ಜನರಿಂದ ತಿಂದ ಹಣವನ್ನೇ ಚುನಾವಣೆಯಲ್ಲಿ ಹಂಚುತ್ತಿರುವ ಬಿಜೆಪಿ- ಕಾಂಗ್ರೆಸ್: ಎಚ್.ಡಿ. ಕುಮಾರಸ್ವಾಮಿ ಆಕ್ರೋಶ
ಪ್ರಗತಿವಾಹಿನಿ ಸುದ್ದಿ, ರಾಯಬಾಗ: “ಬಿಜೆಪಿ ಹಾಗೂ ಕಾಂಗ್ರೆಸ್ ನವರು ಜನರ ಹಣ ತಿಂದು ಅದೇ ಹಣದಲ್ಲಿ ಚುನಾವಣೆಯಲ್ಲಿ ಹಂಚಲು ಮುಂದಾಗಿದ್ದಾರೆ” ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮೀ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಯಬಾಗ ಪಟ್ಟಣದಲ್ಲಿ ರಾಯಬಾಗ, ಕುಡಚಿ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿ, “ಸ್ವಾತಂತ್ರ್ಯ ಬಂದು 75 ವರ್ಷವಾದರೂ ಜನರ ಬಡತನ ಹೋಗಲಾಡಿಸಲು ಆಗಿಲ್ಲ. ಹಣ ನೀಡಿ ಚುನಾವಣೆ ಮಾತ್ರ ಮಾಡುತ್ತಿದ್ದಾರೆ. ಇದಕ್ಕೆಲ್ಲ ಬ್ರೇಕ್ ಹಾಕಲು ನಾನು ಬಂದಿದ್ದೇನೆ. ಜನರು ನಿರಾಳವಾಗಿ ಜೀವನ ಸಾಗಿಸುವ ಸಲುವಾಗಿ ಕಾರ್ಯ ಮಾಡುತ್ತೇನೆ” ಎಂದರು.
“ಬಿಜೆಪಿ ಸರ್ಕಾರದಲ್ಲಿ ರಸಗೊಬ್ಬರ ತುಟ್ಟಿಯಾಗಿದೆ. ಅದನ್ನು ಸರಿಪಡಿಸಿ ಕಡಿಮೆ ಮಾಡಲಾಗುವುದು. ಭೂಮಿ ಇಲ್ಲದವರಿಗೆ ಕೃಷಿ ಕಾರ್ಮಿಕರಿಗೆ 2 ಸಾವಿರ ರೂ. ನೀಡುವುದು, ಹೊಸ ಬಡಾವಣೆಗಳಿಗೆ ಪುನರ್ವಸತಿ ಕೊಟ್ಟು, ಯಾರಿಗೆ ಮನೆ ಇಲ್ಲ ಅವರಿಗೆ 5 ಲಕ್ಷ ರೂಪಾಯಿ ವೆಚ್ಚದಲ್ಲಿ ಮನೆ ಮಂಜೂರು ಮಾಡಲಾಗುವುದು, ವೃದ್ಧಾಪರಿಗೆ, ವಿಧವೆಯರಿಗೆ ಹೆಚ್ಚಿನ ಮಾಸಿಕ ಹೆಚ್ಚಿನ ಹಣ ನೀಡಲಾಗುವುದು. ಆರೋಗ್ಯ ಸಮಸ್ಯೆ ಬಂದರೆ 40 -50 ಲಕ್ಷ ರೂ. ಖರ್ಚು ಬಂದರೂ ಸರ್ಕಾರ ಕಟ್ಟುತ್ತದೆ. ಹೀಗೆ ಹತ್ತು ಹಲವು ಯೋಜನೆಗಳು ಜಾರಿಗೆ ತರಲಾಗುವುದು” ಎಂದರು.
“ರಾಜ್ಯದಲ್ಲಿ ರಮ್ಮಿ ಬ್ಯಾನ್ ಮಾಡಲಾಗುವುದು. ಯುವಕರು ರಮ್ಮಿ ಆಟವನ್ನು ಆಡಿ ಕುಟುಂಬಗಳು ಸರ್ವನಾಶವಾಗುತ್ತಿವೆ.
ಜೂಜಾಟಗಳಿಗೆ ಸಂಬಂಧಿಸಿದವುಗಳನ್ನು ನಿಷೇಧಿಸಲಾಗುವುದು” ಎಂದು ಅವರು ಹೇಳಿದರು.
“ರಾಯಬಾಗ ವಿಧಾನಸಭಾ ಕ್ಷೇತ್ರದ ಹನುಮಾನ ಕರಗಾಂವ, ಬೆಂಡವಾಡ ಯೋಜನೆ ಮಂಜೂರು ಮಾಡಲಾಗುವುದು, ಪ್ರತಿಯೊಂದು ಗ್ರಾಮಗಳಿಗೆ ಹೈಟೆಕ್ ಸರ್ಕಾರಿ ಆಸ್ಪತ್ರೆ ಮಂಜೂರು ಮಾಡಲಾಗುವುದು. ಯಾವುದೇ ಸಮಸ್ಯೆಗಳನ್ನು ಉಳಿಯದಂತೆ ನೋಡಿಕೊಳ್ಳುವ ಜವಾಬ್ದಾರಿ ನನ್ನದು. ಚುನಾವಣೆಯಲ್ಲಿ ರಾಯಬಾಗ, ಕುಡಚಿ ಕ್ಷೇತ್ರ ಗೆಲುವು ಸಾಧಿಸಿದರೆ ದತ್ತು ತೆಗೆದುಕೊಳ್ಳುತ್ತೇನೆ” ಎಂದು ಕುಮಾರಸ್ವಾಮಿ ಹೇಳಿದರು.
ಪ್ರದೀಪಕುಮಾರ ಮಾಳಗಿ ಮಾತನಾಡಿ, “ಇದು ನನ್ನ ಕೊನೆ ಚುನಾವಣೆ. 10 ವರ್ಷ ಸೇವೆ ಸಲ್ಲಿಸಿದ್ದೇನೆ. ನನಗೆ ಈ ಸಲ ಆರಿಸಿ ತನ್ನಿ. ಬೇರೆಯವರು ಚುನಾವಣೆಯಲ್ಲಿ ಕೊಂಡು ತೆಗೆದುಕೊಳ್ಳುತ್ತೇನೆ ಎಂದು ಹೇಳುತ್ತಾರೆ. ನನ್ನ ಹತ್ರ ಹಣ ಇಲ್ಲ. ನಿಮ್ಮಲ್ಲಿ ಭಿಕ್ಷೆ ಬೇಡುತ್ತಿದ್ದೇನೆ” ಎಂದರು.
ಜೆಡಿಎಸ್ ರಾಷ್ಟ್ರೀಯ ಉಪಾಧ್ಯಕ್ಷ ಪ್ರತಾಪರಾವ್ ಪಾಟೀಲ ಮಾತನಾಡಿ, “ಜೆಡಿಎಸ್ ಗೆಲುವು ಸಾಧಿಸಿದರೆ ಮುಂದಿನ ದಿನಗಳಲ್ಲಿ ಸಂಘಸಂಸ್ಥೆಗಳ ಸಾಲ ಮನ್ನಾ ಆಗಲಿದೆ. ಹಾಗಾಗಿ ಎಲ್ಲರೂ ಜೆಡಿಎಸ್ ಗೆ ಬೆಂಬಲಿಸಿ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು” ಎಂದರು.
ಈ ಸಂದರ್ಭದಲ್ಲಿ ಶಿವರಾಜ ಪಾಟೀಲ, ಶಶಿಕಾಂತ ಪಡಸಲಗಿ, ಆನಂದ ಮಾಳಗಿ, ಅಂಬೂರಾವ್ ನರೋಟಿ, ಸಿದ್ರಾಮ ಶೇಗುಣಸಿ, ರಾಜು ಬನಗೆ, ಮಿಲನ ಪಾಟೀಲ, ಜಾಕೀರ ತರಡೆ, ಮಲ್ಲಪ್ಪ ಸೌದತ್ತಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ