
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗ್ರಾಮೀಣ ಕ್ಷೇತ್ರದಲ್ಲಿ ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಟಿಕೆಟ್ ನೀಡದೇ ಹೊಸಬರಾಗಿರುವ ನಾಗೇಶ ಮನ್ನೋಳಕರಗೆ ಟಿಕೆಟ್ ಘೋಷಿಸಿದ್ದನ್ನು ಖಂಡಿಸಿ ಬಿಜೆಪಿಯ ಜಿಲ್ಲಾ ಹಾಗೂ ಗ್ರಾಮೀಣ ಮಂಡಳದ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳು ತಮ್ಮ ಸ್ಥಾನಗಳಿಗೆ ಬುಧವಾರ ಸಾಮೂಹಿಕವಾಗಿ ರಾಜೀನಾಮೆ ನೀಡುವ ಮೂಲಕ ಆಕ್ರೋಶ ಹೊರ ಹಾಕಿದರು.
ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಜಮಾಯಿಸಿದ್ದ ವಿವಿಧ ಮೋರ್ಚಾ, ಶಕ್ತಿ ಕೇಂದ್ರ, ಜಿಲ್ಲಾ ಮತ್ತು ಗ್ರಾಮೀಣ ಮಂಡಳ ಪದಾಧಿಕಾರಿಗಳು ತಮ್ಮ ರಾಜೀನಾಮೆ ಪತ್ರವನ್ನು ಕಚೇರಿಗೆ ನೀಡಿದ್ದಾರೆ. ಎಸ್ಸಿ ಮೋರ್ಚಾ, ಎಸ್ಟಿ ಮೋರ್ಚಾ, ಶಕ್ತಿ, ಮಹಾ ಶಕ್ತಿ ಕೇಂದ್ರ, ಮಂಡಳ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷ ಸೇರಿದಂತೆ ವಿವಿಧ ಹುದ್ದೆಗಳಿಗೆ ರಾಜೀನಾಮೆ ನೀಡಲಾಗಿದೆ. ಬೆಳಗಾವಿ ಗ್ರಾಮಿಣ ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಬಿಜೆಪಿ ಸಂಘಟನೆ ಮಾಡಿರುವ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕಿತ್ತು.
ಬಿಜೆಪಿಯಲ್ಲಿ ಮಾಜಿ ಶಾಸಕ ಸಂಜಯ ಪಾಟೀಲ, ಗ್ರಾಮಿಣ ಮಂಡಲ ಅಧ್ಯಕ್ಷ ಧನಂಜಯ ಜಾಧವ ಅವರಿಗೆ ಟಿಕೆಟ್ ನೀಡದೇ ಅನ್ಯಾಯ ಮಾಡಲಾಗಿದೆ. ಕ್ಷೇತ್ರದಲ್ಲಿ ಹಲವಾರು ವರ್ಷಗಳಿಂದ ಸಂಘಟನೆ ಮಾಡಿ ಪಕ್ಷ ಬೆಳೆಸಲು ಪ್ರಮುಖಪಾತ್ರ ವಹಿಸಿದ್ದಾರೆ. ಆದರೆ ಕೆಲವೇ ದಿನಗಳಿಂದ ಪಕ್ಷದಲ್ಲಿ ಗುರುತಿಸಿಕೊಂಡಿರುವ ನಾಗೇಶ ಮನ್ನೋಳಕರಗೆ ಟಿಕೆಟ್ ನೀಡಿದ್ದು ಪಕ್ಷತನ್ನ ಸಿದ್ಧಾಂತವನ್ನು ಗಾಳಿಗೆ ತೂರಿದೆ ಎಂದು ಕಿಡಿಕಾರಿದರು. ಪಕ್ಷದ ಸಿದ್ಧಾಂತ ಆಧಾರದ ಮೇಲೆ ದುಡಿಯುವ ಕಾರ್ಯಕರ್ತರಿಗೆ ಬಿಜೆಪಿಯಲ್ಲಿ ಬೆಲೆ ಇದೆ. ಹೊರಗಿನವರಿಗೆ ಟಿಕೆಟ್ ನೀಡುವುದಾಗಿದ್ದರೆ ಕೆಲ ದಿನಗಳ ಹಿಂದೆ ಧರ್ಮನಾಥ `ಭವನದಲ್ಲಿ ಗೌಪ್ಯ ಮತದಾನ ಮಾಡಿದ್ದು ಏಕೆ? ಪದಾಧಿಕಾರಿಗಳಿಗೆ ನಮ್ಮ ಬೆಂಬಲ ಇಲ್ಲವೇ? ಈ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಸ್ಪಷ್ಟ ಉತ್ತರ ನೀಡಬೇಕು ಎಂದು ಆಗ್ರಹಿಸಿದರು.
ಹಿಂದುತ್ವದ ಆಧಾರದ ಮೇಲೆ ಪಕ್ಷವನ್ನು ಬೆಳೆಸಲಾಗುತ್ತಿದೆ. ನಾಗೇಶ ಮನೋಳಕರಗೆ ಪಕ್ಷದ ಸಿದ್ಧಾಂತ ಗೊತ್ತಿದೆಯೇ? ಸಂಜಯ ಪಾಟೀಲ, ಧನಂಜಯ ಜಾಧವ ಸೇರಿದಂತೆ ಇತರ ಇನ್ನೊಬ್ಬ ಪಕ್ಷದ ಕಾರ್ಯಕರ್ತರಿಗೆ ಟಿಕೆಟ್ ನೀಡಬೇಕಾಗಿತ್ತು. ದಿಢೀರ್ ಬೇರೆಯವರಿಗೆ ಟಿಕೆಟ್ ಘೋಷಿಸಿದ್ದು ಕಾರ್ಯಕರ್ತರ ಮನಸ್ಸಿಗೆ ನೋವುಂಟು ಮಾಡಿದೆ ಎಂದು ಜಿಲ್ಲೆಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳು ವಾಗ್ದಾಳಿ ನಡೆಸಿದರು.
 
					 
				 
					 
					 
					 
					
 
					 
					 
					


