ಕ್ಷೇತ್ರ ತ್ಯಾಗಕ್ಕೆ ವಿಶ್ವೇಶ್ವರ ಹೆಗಡೆ ಕಾಗೇರಿಗೂ ಹೈಕಮಾಂಡ್ ಸೂಚನೆ?

ಪ್ರಗತಿವಾಹಿನಿ ಸುದ್ದಿ, ಶಿರಸಿ: ಚುನಾವಣೆ ರಾಜಕೀಯದಿಂದ ನಿವೃತ್ತರಾಗುವಂತೆ ವಿಧಾನ ಸಭೆಯ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೂ ಹೈಕಮಾಂಡ್ ಸೂಚನೆ ನೀಡಿದೆಯಾ?

ಅಂತದ್ದೊಂದು ದಟ್ಟ ಸುದ್ದಿ ರಾಜಕೀಯ ವಲಯದಲ್ಲಿ ಹರಡಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಕ್ಷೇತ್ರ ತ್ಯಾಗಕ್ಕೆ ಪಕ್ಷದ ಸೂಚನೆಯ ಬೆನ್ನಲ್ಲೇ ವಿಶ್ವೇಶ್ವರ ಹೆಗಡೆ ಅವರಿಗೂ ಅಂತಹ ಸೂಚನೆ ನೀಡಲಾಗಿದೆ, ಜೊತೆಗೆ, ಸುರೇಶ ಕುಮಾರ ಸೇರಿದಂತೆ 6 -7 ಹಿರಿಯ ನಾಯಕರಿಗೆ ಹೈಕಮಾಂಡ್ ಸೂಚಿಸಿದೆ ಎನ್ನುವ ಸುದ್ದಿ ಹರಡಿದೆ.

ಈ ಕುರಿತು ಸ್ಪಷ್ಟನೆ ಕೇಳಲು ಪ್ರಗತಿವಾಹಿನಿ ವಿಶ್ವೇಶ್ವರ ಹೆಗಡೆ ಅವರನ್ನು ಸಂಪರ್ಕಿಸಿದಾಗ, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡಿರುವುದರಿಂದ ನಂತರ ಮಾತನಾಡುವುದಾಗಿ ತಿಳಿಸಿದರು.

6 ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ, ಪಕ್ಷದಲ್ಲಿ ಹಾಗೂ ಕ್ಷೇತ್ರದಲ್ಲಿ ಉತ್ತಮ ಹೆಸರು ಹೊಂದಿರುವ ಕಾಗೇರಿ ಅವರಿಗೆ ಚುನಾವಣೆ ರಾಜಕೀಯ ನಿವೃತ್ತಿಗೆ ಪಕ್ಷ ಸೂಚನೆ ನೀಡಿದೆ ಎನ್ನುವ ಸುದ್ದಿ ಕ್ಷೇತ್ರದಲ್ಲಿ ಭಾರೀ ಆಘಾತಕ್ಕೆ ಕಾರಣವಾಗಿದೆ. ರಾಜಕೀಯದಲ್ಲಿ ಯಾವುದೇ ಕಪ್ಪು ಚುಕ್ಕೆ ಹೊಂದಿರದ ಕಾಗೇರಿ ಅವರು ಇಷ್ಟು ದಿಢೀರ್ ಆಗಿ ನಿವೃತ್ತರಾಗುವುದನ್ನು ಯಾರೂ ನಿರೀಕ್ಷಿಸಿಲ್ಲ. ಅವರು ರಾಜಕೀಯದಲ್ಲಿ ಇನ್ನಷ್ಟು ಎತ್ತರಕ್ಕೆ ಏರುತ್ತಾರೆನ್ನುವ ನಿರೀಕ್ಷೆಯಲ್ಲಿ ಅವರ ಅಭಿಮಾನಿಗಳಿದ್ದಾರೆ.

ಜೆಡಿಎಸ್ ನಿಂದ ಶಶಿಭೂಷಣ ಹೆಗಡೆ ಅವರನ್ನು ಬಿಜೆಪಿಗೆ ಚುನಾವಣೆ ಹೊತ್ತಿನಲ್ಲಿ ಕರೆತಂದಾಗ, ಈ ಬಾರಿ ಕಾಗೇರಿ ಅವರಿಗೆ ಟಿಕೆಟ್ ತಪ್ಪಿಸಿ, ಶಶಿಭೂಷಣ ಹೆಗಡೆ ಅವರಿಗೆ ಟಿಕೆಟ್ ನೀಡಲಾಗುತ್ತದೆಯೇ ಎನ್ನುವ ಅನುಮಾನವನ್ನು ಕೆಲವರು ವ್ಯಕ್ತಪಡಿಸಿದ್ದರು. ಆದರೆ ಕಾಗೇರಿ ಅವರಿಗೆ ಟಿಕೆಟ್ ತಪ್ಪಿಸಲಾಗುತ್ತಿದೆ ಎನ್ನುವುದನ್ನು ಯಾರೂ ನಿರೀಕ್ಷಿಸಿಲ್ಲ.

ಈಗ ಬಂದಿರುವ ಸುದ್ದಿಗೆ ಕಾಗೇರಿ ಅವರೇ ಸ್ಪಷ್ಟನೆ ನೀಡಬೇಕಿದೆ.

https://pragati.taskdun.com/jagdish-shetter-gets-high-command-shock/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button