ಬೇಸಿಗೆ ರಜೆಗೆ ಪೋಷಕರು, ವಿದ್ಯಾರ್ಥಿಗಳ ಕಾರ್ಯ ಯೋಜನೆಗಳು ಹೀಗಿರಲಿ…

ಆತ್ಮೀಯ ಪೋಷಕರೇ,

ವಿದ್ಯಾರ್ಥಿಗಳು ಶಾಲೆಯಲ್ಲಿ ಪಠ್ಯ ಚಟುವಟಿಕೆಗಳ ಜೊತೆಗೇ ಹಲವಾರು ಚಟುವಟಿಕೆಗಳನ್ನು ಮಾಡಿ ಹೊಸ ಅನುಭವಗಳನ್ನು ಪಡೆದುಕೊಂಡಿರುತ್ತಾರೆ. ಈ ಪೈಕಿ ಕೆಲ ಚಟುವಟಿಕೆಗಳು ಶಾಲೆ, ಶಾಲಾ ಮೈದಾನಕ್ಕಷ್ಟೇ ಸೀಮಿತವಾಗಿಬಿಡುತ್ತವೆ. ಹೊಸ ತಲೆಮಾರಿನ ಮಕ್ಕಳು ಮನೆಗೆ ಬರುತ್ತಲೇ ಮೊಬೈಲ್ ಎಂಬ ಮಾರಿ ಅವರನ್ನು ಸೆಳೆಯುತ್ತಿರುತ್ತದೆ.

ಇತ್ತೀಚಿನ ದಿನಗಳಲ್ಲಂತೂ ಅನೇಕ ಮಕ್ಕಳು ಬರಿ ಮೊಬೈಲ್ ಗೀಳು ಅಂಟಿಸಿಕೊಂಡು ಅದರಲ್ಲೇ ಜಾಗತಿಕ ಪರಿಭ್ರಮಣ ಆರಂಭಿಸಿರುತ್ತಾರೆ. ಇದು ದೈಹಿಕವಾಗಿ ಮಕ್ಕಳ ಬೆಳವಣಿಗೆ ಕುಂಠಿತಗೊಳಿಸುವುದಲ್ಲದೆ, ಒಂದೆಡೆ ಒಂದಿಷ್ಟು ಬಾಹ್ಯ ಜ್ಞಾನ ನೀಡಿದರೂ ಇನ್ನೊಂದೆಡೆ ಮನೋಭಾವವನ್ನು ಮಬ್ಬುಗಟ್ಟಿಸುವುದು ಸತ್ಯ. ಆಟ,- ಊಟ-ಪಾಠಗಳು ದೇಹ, ಮನಸ್ಸು ವಿಕಸನಗೊಳ್ಳುವಂತಿರಬೇಕು. ಜೀವನದಲ್ಲಿ ಅತಿ ಮುಖ್ಯವಾದ ಶಿಸ್ತು, ಸಂಯಮ ಕೂಡ ಬೆಳೆಯಬೇಕು. ಅದಕ್ಕೆ ಯಾಂತ್ರಿಕವಾದ ದಿನಚರಿಗಿಂತ ಸಹಜ ಚಟುವಟಿಕೆಗಳು ಗುಣಾತ್ಮಕವಾಗಿದ್ದರೆ ಸುಂದರ ಬದುಕು ಅರಳಲು ಪೂರಕವಾಗಿರುತ್ತದೆ.

ಇವೆಲ್ಲವನ್ನೂ ಮಕ್ಕಳು ಪಾಲಿಸಬೇಕೆಂದರೆ ಪಾಲಕರ ಆದೇಶ, ಒತ್ತಾಯ, ಗದರಿಕೆಯಿಂದ ಸಾಧ್ಯವಿಲ್ಲ. ಬದಲಾಗಿ ವಿಶ್ವಾಸಕ್ಕೆ ಪಡೆದು ಮಕ್ಕಳಲ್ಲಿ ಆಸಕ್ತಿಯ ಗರಿಗೆದರುವಿಕೆ ಪಾಲಕರೂ ಒಂದಿಷ್ಟು ಜವಾಬ್ದಾರಿಯುತ ನಿರ್ವಹಣೆಯ ಸ್ಕೆಚ್ ಅಳವಡಿಸಿಕೊಳ್ಳಬೇಕು. ಜೀವನದ ಸಾಮಾನ್ಯ ಚಟುವಟಿಕೆಗಳಲ್ಲೇ ಕೆಲ ಅಂಶಗಳನ್ನು ಜಾರಿಗೆ ತಂದು ಶಿಸ್ತುಬದ್ಧತೆ, ಸಾಮಾನ್ಯ ಜ್ಞಾನ ಹೊಂದುವಂತೆ ಮಾಡಿದರೆ ಬಾಲ ನಾಗರಿಕರೇ ಮುಂದೆ ದೇಶದ ಪ್ರಬಲ ನಾಗರಿಕರಾಗಿ ರೂಪುಗೊಳ್ಳಲು ಸಾಧ್ಯ.

ಅಂಥದ್ದನ್ನು ಅಳವಡಿಸಿಕೊಳ್ಳಲು ಬೇಸಿಗೆ ರಜೆ ಸಕಾಲ. ಅದಕ್ಕಾಗಿ ಬೇಸಿಗೆ ರಜೆಯಲ್ಲಿ ಮಕ್ಕಳನ್ನು ಹೀಗೆ ಮಾಡಲು ಪ್ರೋತ್ಸಾಹಿಸಿ…
🌸 ನಿಮ್ಮ ಮಕ್ಕಳ ಜೊತೆಯಲ್ಲಿ ದಿನದಲ್ಲಿ ಒಂದು ಹೊತ್ತಾದರೂ ಒಟ್ಟಿಗೆ ಕುಳಿತು ಊಟ ಮಾಡಿರಿ.
🌸 ಆಹಾರದ ಮಹತ್ವ ತಿಳಿಸಿ ಆಹಾರ ಬೆಳೆಗಳನ್ನು ಬೆಳೆಯುವಾಗ ರೈತರು ಪಡುವ ಬವಣೆ, ಕಷ್ಟ ಕಾರ್ಪಣ್ಯಗಳನ್ನು ಅರಿವು ಮೂಡಿಸಿ.
🌸ಆಹಾರ ಚೆಲ್ಲದಂತೆ ನೋಡಿಕೊಳ್ಳಿ.
🌸 ಮಕ್ಕಳ ಕೆಲಸವನ್ನು ಅವರೇ ಮಾಡಿಕೊಳ್ಳಲು ತಿಳಿಸಿ. ಉದಾಹರಣೆ ತಮ್ಮ ತಟ್ಟೆ ತೊಳೆಯುವುದು, ಪುಸ್ತಕ ಜೋಡಿಸುವುದು ಇತ್ಯಾದಿ.
🌸 ಅಡುಗೆ ಮನೆಯಲ್ಲಿ ಅವರ ಸಹಾಯ ಪಡೆದುಕೊಳ್ಳಿ. ಮಕ್ಕಳೇ ತಿನಿಸುಗಳನ್ನು ತಯಾರಿಸಲು ಪ್ರೋತ್ಸಾಹಿಸಿ.
🌸 ಪ್ರತಿದಿನ ಐದು ಕನ್ನಡ ಮತ್ತು ಐದು ಇಂಗ್ಲಿಷ್ ಪದಗಳನ್ನು ಹೇಳಿ ಪುಸ್ತಕದಲ್ಲಿ ಬರೆಯಿಸಿ.
🌸 ಪ್ರತಿದಿನ ಅಕ್ಕಪಕ್ಕದ ಒಂದೊಂದು ಮನೆಯ ಭೇಟಿ ಮಾಡಲು ಕಲಿಸಿ ,ಅಲ್ಲಿನ ವ್ಯಕ್ತಿಗಳನ್ನು ಸಂದರ್ಶನ ಮಾಡಿ ಮಾಹಿತಿ ಸಂಗ್ರಹಿಸಿ ಬರೆಯಲು ಸಹಕರಿಸಿ.
🌸 ಅಜ್ಜಿ ಅಜ್ಜ ದೊಡ್ಡಪ್ಪ ದೊಡ್ಡಮ್ಮ ಹೀಗೆ ಎಲ್ಲಾ ರೀತಿಯ ಸಂಬಂಧಿಕರೊಂದಿಗೆ ಬೆರೆಯಲು ಅವಕಾಶ ಮಾಡಿಕೊಡಿ ಅವರೊಂದಿಗೆ ಸಂಬಂಧದ ಆನಂದವನ್ನು ಅನುಭವಿಸಲು ಬಿಡಿ, ನೆನಪಿಗಾಗಿ ಒಂದು ಫೋಟೋ ತೆಗೆದಿಡಿ.
🌸 ನೀವು ಕೆಲಸ ಮಾಡುವ ಕಡೆ ಮಕ್ಕಳನ್ನು ಕರೆದುಕೊಂಡು ಹೋಗಿ ನೀವು ಕುಟುಂಬಕ್ಕಾಗಿ ಎಷ್ಟು ಕಷ್ಟ ಪಡುತ್ತೀರಿ ಎಂದು ಅರಿವು ನೀಡಿ.
🌸 ಮಕ್ಕಳನ್ನು ತಪ್ಪದೇ ನಿಮ್ಮೂರಿನ ಜಾತ್ರೆಗೆ ಸಂತೆಗೆ ಕರೆದುಕೊಂಡು ಹೋಗಿ ಅಲ್ಲಿನ ವ್ಯವಹಾರ ತಿಳಿಯಲು ಅವಕಾಶ ನೀಡಿ.
🌸 ಮನೆಯ ಮುಂದೆ ಹಿಂದೆ ಪುಟ್ಟ ಗಿಡ ಮರಗಳನ್ನು ನೆಟ್ಟು ಬೆಳೆಸಲು ಪ್ರೋತ್ಸಾಹಿಸಿ.
🌸 ನಿಮ್ಮ ಮಕ್ಕಳಿಗೆ ನಿಮ್ಮ ಅಥವಾ ಕುಟುಂಬದ ಹಳೆಯ ಜನರ ಕಥೆಗಳನ್ನು ಹೇಳಿರಿ.
🌸 ರಜೆಯಲ್ಲಿ ನಿಮ್ಮ ಮಕ್ಕಳನ್ನು ಹೊರಾಂಗಣದಲ್ಲಿ ಆಡಲು ಬಿಡಿ ಮಣ್ಣು, ಕೊಳೆ, ಇದರ ಅನುಭವ ಅವರಿಗೆ ಬರಲಿ, ಬಿದ್ದು ಎದ್ದು ನೋವು ನಲಿವು ಅನುಭವ ವಾಗಲು ಬಿಡಿ.
🌸 ನಿಮ್ಮ ಮನೆಯ ಶುದ್ಧತೆ ಶುಭ್ರತೆ ಹಾಳಾಗುವುದೆಂದು ಮಕ್ಕಳನ್ನು ಸೋಫಾದಲ್ಲಿ ಕೂರಿಸಿ, ಸೋಮಾರಿಯಾಗುವಂತೆ ಮಾಡಬೇಡಿ.
🌸 ಮುದ್ದಿನ ನಾಯಿ, ಬೆಕ್ಕು ,ಮೀನು ಇವುಗಳ ಆರೈಕೆ ಮಾಡಿ ಬೆಳೆಸಲು ಅವಕಾಶ ನೀಡಿ.
🌸 ಹೊಸ ಹೊಸ ಭಕ್ತಿಗೀತೆ,ಭಾವಗೀತೆ, ಜನಪದ ಗೀತೆ ಕಲಿಸಿ.
🌸 ಬಣ್ಣ ಬಣ್ಣದ ಚಿತ್ರವಿರುವ ಪುಸ್ತಕಗಳನ್ನು ಮಕ್ಕಳಿಗೆ ಕೊಡಿಸಿರಿ.
🌸 ನಿಮ್ಮ ಮಕ್ಕಳನ್ನು ಟಿವಿ, ಮೊಬೈಲ್, ಕಂಪ್ಯೂಟರ್ ಇನ್ನು ಮುಂತಾದ ಎಲೆಕ್ಟ್ರಾನಿಕ್ ಉಪಕರಣಗಳಿಂದ ದೂರವಿಡಿ ಇದು ಬಹಳ ಮುಖ್ಯ.
🌸 ನಿಮ್ಮ ಮಕ್ಕಳಿಗೆ ಅತಿಯಾಗಿ ಚಾಕ್ಲೆಟ್ ಕೂಲ್ ಡ್ರಿಂಕ್ಸ್ ಕರಿದ ಪದಾರ್ಥಗಳು ಬೇಕರಿ ತಿಂಡಿ ತಿನಿಸುಗಳನ್ನು ಕೊಡಬೇಡಿ.
🌸 ಮಕ್ಕಳಿಗೆ ಯಾವುದೇ ರೀತಿಯ ಅಪಾಯವಾಗದಂತೆ ಎಚ್ಚರ ವಹಿಸಿ.
🌸 ನಿಮ್ಮ ಮಕ್ಕಳ ಕಂಗಳನ್ನು ಒಮ್ಮೆ ನೋಡಿ ದೇವರು ನಿಮಗೆ ನೀಡಿದ ಅದ್ಭುತ ವರ ಪ್ರಸಾದವೇ ನಿಮ್ಮ ಮಕ್ಕಳು ಅಲ್ಲವೇ ಅವರಿಗಾಗಿ ನಿಮ್ಮ ಸಮಯವನ್ನು ಮೀಸಲಾಗಿರಿಸಿ.

ಇನ್ನಷ್ಟು ಕ್ರಿಯಾತ್ಮಕ ಚಟುವಟಿಕೆಗಳನ್ನು ಸ್ವಯಂ ವಿವೇಚನೆಯಿಂದ ಕಂಡುಕೊಂಡು ಇವಿಷ್ಟಕ್ಕೆ ಹೆಚ್ಚುವರಿಯಾಗಿ ಜೋಡಿಸಿಕೊಂಡರೆ ಬೇಸಿಗೆ ರಜಾಕಾಲ ವ್ಯರ್ಥವೆನಿಸದರೆ ಸಾರ್ಥಕವೆನಿಸುವುದು.

https://pragati.taskdun.com/karnatakaheavy-rain2-days-2/

https://pragati.taskdun.com/vidhanasabha-electioncongresscandidates6th-list/
https://pragati.taskdun.com/a-huge-amount-of-cash-was-seized-in-ramadurga/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button