Kannada NewsLatestUncategorized

*ಪೆಟ್ರೊಲ್ ದರ ರೂ.25 ಸುಳಿವು ನೀಡಿದ ಕೇಂದ್ರ ಸಚಿವ ನಿತೀನ್ ಗಡ್ಕರಿ*

ಪ್ರಗತಿವಾಹಿನಿ ಸುದ್ದಿ; ನಿಪ್ಪಾಣಿ: ‘ದೇಶದಿಂದ ಪೆಟ್ರೊಲ್ ಗಡಿಪಾರು ಮಾಡಲು ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಇಂಧನ ದರ ಕೇವಲ ರೂ.25 ಆಗಲಿದೆ’ ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತೀನ್ ಗಡ್ಕರಿ ಸುಳಿವು ನೀಡಿದರು.

ನಿಪ್ಪಾಣಿ ತಾಲೂಕಿನ ಬೋರಗಾವ ಪಟ್ಟಣದಲ್ಲಿ ಆಯೋಜಿಸಲಾಗಿದ್ದ ಪ್ರಚಾರ ಸಭೆಯಲ್ಲಿ ಬಿಜೆಪಿ ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಪರ ಮತಯಾಚಿಸಿ ಮಾತನಾಡಿದರು. ‘2004ರಲ್ಲಿ ತಾತ್ಕಾಲೀನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ರಾಮ ನಾಯಿಕ ನೇತೃತ್ವದಲ್ಲಿ ಒಂದು ಮಂಡಳಿ ಬ್ರಾಜಿಲ್‌ಗೆ ಹೋಗಿತ್ತು. ನಾನು ಅದರಲ್ಲಿ ಸದಸ್ಯನಾಗಿದ್ದೆ. ಕಬ್ಬಿನ ರಸ, ಸಿ ಮೊಲ್ಯಾಸಿಸ್, ಬಿ ಮೊಲ್ಯಾಸಿಸ್‌ದಿಂದ ಇಥೆನಾಲ್ ತಯಾರಾಗುತ್ತಿತ್ತು. ಶೇ.26ರಷ್ಟು ಇಥೆನಾಲ್ ಪೆಟ್ರೊಲ್‌ನಲ್ಲಿ ಬಳಕೆಯಾಗುತ್ತಿತ್ತು. ನಮ್ಮ ದೇಶದಲ್ಲೂ ವಾಜಪೇಯಿ ಸರ್ಕಾರ ಶೇ.೫ರಷ್ಟು ಇಥೆನಾಲ್ ಬಳಸಲು ನಿರ್ಣಯಿಸಿತು. ಹಂತಹಂತವಾಗಿ ಅದನ್ನು ಏರಿಕೆ ಮಾಡಲು ನಿರ್ಧರಿಸಲಾಗಿತ್ತು. ಆದರೆ ನಂತರ ಕಾಂಗ್ರೆಸ್ ಸರ್ಕಾರ ಬಂದು ಇದನ್ನು ತಡೆಹಿಡಿಯಿತು. 2014 ರಲ್ಲಿ ಮೋದಿಜಿಯವರ ನೇತೃತ್ವದಲ್ಲಿ ಬಿಜೆಪಿ ಸರ್ಕಾರ ಬಂದು ಈ ಯೋಜನೆ ಮತ್ತೆ ಕೈ ಹಿಡಿದೇವು. ಶೇ.20ರಷ್ಟು ಇಥೆನಾಲ್ ಬಳಸಲು ನಿರ್ಣಯಿಸಲಾಗಿದೆ. ಸಕ್ಕರೆಯ ಹೆಚ್ಚಿನ ಉತ್ಪಾದನೆಗಿಂತ ಇಥೆನಾಲ್ ಉತ್ಪಾದನೆಗೆ ಸರ್ಕಾರ ನಿರ್ಧರಿಸಿದೆ. ಹಲವಾರು ವಸ್ತುಗಳಿಂದ ಇಥೆನಾಲ್ ತಯಾರಿಸಲಾಗುತ್ತಿದ್ದು ಯುವವರ್ಗಕ್ಕೆ ಉದ್ಯೋಗವಕಾಶ ಸಿಗುತ್ತಿದೆ’ ಎಂದರು.

‘ಮಹಾರಾಷ್ಟçದ ಕೊಲ್ಹಾಪೂರ ಜಿಲ್ಲೆಯಲ್ಲಿ ಕಬ್ಬು ಹೆಚ್ಚಿದೆ ಎಂದು ತಿಳಿದಿದ್ದೆ. ಆದರೆ ರಾಜ್ಯದ ಬೆಳಗಾವಿ ಜಿಲ್ಲೆಯಲ್ಲಿದೆ. ಮಳೆ, ಗಾಳಿ, ಬಿಸಿಲು ಯಾವುದೇ ಇರಲಿ ಕಬ್ಬಿಗೆ ದರ, ರೈತನಿಗೆ ಆದಾಯ ಕಟ್ಟಿಟ್ಟ ಬುತ್ತಿ. ಕಬ್ಬು, ಸಕ್ಕರೆಯ ಆರ್ಥಿಕತೆಯ ಮೇಲೆ ಇಲ್ಲಿನ ಜನರ ಭವಿಷ್ಯ ನಿರ್ಭರವಿದೆ. ನಮ್ಮ ದೇಶಕ್ಕೆ 280 ಲಕ್ಷ ಟನ್ ಸಕ್ಕರೆಯ ಅವಶ್ಯಕತೆಯಿದೆ. ಆದರೆ ಕಳೆದ ಸಾಲಿನಲ್ಲಿ 360 ಲಕ್ಷ ಟನ್ ಸಕ್ಕರೆ ಉತ್ಪಾದಿಸಲಾಯಿತು. 80 ಲಕ್ಷ ಟನ್ ಹೆಚ್ಚಿನ ಉತ್ಪಾದನೆ ಮತ್ತು ಹಿಂದಿನ 60 ಲಕ್ಷ ಟನ್ ಬಾಕಿ ಸೇರಿ ಒಟ್ಟು 140 ಲಕ್ಷ ಟನ್ ಸಕ್ಕರೆ ಸ್ಟಾಕ್ ಇದೆ. ಆದಾಗ್ಯೂ ಬ್ರಾಜಿಲ್‌ನಲ್ಲಿಯ ಬರಗಾಲದಿಂದಾಗಿ ನಮ್ಮ ಕಾರ್ಖಾನೆ ಪದಾಧಿಕಾರಿಗಳಿಗೆ ಹಾಗೂ ರೈತರ ಮೊಗದ ಮೇಲೆ ಸಂತೋಷ ಇಮ್ಮಡಿಸಿದೆ. ಅಣ್ಣಾಸಾಹೇಬ ಜೊಲ್ಲೆಯವರು ಇಲ್ಲಿ ಇಥೆನಾಲ್ ಕಾರ್ಖಾನೆಯನ್ನು ಆರಂಭಿಸಲಿದ್ದಾರೆ. ಅದರ ನಂತರ ಅವರು ತಕ್ಷಣ ಇಥೆನಾಲ್ ಪಂಪ್‌ಗಳನ್ನು ಆರಂಭಿಸಿ ರೈತರಿಗೆ, ಯುವವರ್ಗಕ್ಕೆ ಪ್ರಯೋಜನವಾಗಲಿದೆ’ ಎಂದರು.

‘ಟೊಯಾಟೊ ಕಂಪೆನಿಯು ವಾಹನಗಳನ್ನು ಫ್ಲೆಕ್ಸ್ ಎಂಜಿನ್‌ನಲ್ಲಿ ತಯಾರಿಸುತ್ತಿದೆ. ಸುಝುಕಿ, ಮರ್ಸಿಡಿಜ್, ಹೋಂಡಾ, ಮೊದಲಾದ ಎಲ್ಲ ಕಂಪೆನಿಗಳ ವಾಹನಗಳು ಫ್ಲೆಕ್ಸ್ ಎಂಜಿನ ಮಾದರಿಯಲ್ಲಿ ಬರಲಿವೆ. ಫ್ಲೆಕ್ಸ್ ಎಂಜಿನ್ ಮಾದರಿಯ ವಾಹನಗಳಲ್ಲಿ ಶೇ.100ರಷ್ಟು ಇಥೆನಾಲ್ ಬಳಕೆಯಾಗಲಿದ್ದು ಅದರಲ್ಲಿ ಶೇ.60ರಷ್ಟು ವಾಹನಕ್ಕೆ ಬಳಕೆ ಮತ್ತು ಶೇ.40ರಷ್ಟು ವಿದ್ಯುತ್ ಉತ್ಪಾದನೆಯಾಗಲಿದೆ. ಇದರಿಂದ ಗ್ರಾಹಕರ, ರೈತರ, ಯುವಕರಿಗೆ ಲಾಭವಾಗಲಿದೆ’ ಎಂದರು.

ಅಭ್ಯರ್ಥಿ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ‘ನಿಪ್ಪಾಣಿ ನಗರದಲ್ಲಿ ರೂ.141 ಕೋಟಿ, ಬೋರಗಾವ ಪಟ್ಟಣದಲ್ಲಿ ರೂ.100 ಕೋಟಿ ಸೇರಿದಂತೆ ಕ್ಷೇತ್ರದಲ್ಲಿ ಸುಮಾರು ರೂ. 2 ಸಾವಿರ ಕೋಟಿಗೂ ಅಧಿಕ ಅಭಿವೃದ್ಧಿ ಕಾರ್ಯ ಮಾಡಲಾಗಿದೆ. ಕ್ಷೇತ್ರದಲ್ಲಿ ಶಿಕ್ಷಣಕ್ಕೆ ಆದ್ಯತೆ ನೀಡಿ ವಸತಿ ನಿಲಯಗಳ ಸಹಿತ ಶಾಲಾ-ಕಾಲೇಜುಗಳನ್ನು ಸ್ಥಾಪಿಸಲಾಗಿದೆ. ಸುಮಾರು 350 ಕ್ಕೂ ಅಧಿಕ ಸರ್ಕಾರಿ ಶಾಲೆಗಳಲ್ಲಿ ಹೆಚ್ಚುವರಿ ಕೊಠಡಿಗಳನ್ನು ನಿರ್ಮಿಸಲಾಗಿದೆ. ಜೊಲ್ಲೆ ಗ್ರುಪ್ ಹಾಗೂ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆ ಸಹಯೋಗದಲ್ಲಿ ಕ್ಷೇತ್ರದ ಸುಮಾರು 2 ಸಾವಿರಕ್ಕೂ ಅಧಿಕ ಯುವವರ್ಗಕ್ಕೆ ಉದ್ಯೋಗವಕಾಶ ನೀಡಲಾಗಿದೆ.

ಉದ್ಯೋಗವಕಾಶ, ಮಹಿಳೆಯರ ಸಬಲೀಕರಣ, ಅಭಿವೃದ್ಧಿ, ಕಲೆ, ಕ್ರೀಡೆಗಳಲ್ಲಿ ಯುವವರ್ಗಕ್ಕೆ ಆಸಕ್ತಿ ಹುಟ್ಟುವ ನಿಟ್ಟಿನಲ್ಲಿ ವಿವಿಧ ರಾಜ್ಯ, ರಾಷ್ಟçಮಟ್ಟದ ಸ್ಪರ್ಧೆಗಳು, ಇತಿಹಾಸ ಸಾರುವ ಮಹಾನಾಟಕಗಳು, ಮನೋರಂಜನೆಗಾಗಿ ಅಂರರಾಷ್ಟ್ರೀಯ ಗಾಳಿಪಟ, ಹೀಗೆ ಒಂದಲ್ಲ, ಎರಡಲ್ಲ ಅಪಾರ ಜನರಿಗೆ ಅಪಾರ ವಿಷಯಗಳನ್ನು ಉಣಬಡಿಸಲಾಗಿದೆ. ವಿರೋಧಿಗಳಿಗೆ ಹೇಳಲು ಯಾವುದೇ ವಿಷಯವೇ ಇಲ್ಲವಾಗಿದೆ. ಆದ್ದರಿಂದ ಅವರು ವೈಯಕ್ತಿಕ ವಿಷಯಗಳಿಗೆ ಟಾರ್ಗೇಟ್ ಮಾಡುತ್ತಿದ್ದಾರೆ. ನಾನು ಯಾರಿಗೂ ಹೆದರುವುದಿಲ್ಲ, ಗಮನವೂ ಹರಿಸುವುದಿಲ್ಲ’ ಎಂದರು.

ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ, ಬಿಜೆಪಿ ಮಹಾರಾಷ್ಟç ರಾಜ್ಯದ ಉಪಾಧ್ಯಕ್ಷ ಡಾ. ಅಜಿತ ಗೋಪಚಾಡೆ, ರಾಹುಲ ಆವಾಡೆ, ವಿಭಾವರಿ ಖಾಂಡಕೆ, ಮಾತನಾಡಿದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾಸಾಹೇಬ ಜೊಲ್ಲೆ, ಸ್ಥಳೀಯ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ ಸಹಕಾರ ರತ್ನ ಚಂದ್ರಕಾಂತ ಕೋಠಿವಾಲೆ, ಸ್ಥಳೀಯ ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಬಿಜೆಪಿ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ಡಾ. ರಾಜೇಶ ನೇರ್ಲಿ, ಸುರೇಶ ಹಳವನಕರ, ಪಾಷಾ ಪಟೇಲ್, ಪವನ ಪಾಟೀಲ, ಶರದ ಜಾಂಗಟೆ, ಸುನೀಲ ಪಾಟೀಲ, ರುಷಭ್ ಜೈನ್, ಸರೋಜಿನಿ ಜಮದಾಡೆ, ಮೊದಲಾದವರು ಸೇರಿದಂತೆ ಅಪಾರ ಜನಸ್ತೋಮ ನೆರೆದಿತ್ತು.

https://pragati.taskdun.com/d-k-shivakumarbajarangadala-banclarificationanjanadri-betta/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button