Kannada NewsKarnataka News

ಒಂದು ಹೆಜ್ಜೆ ಹಿಂದಿಟ್ಟ ಅಶೋಕ ಪೂಜಾರಿ; ಗ್ರಾಮ ಸಂಚಾರಕ್ಕೆ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಸೋಮವಾರ ಬೆಂಬಲಿಗರ ಸಭೆ ಬಳಿಕ ಮುಂದಿನ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದ್ದ ಗೋಕಾಕ ಕಾಂಗ್ರೆಸ್ ಟಿಕೆಟ್ ವಂಚಿತ ಅಶೋಕ ಪೂಜಾರಿ, ಇದೀಗ ಗ್ರಾಮ ಸಂಚಾರದ ಬಳಿಕ ನಿರ್ಧರಿಸುವುದಾಗಿ ತಿಳಿಸಿದ್ದಾರೆ.

ಸೋಮವಾರ ಬೆಂಬಲಿಗರ ಸಭೆಯಲ್ಲಿ ಸಲಹೆಗಳನ್ನು ಕೇಳಿದ್ದಾರೆ. ಬೇರೆ ಬೇರೆ ರೀತಿಯ ಸಲಹೆಗಳು ಬಂದಿವೆ. ಆದರೆ ಹೆಚ್ಚಿನವರು ಈ ಬಾರಿ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಸಲಹೆ ನೀಡಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ ನೀಡುವ ಮೂಲಕ ನೀವು ಇಷ್ಟು ವರ್ಷದಿಂದ ಯಾವ ಉದ್ದೇಶಕ್ಕಾಗಿ ಹೋರಾಟ ನಡೆಸುತ್ತ ಬಂದಿದ್ದೀರೋ ಅದನ್ನು ಸಾಫಲ್ಯಗೊಳಿಸಲು ಪ್ರಯತ್ನಿಸಿ. ನೀವು ಪ್ರತ್ಯೇಕವಾಗಿ ನಿಂತರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ವಿರೋಧಿಗಳಿಗೆ ಅನುಕೂಲವಾಗಲಿದೆ. ಮತ್ತೆ ಅದೇ ವ್ಯವಸ್ಥೆ ಮುಂದುವರಿಯಲಿದೆ ಎಂದು ಕಿವಿಮಾತು ಹೇಳಿದ್ದಾರೆ. ಕೆಲವರು ಜೆಡಿಎಸ್ ನಿಂದ ಕಣಕ್ಕಿಳಿಯುವಂತೆ ಸಲಹೆ ನೀಡಿದ್ದಾರೆ. ಆದರೆ ಮತ್ತೆ ಜೆಡಿಎಸ್ ಗೆ ಮರಳುವ ಮನಸ್ಸಿಲ್ಲ ಎಂದು ಅಶೋಕ ಪೂಜಾರಿ ಸ್ಪಷ್ಟವಾಗಿ ತಿಳಿಸಿದ್ದಾರೆ.

ಅಂತಿಮವಾಗಿ, ನಾಳೆಯಿಂದ ಏ.18ರ ವರೆಗೆ ಗ್ರಾಮಗಳಲ್ಲಿ ಓಡಾಡಿ ಜನರ ಅಭಿಪ್ರಾಯ ಪಡೆದು 19ರಂದು ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಕುರಿತು ಬೇಸರವಿಲ್ಲ. ಕಾಂಗ್ರೆಸ್ ನ ಯಾವುದೇ ನಾಯಕರ ಕುರಿತು ನನಗೆ ಮುನಿಸಿಲ್ಲ. ಸತೀಶ್ ಜಾರಕಿಹೊಳಿ, ಲಕ್ಷ್ಮೀ ಹೆಬ್ಬಾಳಕರ್ ಅವರ ಬಗ್ಗೆ ನನಗೆ ಗೌರವವಿದೆ. ಹಾಗೆಯೇ ರಾಜ್ಯ ನಾಯಕರ ಬಗೆಗೂ ವಿಶ್ವಾಸವಿದೆ. ಕೆಲವೊಂದು ಸಂದರ್ಭದಲ್ಲಿ ಅವರು ಅನಿವಾರ್ಯವಾಗಿ ಇಂತಹ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಆದರೆ ನಾನು ಬೆಂಬಲಿಗರು ಹಾಗೂ ಮತದಾರರ ಅಭಿಪ್ರಾಯ ಕೇಳಲೇಬೇಕಾಗುತ್ತದೆ. ಹಾಗಾಗಿ ಅವರ ಅಭಿಪ್ರಾಯ ಪಡೆದ ಬಳಿಕ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತೇನೆ ಎಂದು ತಿಳಿಸಿದರು.

ಈ ಮಧ್ಯೆ, ಗೋಕಾಕ ಕಾಂಗ್ರೆಸ್ ಅಭ್ಯರ್ಥಿ ಡಾ.ಮಹಾಂತೇಶ ಕಡಾಡಿ ಮತ್ತು ಅವರ ಬೆಂಬಲಿಗರು, ಅಶೋಕ ಪೂಜಾರಿಯವರ ಕಾಲಿಗೆ ಬಿದ್ದು ಬೆಂಬಲ ಕೋರುತ್ತೇವೆ. ಅಷ್ಟೇ ಅಲ್ಲ ಪ್ರಚಾರಕ್ಕೂ ಅವರನ್ನು ಕರೆದುಕೊಂಡು ಬರುತ್ತೇವೆ ಎಂದು ತಿಳಿಸಿದ್ದಾರೆ.

https://pragati.taskdun.com/is-ramesh-jarakiholi-important-for-bjp-is-lakshman-savadi-important/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button