ಪ್ರಗತಿವಾಹಿನಿ ಸುದ್ದಿ, ಮೈಸೂರು: “ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಪಕ್ಷದಿಂದ 11 ಜನ ಅಭ್ಯರ್ಥಿಗಳು ಅರ್ಜಿ ಹಾಕಿದ್ದರು, ಈ ಹನ್ನೊಂದೂ ಜನ ಕೂಡ ಗೆಲ್ಲುವ ಸಾಮರ್ಥ್ಯ ಹೊಂದಿದ್ದಾರೆ, ಆದರೆ ಎಲ್ಲರ ಅಭಿಪ್ರಾಯ ಪಡೆದು ಮಾವಿನಹಳ್ಳಿ ಸಿದ್ದೇಗೌಡರನ್ನು ಅಂತಿಮವಾಗಿ ಹೈಕಮಾಂಡ್ ಅಧಿಕೃತ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಅವರು ವಲಸಿಗ ಎಂಬ ಅಭಿಪ್ರಾಯ ಯಾರಲ್ಲೂ ಬರಬಾರದು ಕಾರಣ ಒಮ್ಮೆ ಕಾಂಗ್ರೆಸ್ ಸೇರಿದ ಮೇಲೆ ಅವರು ಕಾಂಗ್ರೆಸಿಗ” ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ಅವರು ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಆಯೋಜಿಸಿದ್ದ ಬೃಹತ್ ಸಮಾವೇಶ ಉದ್ಘಾಟಿಸಿ ಮಾತನಾಡಿದರು.
“ನಾನು 5 ವರ್ಷ ಮುಖ್ಯಮಂತ್ರಿಯಾಗಿ ಸಾಕಷ್ಟು ಒಳ್ಳೆ ಕೆಲಸಗಳನ್ನು ಮಾಡಿದ್ದರೂ ಕೂಡ ಚಾಮುಂಡೇಶ್ವರಿಯ ಜನ ನನ್ನನ್ನು ಸೋಲಿಸಿದರು. ಕಳೆದ ಬಾರಿ ನಾವು 80 ಸ್ಥಾನಗಳನ್ನು ಗೆದ್ದಿದ್ದೆವು. ಬಿಜೆಪಿ 104, ಜೆಡಿಎಸ್ 37 ಸ್ಥಾನ ಗೆದ್ದಿತ್ತು. ನಾಡಿನ ಸಾಮರಸ್ಯ ಹಾಳುಮಾಡುವ, ಧರ್ಮ – ಧರ್ಮಗಳನ್ನು ಎತ್ತಿಕಟ್ಟಿ ಸಮಾಜ ಒಡೆಯುವ, ಅಶಾಂತಿ ಸೃಷ್ಟಿಸುವ ಕೋಮುವಾದಿ ಬಿಜೆಪಿ ಅಧಿಕಾರಕ್ಕೆ ಬರಬಾರದು. ಬಹುತ್ವದ ಭಾರತ ದೇಶದ ಸೌಹಾರ್ದತೆಯನ್ನು ಕಾಪಾಡಿಕೊಂಡು ಹೋಗಬೇಕು ಎಂಬ ಕಾರಣಕ್ಕೆ ಜೆಡಿಎಸ್ ಗೆ ಬೆಂಬಲ ನೀಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು” ಎಂದರು.
“ಕುಮಾರಸ್ವಾಮಿ ಎಷ್ಟೇ ಪಂಚರತ್ನ ಯಾತ್ರೆ ಮಾಡಿದ್ರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ. ಇನ್ನೊಬ್ಬರ ಹೆಗಲಮೇಲೆ ಕೂತುಕೊಂಡು ಅಧಿಕಾರ ಮಾಡಬೇಕು ಎಂದು ಬಯಸುವವರು ಅವರು. 20 ರಿಂದ 22 ಸ್ಥಾನ ಗೆಲ್ಲಬಹುದು. ಸರ್ಕಾರ ಹೇಗೆ ಮಾಡುತ್ತಾರೆ? ಪಂಚರತ್ನ ಮಾಡಿದ ಕೂಡಲೇ ಬಹುಮತ ಸಿಗುತ್ತಾ? ಅವರಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಯಾವ ಪಕ್ಷವೂ ಪೂರ್ಣ ಬಹುಮತ ಪಡೆಯಬಾರದು. ಆಗ ಅವರು ಮುಖ್ಯಮಂತ್ರಿಯಾಗಲು ಬರುತ್ತಾರೆ” ಎಂದು ಕುಮಾರಸ್ವಾಮಿ ಅವರನ್ನು ಜರಿದರು.
“ಜೆಡಿಎಸ್ ಮತ್ತು ಬಿಜೆಪಿಯವರು ಸೇರಿಕೊಂಡು ಸಿದ್ದರಾಮಯ್ಯನನ್ನು ಮುಗಿಸಬೇಕು ಎಂದು ಹೊರಟಿದ್ದಾರೆ. ಬಿಜೆಪಿ, ಜೆಡಿಎಸ್ ಎಲ್ಲರಿಗೂ ನಾನೇ ಟಾರ್ಗೆಟ್. ಹೀಗೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರಲ್ಲ ಈ ನಾಡಿಗೆ ನಾನು ಮಾಡಿರುವ ಅನ್ಯಾಯವಾದರೂ ಏನು? ನನ್ನ ಮೇಲಿನ ಭಯಕ್ಕೆ ನನ್ನನ್ನು ಮುಗಿಸಲು ಹೊರಟಿದ್ದಾರೆ. ರಾಜ್ಯದ ಜನರ ಆಶೀರ್ವಾದ ಇರುವವರೆಗೆ ಯಾರಿಂದಲೂ ನನ್ನನ್ನು ಮುಗಿಸಲು ಸಾಧ್ಯವಿಲ್ಲ. ನಿಮಗೂ ಸ್ವಾಭಿಮಾನ ಇರಬೇಕು, ಯಾವುದೇ ಕಾರಣಕ್ಕೂ ನಾವು ಗುಂಪುಗಾರಿಕೆ ಮಾಡಲ್ಲ, ಪಕ್ಷ ದ್ರೋಹ ಮಾಡಲ್ಲ, ನಾವೆಲ್ಲರೂ ಸಿದ್ದರಾಮಯ್ಯನ ಕೈಯನ್ನು ಬಲಪಡಿಸುವ ಕೆಲಸ ಮಾಡುತ್ತೇವೆ ಎಂಬ ಸಂಕಲ್ಪವನ್ನು ಇಂದು ಮಾಡಬೇಕು” ಎಂದರು.
“ಇಂದು ಕರ್ನಾಟಕದಲ್ಲಿನ ವಾತಾವರಣ ನೋಡಿದರೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ. ಬಿಜೆಪಿಯವರು ರಾಜ್ಯವನ್ನು ಹಾಳು ಮಾಡಿದ್ದಾರೆ. ಸ್ವಾತಂತ್ರ್ಯ ನಂತರದಿಂದ 2018ರ ಮಾರ್ಚ್ ವರೆಗೆ ಕರ್ನಾಟಕದ ಮೇಲಿದ್ದ ಒಟ್ಟು ಸಾಲ 2 ಲಕ್ಷದ 42 ಸಾವಿರ ಕೋಟಿ. ಕಳೆದ ಐದೇ ವರ್ಷದಲ್ಲಿ ರಾಜ್ಯದ ಸಾಲ 3 ಲಕ್ಷದ 22 ಸಾವಿರ ಕೋಟಿ ಸಾಲ ಮಾಡಿದ್ದಾರೆ. ಇಲ್ಲಿ ಜಿಟಿಡಿಯೋ, ಬಿಜೆಪಿಯ ಇನ್ಯಾರೋ ಮುಖ್ಯವಲ್ಲ, ರಾಜ್ಯವನ್ನು ಉಳಿಸುವುದು ಮುಖ್ಯ” ಎಂದು ಸಿದ್ದರಾಮಯ್ಯ ಹೇಳಿದರು.
ಇದೇ ವೇಳೆ ಸಿದ್ದರಾಮಯ್ಯ ಅವರು ಮೈಸೂರಿನಲ್ಲಿ ಸುತ್ತೂರು ಮಠಾಧೀಶರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಶಾಸಕರಾದ ಡಾ. ಯತೀಂದ್ರ ಸಿದ್ದರಾಮಯ್ಯ, ಮಾಜಿ ಶಾಸಕ ಸೋಮಶೇಖರ ಹಾಜರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ