Kannada NewsKarnataka NewsUncategorized

ಅಶೋಕ ಪೂಜಾರಿ ಮನವೊಲಿಸುವಲ್ಲಿ ಯಶಸ್ವಿಯಾದ ಕಾಂಗ್ರೆಸ್ ನಾಯಕರು

ಪ್ರಗತಿವಾಹಿನಿ ಸುದ್ದಿ, ಗೋಕಾಕ: ಕಾಂಗ್ರೆಸ್ ಟಿಕೆಟ್ ತಪ್ಪಿದ್ದರಿಂದ ಅಸಮಾಧಾನಗೊಂಡು ಪಕ್ಷೇತರರಾಗಿ ಗೋಕಾಕ ಕ್ಷೇತ್ರದಿಂದ ಕಣಕ್ಕಿಳಿಯಬೇಕೆನ್ನುವ ಚಿಂತನೆಯಲ್ಲಿದ್ದ ಅಶೋಕ ಪೂಜಾರಿಯವರ ಮನವೊಲಿಸುವಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರು ಯಶಸ್ವಿಯಾಗಿದ್ದಾರೆ.

ನಾಮಪತ್ರ ಸಲ್ಲಿಸುವ ಅಂತಿಮ ದಿನವಾದ ಗುರುವಾರ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ, ಮಾಜಿ ಶಾಸಕ ಅಶೋಕ ಪಟ್ಟಣ ಎಲ್ಲರೂ ಸೇರಿ ಅಶೋಕ ಪೂಜಾರಿಯವರ ಮನೆಗೆ ತೆರಳಿ ಮಾತುಕತೆ ನಡೆಸಿದರು.

ಈ ಬಾರಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿದೆ. ಮುಂದಿನ ದಿನಗಳಲ್ಲಿ ನಿಮಗೆ ಒಳ್ಳೆಯ ಸ್ಥಾನಮಾನ ನೀಡಲಾಗುವುದು. ಹಾಗಾಗ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸಿಕೊಂಡು ಬರುವಲ್ಲಿ ದೊಡ್ಡ ಪಾತ್ರವನ್ನು ನೀವು ವಹಿಸಬೇಕು ಎಂದು ಎಲ್ಲರೂ ವಿನಂತಿಸಿದರು. ಅಶೋಕ ಪೂಜಾರಿ ಇದಕ್ಕೆ ಒಪ್ಪಿಕೊಂಡು, ಕಾಂಗ್ರೆಸ್ ಅಭ್ಯರ್ಥಿ ಪರ ಸಂಪೂರ್ಣ ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದಾಗಿ ತಿಳಿಸಿದರು.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಚನ್ನರಾಜ ಹಟ್ಟಿಹೊಳಿ, ಗೋಕಾಕದ ವ್ಯವಸ್ಥೆಯನ್ನು ಬದಲಾಯಿಸಬೇಕೆನ್ನುವುದು ಅಶೋಕ ಪೂಜಾರಿಯವರ ಹಲವು ವರ್ಷಗಳ ಹೋರಾಟ. ನಮ್ಮ ಉದ್ದೇಶವೂ ಅದೇ ಆಗಿದೆ. ಹಾಗಾಗಿ ಅವರು ನಮ್ಮ ಮಾತಿಗೆ ಗೌರವ ಕೊಟ್ಟು ಕಾಂಗ್ರೆಸ್ ಪರವಾಗಿ ಕೆಲಸ ಮಾಡಲು ಒಪ್ಪಿದ್ದಾರೆ ಎಂದರು.

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಪಕ್ಷದ ಅಧ್ಯಕ್ಷರು, ಶಾಸಕಿ ಲಕ್ಷ್ಮೀ ಹೆಬ್ಬಾಳಕರ್ ಎಲ್ಲರೂ ಅವರೊಂದಿಗೆ ಮಾತನಾಡಿದ್ದಾರೆ. ವ್ಯವಸ್ಥೆಯ ವಿರುದ್ಧದ ಅವರ ಹೋರಾಟಕ್ಕೆ ನಾವೆಲ್ಲ ಜೊತೆಗಿದ್ದೇವೆ. ಗೋಕಾಕ ಕಾಂಗ್ರೆಸ್ ನ ಭದ್ರ ಕೋಟೆ. ಕಾರಣಾಂತರದಿಂದ ಕೈ ತಪ್ಪಿದೆ. ಮತ್ತೆ ಅದನ್ನು ವಶಪಡಿಸಿಕೊಳ್ಳಲಿದ್ದೇವೆ. ಮಹಾಂತೇಶ ಕಡಾಡಿ ಪರವಾಗಿ ನಾಳೆಯಿಂದಲೇ ಅಶೋಕ ಪೂಜಾರಿ ಕೆಲಸ ಮಾಡಲಿದ್ದಾರೆ. ಅವರ ವಿಶಾಲ ಹೃದಯಕ್ಕೆ ನಾನು ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಚನ್ನರಾಜ ತಿಳಿಸಿದರು.

ಅಶೋಕ ಪಟ್ಟಣ ಮಾತನಾಡಿ, ಎಲ್ಲರೂ ಸೇರಿ ಅವರಿಗೆ ಸಮಾಧಾನ ಮಾಡಿದ್ದೇವೆ. ನಾವೆಲ್ಲ ಒಂದೇ ಕುಟುಂಬದವರು, ಒಂದಾಗಿರಬೇಕು. ಕಾರಣಾಂತರದಿಂದ ಟಿಕೆಟ್ ತಪ್ಪಿರಬಹುದು. ಮುಂದಿನ ದಿನಗಳಲ್ಲಿ ಒಳ್ಳೆಯ ಸ್ಥಾನಮಾನ ಸಿಗಲಿದೆ ಎಂದು ಹೇಳಿದ್ದೇವೆ. ಅವರು ಒಪ್ಪಿಕೊಂಡಿದ್ದಾರೆ ಎಂದರು.

ಲಕ್ಷ್ಮಣ ಸವದಿ ಮಾತನಾಡಿ, ಅಶೋಕ ಪೂಜಾರಿಯವರು ಈ ಸಮಯದವರೆಗೂ ತಮಗೆ ಅವಕಾಶ ನೀಡಬೇಕೆನ್ನುವ ಒತ್ತಾಯ ಮಾಡಿದ್ದರು. ಒಂದು ಕಡೆ ಬದಲಾವಣೆ ಮಾಡಿದರೆ ಬೇರೆ ಕಡೆ ದುಷ್ಪರಿಣಾಮವಾಗಲಿದೆ ಎಂದು ಅವರಿಗೆ ತಿಳಿಸಿ ಹೇಳಿದ್ದೇವೆ. ಅಶೋಕ ಪೂಜಾರಿ ರಾಜಕೀಯದಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ಅದನ್ನು ನಾವು ಗಮನಿಸಿದ್ದೇವೆ. ಪಕ್ಷೇತರರಾಗಿ ಸ್ಪರ್ಧಿಸುವುದ ಬೇಡ. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ನಿಮ್ಮ ಜೊತೆಗಿರಲಿದೆ ಎಂದು ಭರವಸೆ ನೀಡಿದ್ದೇವೆ ಎಂದರು.

ಎಲ್ಲರ ಭಾವನೆಗಳನ್ನು ಅರ್ಥ ಮಾಡಿಕೊಂಡು, ಬೆಲೆ ಕೊಟ್ಟುನಾಳೆಯಿಂದ ಮಹಾಂತೇಶ ಕಡಾಡಿ ಪರವಾಗಿ ಪ್ರಚಾರಕ್ಕೆ ಹೋಗಲಿದ್ದಾರೆ. ಅವರಿಗೆ ಒಳ್ಳೆಯ ಗೌರವ, ಸ್ಥಾನ ಕೊಡಿಸುವಲ್ಲಿ ನಮ್ಮೆಲ್ಲರ ಜವಾಬ್ದಾರಿ ಇರುತ್ತದೆ. ಅವರು ನಮ್ಮ ಮಾತಿಗೆ ಗೌರವ ಕೊಟ್ಟಿದ್ದಾರೆ. ಅವರಿಗೆ ಧನ್ಯವಾದ ಸಲ್ಲಿಸುತ್ತೇವೆ. ಅಶೋಕ ಪೂಜಾರಿ ಹಿಂದೆ ಬಹಳ ದೊಡ್ಡ ಶಕ್ತಿ ಇದೆ. ಅವರೆಲ್ಲರೂ ಸೇರಿ ಒಟ್ಟಿಗೆ ಹೋಗಿದ್ದಾದರೆ ಗೋಕಾಕದಲ್ಲಿ ಒಳ್ಳೆಯ ಅವಕಾಶವಿದೆ ಎಂದು ಸವದಿ ಹೇಳಿದರು.

ಅಶೋಕ ಪೂಜಾರಿ, ಅಭ್ಯರ್ಥಿ ಮಹಾಂತೇಶ ಕಡಾಡಿ ಈ ಸಂದರ್ಭದಲ್ಲಿ ಇದ್ದರು.

https://pragati.taskdun.com/d-k-sureshnomination-filekanakapuravidhanasabha-election/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button