ಪ್ರಗತಿವಾಹಿನಿ ಸುದ್ದಿ, ಬೆಂಗಳೂರು: ಆದಾಯು ತೆರಿಗೆ ಇಲಾಖೆ ವೆಬ್ ಸೈಟನ್ನೇ ಹ್ಯಾಕ್ ಮಾಡಿದ್ದ ಕರ್ನಾಟಕದ ಖತರ್ ನಾಕ್ ಸೈಬರ್ ವಂಚಕನನ್ನುಸಿಐಡಿ ಪೊಲೀಸರು ಬಂಧಿಸಿದ್ದಾರೆ.
ಹಾಸನದ ಹಿರಿಸೇವೆ ಮೂಲದ ದಿಲೀಪ್ ರಾಜೇಗೌಡ ಬಂಧಿತ ಆರೋಪಿ. ಈತ ಧಾರವಾಡದಲ್ಲಿ ನೆಲೆಸಿದ್ದು ಅಲ್ಲಿಂದಲೇ ಕೃತ್ಯಗಳನ್ನು ಎಸಗುತ್ತಿದ್ದ.
ಆದಾಯ ತೆರಿಗೆ ಇಲಾಖೆಯ ವೆಬ್ಸೈಟ್ನಲ್ಲಿನ ಲೋಪಗಳ ಸ್ಪಷ್ಟ ಮಾಹಿತಿ ಹೊಂದಿದ್ದ ಈತ ಆ ಲೋಪದ ಮೂಲಕ ತೆರಿಗೆ ಕಟ್ಟಿದ್ದವರಿಗೆ ಸಲ್ಲಬೇಕಿದ್ದ ರೀ ಫಂಡ್ಸ್ ಹಣವನ್ನು ತನ್ನ ಖಾತೆಗೆ ಜಮಾ ಮಾಡಿಕೊಳ್ಳುತ್ತಿದ್ದ. ಈ ಮೂಲಕ ಆದಾಯ ತೆರಿಗೆ ಇಲಾಖೆಗೆ 1,41,84,360 ರೂ. ವಂಚಿಸಿರುವುದು ಬೆಳಕಿಗೆ ಬಂದಿದೆ.
ಆರೋಪಿಯನ್ನು ಸೆರೆ ಹಿಡಿಯಲು ಸಿಐಡಿ ಎಸ್ಪಿ ಎಂ.ಡಿ ಶರತ್ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ನಡೆಸಿತ್ತು.
ಆದಾಯ ತೆರಿಗೆ ಇಲಾಖೆಗೆ ತೆರಿಗೆ ಕಟ್ಟಿದವರ, ರಿಫಂಡ್ ಖಾತೆಗಳನ್ನು ಹ್ಯಾಕ್ ಮಾಡುತ್ತಿದ್ದ ಈತ, ನಂತರ ತೆರಿಗೆದಾರರ ಹೆಸರಲ್ಲಿ ಬೇರೆ ಬ್ಯಾಂಕ್ ಖಾತೆ ತೆರೆದು ನಕಲಿ ದಾಖಲೆಗಳ ಸಹಿತ, ಕೆವೈಸಿ ಸೃಷ್ಟಿಸಿ ಆದಾಯ ತೆರಿಗೆ ಇಲಾಖೆ ರಿಫಂಡ್ ಮಾಡಿದ ಹಣವನ್ನು ತನ್ನ ಖಾತೆಗೆ ವರ್ಗಾವಣೆ ಮಾಡಿಕೊಳ್ಳುತ್ತಿದ್ದ. ಈತ ಆಸ್ತಿಗಳ ನೋಂದಣಿಗೆ ಕರ್ನಾಟಕ ಸರ್ಕಾರ ಪರಿಚಯಿಸಿದ ಕಾವೇರಿ ಆನ್ಲೈನ್ ಪೋರ್ಟಲ್ ಕೂಡ ಹ್ಯಾಕ್ ಮಾಡಲು ಯತ್ನಿಸಿರುವುದು ತನಿಖೆಯಿಂದ ತಿಳಿದುಬಂದಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ