ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಜಿಲ್ಲೆಯಾದ್ಯಂತ ಚುನಾವಣಾ ಅಕ್ರಮಕ್ಕೆ ಕಡಿವಾಣ ಹಾಕುವ ಕಾರ್ಯ ಇನ್ನಷ್ಟು ಬಿಗಿಯಾಗಿದ್ದು ಜಿಲ್ಲೆಯ ವಿವಿಧೆಡೆ ಭರ್ಜರಿ ಬೇಟೆ ನಡೆದಿದೆ.
ಸದಲಗಾ ಠಾಣೆ ಪೊಲೀಸರು ದಾಖಲೆ ಇಲ್ಲದೆ ಒಯ್ಯಲಾಗುತ್ತಿದ್ದ 32 ಗ್ರಾಂ ಚಿನ್ನ ವಶಪಡಿಸಿಕೊಂಡು ಈ ಸಂಬಂಧ ಒಬ್ಬ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಭೋಜ ಗ್ರಾಮದ ಗಣೇಶ @ ಸ್ವಪ್ನಿಲ್ ಅಡಮಾನೆ (19) ಬಂಧಿತ.
ಕೊಗನೋಳಿ ಚೆಕ್ ಪೋಸ್ಟ್ ನಲ್ಲಿ ಗಡಹಿಂಗ್ಲಜ್ ನಿಂದ ಮಹಾರಾಷ್ಟ್ರ ಸರಕಾರಿ ಬಸ್ ನಲ್ಲಿ ದಾಖಲೆ ಇಲ್ಲದೆ ತರಲಾಗುತ್ತಿದ್ದ 6,68,900 ರೂ. ಮೌಲ್ಯದ 9650 ಗ್ರಾಂ ಬೆಳ್ಳಿ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು ಈ ಸಂಬಂಧ ಕೊಲ್ಲಾಪುರದ ಹರಿರಾಮ್ ಮಾಳಿ ಎಂಬುವವನನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ.
ನಿಪ್ಪಾಣಿ ಚೆಕ್ ಪೋಸ್ಟ್ ನಲ್ಲಿ 8 ಲೀಟರ್ ಅಕ್ರಮ ಮದ್ಯ ವಶಪಡಿಸಿಕೊಂಡಿದ್ದು ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿ ಬೊಗಟೆ ಆಲೂರು ಚೆಕ್ ಪೋಸ್ಟ್ ನಲ್ಲಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲೀಟರ್ ಗೋವಾ ಮದ್ಯವನ್ನು ವಾಹನ ಸಹಿತ ವಶಪಡಿಸಿಕೊಂಡಿರುವ ಪೊಲೀಸರು ಮಹಾರಾಷ್ಟ್ರದ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಗೋಕಾಕ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 60 ಲೀಟರ್ ಅಕ್ರಮ ಮದ್ಯ ಹಾಗೂ 5.5 ಕೆಜಿ ಗಾಂಜಾ ವಶಪಡಿಸಿಕೊಳ್ಳಲಾಗಿದೆ.
ಭಿರಡಿ ಗ್ರಾಮದಲ್ಲಿ ಅಬಕಾರಿ ತಂಡ 32.40 ಎಂಎಲ್ ಅಕ್ರಮ ಮದ್ಯ ವಶಪಡಿಸಿಕೊಂಡು ಬಸವಂತ ಘಸ್ತೆ (48) ಎಂಬಾತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ