ಬೆಳಗಾವಿಯ ಮೂವರು ಸೇರಿ ರಾಜ್ಯದ 50 ನಾಯಕರ ಮೇಲೆ ಲೋಕಾಯುಕ್ತ, ಐಟಿ ದಾಳಿಗೆ ಬಿಜೆಪಿ ಹುನ್ನಾರ; ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಆರೋಪ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಚುನಾವಣೆಗೆ ಇನ್ನೂ ಕೇವಲ 10 ದಿನ ಇರುವಾಗ ಆಡಳಿತಾರೂಢ ಬಿಜೆಪಿಯವರು ಕಾಂಗ್ರೆಸ್ ಪರ ಅಲೆ ಕಂಡು ಹತಾಶರಾಗಿ ನಾನೂ ಸೇರಿದಂತೆ ಸುಮಾರು 50 ಅಭ್ಯರ್ಥಿಗಳು ಹಾಗೂ ಅವರ ಸಂಬಂಧಿಗಳ ಮೇಲೆ ಲೋಕಾಯುಕ್ತ ಹಾಗೂ ಆದಾಯ ತೆರಿಗೆ ದಾಳಿಗಳನ್ನು ನಡೆಸಿ ಧೃತಿಗೆಡಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಬೆಳಗಾವಿ ಗ್ರಾಮಿಣ ಕ್ಷೇತ್ರದ ಶಾಸಕಿ, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮೀ ಹೆಬ್ಬಾಳಕರ ಆರೋಪಿಸಿದ್ದಾರೆ.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಕರ್ನಾಟಕ ರಾಜ್ಯದಲ್ಲಿ ಈ ಬಾರಿ ಎಲ್ಲಿ ನೋಡಿದರೂ, ಎಲ್ಲಿ ಕೇಳಿದರೂ ಕಾಂಗ್ರೆಸ್ ಪರ ಅಲೆ ಇರುವುದು ಜನರ ಭಾವನೆಯಿಂದ ಗೊತ್ತಾಗಿದೆ. ರಾಜ್ಯದ ಜನಸಾಮಾನ್ಯರು, ಮತದಾರರು ಈ ಬಾರಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕೆಂದು ಮನಸ್ಸು ಮಾಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲೂ ಉತ್ತಮ ವಾತಾವರಣವಿದೆ. ಮುಖ್ಯವಾಗಿ ಕಾಂಗ್ರೆಸ್ ನ ಗ್ಯಾರಂಟಿ ಯೋಜನೆಗಳಿಗೆ ಜನ ಕಾಯುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಬಿಜೆಪಿಯವರು ಇಂಥ ಮಾರ್ಗ ಹಿಡಿದಿರುವುದು ಗಮನಕ್ಕೆ ಬಂದಿದೆ” ಎಂದರು.
ಚುನಾವಣೆ ಸಮೀಪಿಸಿರುವ ಈ ಸಂದರ್ಭದಲ್ಲಿ ಒಂದೊಂದು ನಿಮಿಷವೂ ಬಹು ಮುಖ್ಯವಾಗಿರುತ್ತದೆ. ನಾವು ಯಾವುದೇ ತಪ್ಪುಗಳನ್ನು ಮಾಡಿರದಿದ್ದರೂ ಇಂಥ ಸಂದರ್ಭದಲ್ಲಿ ನಮ್ಮ ಸಮಯ ವ್ಯರ್ಥಗೊಳಿಸಲು ಬಿಜೆಪಿಯವರು ಈ ತಂತ್ರ ಮಾಡುತ್ತಿದ್ದಾರೆ. ಚುನಾವಣೆಗಳು ಎದುರಾದ ಸಂದರ್ಭದಲ್ಲಿ ಪ್ರತಿಪಕ್ಷದವರನ್ನು ಹೆದರಿಸಿ ಹಣಿಯಲು ಬಿಜೆಪಿ ಹುಡುಕಿಕೊಂಡಿರುವ ಈ ವಾಮಮಾರ್ಗ ಬಿಜೆಪಿಯವರಿಗೇ ಮುಳುವಾಗಲಿದೆ ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ಚುನಾವಣೆ ಪ್ರಚಾರ ಅಂತಿಮ ಹಂತದಲ್ಲಿರುವ ಈ ಸಮಯದಲ್ಲಿ ಬಿಜೆಪಿಯವರು ಇಂಥ ವಾಮಮಾರ್ಗ ಬಿಡಬೇಕು. ಬದಲಾಗಿ ಸತ್ಯ, ಧರ್ಮ, ನ್ಯಾಯದ ಮಾರ್ಗದಲ್ಲಿ ಚುನಾವಣೆ ಎದುರಿಸಬೇಕು ಎಂದು ಅವರು ಕೋರಿದರು.
ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು “ನಮ್ಮ ಗೆಲುವಿಗೂ ಇದಕ್ಕೂ ಸಂಬಂಧವಿಲ್ಲ. ಇಲ್ಲಿ ಗೆಲ್ಲುವ ಕುದುರೆಯನ್ನು ಕಟ್ಟಿಹಾಕುವುದಕ್ಕಿಂತ ಕೊನೆಯ ಹಂತದಲ್ಲಿ ಜನರ ಭಾವನೆಗಳನ್ನು ಕಲಕುವ ಉದ್ದೇಶ ಹೊಂದಲಾಗಿದೆ. ಒಂದೊಮ್ಮೆ ಅವರು ಇಂಥ ತಂತ್ರ ಬಳಸುವುದೇ ಆದರೆ ನಾವೇನೂ ಮಾಡಲಿಕ್ಕೂ ಸಾಧ್ಯವಿಲ್ಲ. ಆದರೆ ಯಾವುದಕ್ಕೂ ನಿರ್ಧಾರ ತಳೆಯುವವರು ಮತದಾರರು. ನಮ್ಮ ಸಮಯ ವ್ಯರ್ಥವಾಗಬಾರದು ಎಂಬುದಷ್ಟೇ ನಮ್ಮ ಕಳಕಳಿ” ಎಂದರು.
ಜಿಲ್ಲೆಯಲ್ಲಿ ಮೂವರ ಮೇಲೆ ದಾಳಿ ಸಿದ್ಧತೆ?
“ನಮಗೂ ಬೇರೆಬೇರೆ ಇಲಾಖೆಗಳಲ್ಲಿ ಪರಿಚಿತರು, ಹಿತೈಷಿಗಳು ಇದ್ದಾರೆ. ರಾಜ್ಯದಲ್ಲಿ 50 ಜನ ಕಾಂಗ್ರೆಸ್ ಅಭ್ಯರ್ಥಿಗಳ ಮೇಲೆ ಲೋಕಾಯುಕ್ತ, ಐಟಿ ದಾಳಿಗೆ ನಿರ್ಧರಿಸಿರುವ ಮಾಹಿತಿ ಇದೆ. ಬೆಳಗಾವಿ ಜಿಲ್ಲೆಯಲ್ಲಿ ಮೂವರು ಅಭ್ಯರ್ಥಿಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆದಿರುವ ಮಾಹಿತಿ ಇದೆ” ಎಂದು ಲಕ್ಷ್ಮೀ ಹೆಬ್ಬಾಳಕರ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, “ನಾವೇನೂ ತಪ್ಪು ಮಾಡಿಲ್ಲ. ಈ ದಾಳಿಗಳನ್ನು ತಡೆಯುವ ಪ್ರಯತ್ನವನ್ನೂ ಮಾಡಿಲ್ಲ. ಆದರೆ ಜನರಿಗೆ ಈ ವಿಷಯ ತಿಳಿಸುವುದು ಉದ್ದೇಶವಾಗಿದೆ. ಜನತೆ ಕೂಡ ಈ ವಾಮಮಾರ್ಗದ ತಂತ್ರ ನೋಡಿ ನಿರ್ಧಾರ ಮಾಡಬೇಕಿದೆ ಎಂದರು.
ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಆ ಕುರಿತು ಇನ್ನೂ ನಿರ್ಧರಿಸಿಲ್ಲ. ಎಲ್ಲ ಚುನಾಯಿತ ಶಾಸಕರು ಸೇರಿ ಈ ಕುರಿತು ನಿರ್ಧಾರ ತಳೆದು ಹೈಕಮಾಂಡ್ ಗೆ ಕಳುಹಿಸುತ್ತಾರೆ. ಹೈಕಮಾಂಡ್ ನಿರ್ಧಾರದಂತೆ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆ ನಡೆಯುತ್ತದೆ. ಈ ವಿಷಯದಲ್ಲಿ ಯಾವುದೇ ಗೊಂದಲ ಬೇಡ ಎಂದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ