ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಹೊಣೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೆಗಲಿಗೆ ಬಿದ್ದಿದೆ.
ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಭಾನುವಾರ ರಾತ್ರಿ ನಡೆಯಿತು. ಎಐಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಕೆ ಸಿ ವೇಣುಗೋಪಾಲ್, ರಣದೀಪ್ ಸಿಂಗ್ ಸುರ್ಜೆವಾಲ, ವೀಕ್ಷಕರಾದ ಸುಶೀಲ್ ಕುಮಾರ್ ಶಿಂಧೆ, ಜೀತೇಂದ್ರ ಸಿಂಗ್, ದೀಪಕ್ ಬಾಬರಿಯಾ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಡಿಸಿಎಂ ಡಾ ಜಿ ಪರಮೇಶ್ವರ, ನಾಯಕರಾದ ಬಿ ಕೆ ಹರಿಪ್ರಸಾದ್, ಎಚ್ ಕೆ ಪಾಟೀಲ್, ಎಂ ಬಿ ಪಾಟೀಲ್, ಸಲೀಮ್ ಮೊಹಮ್ಮದ್, ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ರಾಮಲಿಂಗರೆಡ್ಡಿ, ಚಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿ, ಅಂತಿಮವಾಗಿ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿಎಂ ಅಭ್ಯರ್ಥಿ ಆಯ್ಕೆಯ ಹೊಣೆಯನ್ನು ನೀಡಲಾಗಿದೆ. ಸಧ್ಯ ನವದೆಹಲಿಯಲ್ಲಿರುವ ಮಲ್ಲಿಕಾರ್ಜು ಖರ್ಗೆ ಸೋಮವಾರ ಸಿಎಂ ಹೆಸರು ಘೋಷಿಸುವ ಸಾಧ್ಯತೆ ಇದೆ.
ತಲಾ ಎರಡೂವರೆ ವರ್ಷ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ ಅವರು ಮುಖ್ಯಮಂತ್ರಿಯಾಗುವ ಪ್ರಸ್ತಾವನೆ ಇದೆ ಎನ್ನಲಾಗಿದೆ.
ಅಂತಿಮವಾಗಿ ಸೋನಿಯಾ ಗಾಂಧಿ ಹಾಗೂ ರಾಹುಲ ಗಾಂಧಿಯವರ ಅಭಿಪ್ರಾಯ ಪಡೆದು ಮಲ್ಲಿಕಾರ್ಜುನ ಖರ್ಗೆ ಅವರು ಹೆಸರು ಘೋಷಿಸುವ ನಿರೀಕ್ಷೆ ಇದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ