
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ರಾಜಕೀಯ ಪಕ್ಷಗಳಿಗೆ ಕೆಲ ಕ್ಷೇತ್ರಗಳ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿ ಪರಿಣಮಿಸಿದೆ. ಜೆಡಿಎಸ್ ಗೆ ಹಾಸನ ಟಿಕೆಟ್ ವಿಚಾರ ಕಗ್ಗಂಟಾಗಿದ್ದು, ಭವಾನಿ ರೇವಣ್ಣಗೆ ಟಿಕೆಟ್ ನೀಡಬೇಕು ಎಂದು ರೇವಣ್ಣ ಕುಟುಂಬ ಪಟ್ಟು ಹಿಡಿದಿದ್ದರೆ, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸಾಮಾನ್ಯ ಕಾರಕರ್ತನಿಗೆ ಟಿಕೆಟ್ ಎಂದು ಹೇಳುತ್ತಿದ್ದಾರೆ.
ಇದೇ ವಿಚಾರವಾಗಿ ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹೆಚ್.ಡಿ.ಕುಮಾರಸ್ವಾಮಿ, ಹಾಸನದಲ್ಲಿ ಭವಾನಿ ರೇವಣ್ಣ ಸ್ಪರ್ಧೆ ಮಾಡಿದರೆ ಗೆಲ್ಲಲ್ಲ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಗೆಲ್ಲಿಸಬೇಕು ಎಂಬುದು ನನ್ನ ಗುರಿ. ಹಾಗಾಗಿ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂಬ ನನ್ನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಹೇಳಿದ್ದಾರೆ.
ಎರಡು ಬಾರಿ ನಾನು ಮುಖ್ಯಮಂತ್ರಿಯಾದವನು. ಯಾವ ಕ್ಷೇತ್ರದಲ್ಲಿ ಯಾರನ್ನು ಕಣಕ್ಕಿಳಿಸಿದರೆ ಗೆಲ್ಲುತ್ತಾರೆ ಎಂಬ ಲೆಕ್ಕಾಚಾರದ ಬಗ್ಗೆ ನಮಗೆ ಗೊತ್ತಿಲ್ಲವೇ? ಕ್ಷೇತ್ರದಲ್ಲಿ ಜನರ ಅಭಿಪ್ರಾಯ ಹೇಗಿದೆ ಎಂಬುದು ಮುಖ್ಯ. ಹಾಸನದಲ್ಲಿ ಕಾರ್ಯಕರ್ತರ ನಿರ್ಧಾರವೇ ಅಂತಿಮ ಎಂದರು.
ವಾಸ್ತವಿಕತೆ, ಗ್ರೌಂಡ್ ರಿಯಾಲಿಟಿ ಮೇಲೆ ಟಿಕೆಟ್ ಕೊಡುತ್ತೇವೆ. ಒಂದುವರೆ ವರ್ಷದ ಹಿಂದೆ ಹಾಸನ ಶಾಸಕರು ಸವಾಲು ಹಾಕಿದ್ದರು. ಹಾಗಾಗಿ ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಿ ಗೆಲ್ಲಿಸುತ್ತೇವೆ. ಈ ನಿಲುವಿನಲ್ಲಿ ಬದಲಾವಣೆ ಇಲ್ಲ. ರೇವಣ್ಣ ಕುಟುಂಬಕ್ಕೆ ಯಾರೋ ತಲೆತುಂಬುತ್ತಿದ್ದಾರೆ. ಶಕುನಿಗಳು ದೇವೇಗೌಡರ ಕುಟುಂಬ ಮುಗಿಸಲು ಯತ್ನಿಸುತ್ತಿವೆ. ಮಹಾಭಾರತದಲ್ಲಿ ನಡೆದಂತಹ ಘಟನೆಗಳೇ ಇಂದಿನ ರಾಜಕೀಯದಲ್ಲಿಯೂ ನಡೆಯುತ್ತಿವೆ ಎಂದು ಹೇಳಿದರು.