Latest

ಕನ್ನಡ ಕಾದಂಬರಿ ಕ್ಷೇತ್ರದ ಪಿತಾಮಹ ಗಳಗನಾಥರು

ಕನ್ನಡ ಸಾಹಿತ್ಯಲೋಕದಲ್ಲಿ ಕಾದಂಬರಿಗಳ ಪ್ರವೇಶವಾದದ್ದೇ ಗಳಗನಾಥರಿಂದ. ಗಳಗನಾಥ ಎನ್ನುವದು ಒಂದು ಗ್ರಾಮ. ಅಲ್ಲಿಯ ಅಧಿದೇವತೆ ಗಳಗನಾಥೇಶ್ವರ. 1868 ರ ಜನೆವರಿ ಐದರಂದು ಜನಿಸಿದ ವೆಂಕಟೇಶ ತಿರಕೋ ಕುಲಕರ್ಣಿಯವರೇ ಗಳಗನಾಥ ಎಂಬ ಹೆಸರಿನಿಂದ ಪ್ರಸಿದ್ಧವಾದವರು.

ಏಳನೇ ಇಯತ್ತೆಯತನಕ ಕಲಿತ ಅವರು ಶಿಕ್ಷಕ ತರಬೇತಿಯನ್ನೂ ಪಡೆದು ಶಿಕ್ಷಕರಾಗಿ ಕೆಲಸ ಮಾಡುವುದರೊಂದಿಗೆ ಶತಮಾನದ ಇತಿಹಾಸವುಳ್ಳ “ಸದ್ಬೋಧಚಂದ್ರಿಕೆ” ಎಂಬ ಮಾಸಪತ್ರಿಕೆಯನ್ನೂ ಪ್ರಾರಂಭಿಸಿ ನಡೆಸಿದರು. ಅಗಡಿ ಶೇಷಾಚಲ ಸದ್ಗುರುಗಳ ಪ್ರಭಾವಕ್ಕೊಳಗಾಗಿ ಸಾತ್ವಿಕ ಬದುಕು ಸಾಗಿಸಿದ ಅವರು ಕನ್ನಡಕ್ಕೆ 24 ಕಾದಂಬರಿಗಳನ್ನು, 9 ಪೌರಾಣಿಕ ಕಥಾನಕಗಳನ್ನು ನೀಡಿ ಕಾದಂಬರಿ ಪ್ರಕಾರಕ್ಕೆ ಬಲವಾದ ತಳಹದಿ ನಿರ್ಮಿಸಿಕೊಟ್ಟರು. ಮರಾಠಿ ಮತ್ತು ಬಂಗಾಳಿ ಕಾದಂಬರಿಗಳನ್ನು ಕನ್ನಡಕ್ಜೆ ತಂದ ಅವರು ಆರು ಸ್ವತಂತ್ರ ಕಾದಂಬರಿಗಳನ್ನೂ ರಚಿಸಿದರು. ಅವರ ಕಾದಂಬರಿಗಳೆಲ್ಲ ಹೆಚ್ಚಾಗಿ ಐತಿಹಾಸಿಕವೇ ಆಗಿವೆ. ಮರಾಠರ ಮತ್ತು ರಜಪೂತರ ಚರಿತ್ರೆಗೆ ಸಂಬಂಧಿಸಿದ ಹಲವು ಕಾದಂಬರಿಗಳ ಮಾಲಿಕೆಯೇ ಅವರಿಂದ ಹೊರಬಂತು.

1898 ರಲ್ಲಿ ಪ್ರಬುದ್ಧ ಪದ್ಮನಯನೆ ಕಾದಂಬರಿ ಬರೆದ ನಂತರ ಅವರು ಕ್ಷಾತ್ರತೇಜ, ಸತ್ಯಸಾರ, ತಿಲೋತ್ತಮೆ, ಸಂಸಾರ ಸುಖ, ರಾಣಾ ರಾಜಸಿಂಹ, ಧಾರ್ಮಿಕ ತೇಜ, ಕುಲಕುಠಾರ, ಧರ್ಮರಹಸ್ಯ, ಕುರುಕ್ಷೇತ್ರ, ಕುಮುದಿನಿ, ಗಿರಿಜಾ ಕಲ್ಯಾಣ, ಉತ್ತರರಾಮಚರಿತ ಸಾರ, ತುಲಸೀ ರಾಮಾಯಣ, ಮಹಾಭಾರತ, ಕನ್ನಡಿಗರ ಕರ್ಮಕಥೆ, ದುರ್ಗದ ಬಿಚ್ಚುಗತ್ತಿ, ಕಮಲಕುಮಾರಿ ಮೊದಲಾದ ಶ್ರೇಷ್ಠ ಕೃತಿಗಳನ್ನು ಬರೆದರು.
ರಾಷ್ಟ್ರೀಯ ವಿಚಾರ ಧಾರೆಗೊಳಗಾಗಿದ್ದ ಅವರ ಕಾದಂಬರಿಗಳು ಸಹ ಭಾರತೀಯರಲ್ಲಿ ದೇಶಾಭಿಮಾನದ ಕೆಚ್ಚು ಮೂಡಿಸುವಂತಹ ಪರಿಣಾಮಕಾರಿ ಶೈಲಿಯಿಂದ ಕೂಡಿವೆ. ಅವರ ಸದ್ಬೋಧ ಚಂದ್ರಿಕೆ ಪತ್ರಿಕೆ ಆ ಕಾಲದಲ್ಲೇ 7000 ದಷ್ಟು ಚಂದಾದಾರರನ್ನು ಹೊಂದಿತ್ತೆನ್ನುವದು ಗಮನಾರ್ಹ. ಮರಾಠಿ ಭಾಷೆಯ ಪ್ರಭಾವ ಸಾಕಷ್ಟಿದ್ದ ವಾತಾವರಣದಲ್ಲಿ ಗಳಗನಾಥರು ಕನ್ನಡ ಸಾಹಿತ್ಯಕ್ಜೆ ಸಲ್ಲಿಸಿದ ಸೇವೆ ಅಪೂರ್ವವಾದದ್ದು. ಸ್ವತಃ ತಮ್ಮ ಪುಸ್ತಕಗಳನ್ನು ಹೊತ್ತು ಎಲ್ಲೆಡೆ ಸಂಚರಿಸಿ ಮಾರಾಟ ಮಾಡಿದರು. ಅವರ ಅಂದಿನ ಆ ಸಾಹಸವೇ ಮುಂದೆ ಕನ್ನಡದ ಕಾದಂಬರಿ ಸಾಹಿತ್ಯ ರಚನೆಗೆ ಮೂಲವಾಯಿತು. ಕನ್ನಡ ಭಾಷೆ ಮತ್ತು ಸಾಹಿತ್ಯಕ್ಕೆ ಅವರಂತಹ ಹಲವರು ಸಲ್ಲಿಸಿದ ಸೇವೆ ಎಂದೆಂದಿಗೂ ಸ್ಮರಣಾರ್ಹವಾದುದು.
1942 ರ ಎಪ್ರಿಲ್ 22 ರಂದು ಗಳಗನಾಥರು ನಿಧನರಾದರು. ಆದರೆ ಅವರ ಹೆಸರು ಚಿರಸ್ಥಾಯಿಯಾಗಿ ಉಳಿದಿದೆ.
– ಎಲ್. ಎಸ್. ಶಾಸ್ತ್ರಿ

https://pragati.taskdun.com/akshaya-tritiya-who-becomes-rich-with-the-gold-of-all-qualities/
https://pragati.taskdun.com/appropriate-action-if-unofficial-schools-are-run/
https://pragati.taskdun.com/d-k-shivakumarcongressnominationbjpcm-basavaraj-bommai/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button