ಪ್ರಗತಿವಾಹಿನಿ ಸುದ್ದಿ; ನವದೆಹಲಿ; ಕರ್ನಾಟಕ ರಾಜ್ಯ ಮುಖ್ಯಮಂತ್ರಿ ಆಯ್ಕೆ ಕಸರತ್ತು ಕ್ಷಣಕ್ಕೊಂದು ತಿರುವು ಪಡೆಯುತ್ತಿದ್ದು, ಇನ್ನೇನು ಸಿಎಂ ಆಯ್ಕೆ ಫೈನಲ್ ಎನ್ನುವಷ್ಟರಲ್ಲಿ ಕೊನೇ ಕ್ಷಣದಲ್ಲಿ ರಾಜಕೀಯ ಚಿತ್ರಣವೇ ಬದಲಾಗುತ್ತಿದೆ. ಒಂದೆಡೆ ಸಿಎಂ ಹುದ್ದೆಗಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಿಗಿ ಪಟ್ಟು ಹಿಡಿದಿದ್ದರೆ, ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ತಮಗೆ ಸಿಎಂ ಸ್ಥಾನ ಬೇಕು ಎಂದು ಹಠ ಸಾಧಿಸಿದ್ದಾರೆ.
ಅಧಿಕಾರ ಹಂಚಿಕೆ ನಿಟ್ಟಿನಲ್ಲಿ ಹೈಮಾಂಡ್ ಹೆಣೆದ ಸೂತ್ರಕ್ಕೆ ಡಿ.ಕೆ.ಶಿವಕುಮಾರ್ ಒಪ್ಪಿಲ್ಲ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅವರ ಮನವೊಲಿಕೆಗೂ ಬಗ್ಗುತ್ತಿಲ್ಲ ಎಂದು ತಿಳಿದುಬಂದಿದೆ.
ಎರಡು ವರ್ಷ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಲಿ, ಬಳಿಕ ಮೂರು ವರ್ಷ ಸಿಎಂ ಹುದ್ದೆ ನೀಡುವುದಾಗಿ ಡಿ.ಕೆ.ಶಿವಕುಮಾರ್ ಗೆ ಮನವೊಲಿಕೆಗೆ ಯತ್ನಿಸಿದ್ದಾರೆ. ಅಲ್ಲದೇ ಉಪಮುಖ್ಯಮಂತ್ರಿ ಹುದ್ದೆ, ಎರಡು ಸಚಿವ ಸ್ಥಾನಗಳ ಬಗ್ಗೆಯೂ ಮನವರಿಕೆ ಮಾಡುವ ಯತ್ನ ನಡೆದಿತ್ತು. ಆದರೆ ಹೈಕಮಾಂಡ್ ನ ಯಾವುದೇ ಷರತ್ತು, ಮನವೊಲಿಕೆಗೆ ಒಪ್ಪದ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಹುದ್ದೆಗಾಗಿ ಪಟ್ಟು ಹಿಡಿದಿದ್ದಾರೆ. ಸಿಎಂ ಸ್ಥಾನ ನೀಡದಿದ್ದರೆ ಸರ್ಕಾರದಿಂದಲೇ ಹೊರಗಿರುವುದಾಗಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.
ಒಟ್ಟಾರೆ ನೂತನ ಮುಖ್ಯಮಂತ್ರಿ ಆಯ್ಕೆ ಕಸರತ್ತು ಇನ್ನು ಮುಂದುವರೆದಿದ್ದು, ಸಧ್ಯಕ್ಕೆ ಹಗ್ಗಜಗ್ಗಾಟ ಮುಗಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ