ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಗೋಕಾಕ, ಮೂಡಲಗಿ, ಮುಧೋಳ, ರಾಯಬಾಗ, ಚಿಕ್ಕೋಡಿ, ಮತ್ತು ಚಿಕ್ಕೋಡಿ, ಹುಕ್ಕೇರಿ ತಾಲ್ಲೂಕಿನ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆಗಳಿಗೆ ಮತ್ತು ಜನ-ಜಾನುವಾರುಗಳಿಗೆ ಕುಡಿಯುವ ಉದ್ದೇಶಕ್ಕಾಗಿ ನೀರು ಬಿಡುವಂತೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಪ್ರಸ್ತುತ ಜಲಾಶಯದಲ್ಲಿನ ನೀರಿನ ಸಂಗ್ರಹ ಸಾಮರ್ಥ್ಯದಲ್ಲಿ ಪ್ರತಿ ದಿನ ಘಟಪ್ರಭಾ ಬಲದಂಡೆ ಕಾಲುವೆಗೆ (ಜಿಆರ್ಬಿಸಿ) 2000 ಕ್ಯೂಸೆಕ್ಸ್, ಘಟಪ್ರಭಾ ಎಡದಂಡೆ ಕಾಲುವೆಗೆ (ಜಿಎಲ್ಬಿಸಿ) 2400 ಕ್ಯೂಸೆಕ್ಸ್ ಮತ್ತು ಚಿಕ್ಕೋಡಿ ಉಪ ಕಾಲುವೆಗೆ (ಸಿ.ಬಿ.ಸಿ) 500 ಕ್ಯೂಸೆಕ್ಸ್ನಂತೆ. 07 ದಿನಗಳ ವರೆಗೆ ದಿನಾಂಕ:22.04.2023 ರ ಸಾಯಂಕಾಲ 06.00 ಗಂಟೆಯಿಂದ ದಿನಾಂಕ:29.04.2023 ರ ಸಾಯಂಕಾಲ 06.00 ಗಂಟೆವರೆಗೆ ಒಟ್ಟು 2963 ಟಿ.ಎಂ.ಸಿ ನೀರನ್ನು ಹರಿಸಲು ಕ್ರಮವಹಿಸುವಂತೆ ಅಧೀಕ್ಷಕ ಅಭಿಯಂತರರು, ಕನೀನಿನಿ, ಘ.ಬ.ಕಾ.ನಿ/ಘ.ಎ.ಕಾ.ನಿ ವೃತ್ತ, ಹಿಡಕಲ್ ಡ್ಯಾಮ್ ಇವರಿಗೆ ಆದೇಶಿಸಲಾಗಿದೆ.
ಪ್ರಸ್ತುತ ಬೇಡಿಕೆ ಆಧರಿಸಿ ಕಾಲುವೆಗಳಿಗೆ ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಹರಿಬಿಡುವಂತೆ ಮತ್ತು ಅನಧಿಕೃತ ಪಂಪಸೆಟ್ ಕಂಡು ಬಂದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ-1965 ರಂತೆ ಕ್ರಮ ಕೈಕೊಳ್ಳಲು ಅಧೀಕ್ಷಕ ಅಭಿಯಂತರರು, ಕನೀನಿನಿ, ಘ.ಬ.ಕಾ.ನಿ/ಘ.ಎ.ಕಾ.ನಿ ವೃತ್ತ, ಹಿಡಕಲ್ ಡ್ಯಾಮ್ ಇವರಿಗೆ ಆದೇಶಿಸಲಾಗಿದೆ.
ಷರತ್ತುಗಳು :
1. ಕಾಲುವೆಗಳಿಗೆ ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿ ಅದರ ಸದುಪಯೋಗ ಕುರಿತು ಸೂಕ್ತ ನಿಗಾ ವಹಿಸುವುದು, ಅಲ್ಲದೇ ದೈನಂದಿನ ವರದಿ ಪಡೆಯುವುದು, ನೀರಿನ ಸದ್ಬಳಕೆ ಕುರಿತು ಸಾಕ್ಷ್ಯ ಚಿತ್ರಗಳನ್ನು ಪಡೆದು ಸಲ್ಲಿಸುವುದು.
2. ಹಿಡಕಲ್ ಜಲಯಾಶದಿಂದ ಕಾಲುವೆಗಳಿಗೆ ಬಿಡುಗಡೆಗೊಳಿಸಲಾಗುವ ನೀರು ಉದ್ದೇಶಿತ ಸ್ಥಳವನ್ನು ತಲುಪುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ನೀರಾವರಿ ಇಲಾಖಾ ಅಧಿಕಾರಿಗಳು ನೋಡಿಕೊಳ್ಳತಕ್ಕದ್ದು ಹಾಗೂ ಬೇರಾವುದೇ ಕಾರಣಗಳಿಂದಾಗಿ ನೀರು ಪೋಲಾಗದಂತೆ ಕ್ರಮ ಜರುಗಿಸುವುದು. ಪ್ರಸ್ತಾಪಿತ ಸ್ಥಳದಲ್ಲಿ ನೀರು ಭರ್ತಿಯಾದಲ್ಲಿ ಅಥವಾ ನೀರು ಸಾಕೆನಿಸಿದಲ್ಲಿ ಕೂಡಲೇ ನೀರಿನ ಹರಿವನ್ನು ಸ್ಥಗಿತಗೊಳಿಸಲು ಕ್ರಮ ಜರುಗಿಸುವುದು.
3. ಉದ್ದೇಶಿತ ಸ್ಥಳಗಳಿಗೆ ನೀರು ತಲುಪಿದ ಬಗ್ಗೆ ಹಾಗೂ ಉದ್ದೇಶಿತ ಸ್ಥಳದಲ್ಲಿ ನೀರನ್ನು ಸಂಗ್ರಹಿಸಿದ ಬಗ್ಗೆ ಪ್ರತಿ ದಿನ ತಪ್ಪದೇ ವರದಿ ಸಲ್ಲಿಸುವುದು. ಜಿಲ್ಲಾಧಿಕಾರಿಗಳು ದೈನಂದಿನ ವರದಿ ಪಡೆಯುವುದು ಮತ್ತು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸುವುದು. 4. ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ಕಾಲುವೆಗೆ ತಾಗಿದಂತೆ ಅನಧಿಕೃತವಾಗಿ ಅಳವಡಿಸಿರುವ ರೈತರ ವಿದ್ಯುತ್ ಪಂಪಸೆಟ್ಟ್ ಗಳ ವಿದ್ಯುತ್ ಸಂಪರ್ಕವನ್ನು ಕಡ್ಡಾಯವಾಗಿ ಕಡಿತಗೊಳಿಸತಕ್ಕದ್ದು.
5. ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಶ್ಯವಿದ್ದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಸಿ.ಆರ್.ಪಿ.ಸಿ ಕಲಂ 144 ನ್ನು ಜಾರಿಗೊಳಿಸಲು ಕ್ರಮ ಕೈಕೊಳ್ಳುವುದು.
6. ಬಿಡುಗಡೆಗೊಳಿಸಲಾದ ನೀರು ಉದ್ದೇಶಿತ ಕಾರ್ಯಕ್ಕೆ ಮಾತ್ರ ಉಪಯೋಗವಾಗುವಂತೆ ಸದಾಕಾಲ (24X7) ನೋಡಿಕೊಳ್ಳಲು ಕಂದಾಯ, ಪೊಲೀಸ್, ನೀರಾವರಿ, ಸ್ಥಳೀಯ ಸಂಸ್ಥೆಗಳ ಒಂದು ಕಾರ್ಯ ಪಡೆಯನ್ನು ರಚಿಸಿ ಅದಕ್ಕೆ ಜವಾಬ್ದಾರಿಯನ್ನು ವಹಿಸಿ ಮೇಲುಸ್ತುವಾರಿಯನ್ನು ಸಂಬಂಧಿಸಿದ ಜಿಲ್ಲಾಧಿಕಾರಿಗಳು ನೋಡಿಕೊಳ್ಳುವುದು. ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವುದು,
7. ಪ್ರಸ್ತುತ ಜಲಾಶಯದಲ್ಲಿ ಹಿಂದಿನ ವರ್ಷಕ್ಕೆ ಹೋಲಿಸಿದಲ್ಲಿ ನೀರಿನ ಪ್ರಮಾಣ ಕಡಿಮೆ ಇದ್ದು, ಮುಂದಿನ ದಿನಗಳಲ್ಲಿ ನೀರಿನ ಬೇಡಿಕೆಯು ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಈಗ ಹರಿಬಿಟ್ಟ ನೀರನ್ನು ಪೋಲಾಗದಂತೆ ನಿಗದಿಪಡಿಸಿದಂತೆ ಸಂಗ್ರಹಿಸಿಕೊಂಡು ಅದನ್ನು ಕುಡಿಯುವ ನೀರಿಗೆ ಮಾತ್ರ ಉಪಯೋಗಿಸಲು ಕ್ರಮ ತೆಗೆದುಕೊಳ್ಳತಕ್ಕದ್ದು.
ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ಮಾತ್ರ ನೀರನ್ನು ಬಳಕೆ ಮಾಡಲು ಮನವಿ ಮಾಡಿಕೊಂಡ ಬಾಲಚಂದ್ರ ಜಾರಕಿಹೊಳಿ
ಪ್ರಗತಿವಾಹಿನಿ ಸುದ್ದಿ, ಗೋಕಾಕ : ಕಾಲುವೆಗಳಿಗೆ ಹರಿಬಿಡಲಾದ ನೀರನ್ನು ಕೇವಲ ಕುಡಿಯುವ ನೀರಿನ ಉದ್ಧೇಶಕ್ಕಾಗಿ ಮಾತ್ರ ಬಳಕೆ ಮಾಡುವಂತೆ ಸಾರ್ವಜನಿಕರಲ್ಲಿ ವಿನಂತಿಸಿಕೊಂಡಿರುವ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು, ಬೇಸಿಗೆಯ ಸಮಯದಲ್ಲಿ ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿಗಾಗಿ ನೀರನ್ನು ಬಿಡುಗಡೆ ಮಾಡುವಂತೆ ಕಳೆದ ದಿ. ೧೨ ರಂದು ಬೆಳಗಾವಿ ಪ್ರಾದೇಶಿಕ ಆಯುಕ್ತರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾಗಿ ಬಾಲಚಂದ್ರ ಜಾರಕಿಹೊಳಿ ಅವರು ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ