Kannada NewsKarnataka News

*ಮತಗಟ್ಟೆಗೆ ಕೇಸರಿ ಶಾಲು ಧರಿಸಿ ಬಂದ ಬಿಜೆಪಿ ಕಾರ್ಯಕರ್ತರು ಮತ್ತೆ ಶಾಸಕಿ ಅಂಜಲಿ ನಿಂಬಾಳ್ಕರ್ ನಡುವೆ ವಾಗ್ವಾದ*

ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಬೆಳಿಗ್ಗೆಯಿಂದ ಶಾಂತಿಯುತವಾಗಿ ನಡೆಯುತ್ತಿದ್ದ ಮತದಾನ ಮಧ್ಯಾಹ್ನವಾಗುತ್ತಿದ್ದಂತೆ ಕೆಲ ಮತಗಟ್ಟೆಗಳ ಬಳಿ ಬಿಗುವಿನ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ.

ಮತಗಟ್ಟೆಗೆ ಬಿಜೆಪಿ ಕಾರ್ಯಕರ್ತರು ಕೇಸರಿಶಾಲು ಧರಿಸಿ ಬಂದು ಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ದೇವಲತ್ತಿ ಗ್ರಾಮದಲ್ಲಿ ಮತಗಟ್ಟೆ ಬಳಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಬಂದಿರುವುದಲ್ಲದೇ, ಕೇಸರಿ ಶಾಲು ಬೀಸಿ ಪ್ರಚಾರ ನಡೆಸಿದ್ದಾರೆ ಎನ್ನಲಾಗಿದೆ. ಮತಗಟ್ಟೆಯ ಬಳಿ ಈರೀತಿ ಪ್ರಚಾರ ಮಾಡುವುದು ಸರಿಯಲ್ಲ ಎಂದು ಶಾಸಕಿ ಅಂಜಲಿ ನಿಂಬಾಳ್ಕರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ವೇಳೆ ಶಾಸಕಿ ಅಂಜಲಿ ನಿಂಬಾಳ್ಕರ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದ ಘಟನೆ ನಡೆದಿದೆ. ನನ್ನನ್ನು ಬೆದರಿಸಲು ಬಿಜೆಪಿ ಕಾರ್ಯಕರ್ತರು ಈ ರೀತಿ ಮಾಡಿದ್ದಾರೆ. ಇದಕ್ಕೆಲ್ಲ ನಾನು ಹೆದರುವವಳಲ್ಲ ಎಂದು ಅಂಜಲಿ ನಿಂಬಾಳಕರ್ ಪ್ರತಿಕ್ರಿಯಿಸಿದ್ದಾರೆ. ಬಿಜೆಪಿ ಕಾರ್ಯಕರ್ತರಿಗೆ ಸ್ಥಳದಲ್ಲೇ ತಿರುಗೇಟನ್ನೂ ಅವರು ನೀಡಿದರು. ಧರ್ಮದ ಬಗ್ಗೆ ನನಗೆ ಗೌರವವಿದೆ. ಹಾಗೆಯೇ ಗ್ಯಾಸ್ ಸಿಲೆಂಡರ್ ಬೆಲೆ 1200 ರೂ ಗೆ ಏರಿರುವ ಬಗ್ಗೆಯೂ ನನಗೆ ಗೌರವವಿದೆ ಎಂದು ಟಾಂಗ್ ನೀಡಿದರು.

ಸಂಜೆ ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಾ.ಅಂಜಲಿ, “ಬಿಜೆಪಿ ಕಾರ್ಯಕರ್ತರ
ಈ ರೀತಿಯ ಧೋರಣೆ ಸರಿಯಲ್ಲ. ನಾನೂ ಹಿಂದು ಧರ್ಮಕ್ಕೆ ಸೇರಿದವಳು. ನನಗೂ ನನ್ನ ಧರ್ಮದ
ಬಗ್ಗೆ ಅಭಿಮಾನವಿದೆ. ಆದರೆ ನನ್ನ ಧರ್ಮದ ಬಗೆಗಿನ ಅಭಿಮಾನ ವ್ಯಕ್ತಪಡಿಸಲು ನನಗೆ ಬೇರೆ
ವೇದಿಕೆಗಳಿವೆ. ಚುನಾವಣೆಯ ಸಂದರ್ಭದಲ್ಲಿ ಇದು ಸೂಕ್ತ ಎನಿಸುವುದಿಲ್ಲ. ವಿನಾಕಾರಣ
ವಿವಾದ ಸೃಷ್ಟಿಸಿದ ದೇವಲತ್ತಿಯ ಬಿಜೆಪಿ ಕಾರ್ಯಕರ್ತರಿಗೆ ಸ್ಥಳದಲ್ಲೇ ತಿರುಗೇಟು ನೀಡಿ
ಬಂದಿದ್ದೇನೆ.” ಎಂದರು.
“ದೇವಲತ್ತಿ ಮತಗಟ್ಟೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಪೊಲೀಸರು
ಕಾಂಗ್ರೆಸ್ ಎಜೆಂಟರಂತೆ ವರ್ತಿಸಿದ್ದಾರೆ. ಇದನ್ನು ಬಿಜೆಪಿ ಖಂಡಿಸಿದೆ. ಈ
ಸಂಗತಿಯನ್ನು ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗಿದೆ” ಎಂದು
ಎಬಿವಿಪಿ ಮುಖಂಡ, ದೇವಲತ್ತಿ ನಿವಾಸಿ ಮಂಜುನಾಥ ಹಂಚಿನಮನಿ ಶಾಸಕರ ಆರೋಪಕ್ಕೆ
ಪ್ರತ್ಯಾರೋಪ ಮಾಡಿದರು.

https://pragati.taskdun.com/masabinala-villagers-attackelection-boothvijayapura/


ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button