಉಳಿಸಿದೆ ಎಂದು ಸುಳ್ಳು ಹೇಳುತ್ತಿರುವ ಸುಧಾಕರ್ ಅವರಿಗೆ ನಾಚಿಕೆಯಾಗಬೇಕು. ಕೋವಿಡ್ ಸಮಯದಲ್ಲಿ ಅತಿ ಹೆಚ್ಚು ಭ್ರಷ್ಟಾಚಾರ ಮಾಡಿದ್ದು ಆರೋಗ್ಯ ಇಲಾಖೆಯಲ್ಲಿ. ಬೆಡ್ ಹಗರಣದ ಬಗ್ಗೆ ಮಾತನಾಡಿದ್ದು ಬಿಜೆಪಿ ಸಂಸದರು. ಕೋವಿಡ್ ಕೇರ್ ಸೆಂಟರ್ ಹೆಸರಲ್ಲಿ 10 ಸಾವಿರ ಬೆಡ್ ವ್ಯವಸ್ಥೆ ಕಲ್ಪಿಸುವುದಾಗಿ ಹೇಳಿದರು, ಎ,ಟು ಬೆಡ್ ವ್ಯವಸ್ಥೆ ಕಲ್ಪಿಸಿ ಎ,ಟು ಜನರಿಗೆ ಚಿಕಿತ್ಸೆ ನೀಡಿದರು? ಆ ಬೆಡ್ ಗಳು ಏನಾದವು? ಈ ವಿಚಾರದಲ್ಲಿ ಸುಳ್ಳು ಹೇಳಿ ಮಾನ ಮರ್ಯಾದೆ ತೆಗೆದುಕೊಳ್ಳಬೇಡಿ. ಈ ರಾಜ್ಯವನ್ನು ಕಳಂಕಿತ ರಾಜ್ಯ ಎಂದು ಮಾಡಿದ್ದಾರಿ. ಕರ್ನಾಟಕವನ್ನು ಭ್ರಷ್ಟಾಚಾರದ ರಾಜಧಾನಿ ಎಂಬ ಹಣೆಪಟ್ಟಿ ಕೊಟ್ಟಿರುವುದು ಬಿಜೆಪಿ ಸರ್ಕಾರ. ಮೇ 10 ಕೇವಲ ಮತದಾನದ ದಿನವಲ್ಲ, ರಾಜ್ಯದ ಬದಲಾವಣೆಗೆ ನಾಂದಿ ಹಾಡುವ ದಿನ, ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸುವ ದಿನ, ಸಂವಿಧಾನ ರಕ್ಷಣೆ ಮಾಡುವ ದಿನ. ಮೇ 10ರಂದು ಮತದಾನ ನಡೆಯಲಿದ್ದು, 13ರಂದು ಫಲಿತಾಂಶ ಬರಲಿದೆ. ಮೇ 15ರಂದು ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡಲಾಗುವುದು’ ಎಂದು ತಿಳಿಸಿದರು.
ವರುಣಾದಲ್ಲಿ ಪ್ರಬಲ ಅಭ್ಯರ್ಥಿ ಕಣಕ್ಕಿಳಿಸಲು ಬಿಜೆಪಿ ತಯಾರಿ ನಡೆಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ಅವರ ಪಕ್ಷದಲ್ಲಿ ಅವರು ಏನಾದರೂ ಮಾಡಿಕೊಳ್ಳಅಲಿ. ನಮ್ಮ ಯಾವುದೇ ಅಭ್ಯಂತರವಿಲ್ಲ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ