ಕುಡಿಯುವ ನೀರಿನ ಅಭಾವ: ಮಹಾರಾಷ್ಟ್ರದಿಂದ 6 ಟಿಎಂಸಿ ನೀರು ಬಿಡುಗಡೆಗೆ ಸರ್ಕಾರದ ಮನವಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬೆಳಗಾವಿ, ಕಲಬುರ್ಗಿ ಸೇರಿದಂತೆ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮೇ ತಿಂಗಳಲ್ಲಿ ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಲಿರುವುದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲು ಕೃಷ್ಣಾ ಹಾಗೂ ಭೀಮಾ ನದಿಗಳಿಗೆ ತಲಾ ಮೂರು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರವು ಮಹಾರಾಷ್ಟ್ರ ಸರಕಾರಕ್ಕೆ ಮನವಿ ಮಾಡಿರುತ್ತದೆ.
ಈ ಕುರಿತು ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಾದ ರಾಕೇಶ್ ಸಿಂಗ್ ಅವರು, ಮಹಾರಾಷ್ಟ್ರದ ಜಲಸಂಪನ್ಮೂಲ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಗಳಿಗೆ ಏ.15 ರಂದು ಪತ್ರ ಬರೆದಿದ್ದಾರೆ.
ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ರಾಯಚೂರು, ಯಾದಗಿರಿ ಜಿಲ್ಲೆಗಳಲ್ಲಿ ಬೇಸಿಗೆಯ ಆರಂಭದಲ್ಲಿ ಕುಡಿಯುವ ನೀರಿನ ಅಭಾವ ಉಂಟಾಗಿದೆ. ರಾಜ್ಯದ ಹಿಪ್ಪರಗಿ ಬ್ಯಾರೇಜಿನಲ್ಲಿ ನೀರಿನ ಸಂಗ್ರಹ ಕಡಿಮೆ ಇರುತ್ತದೆ.ಆದ್ದರಿಂದ ಜನರು ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಅಭಾವ ತಪ್ಪಿಸಲು ಮಹಾರಾಷ್ಟ್ರ ರಾಜ್ಯದ ವಾರಣಾ/ಕೊಯ್ನಾ ಜಲಾಶಯಗಳಿಂದ 3 ಟಿಎಂಸಿ ಹೆಚ್ಚುವರಿಯಾಗಿ ಕೃಷ್ಣಾ ನದಿಗೆ ಬಿಡುಗಡೆಗೊಳಿಸಬೇಕು.
ಅದೇ ರೀತಿ ಮಹಾರಾಷ್ಟ್ರದ ಉಜ್ಜನಿ ಜಲಾಶಯದಿಂದ ಭೀಮಾ ನದಿಗೆ 3 ಟಿಎಂಸಿ ನೀರು ಬಿಡುಗಡೆ ಮಾಡಬೇಕು.
ಹೀಗೆ ಮೇ ಮತ್ತು ಜೂನ್ ಮಾಹೆಯಲ್ಲಿ ಜನರು ಮತ್ತು ಜಾನುವಾರುಗಳ ಕುಡಿಯುವ ನೀರು ಒದಗಿಸಲು ಮಾನವೀಯತೆ ದೃಷ್ಟಿಯಿಂದ ಒಟ್ಟಾರೆ ಆರು ಟಿಎಂಸಿ ನೀರು ಬಿಡುಗಡೆ ಮಾಡಬೇಕು ಎಂದು ರಾಕೇಶ್ ಸಿಂಗ್ ಅವರು ಪತ್ರದಲ್ಲಿ ವಿನಂತಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ